Wednesday, February 24, 2021

ಪುನಃ ಕಬಡ್ಡಿ ಕ್ರೀಡೆ ವೈಭವ ಮರಳಲಿ, ಯುವ ಕ್ರೀಡಾಪಟುಗಳು ಪ್ರಜ್ವಲಿಸಲಿ : ಬಿ.ಕೆ ಸಂಗಮೇಶ್ವರ್

ಫೆ.೨೭, ೨೮ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಭದ್ರಾವತಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
   ಭದ್ರಾವತಿ, ಫೆ. ೨೪: ರಾಜ್ಯದಲ್ಲಿ ತನ್ನದೇ ಆದ ವೈಭವದ ಪರಂಪರೆಯನ್ನು ಹೊಂದಿರುವ ಕಬಡ್ಡಿ ಕ್ರೀಡೆಗೆ ಉಕ್ಕಿನ ನಗರವೂ ಸಹ ತವರೂರಾಗಿದ್ದು, ಪುನಃ ವೈಭವದ ಇತಿಹಾಸ ಮರಳಬೇಕು ಹಾಗು ಯುವ ಕ್ರೀಡಾಪಟುಗಳಿಗೆ ಪೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ತಾಲೂಕು ಮಟ್ಟದ ಎರಡು ದಿನಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಬಿ.ವೈ.ಕೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದೆ ಎಂದು ಕ್ಲಬ್ ಗೌರವಾಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
   ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟುಗಳು ಹಾಗು ತರಬೇತಿದಾರರ ಸಹಕಾರದೊಂದಿಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಫೆ.೨೭ ಮತ್ತು ೨೮ರಂದು ಎರಡು ದಿನಗಳ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
   ವಿಜೇತ ತಂಡಗಳಿಗೆ ಮೊದಲ ಬಹುಮಾನ ರು. ೨೫ ಸಾವಿರ, ಎರಡನೇ ಬಹುಮಾನ ರು. ೧೫ ಸಾವಿರ,  ಮೂರನೇ ಬಹುಮಾನ ರು. ೧೦ ಸಾವಿರ ಮತ್ತು ಉತ್ತಮ ದಾಳಿಗಾರ, ಹಿಡಿತಗಾರ ಹಾಗು ಆಲ್‌ರೌಂಡರ್ ಆಟಗಾರರಿಗೂ ಸೂಕ್ತ ಬಹುಮಾನಗಳನ್ನು ನೀಡಲಾಗುವುದು ಎಂದರು.
   ಹಿರಿಯ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಕ್ಲಬ್ ಅಧ್ಯಕ್ಷ ಎಚ್.ಎನ್ ಕೃಷ್ಣೇಗೌಡ ಮಾತನಾಡಿ, ಪ್ರಪಥಮ ಬಾರಿಗೆ ನಗರದಲ್ಲಿ ಮ್ಯಾಟ್ ಒಳಗೊಂಡ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದೆ. ಪಂದ್ಯಾವಳಿ ೮ ಕಬಡ್ಡಿಗಳನ್ನು ಆಯ್ಕೆ ಮಾಡುವ ಜೊತೆಗೆ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅನುಮೋದನೆ ಸಹ ಪಡೆಯಲಾಗಿದೆ. ಪ್ರತಿ ತಂಡದ ಖರೀದಿ ಸಹ ನಡೆದಿದ್ದು, ಮಾಲೀಕರ ನೇತೃತ್ವದಲ್ಲಿ ಆಟಗಾರರಿಗೆ ಪ್ರತಿದಿನ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ ಎಂದರು.
    ಮಾಜಿ ನಗರಸಭಾ ಸದಸ್ಯ ಬಾಲಕೃಷ್ಣ-ತುಂಗಾ ಟ್ಯಾಕರ್‍ಸ್, ಮಾರುತಿ ಮೆಡಿಕಲ್ಸ್ ಆನಂದ್-ಮಾರುತಿ ಟೈಗರ್‍ಸ್, ಮಾಜಿ ನಗರಸಭಾ ಸದಸ್ಯ ಮಣಿ ಎಎನ್‌ಎಸ್-ಜೋಗ್ ಜಾಗ್ವರ್‍ಸ್, ನ್ಯಾಯವಾದಿ ಮಂಗೋಟೆ ರುದ್ರೇಶ್-ಭದ್ರಾ ಬುಲ್ಸ್, ಪೊಲೀಸ್ ಉಮೇಶ್-ಮಲೆನಾಡು ವಾರಿಯರ್‍ಸ್, ಲೆಕ್ಕ ಪರಿಶೋಧಕ ಜಿ. ಧರ್ಮಪ್ರಸಾದ್-ಸ್ಟೀಲ್‌ಟೌನ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟೇಶ್-ಎಂಪಿಎಂ ಬುಲ್ಡೇಜರ್‍ಸ್ ಮತ್ತು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್-ನ್ಯೂಟೌನ್ ಅಟ್ಯಾಕರ್‍ಸ್ ತಂಡಗಳ ಮಾಲೀಕರಾಗಿದ್ದು, ಇವರೆಲ್ಲರ ಸಹಕಾರದಿಂದ ಪಂದ್ಯಾವಳಿ ಇನ್ನಷ್ಟು ಮೆರಗು ಪಡೆದುಕೊಂಡಿದೆ ಎಂದರು.
   ಕಬ್ಲ್ ಪ್ರಧಾನ ಕಾರ್ಯದರ್ಶಿ ಎಚ್.ಆರ್ ರಂಗನಾಥ್, ಕಾರ್ಯದರ್ಶಿ ಮಾರ್ಕಂಡಯ್ಯ, ಖಜಾಂಚಿ ಎಸ್. ವಿಶ್ವನಾಥ್, ಉಪಾಧ್ಯಕ್ಷರಾದ ಚನ್ನಪ್ಪ, ಸಂಚಾಲಕರಾದ ಎಸ್.ಎನ್ ಸಿದ್ದಯ್ಯ, ವೈ. ವಸಂತಕುಮಾರ್, ಜಯರಾಮ್, ಮಾರುತಿ ಮೆಡಿಕಲ್ ಆನಂದ್, ಬಾಲಕೃಷ್ಣ, ನಟರಾಜ್, ಯೋಗೀಶ್, ಧನುಷ್ ಬೋಸ್ಲೆ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

