Sunday, February 7, 2021

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ : ನಗರ ಸಂಕೀರ್ತನಾ ಯಾತ್ರೆ

೭ ವರ್ಷದ ಬಾಲಕಿ ಜನ್ಮದಿನ ಅಂಗವಾಗಿ ನಿಧಿ ಸಮರ್ಪಣೆ

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾನುವಾರ ಭದ್ರಾವತಿಯಲ್ಲಿ ನಗರ ಸಂಕೀರ್ತನಾ ಯಾತ್ರೆ ನಡೆಯಿತು.
     ಭದ್ರಾವತಿ, ಫೆ. ೭: ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಭಾನುವಾರ ನಗರ ಸಂಕೀರ್ತನಾ ಯಾತ್ರೆ ನಡೆಯಿತು.
     ಹೊಸಮನೆ ವೃತ್ತದಿಂದ ಸಂಜೆ ೪ ಗಂಟೆಗೆ ಆರಂಭಗೊಂಡ ಯಾತ್ರೆ ರಂಗಪ್ಪ ವೃತ್ತ, ಸಿ.ಎನ್ ರಸ್ತೆ, ಮಾಧವಚಾರ್ ವೃತ್ತ, ಬಿ.ಎಚ್ ರಸ್ತೆ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿತು.  
   ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಹಾ. ರಾಮಪ್ಪ, ಬಿ.ಕೆ ಶ್ರೀನಾಥ್, ಮಂಗೋಟೆ ರುದ್ರೇಶ್, ಸುಬ್ರಮಣಿ, ನರಸಿಂಹಚಾರ್, ಚಂದ್ರಪ್ಪ, ಚನ್ನೇಶ್, ಗಣೇಶ್‌ರಾವ್, ಜಿ. ಆನಂದಕುಮಾರ್, ಎಂ. ಮಂಜುನಾಥ್, ಬಾರಂದೂರು ಪ್ರಸನ್ನ, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ ನೂರಾರು ಮಂದಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕರ್ತರು ಪಾಲ್ಗೊಂಡಿದ್ದರು.


೭ ವರ್ಷದ ಬಾಲಕಿ ಸೃಷ್ಠಿ ಕಳೆದ ೨ ವರ್ಷಗಳಿಂದ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ೮೨೮ ರು. ಗಳನ್ನು ತನ್ನ ಜನ್ಮದಿನದ ಅಂಗವಾಗಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಮರ್ಪಿಸುವ ಮೂಲಕ ಗಮನ ಸೆಳೆದಿದ್ದಾಳೆ.
      ೭ ವರ್ಷದ ಬಾಲಕಿ ಜನ್ಮದಿನ ಅಂಗವಾಗಿ ನಿಧಿ ಸಮರ್ಪಣೆ :
    ಹುತ್ತಾಕಾಲೋನಿ ನಿವಾಸಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಧುಸೂದನ್ ಹಾಗು ಶೃತಿ ದಂಪತಿ ಪುತ್ರಿ, ೭ ವರ್ಷದ ಬಾಲಕಿ ಸೃಷ್ಠಿ ಕಳೆದ ೨ ವರ್ಷಗಳಿಂದ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ೮೨೮ ರು. ಗಳನ್ನು ತನ್ನ ಜನ್ಮದಿನದ ಅಂಗವಾಗಿ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಮರ್ಪಿಸುವ ಮೂಲಕ ಗಮನ ಸೆಳೆದಿದ್ದಾಳೆ.
ಅಭಿಯಾನದ ಕಾರ್ಯಕರ್ತರಾದ ಸುಬ್ರಮಣ್ಯ, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್ : ಡಿಆರ್‌ಸಿಸಿ ತಂಡಕ್ಕೆ ಮೊದಲ ಬಹುಮಾನ

