Monday, January 11, 2021

ಆಹಾರ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಕಾನೂನು ಉಲ್ಲಂಘನೆ : ಸೂಕ್ತ ಕ್ರಮಕ್ಕೆ ಆಗ್ರಹ

ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಏಕಾಂಗಿ ಪ್ರತಿಭಟನೆ

ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಕಾನೂನು ಉಲ್ಲಂಘಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಸೋಮವಾರದಿಂದ ಏಕಾಂಗಿಯಾಗಿ ಹೋರಾಟ ಆರಂಭಿಸಿದ್ದಾರೆ.
ಭದ್ರಾವತಿ, ಜ. ೧೧: ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರು ಕಾನೂನು ಉಲ್ಲಂಘಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ತಾಲೂಕು ಕಛೇರಿ ಮುಂಭಾಗ ಸೋಮವಾರದಿಂದ ಏಕಾಂಗಿಯಾಗಿ ಹೋರಾಟ ಆರಂಭಿಸಿದ್ದಾರೆ.
ತಾಲೂಕಿನ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ವಂಶಪಾರಂಪರೆಯಾಗಿ ನಡೆಸಿಕೊಂಡು ಬರುತ್ತಿರುವ ಸುಮಾರು ೧೦ ನ್ಯಾಯಬೆಲೆ ಅಂಗಡಿಗಳಿದ್ದು, ಈ ಅಂಗಡಿ ಮಾಲೀಕರ ವಿದ್ಯಾಭ್ಯಾಸ, ವಯಸ್ಸು ಸೇರಿದಂತೆ ಇನ್ನಿತರ ಮೂಲ ದಾಖಲಾತಿಗಳನ್ನು ಪರಿಶೀಲಿಸುವಂತೆ ಪಕ್ಷದ ವತಿಯಿಂದ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ. ಅಲ್ಲದೆ ಪರವಾನಿಗೆ ಕೇವಲ ೩ ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಆದರೂ ಸಹ ೨ ರಿಂದ ೩ನೇ ತಲೆಮಾರಿನವರೆಗೂ ನ್ಯಾಯಬೆಲೆ ಅಂಗಡಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಸಂಬಂಧ ಪ್ರಶ್ನಿಸಿದ್ದಲ್ಲಿ ೩ ವರ್ಷಗಳ ನಂತರವೂ ಮುಂದುವರೆಸಿಕೊಂಡು ಹೋಗಲು ನ್ಯಾಯಾಲಯದ ಆದೇಶವಿರುವುದಾಗಿ ಅಂಗಡಿ ಮಾಲೀಕರು ಹೇಳುತ್ತಿದ್ದಾರೆ. ವಾಸ್ತವವಾಗಿ ಸರ್ಕಾರದ ಆದೇಶದ ಪ್ರಕಾರ ಅನುಕಂಪದ ಆಧಾರದ ಮೇಲೆ ನಿಗದಿತ ಮಾನದಂಡಗಳಂತೆ ಪರವಾನಿಗೆ ೩ ವರ್ಷಗಳ ಅವಧಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಅಂಗಡಿ ಮಾಲೀಕರು ಹೇಳುತ್ತಿರುವಂತೆ ಉಚ್ಛ ನ್ಯಾಯಾಲಯ ಅಥವಾ ಸರ್ವೋಚ್ಛ ನ್ಯಾಯಾಲಯದ ಆದೇಶಗಳಿದ್ದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗು ಸರ್ಕಾರದ ಆದೇಶ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಆಯಾ ತಿಂಗಳ ಕಮೀಷನ್ ಹಣ ಆಯಾ ತಿಂಗಳಲ್ಲೇ ನೀಡಬೇಕು. ಕೊರೋನಾ ಸಂದರ್ಭದಲ್ಲಿ ಮೃತಪಟ್ಟಿರುವ ಅಂಗಡಿ ಮಾಲೀಕರಿಗೆ ಸರ್ಕಾರದ ವತಿಯಿಂದ ರು.೩೦ ಲಕ್ಷ ಪರಿಹಾರ ನೀಡಬೇಕೆಂದು ಶಶಿಕುಮಾರ್ ಎಸ್. ಗೌಡ ಮನವಿ ಮಾಡಿದ್ದಾರೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ


ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜ. ೧೧: ನಗರದ ಹೃದಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಹಾಗು ಬಗರ್‌ಹುಕುಂ ರೈತರ ಮತ್ತು ನಿವೇಶನ ರಹಿತ ಬಡವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಸಂಘಟನೆಗಳ ನೇತೃತ್ವದಲ್ಲಿಪ್ರತಿಭಟನೆ ನಡೆಸಲಾಯಿತು.
    ರು.೧೦ ಕೋ. ವೆಚ್ಚದ ಅಂಬೇಡ್ಕರ್ ಭವನ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ:
ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ರು.೧೦ ವೆಚ್ಚದ ಅಂಬೇಡ್ಕರ್ ಭವನ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಬಾಕಿ ಉಳಿದಿರುವ ರು. ೫.೫೦ ಕೋ. ತಕ್ಷಣ ಬಿಡುಗಡೆಗೊಳಿಸಬೇಕು. ಭವನದ ಕೆಳ ಅಂತಸ್ತಿನಲ್ಲಿ(ಪಡುಕೋಣೆ) ಅಂಬೇಡ್ಕರ್ ಗ್ರಂಥಾಲಯ ತೆರೆಯಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ಸರ್ಕಾರವೇ ಸುಸ್ಸಜಿತವಾಗಿ ನಡೆಸಬೇಕು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಮಾಜ ಕಲ್ಯಾಣ ಖಾತೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತ ಇನ್ನಿತರ ಗಣ್ಯರು ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ವಿಚಾರ ಸಂಕೀರ್ಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆ ನೆರವೇರಿಸಬೇಕೆಂದು ಆಗ್ರಹಿಸಲಾಯಿತು.
    ಕಂದಾಯ ಜಮೀನು ಶ್ರೀಮಂತರಿಗೆ ಮಂಜೂರಾತಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ:
     ತಾಲೂಕಿನ ಕಲ್ಲಾಪುರ ಗ್ರಾಮದ ಸರ್ವೆ ನಂ. ೦೧ರಲ್ಲಿ ೭೪ ಎಕರೆ ೧೪ ಗುಂಟೆ ಕಂದಾಯ ಜಮೀನನ್ನು ಕೆಲ ಶ್ರೀಮಂತರಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಜೈಲಿಗೆ ಹೋದ ೨೪ ಬಗರ್‌ಹುಕುಂ ರೈತರ ಕುಟುಂಬಗಳಿಗೆ ಜಮೀನು ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಲಾಯಿತು.
     ಜಮೀನು ಉಳುಮೆ ಮಾಡುತ್ತಿರುವ ಪರಿಶಿಷ್ಟ ಜಾತಿ ರೈತ ಕುಟುಂಬಕ್ಕೆ ರಕ್ಷಣೆ ನೀಡಿ:
   ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಸರ್ವೆ ನಂ. ೩೭/೧, ೩೭/೬ ರಲ್ಲಿ ೧.೨೦ ಗುಂಟೆ ಜಮೀನಿನಲ್ಲಿ ಕಾನೂನು ಬದ್ಧವಾಗಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿಯ ಸೀನಪ್ಪ ಬಿನ್ ವೆಂಕಟರಾಮುರವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ.  ಪೊಲೀಸ್ ಇಲಾಖೆಯ ನಗರವೃತ್ತ ನಿರೀಕ್ಷಕರು ಹಾಗು ಸಿಬ್ಬಂದಿ ದೌರ್ಜನ್ಯ ನಡೆಸುವವರ ಪರವಾಗಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಉಪಾಧೀಕ್ಷಕರು ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಯಿತು.
     ನಿವೇಶನ ರಹಿತ ಬಡವರಿಗೆ ನಿವೇಶನ ಹಾಗು ಸ್ಮಶಾಣ ಜಾಗ ಮಂಜೂರು ಮಾಡಿ:
ತಾಲೂಕಿನ ನವಿಲೇ ಬಸಾಪುರ ಗ್ರಾಮದಲ್ಲಿ ಸುಮಾರು ೨೦ ವರ್ಷಗಳಿಂದ ವಾಸಿಸುತ್ತಿರುವ ಬಡವರಿಗೆ ಇದುವರೆಗೂ ನಿವೇಶನ ಮಂಜೂರಾತಿ ಮಾಡಿರುವುದಿಲ್ಲ. ಅಲ್ಲದೆ ಬಡವರು ನಿಧನ ಹೊಂದಿದ್ದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಮಶಾಣ ಸಹ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಸ್ಮಶಾಣಕ್ಕಾಗಿ ಇದುವರೆಗೂ ಸರ್ಕಾರದ ಗ್ರಾಮ ಠಾಣಾ ಜಾಗವನ್ನು ಅಳತೆ ಮಾಡಿ ಗುರುತಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಬಡವರಿಗೆ ನಿವೇಶನ ಹಾಗು ಸ್ಮಶಾನ ಜಾಗ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಲಾಯಿತು.
  ಪ್ರತಿಭಟನೆಯಲ್ಲಿ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಸುಬ್ಬೇಗೌಡ, ವಿವಿಧ ಸಂಘಟನೆಗಳ ಮುಖಂಡರಾದ ಈ. ಚಂದ್ರಶೇಕರನ್, ಜಿ. ಲತಾ, ಪಿ.ಈ ಬಸವರಾಜ್, ಬಿ.ವಿ ಗಿರೀಶ್, ಶಶಿಕುಮಾರ್ ಎಸ್. ಗೌಡ, ಎಂ. ನಾರಾಯಣ, ಡಿ.ವಿ ವೀರೇಶ್, ಬಾಲ್ಯನಾಯ್ಕ, ಕೆ. ಮಂಜುನಾಥ್, ಶಾರದಮ್ಮ, ಡಿ. ರಾಜು, ಚಿನ್ನಯ್ಯ, ಕಲ್ಲಾಪುರ ಗ್ರಾಮದ ಜಯಮ್ಮ, ಗಂಗಮ್ಮ, ನೀಲಮ್ಮ, ಬಸಮ್ಮ, ಮಹೇಶ್, ರಾಕೇಶ್, ನಾಗರತ್ನಮ್ಮ, ಲಕ್ಷ್ಮಮ್ಮ, ಜಯಮ್ಮ, ನಿರ್ಮಲ, ಸತೀಶ್, ಪುಷ್ಪ, ಸುರೇಶ್, ವಿ. ಈರೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೀನು ವಿತರಣೆ ಸ್ಥಳ ಅಭಿವೃದ್ಧಿಗೆ ಒತ್ತಾಯಿಸಿ ಎಎಪಿ ಪ್ರತಿಭಟನೆ

ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮನೋಹರ್ ಭರವಸೆ

ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ಭದ್ರಾವತಿ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಜ. ೧೧; ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಸೋಮವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
   ಮೀನು ವಿತರಣೆ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಅಲ್ಲದೆ ಮೀನಿನ ತ್ಯಾಜ್ಯಗಳಿಂದ ರೋಗರುಚಿನಗಳು ಹರಡುವ ಭೀತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸ್ಥಳೀಯ ನಿವಾಸಿಗಳಿಗೆ ಹಾಗು ಸಮೀಪದಲ್ಲಿರುವ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ದುವಾರ್ಸನೆಯಿಂದ ತೊಂದರೆಯಾಗುತ್ತಿದೆ. ಅಲ್ಲದೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಲಭ್ಯಗಳಿಲ್ಲದೆ ಮೀನು ವ್ಯಾಪಾರಸ್ಥರಿಗೂ ಸಹ ಅನಾನುಕೂಲವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ಮುಖಂಡರು ಆಗ್ರಹಿಸಿದರು.
    ಮನವಿ ಸ್ವೀಕರಿಸಿದ ಪೌರಾಯುಕ್ತ ಮನೋಹರ್, ಮೀನುಗಾರರ ಕುಟುಂಬಗಳನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲು ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ವತಿಯಿಂದ ಅವರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಿರ್ಧರಿಸಲಾಗಿದೆ. ಅಲ್ಲದೆ ಸುಮಾರು ೧೦ ಕೋ.ರು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಸಹ ನಿರ್ಮಿಸಿಕೊಡಲಾಗುವುದು. ಮುಂದಿನ ಒಂದು ವರ್ಷದೊಳಗೆ ಎಲ್ಲವೂ ಕಾರ್ಯ ರೂಪಕ್ಕೆ ಬರಲಿದೆ. ಇದುವರೆಗೂ ನಡೆಸಿರುವ ಹೋರಾಟಕ್ಕೆ ಪ್ರತಿಫಲ ಸಿಗಲಿದೆ ಎಂದರು.
    ಪಕ್ಷದ ಪ್ರಮುಖರಾದ ಅಧ್ಯಕ್ಷ ಪರಮೇಶ್ವರಚಾರ್, ಕಾರ್ಯದರ್ಶಿ ವಿನೋದ್, ಪ್ರಮುಖರಾದ ಎಚ್. ರವಿಕುಮಾರ್, ಎನ್.ಪಿ ಜೋಸೆಫ್, ಮುಳ್ಕೆರೆ ಲೋಕೇಶ್, ಪರಮೇಶ್ವರ್‌ನಾಯ್ಕ್, ಜಾವಿದ್, ಜೋಸೆಫ್, ಪೀಟರ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತ ದಿನೇಶ್, ರೇಷ್ಮಾಬಾನು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Sunday, January 10, 2021

ಮೀನು ವಿತರಣೆ ಸ್ಥಳ ಅಭಿವೃದ್ಧಿಗೆ ಒತ್ತಾಯಿಸಿ ಜ.೧೧ರಂದು ಪ್ರತಿಭಟನೆ

ಭದ್ರಾವತಿ, ಜ. ೧೦; ಹಲವು ವರ್ಷಗಳಿಂದ ಮೀನು ವಿತರಣೆ ನಡೆಸುತ್ತಿರುವ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸುವಂತೆ ಅಥವಾ ಸ್ಥಳಾಂತರಿಸುವಂತೆ ಒತ್ತಾಯಿಸಿ ಜ. ೧೧ರಂದು ಬೆಳಿಗ್ಗೆ ೧೦ ಗಂಟೆಗೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಮೀನು ವಿತರಣೆ ಸ್ಥಳದಲ್ಲಿ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದ್ದು, ಅಲ್ಲದೆ ಮೀನಿನ ತ್ಯಾಜ್ಯಗಳಿಂದ ರೋಗರುಚಿನಗಳು ಹರಡುವ ಭೀತಿ ಎದುರಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ದುವಾರ್ಸನೆಯಿಂದ ತೊಂದರೆಯಾಗುತ್ತಿದೆ. ಈ ಕುರಿತು ಹಲವಾರು ಬಾರಿ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.  


ರಾಮ ಸೇನಾ ಕರ್ನಾಟಕ ಸಂಘಟನೆಯಿಂದ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವ

ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.
ಭದ್ರಾವತಿ, ಜ. ೧೦:  ಹಿಂದೂ ಧರ್ಮ ಸಂಸ್ಕೃತಿ ಜೊತೆಗೆ ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ರಾಮ ಸೇನಾ ಕರ್ನಾಟಕ ಸಂಘಟನೆ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಆಚರಿಸಿ ಸರ್ಕಾರಿ ಶಾಲೆಯ ವೈಭವ ಮತ್ತಷ್ಟು ಹೆಚ್ಚಿಸುವ ಮೂಲಕ ಗಮನ ಸೆಳೆದಿದೆ.
     ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಮಂದಿ ಹೆಚ್ಚು. ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುವ ಬದಲು ಖಾಸಗಿ ಶಾಲೆಗಳ ಅಭಿವೃದ್ಧಿಗೆ ಮುಂದಾಗುವವರೇ ಹೆಚ್ಚು. ಸರ್ಕಾರಿ ಉದ್ಯೋಗ ಬೇಕು ಸರ್ಕಾರಿ ಶಾಲೆ ಬೇಡ ಎನ್ನುವ ಜನರ ನಡುವೆ. ಕರ್ನಾಟಕ ರಾಮ್ ಸೇನಾ ವಿಶಿಷ್ಟವಾಗಿ ಇದೀಗ ಗಮನ ಸೆಳೆದಿದೆ.
    ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿದೆ.


