ಭಾನುವಾರ, ಮಾರ್ಚ್ 14, 2021

ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
   ಭದ್ರಾವತಿ, ಮಾ. ೧೪: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
    ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಆರೋಗ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನೀಲೇಶ್‌ರಾಜ್‌ರವರು ಕೊರೋನಾ ಆರಂಭಗೊಂಡಾಗಿನಿಂದಲೂ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
    ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಜಿಲ್ಲಾಧ್ಯಕ್ಷ ಮಾ.ಸ. ನಂಜುಂಡಸ್ವಾಮಿ ಹಾಗೂ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂವಿಧಾನ ಹಕ್ಕಿನ ಜೊತೆಗೆ ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ನೀಡಿದೆ : ನ್ಯಾ. ಚಂದ್ರಶೇಖರ ಬಣಕಾರ

ಭದ್ರಾವತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರಕ್ಕೆ ಸಮಾಜ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನ್ಯಾಯಾಧೀಶ ಚಂದ್ರಶೇಖರ ಬಣಕಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
    ಭದ್ರಾವತಿ, ಮಾ. ೧೩: ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಕಾನೂನು ರಕ್ಷಣೆ ನೀಡುವ ಜೊತೆಗೆ ಹಕ್ಕು ಮತ್ತು ಕರ್ತವ್ಯದ ವ್ಯಾಪ್ತಿ ವಿವರಿಸಿದೆ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದರು.
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
  ಸಂವಿಧಾನ ಚೌಕಟ್ಟಿನಲ್ಲಿ ನಮ್ಮನ್ನು ರಕ್ಷಿಸುವ ಕಾಯ್ದೆಗಳು ಇವೆ ಎಂಬುದನ್ನು ಅರಿತು ನಮ್ಮ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಕಾನೂನು ಜ್ಞಾನದಿಂದ ಅಪರಾಧಿಕ ಮನೋಭಾವ ದೂರವಾಗುವ ಜತೆಗೆ ಮತ್ತಷ್ಟು ಜನರಿಗೆ ಜ್ಞಾನ ತುಂಬವ ತವಕ ಹೆಚ್ಚಲಿದೆ ಎಂದರು.  
   ಸರ್ಕಾರಿ ಅಭಿಯೋಜಕ ತ್ಯಾಗರಾಜ್ ಮಾತನಾಡಿ, ನಮಗೆ ಸಿಗುವ ಸೌಲಭ್ಯ ಪಡೆಯುವ ಜತೆಗೆ ರಾಜ್ಯಾಧಿಕಾರ ತತ್ವದಡಿ ಇರುವ ಕರ್ತವ್ಯವನ್ನು ಯಾರೊಬ್ಬರು ಮರೆಯಬಾರದು ಎಂದರು.
    ವಕೀಲರ ಸಂಘದ ಉಪಾಧ್ಯಕ್ಷ ವೈ.ಜಯರಾಂ ಮಾತನಾಡಿ, ಪ್ರತಿ ವ್ಯಕ್ತಿಯ ಜನನದಿಂದ, ಮರಣದ ತನಕ ಕಾಯ್ದೆ, ಕಾನೂನುಗಳು ಇವೆ. ಇವುಗಳನ್ನು ಅರಿತುಕೊಂಡಲ್ಲಿ ನಮ್ಮ ಬದುಕು ಸುಗಮಗೊಳ್ಳಲಿದೆ ಎಂದರು.
  ಕಾರ್ಯದರ್ಶಿ ಟಿ.ಎಸ್.ರಾಜು ಮಾತನಾಡಿ, ಹೆಣ್ಣು ಮಕ್ಕಳಿಗೆ ಕಾಯ್ದೆ ಕಾನೂನು ಮೂಲಕ ರಕ್ಷಣೆಗಳಿದ್ದು ಅದನ್ನು ಸರಿಯಾಗಿ ಅರಿತುಕೊಂಡಲ್ಲಿ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ, ಕಾನೂನು ನಮಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಪ್ರತಿಪಾದಿಸಿ ತಮ್ಮ ಹಕ್ಕನ್ನು ಪಡೆಯುವುದು ಎಲ್ಲಾ ನಾಗರಿಕರ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದರು.
   ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ವಾರ್ಡನ್ ನಾಗರಾಜ, ರಮ್ಯ, ಕಾನೂನು ಪ್ರಾಧಿಕಾರದ ವಿಶ್ವನಾಥ ಉಪಸ್ಥಿತರಿದ್ದರು.

ಯಶಸ್ವಿಯಾಗಿ ಜರುಗಿದ ರಕ್ತದಾನ, ಗುಂಪು ತಪಾಸಣೆ ಶಿಬಿರ


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ  ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
     ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ ಮತ್ತು ಖಜಾಂಚಿ ಎನ್. ಶಿವಕುಮಾರ್, ಪ್ರಮುಖರಾದ ಕೆ.ಸಿ ವೀರಭದ್ರಪ್ಪ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಹಾ. ರಾಮಪ್ಪ ಹಾಗು ಕಾಲೇಜಿನ ಪ್ರಾಧ್ಯಾಪಕರು ಹಾಗು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಷಣ್ ಅಭಿಯಾನ : ಗರ್ಭಿಣಿ ಮಹಿಳೆಯರಿಗೆ ಸೀಮಂತ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಮಡಿಲು ತುಂಬುವ ಮೂಲಕ ಗರ್ಭಿಣಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾಗದ ನಗರದ ಅಂಗನವಾಡಿ ಕಾರ್ಯಕರ್ತೆಯರಾದ ಎಸ್. ರಶ್ಮಿ, ಬಿ.ಆರ್ ಮೀನಾಕ್ಷಿ, ಎಚ್.ಆರ್ ಜಯಂತಿ, ಲಲಿತ ಹಾಗೂ ಅಂಗನವಾಡಿ ಕೇಂದ್ರದ ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕಿಯರಾದ ಮಾರ್ಗರೇಟ್, ರಮ್ಯಾ ರವರು ಹಾಗೂ ಹಿರಿಯ ಆರೋಗ್ಯ ಸಹಾಯಕ ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ಮಾರ್ಚ್ 13, 2021

ಬಿ.ಇಡಿ ಸೀಟುಗಳ ಮಾರಾಟ ದಂಧೆ : ಕಠಿಣ ಕಾನೂನು ಕ್ರಮಕ್ಕೆ ಎಬಿವಿಪಿ ಆಗ್ರಹ

ಬಿ.ಇಡಿ ಸೀಟುಗಳ ಮಾರಾಟದಲ್ಲಿ ತೊಡಗಿರುವ ಕಾಲೇಜುಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೧೩: ಬಿ.ಇಡಿ ಸೀಟುಗಳ ಮಾರಾಟದಲ್ಲಿ ತೊಡಗಿರುವ ಕಾಲೇಜುಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ಜೆ. ಸಂತೋಷ್‌ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
   ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ರಾಜ್ಯದಲ್ಲಿ ಬಿ.ಇಡಿ ಸೀಟುಗಳ ಮಾರಾಟ ದಂಧೆ ನಡೆಯುತ್ತಿರುವುದು ಬೇಸರ ತಂದಿದೆ. ಬಿ.ಇಡಿ ಕೋರ್ಸ್‌ಗಳಿಗೆ ಹೆಚ್ಚಿನ ಮಾನ್ಯತೆ ಇರುವ ಕಾರಣ ಕೆಲವು ಬಿ.ಇಡಿ ಶಿಕ್ಷಣ ಸಂಸ್ಥೆಗಳು ಬಿ.ಇಡಿ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುವ ಮೂಲಕ ಅಕ್ರಮವಾಗಿ ಹಣ ಸಂಪಾದಿಸುತ್ತಿವೆ. ತರಗತಿಗಳಿಗೆ ಹಾಜರಾಗದೆ ಬಿ.ಇಡಿ ಕೋರ್ಸ್ ಮಾಡಲು ಬಯಸುವವರಿಗೆ ಅಕ್ರಮವಾಗಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
   ಬಿ.ಇಡಿ ಪದವಿ ಪಡೆದುಕೊಳ್ಳಲು ಅಕ್ರಮ ಮಾರ್ಗ ಕಂಡುಕೊಂಡವರಿಗೆ ಕಾಲಕಾಲಕ್ಕೆ ಸಲ್ಲಿಸಬೇಕಾದ ಅಸೈನ್‌ಮೆಂಟ್‌ಗಳನ್ನು ಕೂಡ ಕಾಲೇಜಿನವರೇ ಒದಗಿಸುತ್ತಿದ್ದಾರೆ. ಇದನ್ನು ನೋಡಿಕೊಂಡು ಅಸೈನ್‌ಮೆಂಟ್‌ಗಳನ್ನು ಬರೆದುಕೊಡಲಾಗುತ್ತಿದೆ. ಇದಕ್ಕೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಲಾಗಿದೆ. ಒಂದು ದಿನವೂ ತರಗತಿಗೆ ಹಾಜರಾಗಿ ಪಾಠ ಕೇಳದೆ ಕೇವಲ ಪರೀಕ್ಷೆಯನ್ನು ಮಾತ್ರ ಬರೆದು ಬಿಇಡಿ ಪದವಿ ಪ್ರಮಾಣ ಪತ್ರ ಪಡೆದುಕೊಳ್ಳುವವರು ಶಿಕ್ಷಣದ ಗುಣಮಟ್ಟ ಕಾಪಾಡಲು ಸಾಧ್ಯವೇ? ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
    ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅಕ್ರಮಗಳ ವಿರುದ್ಧ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.  