ಕರ್ನಾಟಕ ಜನ ಸೈನ್ಯ ವತಿಯಿಂದ ಭದ್ರಾವತಿ ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದ ಅಶ್ವಥ್ ಕಟ್ಟೆ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಮೊದಲ ವರ್ಷದ ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್‌ನಲ್ಲಿ ಮೊದಲ ಬಹುಮಾನ ಪಡೆದ ಡಿಆರ್‌ಸಿಸಿ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.
    ಭದ್ರಾವತಿ, ಫೆ. ೭: ಕರ್ನಾಟಕ ಜನ ಸೈನ್ಯ ವತಿಯಿಂದ ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ದೇವಸ್ಥಾನ ಸಮೀಪದ ಅಶ್ವಥ್ ಕಟ್ಟೆ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಮೊದಲ ವರ್ಷದ ಟೆನ್ನಿಸ್ ಬಾಲ್ ಸೆಮಿ ಸರ್ಕಲ್ ಕ್ರಿಕೆಟ್ ಟೂರ್ನಿಮೆಂಟ್ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು.
    ಪಂದ್ಯಾವಳಿಯಲ್ಲಿ ಡಿಆರ್‌ಸಿಸಿ ತಂಡ ಮೊದಲ ಬಹುಮಾನ ಹಾಗು ಅಭಿಮನ್ಯ ಬಾಯ್ಸ್ ತಂಡ ೨ನೇ ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಕರ್ನಾಟಕ ಜನ ಸೈನ್ಯ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ, ವಿಶಿಷ್ಟವಾದ ಅಪರೂಪದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಪಂದ್ಯಾವಳಿಗಳು ಇನ್ನೂ ಹೆಚ್ಚಾಗಿ ನಡೆಯುವಂತಾಗಲಿ ಎಂದರು.
    ಪಂದ್ಯಾವಳಿಯಲ್ಲಿ ಸುಮಾರು ೧೪ ತಂಡಗಳು ಭಾಗವಹಿಸಿದ್ದವು. ಶನಿವಾರ ಪಂದ್ಯಾವಳಿಗೆ ನಗರಸಭೆ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
   ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಗೌರವಾಧ್ಯಕ್ಷ ಅನಿಲ್(ಬಾಬು), ಸಮಾಜ ಸೇವಕ ಅಶೋಕ್ ಕುಮಾರ್, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತದ್ದರು.

ಲೋಕ ಕಲ್ಯಾಣಕ್ಕಾಗಿ ಅರ್ಚಕರು ತಮ್ಮ ಸೇವೆಯನ್ನು ಮುಂದುವರೆಸಿ : ಎನ್.ಎಸ್ ಕೃಷ್ಣಮೂರ್ತಿ ಸೋಮಯಾಜಿ


ಭದ್ರಾವತಿ ಜನ್ನಾಪುರ ಮಹಾಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಧರ್ಮ ಜಾಗರಣ ಅರ್ಚಕರ ಮಹಾಸಭಾ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿವಿಧ ದೇವಸ್ಥಾನಗಳ ಅರ್ಚಕರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಭದ್ರಾವತಿ, ಫೆ. ೭: ಅರ್ಚಕರು ತಾವು ನಡೆಸಿಕೊಂಡು ಬರುತ್ತಿರುವ ಧಾರ್ಮಿಕ ಕಾರ್ಯಗಳನ್ನು ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸುವ ಮೂಲಕ ಸಮಾಜದ ಕಲ್ಯಾಣಕ್ಕಾಗಿ ತಮ್ಮದೇ ಆದ ಸೇವೆಯನ್ನು ಸಲ್ಲಿಸಬೇಕೆಂದು ಧರ್ಮ ಜಾಗರಣ ಅರ್ಚಕರ ಮಹಾಸಭಾ ಗೌರವಾಧ್ಯಕ್ಷ ವೇದಬ್ರಹ್ಮ ಎನ್.ಎಸ್ ಕೃಷ್ಣಮೂರ್ತಿ ಸೋಮಯಾಜಿ ಕರೆ ನೀಡಿದರು.
   ಅವರು ಭಾನುವಾರ ಜನ್ನಾಪುರ ಮಹಾಗಣಪತಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ೧೮ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
   ಕರ್ನಾಟಕ ರಾಜ್ಯದಲ್ಲಿಯೇ ವಿಶೇಷವಾಗಿ ಅರ್ಚಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮಹಾಸಭಾ ವತಿಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಅರ್ಚಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.
    ಗಾಂಧಿನಗರ ಶ್ರೀ ಬಲಮುರಿ ಗಣಪತಿ ದೇವಸ್ಥಾನದ ಅರ್ಚಕ ಮುರುಳಿಧರ ಶರ್ಮ, ಹಿರಿಯೂರು ಶ್ರೀ ರಂಗನಾಥ & ಶ್ರೀ ಆಂಜನೇಯ ದೇವಸ್ಥಾನದ ಅರ್ಚಕ ಎಚ್.ಎಸ್ ಸಂಪತ್ ಅಯ್ಯಂಗಾರ್, ಸುಣ್ಣದಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣ ಭಟ್ಟ, ಮಾಳೇನಹಳ್ಳಿ ಶ್ರೀ ಭೈರವೇಶ್ವರ ದೇವಸ್ಥಾನದ ಅರ್ಚಕ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.  ಅರ್ಚಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
    ಮಹಾಸಭಾ ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಭದ್ರಾ ನರ್ಸಿಂಗ್ ಹೋಂ ವೈದ್ಯ ಡಾ. ನರೇಂದ್ರಭಟ್, ಉಪಾಧ್ಯಕ್ಷ ಕೆ.ಎನ್ ಲಕ್ಷ್ಮೀಕಾಂತಯ್ಯ, ಪ್ರಧಾನ ಕಾರ್ಯದರ್ಶಿ ಜೆ.ಪಿ ಗಣೇಶ್ ಪ್ರಸಾದ್, ಸಹಕಾರ್ಯದರ್ಶಿ ಡಿ. ಸಂಜೀವ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಕಾರ್ಖಾನೆಯ ೯೨ ಉದ್ಯೋಗಿಗಳಿಗೆ ನಿಗಮ ಮಂಡಳಿಗಳಲ್ಲಿ ಕರ್ತವ್ಯಕ್ಕೆ ಅವಕಾಶ