೨೮ನೇ ವರ್ಷದ ಜತ್ರಾ ವಾರ್ಷಿಕೋತ್ಸವ

ಭದ್ರಾವತಿ ಹೊಸಮನೆ ಮುಖ್ಯ ರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೮ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಫೆ. ೨೪: ಹೊಸಮನೆ ಮುಖ್ಯ ರಸ್ತೆ ಪಶು ಆಸ್ಪತ್ರೆ ಮುಂಭಾಗದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದ ೨೮ನೇ ವರ್ಷದ ಜಾತ್ರಾ ವಾರ್ಷಿಕೋತ್ಸವ ೩ ದಿನ ಕಾಲ ಅದ್ದೂರಿಯಾಗಿ ಜರುಗಿತು.
    ಬುಧವಾರ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಅಣ್ಣಾನಗರ, ಭೋವಿಕಾಲೋನಿ, ಎನ್‌ಎಂಸಿ, ಹೊಸಮನೆ, ಭೂತನಗುಡಿ ಮತ್ತು ಹಳೇನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಹಾಗು ದೇವಸ್ಥಾನ ದೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಮತ್ತು ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

ಪೊಗರು ಚಿತ್ರದಲ್ಲಿ ಬ್ರಾಹಣ ಸಮುದಾಯದ ಅವಹೇಳನ

ತಾಲೂಕು ಬ್ರಾಹ್ಮಣ ಸಭಾ ಖಂಡನೆ


ಎಂ.ಎಸ್ ಜನಾರ್ಧನ ಅಯ್ಯಂಗಾರ್
   ಭದ್ರಾವತಿ, ಫೆ. ೨೪: ಇತ್ತೀಚೆಗೆ ಬಿಡುಗಡೆಯಾದ ಪೊಗರು ಕನ್ನಡ ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಅತ್ಯಂತ ಅವಮಾನವೀಯವಾಗಿ ಚಿತ್ರಿಸಿ, ಬ್ರಾಹ್ಮಣ ಸಮಾಜಕ್ಕೆ ಹಾಗು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಇದನ್ನು ತಾಲೂಕು ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್ ತಿಳಿಸಿದ್ದಾರೆ.
   ಈ ಸಂಬಂಧ ಸಭಾ ಕಛೇರಿಯಲ್ಲಿ ಸಭೆ ನಡೆಸಲಾಗಿದ್ದು,  ಬ್ರಾಹ್ಮಣರು ಪ್ರತಿಭಟಿಸುವುದಿಲ್ಲ ಹಾಗು ಅವರಲ್ಲಿ ಐಕ್ಯತೆ ಇಲ್ಲ ಎಂಬ ಭಾವನೆಯಿಂದ ಪೊಗರು ಚಿತ್ರದಲ್ಲಿ ಅವಮಾನವೀಯವಾಗಿ ಚಿತ್ರಿಸಿ ಕ್ರೌರ ಮೆರೆಯಲಾಗಿದೆ. ಚಲನಚಿತ್ರಗಳು ಮನೋರಂಜನೆಯೊಂದಿಗೆ ಜನರಲ್ಲಿ ಸಾಮಾಜಿಕ ಹಾಗು ಧಾರ್ಮಿಕ ಅರಿವು ಮೂಡಿಸಬೇಕೇ ಹೊರತು ಧಾರ್ಮಿಕ ಮತ್ತು ಜಾತಿ ನಿಂದನೆ ಮಾಡುವುದು, ಅವಮಾನಿಸುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಚಿತ್ರದ ನಿರ್ಮಾಪಕರು, ನಿರ್ದೇಶಕರು ಚಿತ್ರದಲ್ಲಿರುವ ಅವಮಾನವೀಯ ಭಾಗವನ್ನು ತೆಗೆದು ಹಾಕಬೇಕು. ಇದೆ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಾಹ್ಮಣ ಅರ್ಚಕ ಸಮುದಾಯದವರನ್ನು ಅವಮಾನಿಸಿದ್ದು, ಈ ಹಿನ್ನಲೆಯಲ್ಲಿ ಅವರು ತಕ್ಷಣ ಬಹಿರಂಗವಾಗಿ ಸಮುದಾಯದ ಕ್ಷಮೆಯಾಚಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    ಸಭೆಯಲ್ಲಿ ಉಪಾಧ್ಯಕ್ಷ ರಮಾಕಾಂತ್, ಕಾರ್ಯದರ್ಶಿ ಜಿ. ರಮೇಶ್, ಖಜಾಂಚಿ ಮಂಜುನಾಥ್, ಇಂದ್ರಸೇನ್, ಪ್ರಭಾಕರ್ ಜೋಯ್ಸ್, ನರಸಿಂಹಸ್ವಾಮಿ, ನೀಲಕಂಠ ಜೋಯ್ಸ್, ರಾಜಶೇಖರ್, ಎನ್. ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರೆಂದು ಅಯ್ಯಂಗಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೆ.೨೫ರಂದು ‘ಸ್ವರ್ಣ ಬಿಂದು ಪ್ರಾಶನ’

   ಭದ್ರಾವತಿ, ಫೆ. ೨೪: ನಗರದ ತರೀಕೆರೆ ರಸ್ತೆಯಲ್ಲಿರುವ ಬಿ.ಜಿ.ಎಂ ಆಯುರ್ವೇದ ಮತ್ತು ಸಿದ್ದ ಚಿಕಿತ್ಸಾಲಯ ಹಾಗು ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ವತಿಯಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಲ್ಲಿ ಆರ್ಯುರ್ವೇದದ ಪ್ರತಿರಕ್ಷಣೆ ವಿಧಾನವಾದ 'ಸ್ವರ್ಣ ಬಿಂದು ಪ್ರಾಶನ' ಕಾರ್ಯಕ್ರಮ ಫೆ.೨೫ರಂದು ಹಮ್ಮಿಕೊಳ್ಳಲಾಗಿದೆ.
   ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಹಾಗು ಸಂಜೆ ೬ ಗಂಟೆಯಿಂದ ರಾತ್ರಿ ೮ ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, ೧೬ ವರ್ಷದೊಳಗಿನ ಎಲ್ಲಾ ಮಕ್ಕಳು ಪ್ರತಿ ತಿಂಗಳು ಸ್ವರ್ಣ ಬಿಂದು ಪ್ರಾಶನ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೆ ಉತ್ತಮವಾದ ದೈಹಿಕ ಹಾಗು ಮಾನಸಿಕ ಬೆಳವಣಿಗೆ ಸಾಧ್ಯವಾಗಲಿದೆ. ಈ ಹಿನ್ನಲೆಯಲ್ಲಿ ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಡಾ. ವಿಕ್ರಮ್ ಮೊ: ೯೭೪೧೭೩೫೩೫೯ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Tuesday, February 23, 2021

