ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಾಯ ಮತ್ತು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ತನಿಖೆಯನ್ನು ೧೯೧೫-೧೯೧೬ರ ನಡುವೆ ನಡೆಸಲಾಯಿತು.
* ಅನಂತಕುಮಾರ್
ಭದ್ರಾವತಿ, ಜ. ೧೮: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೋಮವಾರ ಶಂಕು ಸ್ಥಾಪನೆಗೊಂಡು ೧೦೩ ವರ್ಷ ಕಳೆದಿದ್ದು, ಇದೀಗ ಕಾರ್ಖಾನೆ ವ್ಯಾಪ್ತಿಯಲ್ಲಿ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿಕೊಂಡಿದೆ. ಕೋವಿಡ್-೧೯ರ ಪರಿಣಾಮ ಆಡಳಿತ ಮಂಡಳಿ ಈ ಬಾರಿ ವಿಐಎಸ್‌ಎಲ್ ಉತ್ಸವ ನಡೆಸದಿರುವುದು ಒಂದೆಡೆ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು, ಕುಟುಂಬ ವರ್ಗದವರು ಸೇರಿದಂತೆ ನಗರದ ಜನತೆಯನ್ನು ನಿರಾಸೆಗೊಳಿಸಿದೆ. ಮತ್ತೊಂದೆಡೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿರುವುದು ಈ ಬಾರಿಯ ಸಂಭ್ರಮವನ್ನು ಮತ್ತಷ್ಟು ಮೊಟಕುಗೊಳಿಸಿದೆ.
ಸುಮಾರು ೨ ದಶಕಗಳಿಂದ ಕಾರ್ಖಾನೆ ಆಡಳಿತ ಮಂಡಳಿ ಸುಮಾರು ೧ ತಿಂಗಳ ಕಾಲ ವಿಐಎಸ್‌ಎಲ್ ಉತ್ಸವ ನಡೆಸುವ ಮೂಲಕ ಸಂಸ್ಥಾಪನಾ ದಿನ, ಸೈಲ್ ಡೇ ಹಾಗು ಗಣ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದೆ. ವಿಐಎಸ್‌ಎಲ್ ಉತ್ಸವದಲ್ಲಿ ಪ್ರತಿ ದಿನ ಸುಮಾರು ೫ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಪ್ರತಿ ದಿನ ಸಂಜೆ ಮಕ್ಕಳ ವಿವಿಧ ಬಗೆಯ ಆಟಿಕೆಗಳು, ಗೃಹ ಬಳಕೆ ಸಾಮಾಗ್ರಿಗಳ ಮಾರಾಟ, ವಿಐಎಸ್‌ಎಲ್ ವಸ್ತು ಪ್ರದರ್ಶನ ಮಳಿಗೆಗಳು, ಬಗೆ ಬಗೆಯ ಆಹಾರ ಖಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದಲ್ಲಿ ಕಂಡು ಬರುತ್ತಿತ್ತು. ನಗರದ ಜನತೆ ೧ ತಿಂಗಳ ಕಾಲ ಸಂಭ್ರಮದಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಉತ್ಸವ ಆಯೋಜಿಸಿಲ್ಲ. ಈ ಹಿಂದೆ ಸುನಾಮಿ ಪ್ರವಾಹ ಸಂದರ್ಭದಲ್ಲಿ ಉತ್ಸವ ನಡೆಸಿರಲಿಲ್ಲ. ೨ ದಶಕದಲ್ಲಿ ಕೇವಲ ೨ ಬಾರಿ ಮಾತ್ರ ಉತ್ಸವ ನಡೆದಿಲ್ಲ ಎಂಬುದು ಬಿಟ್ಟರೇ ಬೇರೆ ಎಲ್ಲಾ ಸಂದರ್ಭದಲ್ಲೂ ಉತ್ಸವ ನಿಗದಿತ ದಿನಾಂಕದಂದು ಜನವರಿ ಆರಂಭದಿಂದ ಫೆಬ್ರವರಿವರೆಗೆ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.
ಆಡಳಿತ ಮಂಡಳಿಯಿಂದ ಸರಳವಾಗಿ ಸಂಸ್ಥಾಪನಾ ದಿನ ಆಚರಣೆ:
ಕಾರ್ಖಾನೆಯ ಒಳಭಾಗದಲ್ಲಿರುವ ಆಡಳಿತ ಕಛೇರಿಯಲ್ಲಿ ಸರಳವಾಗಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಕಛೇರಿ ಆವರಣದಲ್ಲಿರುವ ಕಾರ್ಖಾನೆಯ ಮೊದಲ ಅಧ್ಯಕ್ಷರು ಹಾಗು ಸಂಸ್ಥಾಪಕರಲ್ಲಿ ಒಬ್ಬರಾದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗೆ ಕಾರ್ಖಾನೆಯ ಮಹಾಪ್ರಬಂಧಕ(ಸ್ಥಾವರ) ಮತ್ತು ಆಕ್ಟಿಂಗ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ೧೦೩ನೇ ಸಂಸ್ಥಾಪನಾ ದಿನ ಸೋಮವಾರ ಕಾರ್ಖಾನೆಯ ಒಳಭಾಗದಲ್ಲಿರುವ ಆಡಳಿತ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಸರ್.ಎಂ.ವಿ ಪ್ರತಿಮೆಗೆ ಆಕ್ಟಿಂಗ್ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಮಾಲಾರ್ಪಣೆ ಮಾಡಿದರು.
ಮಹಾಪ್ರಬಂಧಕರು ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್. ವೀರಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
೧೦೩ನೇ ಸಂಸ್ಥಾಪನಾ ದಿನ :
ನಗರದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಸಲುವಾಗಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಾಯ ಮತ್ತು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾಥಮಿಕ ತನಿಖೆಯನ್ನು ೧೯೧೫-೧೯೧೬ರ ನಡುವೆ ನಡೆಸಲಾಯಿತು. ಇದ್ದಿಲು ಇಂಧನ ಬಳಸಿ ಗಟ್ಟಿ ಕಬ್ಬಿಣ ತಯಾರಿಸುವ ಸಾಧ್ಯತೆಯನ್ನು ಪರಿಶೋಧಿಸಲಾಯಿತು. ಇದರ ಮುಖ್ಯ ಉದ್ದೇಶ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳನ್ನು ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಆಗಿತ್ತು .ಈ ತನಿಖೆಯನ್ನು ಒಂದು ನ್ಯೂಯಾರ್ಕ್ ಮೂಲದ ಸಂಸ್ಥೆ ನಿರ್ವಹಿಸಿತು. ಇದರ ಫಲವಾಗಿ ೧೯೧೮ರಲ್ಲಿ ವಿಶ್ವೇಶ್ವರಯ್ಯನವರು ಈ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಜ.೧೮ರಂದು ಸಂಸ್ಥಾಪನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ.