Sunday, December 20, 2020

ಹಳ್ಳಿ ಯುದ್ದಕ್ಕೆ ೨ ದಿನ ಬಾಕಿ : ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಪೈಪೋಟಿ

೩೫ ಪಂಚಾಯಿತಿ, ೩೭೫ ಸ್ಥಾನಗಳು, ೧,೧೯,೨೨೫ ಮತದಾರರು, ೧೦೭೦ ಮಂದಿ ಕಣದಲ್ಲಿ

ಭದ್ರಾವತಿ ಹಳೇನಗರದ ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತದಾನಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದು, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಭಾನುವಾರ ಪರಿಶೀಲನೆ ನಡೆಸಿದರು.

* ಅನಂತಕುಮಾರ್
   ಭದ್ರಾವತಿ: ತಾಲೂಕಿನಲ್ಲಿ ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ೨ ದಿನ ಮಾತ್ರ ಬಾಕಿ ಉಳಿದಿದ್ದು, ತೆರೆಮರೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಕಂಡು ಬರುತ್ತಿದೆ. ವ್ಯಕ್ತಿ ಪ್ರತಿಷ್ಠೆ ಕಣವಾಗಿರುವ ತಾಲೂಕಿನಲ್ಲಿ ಇದೀಗ ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿ ಮತ್ತು ಕರಿಯಣ್ಣ ಕಣ್ಮರೆಯಾಗಿದ್ದು, ಅವರಿಲ್ಲದೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
    ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿವೆ. ಕ್ಷೇತ್ರದಲ್ಲಿ ಈ ಹಿಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದರು. ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎರಡರಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣಕರ್ತರಾಗಿದ್ದರು. ಆದರೆ ಇದೀಗ ಅವರಿಲ್ಲದೆ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಪೂರ‍್ಯಾನಾಯ್ಕ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಅಪ್ಪಾಜಿಯ ರಾಜಕೀಯ ಒಡನಾಡಿಯಾಗಿರುವ ಕರುಣಾಮೂರ್ತಿ ಈ ಬಾರಿ ಸಹ ಮತದಾರರು ತಮ್ಮ ಪಕ್ಷದ ಬೆಂಬಲಿಗರನ್ನು ಆಯ್ಕೆ ಮಾಡುವ ವಿಶ್ವಾಸವಿದೆ ಎನ್ನುವ ಭರವಸೆ ಹೊಂದಿದ್ದಾರೆ.
    ಈ ಬಾರಿ ಚುನಾವಣೆಯ ಬಹಿರಂಗ ಪ್ರಚಾರದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹೆಚ್ಚಾಗಿ ಪಾಲ್ಗೊಂಡಿಲ್ಲ. ಬದಲಾಗಿ ಅವರ ಸಹೋದರ ಬಿ.ಕೆ ಮೋಹನ್ ನೇತೃತ್ವದಲ್ಲಿ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶಾಸಕರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎನ್ನುವ ಆಶಾಭಾವನೆ ಟಿ. ಚಂದ್ರೇಗೌಡ ಹೊಂದಿದ್ದಾರೆ. ಈ ನಡುವೆ ಜೆಡಿಎಸ್ ಪಕ್ಷದ ಮುಖಂಡ, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ತೆರೆಮರೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
    ಈ ಬಾರಿ ಚುನಾವಣೆಯನ್ನು ಬಿಜೆಪಿ ಗಂಭಿರವಾಗಿ ಪರಿಗಣಿಸಿದ್ದು, ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರು ಎಡೆಬಿಡದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ವ್ಯಕ್ತಿ ಪ್ರತಿಷ್ಠೆ ಎಂಬುದು ಬದಲಾಗಿದೆ. ದೇಶದ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಇದೆ ರೀತಿ ಕ್ಷೇತ್ರದಲ್ಲೂ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಚುಕ್ಕಾಣಿ ಬಿಜೆಪಿ ಪಕ್ಷದ ಪಾಲಾಗಲಿದೆ ಎನ್ನುವ ನಂಬಿಕೆ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೊಂದಿದ್ದಾರೆ