ನಿಗಮ ಮಂಡಳಿಗಳು ಸೂಚಿಸುವ ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುವ ಷರತ್ತು  

ಭದ್ರಾವತಿ ಮೈಸೂರು ಕಾರ್ಖಾನೆ

    ಭದ್ರಾವತಿ, ಫೆ. ೬: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಹೊಂದದೆ ಉಳಿದುಕೊಂಡಿರುವ(ಮಸ್ಟರ್ ರೋಲ್‌ನಲ್ಲಿರುವ) ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆಗೊಳಿಸಲು ಸರ್ಕಾರ ಆದೇಶಿಸಿದೆ. 
   ಮಾರ್ಚ್ ೨೦೧೬ರಿಂದ ಎಂಪಿಎಂ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದು, ಆ ನಂತರ ಕಾರ್ಖಾನೆಯಲ್ಲಿ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ಹಿನ್ನಲೆಯಲ್ಲಿ ಸರ್ಕಾರ ಡಿಸೆಂಬರ್ ೨೦೧೭ರಲ್ಲಿ ಕಾಯಂ ಹಾಗು ಗುತ್ತಿಗೆ ಉದ್ಯೋಗಿಗಳಿಗೆ ಪ್ರತ್ಯೇಕವಾಗಿ ವಿಶೇಷ ಸ್ವಯಂ ನಿವೃತ್ತಿ ಯೋಜನೆಗೆ ಆದೇಶಿಸಿತು. ಈ ಯೋಜನೆಯಡಿ ಒಟ್ಟು ೭೭೩ ಕಾಯಂ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆದಿದ್ದರು. ಉಳಿದಂತೆ ೯೨ ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಈ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಜ.೨೭ರಂದು ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಉದ್ಯೋಗಿಗಳಿಗೆ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಉದ್ಯೋಗ ಕಲ್ಪಿಸಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ.
    ಈ ಕುರಿತು ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಉದ್ಯೋಗಿಗಳಿಗೆ ಸುತ್ತೋಲೆ ಹೊರಡಿಸಿದ್ದು, ನಿಗಮ ಮಂಡಳಿಗಳಲ್ಲಿ ನಿಯೋಜನೆಗೆ ಮೇರೆಗೆ ಕರ್ತವ್ಯ ನಿರ್ವಹಿಸಲು ಇಚ್ಛಿಸುವ ಉದ್ಯೋಗಿಗಳು ಕಡ್ಡಾಯವಾಗಿ ಆಯಾ ನಿಗಮ ಮಂಡಳಿಗಳು ಸೂಚಿಸುವ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಸಂಬಂಧ ಲಿಖಿತವಾಗಿ ಒಪ್ಪಿಗೆ ಸೂಚಿಸುವಂತೆ ಸೂಚಿಸಿದ್ದಾರೆ.


