Thursday, January 21, 2021

ಪೊಕ್ಸೋ ಕಾಯಿದೆ ಕುರಿತು ಹೆಚ್ಚಿನ ಅರಿವು ಹೊಂದಿ


ಭದ್ರಾವತಿ : ದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಪೊಕ್ಸೋ ಕಾಯಿದೆಯನ್ನು ಜಾರಿಗೆ ತರುವ ಮೂಲಕ ರಕ್ಷಣೆಗೆ ಮುಂದಾಗಿದ್ದು, ಹೆಣ್ಣುಮಕ್ಕಳು ಈ ಕಾಯಿದೆ ಕುರಿತು ಹೆಚ್ಚಿನ ಅರಿವು ಹೊಂದಬೇಕೆಂದು ನ್ಯಾಯವಾದಿ ಟಿ ಚಂದ್ರೇಗೌಡ ತಿಳಿಸಿದರು.
    ಅವರು ಗುರುವಾರ ನ್ಯೂಟೌನ್ ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತಾಲೂಕು  ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು,  ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ  ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ದೇಶದಲ್ಲಿ  ಅಪ್ರಾಪ್ತ ಬಾಲಕಿಯರ ಮೇಲಿನ ಪ್ರಕರಣಗಳು  ಹೆಚ್ಚಾಗುತ್ತಿರುವುದು ಒಂದೆಡೆ ವಿಷಾದನೀಯ ಬೆಳವಣಿಗೆಯಾಗಿದೆ. ಅತ್ಯಾಚಾರ ಬಾಲ್ಯ ವಿವಾಹ, ಅಪ್ರಾಪ್ತ ಬಾಲಕಿಯರ ಮಾರಾಟ    ಸೇರಿದಂತೆ ಹಲವು  ಪ್ರಕರಣಗಳಲ್ಲಿ  ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾದ ಎಲ್ಲರನ್ನೂ ಕಠಿಣವಾಗಿ ಶಿಕ್ಷಿಸುವ  ವ್ಯವಸ್ಥೆ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಕ್ಸೋ ಕಾಯ್ದೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.   
       ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಟಿ.ಪಿ ಪುರುಷೋತ್ತಮ್ ಉದ್ಘಾಟಿಸಿದರು.  ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಜಿ ಉಮಾಶಂಕರ್  ಅಧ್ಯಕ್ಷತೆ ವಹಿಸಿದ್ದರು . ತಾಲೂಕು  ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಟಿ ಎಸ್ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
     ವಿದ್ಯಾರ್ಥಿನಿ ಸುಪ್ರಿಯಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ ಬಿ.ಎಂ ನಾಸಿರ್ ಖಾನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಎಸ್ ವರದರಾಜು ನಿರೂಪಿಸಿದರು. ಡಾ. ದ್ರಾಕ್ಷಾಯಿಣಿ ಎಂ ಡೋಂಗ್ರೆ ವಂದಿಸಿದರು. 
   ಕಾಲೇಜಿನ ವಿವಿಧ ವಿಭಾಗಗಳ ಸಹಾಯಕ  ಪ್ರಾಧ್ಯಾಪಕರಾದ ಡಾ. ಮಂಜುನಾಥ್, ಡಾ. ಸಕ್ರಿ ನಾಯ್ಕ್,  ಫರ್ಹಾನ ಅಂಜುಮ್, ವಿಶ್ವನಾಥ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.  

Wednesday, January 20, 2021

ಜ.೨೧ರಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ಭದ್ರಾವತಿ, ಜ. ೨೦: ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜ.೨೧ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ನ್ಯೂಟೌನ್, ನ್ಯೂಕಾಲೋನಿ, ಐಟಿಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನೀಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹಳೇಸಿದ್ದಾಪುರ, ಹೊಸೂರು ತಾಂಡ್ಯಾ, ಹುತ್ತಾ ಕಾಲೋನಿ, ಜನ್ನಾಪುರ, ಬಿ.ಎಚ್ ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಳೆ ಗಂಗೂರು, ಕಾರೇಹಳ್ಳಿ, ಕಂಬದಾಳು ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆ ನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ತಡಸ, ಬಿಳಿಕಿ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವರನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ ಮತ್ತು ಅರಳಿಕೊಪ್ಪ ಸೇರಿದಂತೆ ಇನ್ನಿತರರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಶತಾಯುಷಿ ಪುಟ್ಟಮ್ಮ ನಿಧನ