   ತಾಲೂಕಿನ ಒಟ್ಟು ೪೧ ಗ್ರಾಮ ಪಂಚಾಯಿತಿಗಳ ಪೈಕಿ ಕೊಮಾರನಹಳ್ಳಿ ಮತ್ತು ವೀರಾಪುರ ಈ ಎರಡು ಗ್ರಾಮ ಪಂಚಾಯಿತಿಗಳ ಅವಧಿ ಡಿಸೆಂಬರ್ ನಂತರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದಂತೆ ಸರ್ಕಾರ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಧಿಸೂಚನೆ ಹೊರಡಿಸಿರುವ ಹಿನ್ನಲೆಯಲ್ಲಿ ಹೊಳೆಹೊನ್ನೂರು, ಹನುಮಂತಾಪುರ, ಸಿದ್ಲಿಪುರ ಮತ್ತು ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ೩೫ ಗ್ರಾಮ ಪಂಚಾಯಿತಿಗಳಿಗೆ ಡಿ.೨೨ರಂದು ಚುನಾವಣೆ ನಡೆಯುತ್ತಿದೆ.
    ಮತದಾರರು, ಮತಗಟ್ಟೆ ವಿವರ:
 ಕೋವಿಡ್-೧೯ ಕಾಣಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಚುನಾವಣೆಯಾಗಿರುವ ಹಿನ್ನಲೆಯಲ್ಲಿ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಒಟ್ಟು ೧,೧೯,೨೨೫ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ೫೮,೭೮೩ ಪುರುಷ ಹಾಗು ೬೦,೪೪೨ ಮಹಿಳಾ ಮತದಾರರು ಸೇರಿದ್ದಾರೆ. ಈ ಬಾರಿ ೧೦೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಪೂರಕ ಮತಗಟ್ಟೆಗಳನ್ನು ರೂಪಿಸಲಾಗಿದ್ದು, ೩೦ ಪೂರಕ ಮತಗಟ್ಟೆಗಳು ಸೇರಿದಂತೆ ಒಟ್ಟು ೧೮೫ ಮತಗಟ್ಟೆಗಳನ್ನು ತೆರೆಯಲಾಗಿದೆ. ೫೮ ಸೂಕ್ಷ, ೨೦ ಅತಿಸೂಕ್ಷ್ಮ ಮತ್ತು ೧೦೭ ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
     ಸಿಬ್ಬಂದಿಗಳ ವಿವರ:
   ಈ ಚುನಾವಣೆಯಲ್ಲಿ ೧೦೩೭ ಮಂದಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ ೨೦೪ ಪಿಆರ್‌ಓ, ೨೦೪ ಎಪಿಆರ್‌ಓ, ೪೪೪ ಪಿ.ಓ ಮತ್ತು ೧೮೫ ಡಿ' ಗ್ರೂಪ್ ನೌಕರರ ಒಳಗೊಂಡಿದ್ದಾರೆ. ಅಲ್ಲದೆ ೩೫ ಚುನಾವಣಾಧಿಕಾರಿಗಳು, ೩೫ ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು ೭೦ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ೧, ಹೋಬಳಿ ಮಟ್ಟದಲ್ಲಿ ೩ ಮಾದರಿ ನೀತಿ ಸಂಹಿತೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ೩೪ ಬಸ್ಸು ಹಾಗು ೬ ಜೀಪುಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
    ಒಟ್ಟು ೩೭೫ ಸ್ಥಾನಗಳಿಗೆ ಚುನಾವಣೆ:
   ತಾಲೂಕಿನಲ್ಲಿ ಒಟ್ಟು ೧೬೫ ಕ್ಷೇತ್ರಗಳ ಒಟ್ಟು ೪೧೯ ಸ್ಥಾನಗಳ ಪೈಕಿ ೪೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಈ ಹಿನ್ನಲೆಯಲ್ಲಿ ಉಳಿದ ೩೭೫ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು ೧೦೭೦ ಮಂದಿ ಕಣದಲ್ಲಿದ್ದು, ಗೆಲುವಿಗಾಗಿ ತೀವ್ರ ಪೈಪೋಟಿಗೆ ಮುಂದಾಗಿದ್ದಾರೆ.
    ಉಪವಿಭಾಗಾಧಿಕಾರಿ ಪರಿಶೀಲನೆ:
ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮಾರ್ಗದರ್ಶನದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ತಾಲೂಕು ಆಡಳಿತ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಭಾನುವಾರ ಟಿ.ವಿ ಪ್ರಕಾಶ್ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.