ಭದ್ರಾವತಿ ಎಂಪಿಎಂ ಕಾರ್ಖಾನೆಯಲ್ಲಿ ಉಳಿದುಕೊಂಡಿರುವ ಕಾರ್ಮಿಕರನ್ನು ನಿಗಮ ಮಂಡಳಿಗಳಲ್ಲಿ ನಿಯೋಜನೆಗೊಳಿಸುವ ಸಂಬಂಧ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿಗಳು ಹೊರಡಿಸಿರುವ ಸುತ್ತೋಲೆ.
     ಎಂಪಿಎಂ ಕಾರ್ಖಾನೆ ನಷ್ಟ ೧೧೯೪.೧೭ ಕೋ. ರು. :
  ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಂಡು ಸುಮಾರು ೫ ವರ್ಷಗಳು ಕಳೆದಿವೆ. ಇದೀಗ ಕಾರ್ಖಾನೆಯ ನಷ್ಟ ೧೧೯೪.೧೭ ಕೋ. ರು. ತಲುಪಿದೆ. ಕಾರ್ಖಾನೆಯ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಮಾರ್ಚ್ ೨೦೧೯ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ ಈ ವಿಚಾರಕ್ಕೆ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿವೆ. ಈ ನಡುವೆ ಸರ್ಕಾರ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮುನ್ನಡೆಸಲು ಮುಂದಾಗಿದೆ. ಈಗಾಗಲೇ ಕಾರ್ಖಾನೆ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ೨ ಬಾರಿ ಟೆಂಡರ್ ಸಹ ಕರೆಯಲಾಗಿದೆ. ಈ ಪ್ರಕ್ರಿಯೆ ಸಹ ಪ್ರಗತಿಯಲ್ಲಿದೆ. ಇದೀಗ  ಕಾರ್ಖಾನೆಯಲ್ಲಿನ ಎಲ್ಲಾ ಉದ್ಯೋಗಿಗಳನ್ನು ಬಿಡುಗಡೆಗೊಳಿಸುವ ಮೂಲಕ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕಿರುವಂತೆ ಕಂಡು ಬರುತ್ತಿದೆ.  

Saturday, February 6, 2021

ದೆಹಲಿ ರೈತರ ಹೋರಾಟ ಬೆಂಬಲಿಸಿ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೆದ್ದಾರಿ ತಡೆ

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಚಳುವಳಿಯನ್ನು ಬೆಂಬಲಿಸಿ ಭದ್ರಾವತಿಯಲ್ಲಿ ಶನಿವಾರ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹೆದ್ದಾರಿ ತಡೆ ನಡೆಸಿದವು.
   ಭದ್ರಾವತಿ, ಫೆ. ೬: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಚಳುವಳಿಯನ್ನು ಬೆಂಬಲಿಸಿ ನಗರದಲ್ಲಿ ಶನಿವಾರ ಪ್ರಗತಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹೆದ್ದಾರಿ ತಡೆ ನಡೆಸಿದವು.
ನಗರದ ಬೈಪಾಸ್ ರಸ್ತೆ ಬಾರಂದೂರು ಬಳಿ ರಸ್ತೆ ತಡೆ ನಡೆಸಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರ ತಕ್ಷಣ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು. ರೈತರ ಹಿತ ಕಾಪಾಡುವ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಆಗ್ರಹಿಸಿದರು.
     ಪ್ರಮುಖರಾದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ ಮಾಯಣ್ಣ, ಸುರೇಶ್, ಜಿ. ರಾಜು, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಮುಸ್ವೀರ್ ಬಾಷಾ, ರೈತ ಮುಖಂಡರಾದ ರಾಮಚಂದ್ರಪ್ಪ, ಬೆನಕಪ್ಪ, ಪಂಚಾಕ್ಷರಪ್ಪ, ಕನ್ನಡಪರ ಸಂಘಟನೆಗಳ ಪ್ರಮುಖರಾದ ಜ್ಯೋತಿ ಸೋಮಶೇಖರ್, ಶಾರದ, ಪರಮೇಶ್, ಮುರುಳಿ, ರೂಪನಾರಾಯಣ, ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಪರಮೇಶ್ವರಚಾರ್, ಎಚ್ ರವಿಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ರೈತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Friday, February 5, 2021

ನಗರಸಭೆ ವಾರ್ಡ್‌ವಾರು ಕರಡು ಮೀಸಲಾತಿ ಪಟ್ಟಿಗೂ ಶಾಸಕರ ಆಕ್ಷೇಪಣೆ ಅರ್ಜಿ ಸಲ್ಲಿಕೆ

ಒಟ್ಟು ೧೧ ಮಂದಿಯಿಂದ ಆಕ್ಷೇಪಣೆ : ಜಿಲ್ಲಾಧಿಕಾರಿಗಳಿಂದ ವಿಲೇವಾರಿ

      ಭದ್ರಾವತಿ, ಫೆ. ೫: ಸರ್ಕಾರ ಇಲ್ಲಿನ ನಗರಸಭೆಗೆ ಜ.೨೧ರಂದು ಪ್ರಕಟಿಸಿರುವ ವಾರ್ಡ್ ವಾರು ಕರಡು ಮೀಸಲಾತಿ ಪಟ್ಟಿಗೆ ಶಾಸಕರು ಸಹ ಆಕ್ಷೇಪಣೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಒಟ್ಟು ೧೫ ಆಕ್ಷೇಪಣೆ ಅರ್ಜಿಗಳ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ. ಮುಂದಿನ ಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಈ ಪೈಕಿ ೨ ಬಾರಿ ಸಲ್ಲಿಸಿರುವ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
     ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡ್‌ಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ನಿಗಡಿಪಡಿರುವ ಹಾಗು ವಾರ್ಡ್ ನಂ.೫ ಮತ್ತು ೩೫ರ ಮೀಸಲಾತಿ ನಿಗದಿಯಲ್ಲಿ ನ್ಯಾಯಾಲಯದ ಆದೇಶ ಪರಿಗಣಿಸದಿರುವ ಸಂಬಂಧ ೨ ಅರ್ಜಿಗಳನ್ನು, ಕೆ.ಬಿ ಗಂಗಾದರ್ ಎಂಬುವರು ವಾರ್ಡ್ ನಂ.೩೫ಕ್ಕೆ ಬಿ.ಸಿ.ಎಂ 'ಬಿ' ವರ್ಗ ಮೀಸಲಾತಿ ನಿಗದಿಪಡಿಸುವ ಸಂಬಂಧ ೨ ಅರ್ಜಿಗಳನ್ನು, ಹೊಸಮನೆಯ ಬಿ.ಜಿ ಸೋಮಶೇಖರಪ್ಪ ಎಂಬುವರು ವಾರ್ಡ್ ನಂ.೧೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಪಡಿಸುವ ಸಂಬಂಧ ಒಂದು ಅರ್ಜಿಯನ್ನು, ಇನ್ನೊಂದು ಅರ್ಜಿಯಲ್ಲಿ ವಾರ್ಡ್ ನಂ.೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ, ಸುಣ್ಣದಹಳ್ಳಿಯ ಎಸ್.ಪಿ ಕಿರಣ್‌ಕುಮಾರ್ ಎಂಬುವರು ವಾರ್ಡ್ ನಂ.೧೮ಕ್ಕೆ ಮೀಸಲಾತಿ ಬದಲಾವಣೆ ಮಾಡುವ ಸಂಬಂಧ ಒಂದು ಅರ್ಜಿಯನ್ನು, ಭದ್ರಾ ಕಾಲೋನಿಯ ಬಿ.ಎಂ ಸುರೇಶ್ ಎಂಬುವರು ವಾರ್ಡ್ ನಂ.೯ಕ್ಕೆ ಮೀಸಲಾತಿ ಬದಲಾವಣೆ ಸಂಬಂಧ ೧ ಅರ್ಜಿಯನ್ನು, ಮೊಹಮ್ಮದ್ ಆಲಿ ಬೇಗ್ ಎಂಬುವರು ವಾರ್ಡ್ ನಂ.೦೫ಕ್ಕೆ ಪರಿಶಿಷ್ಟ ಜಾತಿ ಮೀಸಲಾತಿ ಪರಿಗಣಿಸುವ ಸಂಬಂಧ ೨ ಅರ್ಜಿಯನ್ನು ಹಾಗು ಜೇಡಿಕಟ್ಟೆ ಎಸ್. ವಾಗೀಶ್ ಎಂಬುವರು ವಾರ್ಡ್ ನಂ.೧ಕ್ಕೆ ನಿಗದಿಪಡಿಸಿರುವ ಮಹಿಳಾ ಮೀಸಲಾತಿಯನ್ನು ಬದಲಾಯಿಸಿ ಬಿಸಿಎಂ(ಬಿ) ಮೀಸಲಾತಿ ನಗದಿಪಡಿಸುವ ಸಂಬಂಧ, ಉಜ್ಜನಿಪುರ ನಿವಾಸಿ ನಗರಸಭಾ ಸದಸ್ಯ ಬದರಿನಾರಾಯಣ ವಾರ್ಡ್ ನಂ.೯ರ ಭದ್ರಾ ಕಾಲೋನಿ ಪರಿಶಿಷ್ಟ ಜಾತಿ ಮೀಸಲಾತಿಯನ್ನು ವಾರ್ಡ್ ನಂ.೨೩ರ ತಿಮ್ಲಾಪುರ ಮತ್ತು ಡಿ.ಜಿ ಹಳ್ಳಿಗೆ ಬದಲಾಯಿಸಿಕೊಡುವ ಸಂಬಂಧ ಹೀಗೆ ಮತ್ತಿಬ್ಬರು ಒಟ್ಟು ೧೧ ಮಂದಿ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.  ಒಟ್ಟು ೧೫ ಆಕ್ಷೇಪಣೆ ಅರ್ಜಿಗಳಲ್ಲಿ ೪ ಅರ್ಜಿಗಳು ತಿರಸ್ಕೃತಗೊಳ್ಳಲಿವೆ ಎನ್ನಲಾಗಿದೆ.  

