Monday, March 15, 2021

ಬಜೆಟ್‌ನಲ್ಲಿ ಅನುದಾನವಿಲ್ಲ : ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ

ಅನುದಾನ ಬಿಡುಗಡೆಗೆ ಜಯ ಕರ್ನಾಟಕ ಜನಪರ ವೇದಿಕೆ ಆಗ್ರಹ

ಈ ಬಾರಿ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಯಾವುದೇ ಅನುದಾನ ಮೀಸಲಿಡದ ಕಾರಣ ಮುಚ್ಚುವ ಹಂತಕ್ಕೆ ತಲುಪಿವೆ. ಈ ಹಿನ್ನಲೆಯಲ್ಲಿ ತಕ್ಷಣ ಅನುದಾನ ಬಿಡುಗಡೆಗೊಳಿಸುವ ಮೂಲಕ ಬಡವರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸೋಮವಾರ ಭದ್ರಾವತಿಯಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.

   ಭದ್ರಾವತಿ, ಮಾ. ೧೫: ಈ ಬಾರಿ ಬಜೆಟ್‌ನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಯಾವುದೇ ಅನುದಾನ ಮೀಸಲಿಡದ ಕಾರಣ ಮುಚ್ಚುವ ಹಂತಕ್ಕೆ ತಲುಪಿವೆ. ಈ ಹಿನ್ನಲೆಯಲ್ಲಿ ತಕ್ಷಣ ಅನುದಾನ ಬಿಡುಗಡೆಗೊಳಿಸುವ ಮೂಲಕ ಬಡವರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಆಗ್ರಹಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಯಿತು.
   ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಗತಿಕರು, ಕಡುಬಡವರು, ಕೂಲಿಕಾರ್ಮಿಕರು, ಶ್ರರ್ಮಿಕ ವರ್ಗದವರ ಬಗ್ಗೆ ಕಾಳಜಿವಹಿಸಿ ಅತಿ ಕಡಿಮೆ ಬೆಲೆಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಆರಂಭಿಸಿದ್ದರು. ಈ ಯೋಜನೆಯಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದ್ದು, ಪ್ರಸ್ತುತ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಡದಿರುವುದು ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ತಲುಪುವಂತಾಗಿವೆ ಎಂದು ಆತಂಕ ವ್ಯಕ್ತಪಡಿಸಲಾಯಿತು.
   ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಇಂದಿನ ಸರ್ಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಕೊರೊನಾ ವೈರಸ್ ಪರಿಣಾಮದಿಂದಾಗಿ ಕಳೆದ ಸುಮಾರು ೧ ವರ್ಷದಿಂದ ಶ್ರೀಸಾಮಾನ್ಯರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಬಡವರ ಸ್ಥಿತಿ ತೀರ ಹದಗೆಟ್ಟಿದೆ. ಕೆಲಸವಿಲ್ಲದೆ, ಯಾವುದೇ ಆರ್ಥಿಕ ವಹಿವಾಟುಇಲ್ಲವೆ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ ತಕ್ಷಣ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಯಿತು.
   ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎಸ್ ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌವರಾಧ್ಯಕ್ಷ ಮುಕುಂದಪ್ಪ, ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ, ತಾಲೂಕು ಕಾರ್ಯಾಧ್ಯಕ್ಷ ಮೊಹಮದ್ ಶಫಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುದೀಪ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಪ್ರಾನ್ಸಿಸ್, ಪ್ರಸನ್ನಕುಮಾರ್, ಕಾಂತರಾಜ್, ಎಚ್.ಎಂ ಮಹಾದೇವಯ್ಯ, ಸತೀಶ್, ಅಕ್ಬರ್ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ವಿಧಾನಸಭಾ ಕ್ಷೇತ್ರದ ಗೂಂಡಾಗಿರಿ ಮೆಟ್ಟಿನಿಲ್ಲಲು ಬಿಜೆಪಿ ಸಿದ್ದವಿದೆ : ಬಿ.ವೈ ವಿಜಯೇಂದ್ರ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿಜಯೇಂದ್ರರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಮಾ. ೧೫: ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಮೆಟ್ಟಿನಿಲ್ಲಲು ಭಾರತೀಯ ಜನತಾ ಪಕ್ಷ ಎಲ್ಲಾ ರೀತಿಯಿಂದಲೂ ಸಿದ್ದವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
    ಅವರು ಸೋಮವಾರ ನಗರಕ್ಕೆ ಆಗಮಿಸಿ ಫೆ.೨೭ ಮತ್ತು ೨೮ರಂದು ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಹಲ್ಲೆಗೊಳಗಾಗಿರುವ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
    ಯಾವುದೇ ಕಬಡ್ಡಿ ಪಂದ್ಯಾವಳಿಯಲ್ಲಿ ಈ ರೀತಿಯ ಘಟನೆ ಎಲ್ಲೂ ಸಹ ನಡೆದಿಲ್ಲ. ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ನಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿರುವುದು ಶಿವಮೊಗ್ಗ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಎಂಬುದನ್ನು ಯಾರು ಮರೆಯುವಂತಿಲ್ಲ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಇಂತಹ ಅನೇಕ ಸವಾಲುಗಳನ್ನು ಮೀರಿ ಇಂದು ಜಿಲ್ಲೆಯಲ್ಲಿ ಪಕ್ಷದ ಭಾವುಟ ಎತ್ತರಕ್ಕೇರಿದೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು. ಯಾರ ದಬ್ಬಾಳಿಕೆಗೂ ಯಾರು ಸಹ ಹೆದರುವ ಅಗತ್ಯವಿಲ್ಲ. ಪಕ್ಷ ಎಂದೆಂದಿಗೂ ಕಾರ್ಯಕರ್ತರೊಂದಿಗಿದೆ ಎಂದರು.
   ಬೆಳಿಗ್ಗೆ ನಗರಕ್ಕೆ ಆಗಮಿಸಿದ ವಿಜಯೇಂದ್ರ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಎಂ ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಜಿ. ಆನಂದಕುಮಾರ್, ಕೆ. ಮಂಜುನಾಥ್, ಚನ್ನೇಶ್, ರಾಮನಾಥ್ ಬರ್ಗೆ, ಧನುಷ್ ಬೋಸ್ಲೆ, ನಾರಾಯಣಪ್ಪ ದೊಡ್ಮನೆ, ಎಂ.ಎಸ್ ಸುರೇಶಪ್ಪ, ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸಿತರಿದ್ದರು.

Sunday, March 14, 2021

ಹಿರಿಯ ಕ್ರೀಡಾಪಟು ಬಿ. ನಂಜೇಗೌಡಗೆ ೨ ಚಿನ್ನ, ೧ ಬೆಳ್ಳಿ ಪದಕ

೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ೮೦, ೩೦೦ ಮೀಟರ್ ಹರ್ಡಲ್ಸ್‌ನಲ್ಲಿ ಸಾಧನೆ


ಭದ್ರಾವತಿ ಹೊಸಮನೆ ನಿವಾಸಿ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್, ಹಿರಿಯ ಕ್ರೀಡಾಪಟು ಬಿ. ನಂಜೇಗೌಡ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ೩ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
   ಭದ್ರಾವತಿ, ಮಾ. ೧೪: ನಗರದ ಹೊಸಮನೆ ನಿವಾಸಿ, ನಿವೃತ್ತ ಸಬ್‌ಇನ್ಸ್‌ಪೆಕ್ಟರ್, ಹಿರಿಯ ಕ್ರೀಡಾಪಟು ಬಿ. ನಂಜೇಗೌಡ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ೨ ದಿನಗಳ ಕಾಲ ಆಯೋಜಿಸಲಾಗಿದ್ದ ೨ನೇ ಕರ್ನಾಟಕ ಸ್ಟೇಟ್ ಮಾಸ್ಟರ್‍ಸ್ ಗೇಮ್ಸ್ ಪಂದ್ಯಾವಳಿಯಲ್ಲಿ ೩ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ೭೦ ವರ್ಷ ಮೇಲ್ಪಟ್ಟವರ ವಿಭಾಗದ ೩೦೦ ಮೀಟರ್ ಹಾಗು ೮೦ ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಬಹುಮಾನದೊಂದಿಗೆ ೨ ಚಿನ್ನದ ಪದಕ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಬಹುಮಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
   ೭೩ರ ವಯೋಮಾನದ ಬಿ. ನಂಜೇಗೌಡ, ಇದುವರೆಗೂ ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗು ತೃತೀಯ ಸೇರಿದಂತೆ ಒಟ್ಟು ೨೦ ಪದಕಗಳನ್ನು ಪಡೆದುಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆಯನ್ನು ನಗರದ ಗಣ್ಯರು, ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್‌ಗೆ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
   ಭದ್ರಾವತಿ, ಮಾ. ೧೪: ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಶಿವಮೊಗ್ಗ ಶಾಖೆವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
    ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಆರೋಗ್ಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನೀಲೇಶ್‌ರಾಜ್‌ರವರು ಕೊರೋನಾ ಆರಂಭಗೊಂಡಾಗಿನಿಂದಲೂ ಉತ್ತಮವಾಗಿ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಪರಿಗಣಿಸಿ ಸಂಘದ ವತಿಯಿಂದ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
    ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಜಿಲ್ಲಾಧ್ಯಕ್ಷ ಮಾ.ಸ. ನಂಜುಂಡಸ್ವಾಮಿ ಹಾಗೂ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂವಿಧಾನ ಹಕ್ಕಿನ ಜೊತೆಗೆ ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ನೀಡಿದೆ : ನ್ಯಾ. ಚಂದ್ರಶೇಖರ ಬಣಕಾರ

ಭದ್ರಾವತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರಕ್ಕೆ ಸಮಾಜ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ನ್ಯಾಯಾಧೀಶ ಚಂದ್ರಶೇಖರ ಬಣಕಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
    ಭದ್ರಾವತಿ, ಮಾ. ೧೩: ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಕಾನೂನು ರಕ್ಷಣೆ ನೀಡುವ ಜೊತೆಗೆ ಹಕ್ಕು ಮತ್ತು ಕರ್ತವ್ಯದ ವ್ಯಾಪ್ತಿ ವಿವರಿಸಿದೆ ಎಂದು ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹೇಳಿದರು.
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಮಾತನಾಡಿದರು.
  ಸಂವಿಧಾನ ಚೌಕಟ್ಟಿನಲ್ಲಿ ನಮ್ಮನ್ನು ರಕ್ಷಿಸುವ ಕಾಯ್ದೆಗಳು ಇವೆ ಎಂಬುದನ್ನು ಅರಿತು ನಮ್ಮ ವ್ಯಾಪ್ತಿಯಲ್ಲಿ ನಾವು ಕೆಲಸ ಮಾಡಬೇಕಿದೆ. ಕಾನೂನು ಜ್ಞಾನದಿಂದ ಅಪರಾಧಿಕ ಮನೋಭಾವ ದೂರವಾಗುವ ಜತೆಗೆ ಮತ್ತಷ್ಟು ಜನರಿಗೆ ಜ್ಞಾನ ತುಂಬವ ತವಕ ಹೆಚ್ಚಲಿದೆ ಎಂದರು.  
   ಸರ್ಕಾರಿ ಅಭಿಯೋಜಕ ತ್ಯಾಗರಾಜ್ ಮಾತನಾಡಿ, ನಮಗೆ ಸಿಗುವ ಸೌಲಭ್ಯ ಪಡೆಯುವ ಜತೆಗೆ ರಾಜ್ಯಾಧಿಕಾರ ತತ್ವದಡಿ ಇರುವ ಕರ್ತವ್ಯವನ್ನು ಯಾರೊಬ್ಬರು ಮರೆಯಬಾರದು ಎಂದರು.
    ವಕೀಲರ ಸಂಘದ ಉಪಾಧ್ಯಕ್ಷ ವೈ.ಜಯರಾಂ ಮಾತನಾಡಿ, ಪ್ರತಿ ವ್ಯಕ್ತಿಯ ಜನನದಿಂದ, ಮರಣದ ತನಕ ಕಾಯ್ದೆ, ಕಾನೂನುಗಳು ಇವೆ. ಇವುಗಳನ್ನು ಅರಿತುಕೊಂಡಲ್ಲಿ ನಮ್ಮ ಬದುಕು ಸುಗಮಗೊಳ್ಳಲಿದೆ ಎಂದರು.
  ಕಾರ್ಯದರ್ಶಿ ಟಿ.ಎಸ್.ರಾಜು ಮಾತನಾಡಿ, ಹೆಣ್ಣು ಮಕ್ಕಳಿಗೆ ಕಾಯ್ದೆ ಕಾನೂನು ಮೂಲಕ ರಕ್ಷಣೆಗಳಿದ್ದು ಅದನ್ನು ಸರಿಯಾಗಿ ಅರಿತುಕೊಂಡಲ್ಲಿ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ, ಕಾನೂನು ನಮಗೆ ಮಾರ್ಗದರ್ಶನ ನೀಡುತ್ತದೆ. ಆದರೆ ಅದನ್ನು ಸರಿಯಾಗಿ ಪ್ರತಿಪಾದಿಸಿ ತಮ್ಮ ಹಕ್ಕನ್ನು ಪಡೆಯುವುದು ಎಲ್ಲಾ ನಾಗರಿಕರ ಕರ್ತವ್ಯ ಎಂಬುದನ್ನು ಮರೆಯಬಾರದು ಎಂದರು.
   ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್, ವಾರ್ಡನ್ ನಾಗರಾಜ, ರಮ್ಯ, ಕಾನೂನು ಪ್ರಾಧಿಕಾರದ ವಿಶ್ವನಾಥ ಉಪಸ್ಥಿತರಿದ್ದರು.

ಯಶಸ್ವಿಯಾಗಿ ಜರುಗಿದ ರಕ್ತದಾನ, ಗುಂಪು ತಪಾಸಣೆ ಶಿಬಿರ


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ  ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
     ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ಕಾರ್ಯದರ್ಶಿ ಆರ್. ರಾಮಮೂರ್ತಿ ಮತ್ತು ಖಜಾಂಚಿ ಎನ್. ಶಿವಕುಮಾರ್, ಪ್ರಮುಖರಾದ ಕೆ.ಸಿ ವೀರಭದ್ರಪ್ಪ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಹಾ. ರಾಮಪ್ಪ ಹಾಗು ಕಾಲೇಜಿನ ಪ್ರಾಧ್ಯಾಪಕರು ಹಾಗು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪೋಷಣ್ ಅಭಿಯಾನ : ಗರ್ಭಿಣಿ ಮಹಿಳೆಯರಿಗೆ ಸೀಮಂತ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ, ಮಾ. ೧೪: ನಗರಸಭೆ ವ್ಯಾಪ್ತಿಯ ಕಾಗದನಗರದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಮಡಿಲು ತುಂಬುವ ಮೂಲಕ ಗರ್ಭಿಣಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವಂತೆ ಜಾಗೃತಿ ಮೂಡಿಸಲಾಯಿತು. ಕಾಗದ ನಗರದ ಅಂಗನವಾಡಿ ಕಾರ್ಯಕರ್ತೆಯರಾದ ಎಸ್. ರಶ್ಮಿ, ಬಿ.ಆರ್ ಮೀನಾಕ್ಷಿ, ಎಚ್.ಆರ್ ಜಯಂತಿ, ಲಲಿತ ಹಾಗೂ ಅಂಗನವಾಡಿ ಕೇಂದ್ರದ ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕಿಯರಾದ ಮಾರ್ಗರೇಟ್, ರಮ್ಯಾ ರವರು ಹಾಗೂ ಹಿರಿಯ ಆರೋಗ್ಯ ಸಹಾಯಕ ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.