Saturday, December 19, 2020

೪ನೇ ವರ್ಷದ ದೀಪೋತ್ಸವ : ಹೋಮ, ಸತ್ಯನಾರಾಯಣ ಪೂಜೆ

ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ೪ನೇ ವರ್ಷದ ದೀಪೋತ್ಸವ ಅಂಗವಾಗಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಡಿ. ೧೯: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ  ೪ನೇ ವರ್ಷದ ದೀಪೋತ್ಸವ ಅದ್ದೂರಿಯಾಗಿ ಜರುಗಿತು.
    ಈ ಸಂಬಂಧ ದೇವಸ್ಥಾನದ ಮೂಲ ವಿಗ್ರಹಕ್ಕೆ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ದೇವಸ್ಥಾನದ ಪ್ರಧಾನ ಅರ್ಚಕ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಮುನಿರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ

ಭದ್ರಾವತಿ, ಡಿ. ೧೯: ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.೨ ಮತ್ತು ೩ ರಂದು ೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ ಆಯೋಜಿಸಲಾಗಿದೆ.
ಕೇವಲ ೧೫ ಮಂದಿಗೆ ಮಾತ್ರ ಅವಕಾಶವಿದ್ದು, ಹೆಸರು ನೋಂದಾಯಿಸಿಕೊಳ್ಳಲು ಡಿ.೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಮಟೆ ಜಗದೀಶ್, ಮೊ: ೯೯೪೫೩೧೮೦೨೯, ಕವಿತ ಸುರೇಶ್, ಮೊ: ೯೮೪೫೯೨೭೨೮೪ ಕರೆ ಮಾಡಬಹುದಾಗಿದೆ.




೨ ವರ್ಷಗಳ ನಿರಂತರ ಪ್ರಯತ್ನದಿಂದ ೪೦೦೦ ೩ಜಿ ಗುಂಪು ಮನೆ ಯೋಜನೆ ಯಶಸ್ವಿ

ಫಲಾನುಭವಿಗಳಿಗೆ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಸ

ಭದ್ರಾವತಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳ ಫಲಾನುಭವಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಡಿ. ೧೯: ಸುಮಾರು ೨ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನಗರ ಪ್ರದೇಶದ ಬಡಕುಟುಂಬದ ವಸತಿ ರಹಿತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳನ್ನು ನಿರ್ಮಿಸಲಾಗಿದ್ದು, ಯೋಜನೆ ಕಾರ್ಯ ರೂಪಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿದೆ. ಫಲಾನುಭವಿಗಳು ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
   ಅವರು ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಬಡವರಿಗೆ ಸೂರು ಕಲ್ಪಿಸಿಕೊಡಬೇಕೆಂಬ ಆಶಯ ಇದೀಗ ಈಡೇರಿದೆ. ೪೦೦೦ ಅರ್ಹ ಬಡಕುಟುಂಬಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
   ಫಲಾನುಭವಿಗಳು ಹಂಚಿಕೆ ಮಾಡಲಾಗಿರುವ ಮನೆಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳು, ಸಂಪರ್ಕಿಸಬೇಕಾದ ಅಧಿಕಾರಿಗಳು, ಪಾವತಿಸಬೇಕಾದ ಹಣ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಲಿದ್ದಾರೆ. ಈ ಮಾಹಿತಿಗಳನ್ನು ಶೀಘ್ರದಲ್ಲಿಯೇ ಕರಪತ್ರದಲ್ಲಿ ಮುದ್ರಿಸಿ ವಿತರಿಸಲಾಗುವುದು. ಆ ಮಾಹಿತಿಯಂತೆ ಫಲಾನುಭವಿಗಳು ನಡೆದುಕೊಳ್ಳಬೇಕು. ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬೇಡಿ, ವಿಳಂಬಮಾಡಿಕೊಂಡು ನನ್ನನ್ನು ದೂರಬೇಡಿ ಎಂದರು.
   ಸಭೆಯಲ್ಲಿ ಯೂನಿಯನ್ ಬ್ಯಾಂಕ್ ವಲಯ ವ್ಯವಸ್ಥಾಪಕ ಪ್ರಭು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಚನ್ನಪ್ಪ, ಕೆ. ಸುದೀಪ್‌ಕುಮಾರ್, ಮಣಿ ಎಎನ್‌ಎಸ್, ರಾಮಕೃಷ್ಣ ಗೌಡ, ಲೋಕೇಶ್, ಬಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, December 18, 2020