ಚಿಂತಕ ಪ್ರೊ. ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆಯನ್ನು ಗಡಿಪಾರು ಮಾಡಿ :

ಪ್ರಗತಿಪರ ಸಂಘಟನೆಗಳಿಂದ ಮುಖ್ಯಮಂತ್ರಿಗಳಿಗೆ ಮನವಿ

ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ವಕೀಲರ ಸಂಘದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೫: ಚಿಂತಕ, ವಿಚಾರವಾದಿ ಪ್ರೊ. ಕೆ.ಎಸ್ ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೇಶದ್ರೋಹ ಕಾಯ್ದೆ ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ವಿಚಾರಣೆಗಾಗಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದ ನಾಡಿನ ಪ್ರಗತಿಪರ ಚಿಂತಕರು, ವಿಚಾರವಾದಿಗಳಾದ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ನ್ಯಾಯಾಲಯ ಜಾಮೀನು ನೀಡಿದ ಹಿನ್ನಲೆಯಲ್ಲಿ ಕೋಪಗೊಂಡ ವಕೀಲೆ ಮೀರಾ ರಾಘವೇಂದ್ರ ನ್ಯಾಯಾಲಯದಿಂದ ಹೊರಬರುತ್ತಿದ್ದ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಹೇಯ ಕೃತ್ಯ ನಡೆಸಿದ್ದಾರೆ. ಈ ಕೃತ್ಯವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಎಂದರು.
   ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಅದರಲ್ಲೂ ಸಮವಸ್ತ್ರದಲ್ಲಿ ನ್ಯಾಯಾಲಯದ ಆವರಣದಲ್ಲಿ ಈ ಕೃತ್ಯ ನಡೆಸಿರುವುದು ವಕೀಲ ವೃತ್ತಿ ಘನತೆಗೆ ಮಸಿ ಬಳಿದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಮೀರಾ ರಾಘವೇಂದ್ರ ಮೂಲಭೂತವಾದಿಗಳ ಹಿನ್ನಲೆ ಹೊಂದಿರುವುದು ಕಂಡು ಬರುತ್ತಿದೆ. ಈ ಹಿಂದೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚಿಂತಕರು ಮತ್ತು ವಿಚಾರವಾದಿಗಳ ವಿರುದ್ಧ ಅಸಹ್ಯಕರ ರೀತಿಯ ಪೋಸ್ಟರ್‌ಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕನಿಂದ ವ್ಯಾಪಕ ಖಂಡನೆಗೆ ಒಳಗಾಗಿದ್ದರು. ಇದೀಗ ಭಗವಾನ್‌ರವರ ಮುಖಕ್ಕೆ ಮಸಿ ಬಳಿದು ಸಂವಿಧಾನಕ್ಕೆ ಅಪಚಾರವೆಸಗುವ ಮೂಲಕ ಅಗೌರವದಿಂದ ವರ್ತಿಸಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಇವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಹಾಗು ವಿಚಾರವಾದಿಗಳು ಮತ್ತು ಪ್ರಗತಿಪರರ ವಾಕ್ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
  ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘಟನೆಗೆ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಲಾಯಿತು. ಕೊನೆಯಲ್ಲಿ ತಹಸೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
   ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಿ. ರಾಜು, ಚನ್ನಪ್ಪ, ಎಸ್.ಕೆ ಸುಧೀಂದ್ರ, ಜೆಬಿಟಿ ಬಾಬು, ಪರಮೇಶ್ವರಚಾರ್, ಚಿನ್ನಯ್ಯ, ಅಬ್ದುಲ್ ಖದೀರ್, ಇಬ್ರಾಹಿಂ ಖಾನ್, ಮುರ್ತುಜಾ ಖಾನ್, ಖಾದರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಮತ್ತು ಪದಾಧಿಕಾರಿಗಳು, ನ್ಯಾಯವಾದಿ ನಾರಾಯಣ್, ರಾಘವೇಂದ್ರ ಹಾಗು ಎಸ್‌ಡಿಪಿಐ ಅಧ್ಯಕ್ಷ ಮಹಮದ್ ತಾಹೀರ್, ಮಹಮದ್ ಗೌಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಹಿಂದೂಪರ ಸಂಘಟನೆಯಿಂದ ಕೃತ್ಯಕ್ಕೆ ಬೆಂಬಲ:
   ವಕೀಲೆ ಮೀರಾ ರಾಘವೇಂದ್ರ ಕೃತ್ಯವನ್ನು ಪ್ರಗತಿಪರ ಸಂಘಟನೆಗಳು ಖಂಡಿಸಿ ಒಂದೆಡೆ ಪ್ರತಿಭಟನೆ ನಡೆಸಿದರೇ, ಮತ್ತೊಂದೆಡೆ ಈ ಕೃತ್ಯವನ್ನು ಬೆಂಬಲಿಸಿ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಭದ್ರಾವತಿಯಲ್ಲಿ ಪ್ರೊ. ಕೆ.ಎಸ್  ಭಗವಾನ್‌ರವರ ಮುಖಕ್ಕೆ ಮಸಿ ಬಳಿದ ಮೀರಾ ರಾಘವೇಂದ್ರರವರ ಕೃತ್ಯವನ್ನು ಸಂಭ್ರಮಿಸುವ ಜೊತೆಗೆ ಹಿಂದೂಪರ ಸಂಘಟನೆ ಬಜರಂಗದಳ ಕಾರ್ಯಕರ್ತರು ಇದೆ ಸಂದರ್ಭದಲ್ಲಿ ದಿಢೀರನೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರಗಳನ್ನು ಕೂಗಿದರು.
    ಹಿಂದೂ ವಿರೋಧಿ ಪ್ರೊ. ಕೆ.ಎಸ್ ಭಗವಾನ್‌ರವರಿಗೆ ಮಸಿ ಬಳಿಯುವ ಮೂಲಕ ಮೀರಾ ರಾಘವೇಂದ್ರ ದಿಟ್ಟತನ ಪ್ರದರ್ಶಿಸಿದ್ದಾರೆಂದು ರಂಗಪ್ಪ ವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಸಂಭ್ರಮಿಸುವ ಜೊತೆಗೆ ಪ್ರಗತಿಪರ ಸಂಘಟನೆಗಳ ಮುಖಂಡರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಈ ನಡುವೆ ಸಂಚಾರ ದಟ್ಟಣೆ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳ ಕಾರ್ಯಕರ್ತರನ್ನು ತೆರವುಗೊಳಿಸಿದರು.
   ಬಜರಂಗದಳ ಜಿಲ್ಲಾ ಸಹ ಸಂಚಾಲಕ ವಡಿವೇಲು, ಕಿರಣ್ , ಶ್ರೀಕಾಂತ್, ಗುಂಡ, ಪ್ರದೀಪ್ ಕುಟ್ಟಿ, ಧನುಷ್ ಬೋಸ್ಲೆ, ಜಿ. ಧರ್ಮಪ್ರಸಾದ್, ಕೇಸರಿ ಪಡೆ ಗಿರೀಶ್, ದಿವ್ಯರಾಜ್ ಸೇರಿದಂತೆ ಇನ್ನಿತರರಿದ್ದರು.