ಡಾ. ನರಸಿಂಹಭಟ್ ನಿಧನ

ಡಾ. ನರಸಿಂಹಭಟ್
ಭದ್ರಾವತಿ, ಮಾ. ೧೩: ತಾಲೂಕಿನ ಬಾರಂದೂರು ಗ್ರಾಮದ ನಿವಾಸಿ, ವೈದ್ಯ ಡಾ. ನರಸಿಂಹಭಟ್ ನಿಧನ ಹೊಂದಿದರು.
    ಓರ್ವ ಪುತ್ರ, ಇಬ್ಬರು ಪುತ್ರಿ, ಸೊಸೆ, ಅಳಿಯಂದಿರು ಹಾಗು ಮೊಮ್ಮಕ್ಕಳನ್ನು ಬಿಟ್ಟಗಲಿದ್ದಾರೆ. ಡಾ. ನರಸಿಂಹಭಟ್ ಬಾರಂದೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರಪರಿಚಿತರಾಗಿದ್ದು, ವೈದ್ಯ ವೃತ್ತಿಯಲ್ಲಿ ವಿಶಿಷ್ಟತೆ ಕಾಯ್ದುಕೊಳ್ಳುವ ಜೊತೆಗೆ ಬಡವರಿಗೆ ಉಚಿತ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಬಾರಂದೂರು ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.


ಸಿದ್ದಾರ್ಥ ಅಂಧರ ಕೇಂದ್ರದ ೨೩ನೇ ವರ್ಷಾಚರಣೆ

ಕ್ರಿಕೆಟ್ ಪಂದ್ಯಾವಳಿ, ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರ್ ತರಬೇತಿ ಉದ್ಘಾಟನೆ


ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ಗುರುವಾರ ೨೩ನೇ ವರ್ಷಾಚರಣೆ ಅಂಗವಾಗಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೩: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವತಿಯಿಂದ ಗುರುವಾರ ೨೩ನೇ ವರ್ಷಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
   ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಅಂಧರ ತ್ರಿಕೋನ ಕ್ರಿಕೆಟ್ ಪಂದ್ಯಾವಳಿ ಜರುಗಿತು. ಇದಕ್ಕೂ ಮೊದಲು ಅಂಧರ ಕೇಂದ್ರದಲ್ಲಿ ಜಾಸ್ ಕಂಪ್ಯೂಟರ್ ತರಬೇತಿ ಉದ್ಘಾಟನೆಯನ್ನು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ವಿಭಾಗದ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಮನೋಹರ್ ಶೌಚಾಲಯಗಳನ್ನು ಹಾಗು ಎನ್‌ಟಿಸಿ ರೈಲ್ ಮಿಲ್ ಮಾಲೀಕ ಡಾ. ಎಚ್. ನಾಗೇಶ್ ಅಂಧರ ಕೇಂದ್ರಕ್ಕೆ ಕುಡಿಯುವ ನೀರು ಸರಬರಾಜು ಉದ್ಘಾಟಿಸಿದರು.
     ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ. ಗುರುಮೂರ್ತಿ, ಪ್ರಮುಖರಾದ ಆರ್. ತಮ್ಮಯ್ಯ, ಮುತ್ತು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜಾಸ್ ಕಂಪ್ಯೂಟರ್ ತರಬೇತಿ ಉದ್ಘಾಟನೆಯನ್ನು ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್ ವಿಭಾಗದ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ನೆರವೇರಿಸಿದರು.