ಮತದಾರರ ದಿನಾಚರಣೆ ಅಂಗವಾಗಿ ಡಿ.೧೯ರಂದು ಪ್ರೌಢ ಶಾಲಾ ಮಕ್ಕಳಿಗೆ ಸ್ಪರ್ಧಾತ್ಮಕ ಚಟುವಟಿಕೆ

ಭದ್ರಾವತಿ, ಡಿ. ೧೮: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢ ಶಾಲಾ ಮಕ್ಕಳಿಗೆ ತಾಲೂಕು ಹಂತದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.೧೯ರಂದು ಬೆಳಿಗ್ಗೆ ೯.೧೫ ಹಳೇನಗರದ ಬಿಆರ್‌ಸಿ ಕಚೇರಿಯಲ್ಲಿ ಪ್ರಬಂಧ ಸ್ಪರ್ಧೆ(ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ), ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್ ಹಾಗು ರಸಪ್ರಶ್ನೆ ಒಟ್ಟು ೪ ಸ್ಪರ್ಧೆಗಳು ನಡೆಯಲಿವೆ.
ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಅಧಿಕಾರಿಯಾದ ನವೀದ್ ಅಹ್ಮದ್ ಪರ್ವೀಜ್, ಮೊ: ೯೮೮೬೨೧೪೧೬೦ ರವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.


ಡಿ.೧೯ರಂದು ೪ನೇ ವರ್ಷದ ದೀಪೋತ್ಸವ

ಭದ್ರಾವತಿ, ಡಿ. ೧೮: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.೧೯ರಂದು ೪ನೇ ವರ್ಷದ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
    ಈ ಸಂಬಂಧ ಬೆಳಿಗ್ಗೆ ೫.೩೦ಕ್ಕೆ ಅಭಿಷೇಕ, ೯.೩೦ಕ್ಕೆ ಹೋಮ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ ದೀಪಾರಾಧನೆ,ರಾತ್ರಿ ೮.೩೦ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

‘ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್’ : ವಿಐಎಸ್‌ಎಲ್ ಕಾರ್ಖಾನೆ ಸಂತಸ


 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಪ್ರಶಸ್ತಿ ಪತ್ರ ಮತ್ತು ಆವಾರ್ಡ್
ಭದ್ರಾವತಿ, ಡಿ. ೧೮: ಹಿರಿಯ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಒಂದು ವ್ಯಾಪಾರಿ ಕಂಪನಿಯಾಗಿರುವ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಈ ಬಾರಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂತಸ ವ್ಯಕ್ತಪಡಿಸಿದೆ.
    ಈ ನಡುವೆ ಪ್ರಶಸ್ತಿ ಲಭಿಸಿರುವ ಸಂಭ್ರಮ ಪತ್ರಿಕೆಗಳೊಂದಿಗೆ ಹಂಚಿಕೊಂಡಿರುವ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ, ಪ್ರಾಧಿಕಾರ ನಿರಂತರವಾಗಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿರುವ ಪರಿಣಾಮ ಈ ಪ್ರಶಸ್ತಿ ಲಭಿಸಿದೆ. ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖಾನೆಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಉನ್ನತಮಟ್ಟದ ವ್ಯವಸ್ಥೆಗಳೊಂದಿಗೆ ವ್ಯರ್ಥವಾಗುವ ನೀರಿನ ಸಮರ್ಪಕ ನಿರ್ವಹಣೆ ಹಾಗು ಮರುಬಳಕೆ, ಇನ್ನಿತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ನಗರಾಡಳಿತದಲ್ಲೂ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಎಲ್ಲಾ ಕ್ರಮಗಳಿಂದಾಗಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.
   ಪ್ರಶಸ್ತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ಕಂಪನಿ ಅಧ್ಯಕ್ಷರು ಹಾಗು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಂ.ಎನ್ ವೆಂಕಟಚಲಯ್ಯ ನೀಡಿ ಗೌರವಿಸಿದರು.