ಇಲ್ಲಸಲ್ಲದ ಆರೋಪಕ್ಕೆ ಹೋರಾಟದ ಎಚ್ಚರಿಕೆ
ಭದ್ರಾವತಿ, ಮಾ. ೫: ವಿಧಾನಸಭೆಯಲ್ಲಿ ಗುರುವಾರ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ದುರ್ವರ್ತನೆಯಿಂದ ನಡೆದುಕೊಂಡಿದ್ದು, ಇವರ ವರ್ತನೆಯಿಂದ ಕ್ಷೇತ್ರದ ಜನರು ತಲೆತಗ್ಗಿಸುವಂತಾಗಿದೆ. ಬಿಜೆಪಿ ಪಕ್ಷ ಇವರ ದುರ್ವರ್ತನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹಾಗು ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್ ಮತ್ತು ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ.
ವಿಧಾನಸಭಾಧ್ಯಕ್ಷರು ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಪ್ರಸ್ತಾಪಿಸಿದ ವೇಳೆ ಏಕಾಏಕಿ ಶಾಸಕ ಸಂಗಮೇಶ್ವರ್ ವೈಯಕ್ತಿಕ ಕಾರಣಕ್ಕೆ ಅಂಗಿ ಬಿಚ್ಚಿ ದುರ್ವರ್ತನೆಯಿಂದ ನಡೆದುಕೊಂಡಿದ್ದಾರೆ. ಇವರ ವರ್ತನೆ ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ೩ ಬಾರಿ ಶಾಸಕರಾಗಿರುವ ಸಂಗಮೇಶ್ವರ್ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಸ್ತಾಪಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕ್ಷೇತ್ರದಲ್ಲಿ ಸಂಗಮೇಶ್ವರ್ ದುರಾಡಳಿತ, ದುರ್ವರ್ತನೆ ಹಾಗು ದೌರ್ಜನ್ಯದಿಂದ ಜನರು ಬೇಸತ್ತಿದ್ದಾರೆ. ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಸಂಗಮೇಶ್ವರ್ ಹಾಗು ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ. ಈ ದೂರಿನ ಮೂಲಕ ಇವರ ಅಕ್ರಮ ಚಟುವಟಿಕೆಗಳು ಬೆಳಿಕಿಗೆ ಬರಲಿವೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರರವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೆ ಶಾಸಕರಾಗಿರುವ ಕಾರಣಕ್ಕೆ ಸಂಗಮೇಶ್ವರ್‌ಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ವಿಚಾರ ಕ್ಷೇತ್ರದ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಅಕ್ರಮ ಚಟುವಟಿಕೆಗಳು, ದೌರ್ಜನ್ಯ, ದಬ್ಬಾಳಿಕೆಗಳಿಗೆ ಬೆಂಬಲ ನೀಡದಿದ್ದಾಗ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಬಿಜೆಪಿ ಪಕ್ಷ ಸುಮ್ಮನೆ ಕೂರುವುದಿಲ್ಲ ಹೋರಾಟ ನಡೆಸಲಿದೆ ಎಚ್ಚರಿಸಿದ್ದಾರೆ.