   ಭದ್ರಾವತಿ ನಗರಸಭೆ ವ್ಯಾಪ್ತಿಯ ಶಿವರಾಮನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ನಗರದ ಯುವ ಪ್ರತಿಭೆ, ಕುಂಚ ಕಲಾವಿದ ನಾಗಪ್ರಸಾದ್‌ರವರ ಸಹಕಾರದೊಂದಿಗೆ ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಆಕರ್ಷಕವಾಗಿ ಕಂಗೊಳಿಸುವಂತೆ ರೂಪಿಸಿರುವ ರಾಮ ಸೇನಾ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಉಮೇಶ್ ನೇತೃತ್ವದ ತಂಡ.
   ಒಂದೆಡೆ ಖಾಸಗಿ ಬಸ್‌ಗಳ ನಡುವೆ ಸರ್ಕಾರಿ ಬಸ್‌ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಬಸ್‌ಗಳ ಕುರಿತು ಜಾಗೃತಿ ಮೂಡಿಸಲು ಶಾಲೆಯ ಕೊಠಡಿಯನ್ನು ಸರ್ಕಾರಿ ಬಸ್ ಮಾದರಿಯಂತೆ ನಾಗಪ್ರಸಾದ್ ತಮ್ಮ ಕೈಚಳಕದಲ್ಲಿ ಅನಾವರಣಗೊಳಿಸಿದ್ದಾರೆ.
     ಇದೆ ರೀತಿ ಪರಿಸರ ಪ್ರಜ್ಞೆ, ಮಹಾನ್ ಸಾಧಕರು ಕುರಿತು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಕನ್ನಡ ಅಕ್ಷರಗಳಿಂದ ಹಾಗು ಆಕರ್ಷಕ ಚಿತ್ತಾರಗಳಿಂದ ಶಾಲೆಯನ್ನು ಮಕ್ಕಳ ಆಕರ್ಷಕ ತಾಣವನ್ನಾಗಿಸಲಾಗಿದೆ.  
    ಪತ್ರಿಕೆಯೊಂದಿಗೆ ಮಾತನಾಡಿದ ಉಮೇಶ್, ಕೊರೋನಾ ಸಂದರ್ಭದಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಅಚರಿಸಬೇಕೆಂಬ ಉದ್ದೇಶ ಹೊಂದಲಾಗಿತ್ತು. ಅದರಂತೆ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ  ಸಣ್ಣ ಪ್ರಯತ್ನ ಕೈಗೊಳ್ಳಲಾಗಿದೆ. ಈ ರೀತಿಯ ಪ್ರಯತ್ನ ಎಲ್ಲೆಡೆ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.  

Saturday, January 9, 2021

ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಜ.೧೧ರಂದು ಪ್ರತಿಭಟನಾ ಸತ್ಯಾಗ್ರಹ

ಭದ್ರಾವತಿ, ಜ. ೯: ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಿಂಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಖಂಡಿಸಿ ಹಾಗು ಬಗರ್ ಹುಕುಂ ರೈತರ ಮತ್ತು ನಿವೇಶನ ರಹಿತ ಬಡವರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಟ ಸಮಿತಿ ವತಿಯಿಂದ ಜ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
   ೨೦೧೭ರಲ್ಲಿ ಆರಂಭಗೊಂಡಿರುವ ಅಂಬೇಡ್ಕರ್ ಭವನ ಕಾಮಗಾರಿ ಇಂದಿಗೂ ಮುಕ್ತಾಯಗೊಂಡಿಲ್ಲ. ತಕ್ಷಣ ಸರ್ಕಾರ ೫.೫೦ ಕೋ.ರು. ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಹಾಗು ತಾಲೂಕಿನಲ್ಲಿ ಬಗರ್ ಹುಕುಂ ರೈತರು, ನಿವೇಶನ ರಹಿತ ಬಡವರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂಬಂಧ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಕೋರಿದ್ದಾರೆ.


ಜಯಕರ್ನಾಟಕ ತಾಲೂಕು ಅಧ್ಯಕ್ಷರಾಗಿ ಆರ್. ಅರುಣ್

ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳ ಸಭೆ ನಡೆಯಿತು.
ಭದ್ರಾವತಿ, ಜ. ೯: ಜಯಕರ್ನಾಟಕ ತಾಲೂಕು ಶಾಖೆ ಅಧ್ಯಕ್ಷರಾಗಿ ಕಾಗದನಗರದ ನಿವಾಸಿ, ಕಾಂಗ್ರೆಸ್ ಮುಖಂಡ ಆರ್. ಅರುಣ್ ನೇಮಕಗೊಂಡಿದ್ದಾರೆ.
    ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಪಿ. ಶರವಣ, ಕಾರ್ಯಾಧ್ಯಕ್ಷರಾಗಿ ವೈ. ಚೇತನ್, ಉಪಾಧ್ಯಕ್ಷರಾಗಿ ಜೀವನ್, ದಿವ್ಯರಾಜ್, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಮತ್ತು ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ನೇಮಕಗೊಂಡಿದ್ದಾರೆ.