ಯುವ ಕಾಂಗ್ರೆಸ್ ಖಂಡನೆ, ಮಧ್ಯ ಪ್ರವೇಶಕ್ಕೆ ರಾಜ್ಯಪಾಲರಿಗೆ ಮನವಿ
ಶಾಸಕ ಬಿ.ಕೆ ಸಂಗಮೇಶ್ವರನ್ನು ವಿಧಾನಸಭೆ ಕಲಾಪದಿಂದ ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ತಾಲೂಕು ಘಟಕದ ವತಿಯಿಂದ ಶನಿವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮಾ. ೬: ಶಾಸಕ ಬಿ.ಕೆ ಸಂಗಮೇಶ್ವರನ್ನು ವಿಧಾನಸಭೆ ಕಲಾಪದಿಂದ ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ತಾಲೂಕು ಘಟಕದ ವತಿಯಿಂದ ಶನಿವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ೨ ದಿನಗಳಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗು ಬಿಜೆಪಿ ಪಕ್ಷದವರು ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಿಚಾರಗಳ ಬಗ್ಗೆ ತಮ್ಮ ಅಳಲನ್ನು ತೋರ್ಪಡಿಸಿಕೊಳ್ಳುವ ಉದ್ದೇಶದಿಂದ ಸದನದ ಭಾವಿಗಿಳಿದು ಅಂಗಿ ಕಳಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಕಾರಣ ಕಲಾಪದಿಂದ ಸುಮಾರು ಒಂದು ವಾರ ಕಾಲ ಶಾಸಕರನ್ನು ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಇದನ್ನು ಯುವ ಘಟಕ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದಲ್ಲಿ ಇತ್ತೀಚೆಗೆ ನಡೆದ ಕಬಡ್ದಿಪಂದ್ಯಾವಳಿ ವೇಳೆ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಭೆಯಲ್ಲಿ ಗೂಂಡಗಳಂತೆ ವರ್ತಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಘೋಷಣೆ ಕೂಗಿ ಕೋಮುಗಲಭೆ ಸೃಷ್ಟಿಸುವ ವಾತಾವರಣದ ವಿರುದ್ದ ಧ್ವನಿಯೆತ್ತಿದ ಶಾಸಕರು ಹಾಗು ಕುಟುಂಬ ವರ್ಗದವರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.
ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ತಕ್ಷಣ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಬೇಕು. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಬೇಕು. ವಿಧಾನಸಭಾಧ್ಯಕ್ಷರ ಅಮಾನತ್ತು ಆದೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಲಾಯಿತು.
ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ. ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಎ.ಪಿ ಗಣೇಶ್, ಕೇಶವ್, ವರುಣ್, ಶಿವು, ಯೋಗೀಶ್, ಶಿವರಾಜ್, ಫಯಾಜ್, ಬಾಷಾ, ಇರ್ಫಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಪಾಲ್ಗೊಂಡಿದ್ದರು.