ಗ್ರಾಮ ಪಂಚಾಯಿತಿ ನೂತನ ಮಹಿಳಾ ಸದಸ್ಯರಿಗೆ ಕಾರ್ಯಾಗಾರ

ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
    ಭದ್ರಾವತಿ, ಫೆ. ೨೩: ದಿ ಹಂಗರ್ ಪ್ರಾಜೆಕ್ಟ್ ಕರ್ನಾಟಕ ಮತ್ತು ತರೀಕೆರೆಯ ವಿಕಸನ ಸಂಸ್ಥೆ ವತಿಯಿಂದ ನಗರದ ಬಿ.ಎಚ್ ರಸ್ತೆ ಶ್ರೀ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಿಗೆ ೨ ದಿನಗಳ ತರಬೇತಿ ಕಾರ್ಯಾಗಾರ ನಡೆಯಿತು.
  ಸಾಮಾಜಿಕ ನ್ಯಾಯ, ಲಿಂಗ ಅಸಮಾನತೆ, ರಾಜಕೀಯ ಮತ್ತು ನಾಗರೀಕತೆ, ಸಂವಿಧಾನ ತಿದ್ದುಪಡಿಗಳು, ಸಮಾನತೆ, ನಾಯಕತ್ವ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
  ಕಾರ್ಯಾಗಾರದಲ್ಲಿ ತಾವರಘಟ್ಟ, ಸಿಂಗನಮನೆ, ಕಂಬದಾಳು ಹೊಸೂರು, ಕಾರೇಹಳ್ಳಿ, ಬಾರಂದೂರು ಮತ್ತು ಹಿರಿಯೂರು ಸೇರಿದಂತೆ ಒಟ್ಟು ೬ ಗ್ರಾಮ ಪಂಚಾಯಿತಿಗಳ ಸುಮಾರು ೪೨ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀನಿವಾಸ್, ಎಂ.ಎಚ್ ಲಕ್ಷ್ಮಣ ಸೇರಿದಂತೆ ಇನ್ನಿತರರು ಪಾಲ್ಗೊಂಡು ಮಾಹಿತಿ ನೀಡಿದರು.

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ : ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಎಬಿವಿಪಿ ಆಗ್ರಹ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೨೩: ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಂಗಳವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮೆಲರಿಗೂ ಇದೆ. ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ ಪರೀಕ್ಷೆಗಳನ್ನು ಜಾರಿ ಮಾಡಲು ಈ ಹಿಂದೆ ಆಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಜ್ಯದೆಲ್ಲೆಡೆ ಹೋರಾಟ ನಡೆಸಲಾಗಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಸಿಇಟಿ ಪರೀಕ್ಷೆಗಳನ್ನು ಜಾರಿಗೆ ತರಲಾಯಿತು. ಆದರೆ ಇದೀಗ ರಾಜ್ಯದ ಪ್ರತಿಷ್ಟಿತ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಸೀಟ್ ಬ್ಲಾಕಿಂಗ್ ದಂಧೆಯನ್ನು ಸಾಕ್ಷಿ ಸಮೇತವಾಗಿ ಐಟಿ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಸೀಟುಗಳ ಮಾರಾಟದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಜೊತೆಗೆ ಆದಾಯ ತೆರಿಗೆ ಇಲಾಖೆಯ ಕಾಯ್ದೆಯೂ ಕೂಡ ಇಲ್ಲಿ ಉಲ್ಲಂಘನೆ ಆಗಿದೆ. ಈ ಹಿನ್ನಲೆಯಲ್ಲಿ ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
  ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಕಾಶ್, ಅವಿನಾಶ್, ಮನು, ದರ್ಶನ್, ಪುನೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, February 22, 2021

ಎರಡು ದೇವಾಲಯಗಳಲ್ಲಿ ಚಿನ್ನಾಭರಣ, ಕಾಣಿಕೆ ಹುಂಡಿ ಹಣ ಕಳವು

    ಭದ್ರಾವತಿ, ಫೆ. ೨೨: ನಗರ ಹಾಗು ಗ್ರಾಮಾಂತರ ಪೊಲೀಸ್ ವೃತ್ತ ವ್ಯಾಪ್ತಿಯ ಎರಡು ಕಡೆ ದೇವಾಲಯಗಳಲ್ಲಿ ಹುಂಡಿ ಕಾಣಿಕೆ ಹಣ ಹಾಗು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆಗಳು ನಡೆದಿವೆ.
    ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆ ಸಮೀಪದ ಹೊಸ ಸಿದ್ಧಾಪುರ ಮಾರ್ಗದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೀಗ ಮುರಿದು ದೇವರ ಚಿನ್ನಾಭರಣ ಕಳವು ಮಾಡಲಾಗಿದೆ.
    ಇದೆ ರೀತಿ ಕಾಗದನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆಯ ಶ್ರೀ ಕಾಳಿಂಗೇಶ್ವರ ಸ್ವಾಮಿ ದೇವಾಲಯದಲ್ಲೂ ಸಹ ದೇವರ ಚಿನ್ನಾಭರಣ ಹಾಗು ಕಾಣಿಕೆ ಹುಂಡಿ ಹಣ ಕಳವು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.