ಶತಾಯುಷಿ ಪುಟ್ಟಮ್ಮ
ಭದ್ರಾವತಿ, ಜ. ೨೦: ನಗರಸಭೆ ವ್ಯಾಪ್ತಿಯ ಜನ್ನಾಪುರ ಫಿಲ್ಟರ್ ಶೆಡ್ ನಿವಾಸಿ, ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡರವರ ಅಜ್ಜಿ, ಶತಾಯುಷಿ ಪುಟ್ಟಮ್ಮ(೧೦೧) ಬುಧವಾರ ನಿಧನ ಹೊಂದಿದರು.
    ಪುಟ್ಟಮ್ಮ ವಿಐಎಸ್‌ಎಲ್ ಕಾರ್ಖಾನೆಯ ಗೆಸ್ಟ್‌ಹೌಸ್ ವಿಭಾಗದಲ್ಲಿ ಸುಮಾರು ೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮೊಮ್ಮಗ ಶಶಿಕುಮಾರ್ ಎಸ್ ಗೌಡ ಹಾಗು ಮರಿಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎಬಿವಿಪಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಭದ್ರಾವತಿ, ಜ. ೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
    ಕೊರೋನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕಳೆದ ಸುಮಾರು ೮-೯ ತಿಂಗಳು ಸ್ಥಗಿತಗೊಂಡು ಇದೀಗ ಆರಂಭಗೊಂಡಿವೆ.  ಈ ನಡುವೆ ವಿದ್ಯಾರ್ಥಿಗಳು ಹಲವು ಸಮಸ್ಯೆಗಳು ಎದುರಿಸುವಂತಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿದ್ದ ಕೆಲವು ವಿದ್ಯಾರ್ಥಿ ವೇತನಗಳು ಕೊರೋನಾ ಸಂದರ್ಭದಲ್ಲಿ ಸರಿಯಾಗಿ ಬಿಡುಗಡೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು.
     ಪ್ರಸ್ತುತ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ಗಳನ್ನು ತೆರೆಯಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ತಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ಗಳನ್ನು ತೆರೆಯುವುದು.
       ಅನೇಕ ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ಕಾಯಂ ಉಪನ್ಯಾಸಕರು ಇರುವುದಿಲ್ಲ ಪ್ರಸ್ತುತ ಕಾಲೇಜುಗಳು ಪ್ರಾರಂಭವಾಗಿ  ವಿದ್ಯಾರ್ಥಿಗಳು ತರಗತಿಗಳಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ತರಗತಿಗಳನ್ನು ನಡೆಸಬೇಕು.
       ಪ್ರಸ್ತುತ ಎಲ್ಲಾ ಕಾಲೇಜುಗಳಿಗೆ ಮತ್ತು ಹಾಸ್ಟೆಲ್‌ಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯಗಳು ಇರುವುದಿಲ್ಲ. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬಸ್‌ಗಳ ಸಂಚಾರ ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
    ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯ ಗೌಡರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾ ಸಹ ಸಂಚಾಲಕ ಕುಮಾರಸ್ವಾಮಿ, ಎಸ್.ಎಫ್.ಡಿ ಪ್ರಮುಖ ಹಾಲಸ್ವಾಮಿ, ಮಂಚ್ ಪ್ರಮುಖ ಕಲ್ಪನಾ, ನಿರಂಜನ್, ಆಕಾಶ್, ಅಭಿ, ಮುರುಗೇಶ್, ಹಿಮಾ ಮತ್ತು ಯಶಸ್ವಿನಿ  ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.                      

Tuesday, January 19, 2021

ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ



ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹಾಯೋಗಿ ವೇಮನ ಜಯಂತಿ ಸರಳವಾಗಿ ಆಚರಿಸಲಾಯಿತು.
  ಭದ್ರಾವತಿ, ಜ. ೧೯: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹಾಯೋಗಿ ವೇಮನ ಜಯಂತಿ ಸರಳವಾಗಿ ಆಚರಿಸಲಾಯಿತು.
  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಹಾಯೋಗಿ ವೇಮನರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
   ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು, ರೆಡ್ಡಿ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೇರಳ ಸಮಾಜಂ ಅಧ್ಯಕ್ಷರಾಗಿ ವಿಜಯಲಕ್ಷ್ಮಿ

ಭದ್ರಾವತಿ ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳು.
ಭದ್ರಾವತಿ, ಜ. ೧೯: ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ.
     ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಶೋಭ ಬಾಲಚಂದ್ರನ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಹೇಮಂತ ಕಲ್ಯಾಣಿ, ಸಹಕಾರ್ಯದರ್ಶಿಯಾಗಿ ರೇಖಾ ಚಂದ್ರನ್, ಖಜಾಂಚಿಯಾಗಿ ಎಂ. ಸೀತಾಲಕ್ಷ್ಮಿ, ಸಲಹೆಗಾರರಾಗಿ ಎಂ. ವಾಸಂತಿ ಹಾಗು ಸದಸ್ಯರಾಗಿ ಕೆ. ಶಶಿಕಲಾ ಸುರೇಶ್, ಶೈಲಜಾ ಸುರೇಶ್, ಕೆ. ಲೋಲಾಕ್ಷಿ, ಕೆ.ಎಸ್. ಯಶೋಧ, ಪ್ರೇಮಾ ವೇಲಾಯುಧನ್, ಸಿಂಧು ದಿವಾಕರ್ ಮತ್ತು ಸ್ವಾತಿ ರಜನೀಸ್ ಆಯ್ಕೆಯಾಗಿದ್ದಾರೆ.
   ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಸಹಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್, ಆರ್. ರಾಧಾಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಡಾಟಾ ಎಂಟ್ರಿ ಆಪರೇಟರ್

ಎಸಿಬಿ ಬಲೆಗೆ ಡಾಟಾ ಎಂಟ್ರಿ ಆಪರೇಟರ್ ವೇಣು
ಭದ್ರಾವತಿ, ಜ. ೧೯: ಇಲ್ಲಿನ ಸಿದ್ದರೂಢನಗರದ ವಾಣಿಜ್ಯ ತೆರಿಗೆ ಇಲಾಖೆ ಕಛೇರಿಯಲ್ಲಿ ದಿನಗೂಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
   ಡಾಟಾ ಎಂಟ್ರಿ ಆಪರೇಟರ್ ವೇಣು(೩೬) ಎಂಬಾತ ಶಾಮಿಯಾನ ಅಂಗಡಿಯೊಂದರ ಜಿಎಸ್‌ಟಿ ನೋಂದಣಿಗಾಗಿ ರು. ೨,೫೦೦ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
   ಪೊಲೀಸ್ ಉಪಾಧೀಕ್ಷಕ ಪಿ. ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಠಾಣಾಧಿಕಾರಿ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ್, ರಘುನಾಯ್ಕ್, ನಾಗರಾಜ್, ಸುರೇಂದ್ರ, ಹರೀಶ್ ಮತ್ತು ಯೋಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.