ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ಸ್ಪಷ್ಟನೆ
![](https://blogger.googleusercontent.com/img/b/R29vZ2xl/AVvXsEgFm_NZgCqPhyphenhyphen7zFk1HvEwdERg7tCu-jHUC6K__14UE5DU5sn1Jr0OHqTjZwD_BCyd5pMhMXsmUZ6ZrY9noNyZoOfILnIvjGlUBtT8dJ4s3ZjXX7xAVqcorBX5HAgnPlFzDzbbMr0jwUPWP/w400-h190-rw/D17-BDVT-715962.jpg)
ಭದ್ರಾವತಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಡಿ. ೧೭: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ನಿವೃತ್ತ ಕಾರ್ಮಿಕರಿಗೆ ವಸತಿ ಗೃಹಗಳನ್ನು ಉಳಿಸಿಕೊಡುವ ಭರವಸೆಯನ್ನು ಸಂಸದ ಬಿ.ವೈ ರಾಘವೇಂದ್ರ ನೀಡಿದ್ದಾರೆಂದು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್ ನಾಗಭೂಷಣ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಸಂಸದರನ್ನು ಭೇಟಿ ಮಾಡಿ ನಿವೃತ್ತ ಕಾರ್ಮಿಕರಿಗೆ ವಸತಿ ಗೃಹಗಳನ್ನು ಉಳಿಸಿಕೊಡುವ ಸಂಬಂಧ ೨,೫೦೦ ನಿವೃತ್ತ ಕಾರ್ಮಿಕರು ಸಹಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ಸಿದ್ದಪಡಿಸಲಾಗಿರುವ ಮನವಿ ಪತ್ರದ ಪ್ರತಿಯನ್ನು ನೀಡಿ ನಿವೃತ್ತ ಕಾರ್ಮಿಕರ ಹಲವು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸದರು ಮನೆಗಳನ್ನು ಉಳಿಸಿಕೊಡುವ ಸಂಬಂಧ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹಾಗು ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಪ್ರಸ್ತುತ ಕಾರ್ಖಾನೆಯ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ನಿವೃತ್ತ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಾಸಿಸಲು ಸ್ವಂತ ಮನೆ ಇಲ್ಲದ ಕಾರಣ ಕಾರ್ಖಾನೆ ವಸತಿ ಗೃಹಗಳನ್ನು ಅವಲಂಬಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಖಾನೆ ಗೃಹಗಳನ್ನು ದೀರ್ಘಾವಧಿ ಗುತ್ತಿಗೆ ನೀಡಬೇಕೆಂದು ಸಂಘ ಆಗ್ರಹಿಸುತ್ತದೆ ಎಂದರು.
ಉಕ್ಕು ಪ್ರಾಧಿಕಾರ ನಿರ್ಲಕ್ಷ್ಯ ಧೋರಣೆ:
ಕೇಂದ್ರ ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ತನ್ನ ಅಧೀನಕ್ಕೆ ವಹಿಸಿಕೊಂಡ ನಂತರ ಯಾವುದೇ ರೀತಿ ಅಭಿವೃದ್ಧಿಪಡಿಸಿಲ್ಲ. ಅಗತ್ಯವಿರುವ ಬಂಡವಾಳ ತೊಡಗಿಸಿಲ್ಲ, ಆಧುನೀಕರಣ ಕೈಗೊಂಡಿಲ್ಲ. ತನ್ನ ಅಧೀನದಲ್ಲಿರುವ ಇತರೆ ಕಾರ್ಖಾನೆಗಳಂತೆ ಅಭಿವೃದ್ಧಿಪಡಿಸುವ ಬದಲಾಗಿ ಒಂದು ಹಂತದಲ್ಲಿ ಮುನ್ನಡೆಯುತ್ತಿದ್ದ ಕಾರ್ಖಾನೆಯನ್ನು ಪ್ರಸ್ತುತ ಮುಚ್ಚುವ ಸ್ಥಿತಿಗೆ ಬಂದು ತಲುಪುವಂತೆ ಮಾಡಿದೆ ಎಂದು ಆರೋಪಿಸಿದರು.
ಖಾಸಗಿಯವರಿಗೆ ವಹಿಸಿಕೊಡಿ:
ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಬುದ್ಧಿ ಶಕ್ತಿ, ಕ್ರಿಯಾಶೀಲತೆಯಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆ ಭವಿಷ್ಯದಲ್ಲಿ ಉಳಿದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವ ಸಾಮರ್ಥ್ಯಹೊಂದಿರುವ ಉತ್ತಮ ಖಾಸಗಿ ಕಂಪನಿಗೆ ವಹಿಸಿಕೊಡುವುದು ಸೂಕ್ತ ಎಂಬುದು ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನಿಲುವಾಗಿದೆ ಎಂದರು. ಒಟ್ಟಾರೆ ಕಾರ್ಖಾನೆ ಮುನ್ನಡೆಯಬೇಕು. ಗುತ್ತಿಗೆ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ಲಭಿಸಬೇಕು. ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗುವುದನ್ನು ತಪ್ಪಿಸಬೇಕು. ನಿವೃತ್ತ ಕಾರ್ಮಿಕರ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.
ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಮುಖರಾದ ಹನುಮಂತರಾವ್, ಕೆಂಪಯ್ಯ, ರವೀಂದ್ರ ರೆಡ್ಡಿ, ಮಂಜುನಾಥ್, ರಾಮಲಿಂಗಯ್ಯ, ಶಂಕರ್, ನರಸಿಂಹಯ್ಯ, ಎನ್. ಬಸವರಾಜ್, ನರಸಿಂಹಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.