ಮಾಜಿ ಶಾಸಕ ಎಂ.ಜೆ ಅಪ್ಪಾಜಿ ರಾಜಕೀಯ ಒಡನಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪತಿ
![](https://blogger.googleusercontent.com/img/b/R29vZ2xl/AVvXsEgyE6zEMCoZOvJ0kdXzD1M5rVMmJM1Yu5Z_fGty09-oH72Byws0llz7kzjdmxSPXT8fOKtpvqgQuezsUfFKF8fdX_GlCJ2NLm6Mg2zf1_W2Wlkjx0qk9Xvz2a3M9n2KaZBxJ8NZebP4ROsi/w640-h282-rw/D24-BDVT-748247.jpg)
ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಉದ್ಘಾಟಿಸಿದರು.
ಭದ್ರಾವತಿ, ಜ. ೨೪: ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ರಾಜಕೀಯ ಒಡನಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಜೆಡಿಎಸ್ ಪಕ್ಷದಿಂದ ಹೊರ ಬಂದಿರುವುದಾಗಿ ಭಾನುವಾರ ಅಧಿಕೃತವಾಗಿ ಸ್ಪಷ್ಟಪಡಿಸಿದರು.
ಅವರು ತಮ್ಮ ಸ್ವಂತ ಊರು ಕೆಂಚೇನಹಳ್ಳಿ ಸಮುದಾಯ ಭವನದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅಪ್ಪಾಜಿಯವರು ನನಗೆ ರಾಜಕೀಯ ಜನ್ಮ ನೀಡಿದರು. ಇದರಿಂದಾಗಿ ಒಟ್ಟು ೪ ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಸಾಧ್ಯವಾಯಿತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಜಿಲ್ಲಾ ಪಂಚಾಯಿತಿ ಅಧಿಕಾರ ನನ್ನ ಪತ್ನಿ ಜ್ಯೋತಿ ಎಸ್ ಕುಮಾರ್‌ರವರು ಪಡೆಯಲು ಸಾಧ್ಯವಾಯಿತು. ಆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳಲು ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಪಿತೂರಿ ನಡೆಸಿದ ಪರಿಣಾಮ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದವು. ಈ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಅಪ್ಪಾಜಿ ಮತ್ತು ನನ್ನ ನಡುವೆ ಬೇಸರವನ್ನುಂಟು ಮಾಡಿವೆ ಹೊರತು ಅಪ್ಪಾಜಿ ಎಂದಿಗೂ ನನ್ನ ರಾಜಕೀಯ ಗುರುಗಳಾಗಿದ್ದಾರೆ ಎಂದರು.
ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳು ಆ ಸಂದರ್ಭಕ್ಕೆ ಅನುಗುಣವಾಗಿ ಬದಲಾಗಿವೆ. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಸಹಕಾರ ಪಡೆದು ೩ ಸ್ಥಾಯಿ ಸಮಿತಿಗಳನ್ನು ಅವರಿಗೆ ಬಿಟ್ಟು ಕೊಡಲಾಯಿತು ಹೊರತು ಬೇರೆ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ, ಭವಿಷ್ಯದಲ್ಲೂ ಸೇರ್ಪಡೆಗೊಳ್ಳುವ ಆಲೋಚನೆ ನಡೆಸಿಲ್ಲ. ನನ್ನ ಮುಂದಿನ ರಾಜಕೀಯ ಭವಿಷ್ಯ ಹೊಸದಾಗಿ ರೂಪುಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮಲ್ಲರ ಸಲಹೆ, ಸಹಕಾರ ಪಡೆಯಲು ಮುಂದಾಗಿದ್ದೇನೆ. ನಿಮ್ಮ ಇಚ್ಛೆಯಂತೆ ಮುನ್ನಡೆಯುತ್ತೇನೆ. ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ರಾಜಕೀಯವಾಗಿ ಮುಂಚೂಣಿಯಲ್ಲಿರಲು ಬಯಸುತ್ತೇನೆ. ಯಾವುದೇ ಪಕ್ಷದಲ್ಲಿರಲಿ ಬೆಂಬಲಿಗರ ಪರವಾಗಿ ದುಡಿಯುತ್ತೇನೆ, ಭದ್ರಾವತಿ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಈ ಹಿನ್ನಲೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಬಹುತೇಕ ಬೆಂಬಲಿಗರು, ಯಾವುದೇ ಪಕ್ಷಕ್ಕೆ ಸೇರ್ಪಡೆಗೊಂಡರೂ ನಮ್ಮ ಬೆಂಬಲವಿದೆ. ಆದರೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೊದಲು ಭವಿಷ್ಯದ ಬಗ್ಗೆ ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಸೂಕ್ತ. ಪಕ್ಷ ಸೇರ್ಪಡೆ ಬದಲು ಸ್ವತಂತ್ರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಸಹ ಆಲೋಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಮಾವಿನಕೆರೆ, ಎರೇಹಳ್ಳಿ, ಬಾರಂದೂರು ಮತ್ತು ಹಿರಿಯೂರು ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ನೂತನ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಉಪಸ್ಥಿತರಿದ್ದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ಮುಖಂಡರಾದ ಮುರುಳಿ, ಉಮೇಶ್ ಸೇರಿದಂತೆ ಇನ್ನಿತರ ಮುಖಂಡರು, ಬೆಂಬಲಿಗರು ಉಪಸ್ಥಿತರಿದ್ದರು. ಇನ್ನಿತರರು