![](https://blogger.googleusercontent.com/img/b/R29vZ2xl/AVvXsEh8y_7O91WkaVOqTTL-peNBzhFfYfdEGKSSkQIA7yLvPmkgzjIIWFmXmRcQ5-uQ1YfInDJFFoJ7eoV1k_XYaHIrj0wiGkUdeTjbkESe0Tx_RqmRp9PdkUFg2ZzFVKujnkmEQqc7GhmAaeU6/w640-h300-rw/D24-BDVT1-747097.jpg)
ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್ ಪರಿಣಾಮ ಭದ್ರಾವತಿ ನಗರ ಪ್ರದೇಶದಲ್ಲಿ ಸಂಪೂರ್ಣ ಬಂದ್ ವಾತಾವರಣ ಕಂಡು ಬಂದಿತು.
ಭದ್ರಾವತಿ, ಏ. ೨೪: ಕೊರೋನಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕ್ ಎಂಡ್ ಲಾಕ್‌ಡೌನ್ ಪರಿಣಾಮ ನಗರ ಪ್ರದೇಶದಲ್ಲಿ ಸಂಪೂರ್ಣ ಬಂದ್ ವಾತಾವರಣ ಕಂಡು ಬಂದಿತು.
ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ಟಿ.ಕೆ ರಸ್ತೆ, ಹೊಸಸೇತುವೆ ರಸ್ತೆ ಹಾಗು ಹೊಸಮನೆ ರಸ್ತೆ ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ರಸ್ತೆಗಳನ್ನು ಬ್ಯಾರಿಗೇಡ್‌ಗಳಿಂದ ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಪೊಲೀಸರು ವಿನಾಕಾರಣ ಸಂಚರಿಸುವ ವಾಹನ ಸವಾರರನ್ನು ತಡೆದು ಎಚ್ಚರಿಕೆ ನೀಡಿದರು.
ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಔಷಧಿ, ದಿನಸಿ ಅಂಗಡಿ, ಹಣ್ಣು ವ್ಯಾಪಾರಸ್ಥರು ಹೊರತು ಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ತರಕಾರಿ, ಹೂ-ಹಣ್ಣು ಮಾರುಕಟ್ಟೆ, ರೈಲ್ವೆ ನಿಲ್ದಾಣ ಬಳಿ ಇರುವ ಮಾರುಕಟ್ಟೆಗಳನ್ನು ಸಹ ಬಂದ್ ಮಾಡಲಾಗಿತ್ತು. ಪ್ರಮುಖ ರಸ್ತೆಗಳು ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಬಹುತೇಕ ಅಂಗಡಿಮುಂಗಟ್ಟುಗಳ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕರಿಸಿರುವುದು ಕಂಡು ಬಂದಿತು. ಕೆಲವು ವ್ಯಾಪಾರಸ್ಥರು ಸರ್ಕಾರದ ದಿಢೀರ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
೨ ದಿನಗಳ ಬಹಿರಂಗ ಪ್ರಚಾರ ಲಾಕ್‌ಡೌನ್‌ಗೆ ಬಲಿ:
ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಮತದಾನ ಏ.೨೭ರಂದು ನಡೆಯಲಿದ್ದು, ಬಹುತೇಕ ವಾರ್ಡ್‌ಗಳು ವಾಣಿಜ್ಯ ಪ್ರದೇಶಗಳ ವ್ಯಾಪ್ತಿಯಲ್ಲಿವೆ. ಈ ವಾರ್ಡ್‌ಗಳ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವುದು ಬಹುತೇಕ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ ಬಹುತೇಕ ಅಭ್ಯರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳ ಬಳಕೆ ತಿಳಿದವರ ನೆರವು ಪಡೆಯುವಂತಾಗಿದೆ.
ಉಳಿದ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ನಡೆಸುತ್ತಿದ್ದು, ಈಗಾಗಲೇ ೨-೩ ಸುತ್ತಿನ ಮತಯಾಚನೆ ನಡೆಸಿದ್ದಾರೆ. ಆದರೂ ಸಹ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸರಿಯಾಗಿ ಮತದಾರರನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಸರ್ಕಾರದ ಆದೇಶ ದಡ್ಡತನದ ಪರಮಾವಧಿ: ಖಂಡನೆ
ರಾಜ್ಯ ಸರ್ಕಾರ ದಿಢೀರನೆ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿರುವುದು ನಿಜಕ್ಕೂ ದಡ್ಡತನದ ಮರಮಾವಧಿಯಾಗಿದೆ. ರಾಜ್ಯದ ತೆರಿಗೆ ಸಂಗ್ರಹಣೆಯಲ್ಲಿ ವ್ಯಾಪಾರಸ್ಥರು ಬಹುಪಾಲನ್ನು ಹೊಂದಿದ್ದಾರೆ. ಸರ್ಕಾರ ವ್ಯಾಪಾರಸ್ಥರ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಾಏಕಿ ಆದೇಶ ಹೊರಡಿಸಿರುವುದು ಸರಿಯಲ್ಲ. ಈಗಾಗಲೇ ವ್ಯಾಪಾರಸ್ಥರು ಕೊರೋನಾ ಹಿನ್ನಲೆಯಲ್ಲಿ ದೀರ್ಘ ಕಾಲದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಇದೀಗ ಏಕಾ ಏಕಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿರುವುದು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಅಲ್ಲದೆ ಸರ್ಕಾರ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಚಾರಕ್ಕೆ ಅವಕಾಶ ನೀಡಲು ಮನವಿ :
ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿಕೊಡಬೇಕು. ಬಹಿರಂಗ ಪ್ರಚಾರಕ್ಕೆ ಉಳಿದಿರುವುದು ಒಂದು ದಿನ ಮಾತ್ರ ಬಾಕಿ ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ೩ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರಾದ ವೆಂಕಟೇಶ್ ಮನವಿ ಮಾಡಿದ್ದಾರೆ.