ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ
ಭದ್ರಾವತಿ, ಜ. ೧೯: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಲಕ್ಷಾಂತರ ಜನಸಂಖ್ಯೆ ಹೊಂದಿರುವ ನಗರದಲ್ಲಿ ವಿವಿಧ ವಾರ್ಡ್‌ಗಳ ನಡುವೆ ಸಂಚರಿಸಲು ನಗರ ಸಾರಿಗೆ ಕೊರತೆ ಕಂಡು ಬರುತ್ತಿದ್ದು, ಕೇವಲ ೨ ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಸಮರ್ಪಕ ಹಾಗು ತುರ್ತು ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಅಲ್ಲದೆ ರೈಲಿನ ಮೂಲಕ ನಗರಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲುಗಳು ಬರುವ ನಿಗದಿತ ಸಮಯಕ್ಕೆ ಸರಿಯಾಗಿ ಹೆಚ್ಚುವರಿಯಾಗಿ ೨ ಬಸ್ಸುಗಳ ವ್ಯವಸ್ಥೆ ಕಲ್ಪಿಸುವಂತೆ ನಗರದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ.
ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶಗಳಿಂದ ಪ್ರತಿ ದಿನ ನೂರಾರು ಮಂದಿ ಆರೋಗ್ಯ ಸೇವೆ ಪಡೆದುಕೊಳ್ಳಲು ಮಣಿಪಾಲ್ ಆಸ್ಪತ್ರೆ ಅವಲಂಬಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾದವರ ಜೊತೆಗೆ ಕುಟುಂಬ ವರ್ಗದವರು ಸಹ ಆಸ್ಪತ್ರೆಗೆ ತೆರಳುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ತರ್ತು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಭದ್ರಾವತಿ ಘಟಕದಿಂದ ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ತೆರಳುವಂತೆ ಹಾಗು ಶಿವಮೊಗ್ಗ-ಆಯನೂರು-ರಿಪ್ಪನ್‌ಪೇಟೆ-ಹುಂಚ-ಕೋಣಂದೂರು-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ತೆರಳುವಂತೆ ಮತ್ತು ಎನ್.ಆರ್ ಪುರ-ಕೊಪ್ಪ-ಹರಿಹರಿಪುರ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ತೆರಳುವಂತೆ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ವಿಭಾಗೀಯ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ.
ನಗರದಲ್ಲಿ ದಿನ ದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ದಟ್ಟಣೆ ಉಂಟಾಗುತ್ತಿದ್ದು, ಈ ನಡುವೆ ನಗರದ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ರಂಗಪ್ಪ ವೃತ್ತ ಮತ್ತು ಮಾಧವಚಾರ್ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದ್ದು, ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಅಪಘಾತಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಈ ವೃತ್ತಗಳಲ್ಲಿ ಆಟೋಮ್ಯಾಟಿಕ್ ಎಲೆಕ್ಟ್ರಿಕಲ್ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸುವುದು ಸೂಕ್ತ ವಾಗಿದೆ. ಅಲ್ಲದೆ ನಗರದ ವಿವಿಧ ಭಾಗಗಳಲ್ಲಿ ಕಳವು ಪ್ರಕರಣಗಳು, ಪುಂಡಪೋಕರಿಗಳ ಹಾವಳಿಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಲಿ ಬದುಕುವಂತಾಗಿದೆ. ಈ ಹಿನ್ನಲೆಯಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ಅಗತ್ಯವಿರುವ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷ ಡಿ. ನಂಜಪ್ಪ, ಅಧ್ಯಕ್ಷ ಜಿ.ಟಿ ಬಸವರಾಜ್, ಉಪಾಧ್ಯಕ್ಷ ಎಸ್.ಎಸ್ ಭೈರಪ್ಪ, ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ, ಕಾರ್ಯದರ್ಶಿ ಸಿ.ಎಸ್ ಶಂಕರಯ್ಯ, ಕಾರ್ಯದರ್ಶಿ ರಾಮಪ್ಪ ಮತ್ತು ಖಜಾಂಚಿ ಕೆ.ಜೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment