ಭದ್ರಾವತಿ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಬುಧವಾರ ಬೆಳಿಗ್ಗೆ ಮತಯಾಚನೆ ನಡೆಸಿದರು.
ಭದ್ರಾವತಿ, ಏ. ೨೧: ನಗರಸಭೆ ಚುನಾವಣೆ ವಿವಿಧೆಡೆ ಅಭ್ಯರ್ಥಿಗಳಿಂದ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಅಭ್ಯರ್ಥಿಗಳು ಖುದ್ದಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದಾರೆ. ಈ ಬಾರಿ ಪ್ರಚಾರದಲ್ಲಿ ಧ್ವನಿವರ್ಧಕ ಮೂಲಕ ಮತಯಾಚನೆ ಹೆಚ್ಚಾಗಿ ಕಂಡು ಬರುತ್ತಿಲ್ಲ. ಅಲ್ಲದೆ ಕೋವಿಡ್ ಹಿನ್ನಲೆಯಲ್ಲಿ ಬಹುತೇಕ ಅಭ್ಯರ್ಥಿಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಸರಳವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬುಧವಾರ ಬೆಳಿಗ್ಗೆ ನಗರಸಭೆ ೧೨ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಕೆ. ಸುದೀಪ್‌ಕುಮಾರ್ ಪಕ್ಷದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಸುದೀಪ್‌ಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದು, ಅಲ್ಲದೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಹಾಗು ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದೆ ರೀತಿ ಮೊದಲ ಬಾರಿಗೆ ನಗರಸಭೆ ಚುನಾವಣೆಗೆ ೧೨ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಸ್ಪರ್ಧಿಸಿದ್ದು, ಇವರ ಸಹ ಬುಧವಾರ ಬೆಳಿಗ್ಗೆ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಪ್ರಭಾಕರ್ ತಾಲೂಕು ದೇವಾಂಗ ಸಮಾಜ ಹಾಗು ಶ್ರೀ ಬನಶಂಕರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಆರಂಭದಿಂದಲೂ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಎ. ಪಶುಪತಿ ೧೨ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಇವರು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.
ಮಂಗಳವಾರ ಸಂಜೆ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್‌ನಾಯ್ಕ ಬಿಜೆಪಿ ಪಕ್ಷದ ೩ನೇ ವಾರ್ಡ್ ಅಭ್ಯರ್ಥಿ ಜೆ. ನಕುಲ್ ಪರವಾಗಿ ಮತಯಾಚನೆ ನಡೆಸಿದರು. ವಾರ್ಡ್ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಬುಧವಾರ ಅಭ್ಯರ್ಥಿಪರವಾಗಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಮತಯಾಚನೆ ನಡೆಸಿದರು.
ಇದೆ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಬುಧವಾರ ಬೆಳಿಗ್ಗೆಯಿಂದ ಕಾರ್ಯಕರ್ತರು ಹಾಗು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.