Friday, April 30, 2021

ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲು : ಪ್ರತಿಷ್ಠೆ ಮೆರೆದ ಶಾಸಕ ಬಿ.ಕೆ ಸಂಗಮೇಶ್ವರ್

ಕಾಂಗ್ರೆಸ್-೧೮, ಜೆಡಿಎಸ್-೧೧, ಬಿಜೆಪಿ-೪ ಹಾಗು ಪಕ್ಷೇತರ-೧ ಅಭ್ಯರ್ಥಿಗಳ ಗೆಲುವು

     ಭದ್ರಾವತಿ, ಏ. ೩೦: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ಸ್ಥಾನಗಳೊಂದಿಗೆ ಬಹುಮತ ಪಡೆದುಕೊಂಡಿದೆ.
     ನಗರಸಭೆ ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಉಳಿದ ೩೪ ವಾರ್ಡ್‌ಗಳ ಪೈಕಿ ೧೮-ಕಾಂಗ್ರೆಸ್, ೧೧-ಜೆಡಿಎಸ್, ೪-ಬಿಜೆಪಿ ಹಾಗು ೧-ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ವಾರ್ಡ್ ನಂ.೧ರಲ್ಲಿ ಪಡಿತರ ವಿತರಕ ಪ್ರಕಾಶ್ ತಮ್ಮ ಪತ್ನಿ ರೇಖಾ. ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೨ನೇ ವಾರ್ಡ್‌ನಲ್ಲಿ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್‌ರವರು ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಸೋಲು ಅನುಭವಿಸಿದ್ದಾರೆ. ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ೩ನೇ ವಾರ್ಡ್‌ನಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜಾರ್ಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೪ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ವಿರುದ್ಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ತಮ್ಮ ಪತ್ನಿ ಅನುಪಮಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್‌ನಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಬಿ. ಶಶಿಕಲಾ ಬಿ.ಎಸ್ ನಾರಾಯಣಪ್ಪ ಗೆಲುವು ಸಾಧಿಸಿದ್ದಾರೆ. ೬ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಮೊದಲ ಬಾರಿಗೆ ಆಯ್ಕೆಯಾಗಿದ್ದು, ೭ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ೮ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ ಗೆಲುವು ಸಾಧಿಸಿದ್ದಾರೆ. ೯ನೇ ವಾರ್ಡ್‌ನಲ್ಲಿ ೨ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಆಯ್ಕೆಯಾಗಿದ್ದಾರೆ.
      ೧೦ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಮಲ್ಲೇಶ್ ಗೆಲುವು ಸಾಧಿಸಿದ್ದು, ೧೧ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಮಣಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ವಿರುದ್ದ ಗೆಲುವು ಸಾಧಿಸಿ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೨ನೇ ವಾರ್ಡ್‌ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದು, ಕಳೆದ ಬಾರಿ ಇವರ ಪತ್ನಿ ರೇಣುಕಾ ಸುದೀಪ್ ಆಯ್ಕೆಯಾಗಿದ್ದರು. ವಾರ್ಡ್ ನಂ.೧೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಅನುಸುಧಾ ಮೋಹನ್ ಪಳನಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೪ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್ ಕಾಂಗ್ರೆಸ್ ಸ್ಪರ್ಧಿಸಿ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೫ನೇ ವಾರ್ಡ್‌ನಲ್ಲಿ ಮಂಜುಳ ಸುಬ್ಬಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೬ನೇ ವಾರ್ಡ್‌ನಲ್ಲಿ ಹಿರಿಯ ಬಿಜೆಪಿ ಮುಖಂಡ, ಸೂಡಾ ಸದಸ್ಯ ವಿ. ಕದಿರೇಶ್ ೫ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ೧೮ನೇ ವಾರ್ಡ್‌ನಲ್ಲಿ ಮಹಮದ್ ಯೂಸೂಫ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೯ರಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೇಕೊಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
     ವಾರ್ಡ್ ನಂ.೨೦ರಲ್ಲಿ ಜೆಡಿಎಸ್ ಮುಖಂಡ, ಕೇಬಲ್ ಸುರೇಶ್ ತಮ್ಮ ಪತ್ನಿ ಎಸ್. ಜಯಶೀಲ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೧ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಅಶೋಕ್‌ಕುಮಾರ್ ತಮ್ಮ ತಾಯಿ ವಿಜಯ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ  ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ಸೋಲು ಅನುಭವಿಸಿದ್ದಾರೆ. ವಾರ್ಡ್‌ನಲ್ಲಿ ೨೨ರಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ೨ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೩ರಲ್ಲಿ ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ತಮ್ಮ ಪತ್ನಿ ಕೆ.ಪಿ ಪ್ರೇಮಾರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಡ್ ನಂ.೨೪ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೋಟೇಶ್ವರ ರಾವ್ ಗೆಲುವು ಸಾಧಿಸಿದ್ದಾರೆ. ಇದೆ ರೀತಿ ವಾರ್ಡ್ ನಂ.೨೫ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಉದಯಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ತಮ್ಮ ಪತ್ನಿ ಬಿ.ಪಿ ಸರ್ವಮಂಗಳ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೭ರಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗುಣಶೇಖರ್ ಈ ಬಾರಿ ತಮ್ಮ ಪತ್ನಿ ರೂಪಾವತಿ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೮ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
     ವಾರ್ಡ್ ೩೦ರಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೧ರಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ದಿಲೀಪ್ ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೨ರಲ್ಲಿ ಅಪ್ಪಾಜಿ ಬೆಂಬಲಿಗ ಉಮೇಶ್ ತಮ್ಮ ಪತ್ನಿ ಸವಿತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಾರ್ಡ್ ನಂ.೩೩ರಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿ ಆರ್. ಮೋಹನ್ ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ವಾರ್ಡ್ ನಂ.೩೪ರಲ್ಲಿ ಮೊದಲ ಬಾರಿಗೆ ಒಕ್ಕಲಿಗ ಸಮಾಜದ  ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೩೫ರಲ್ಲಿ ಮಾಜಿ ನಗರಸಭಾ ಸದಸ್ಯ ಗಂಗಾಧರ್ ತಮ್ಮ ಸೊಸೆ ಶೃತಿ ವಸಂತಕುಮಾರ್ ಅರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
      ಅಪ್ಪ-ಮಕ್ಕಳ ಗೆಲುವು:
    ಈ ಬಾರಿ ನಗರಸಭೆ ಚುನಾವಣೆ ಫಲಿತಾಂಶದ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ೨೨ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್ ವಾರ್ಡ್ ನಂ.೧೬ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ವಾರ್ಡ್ ನಂ.೧೨ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
       ಸೊಸೆ ವಿರುದ್ದ ಗೆಲುವು ಸಾಧಿಸಿದ ಅತ್ತೆ:
    ವಾರ್ಡ್ ನಂ.೨೧ರಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಾರವರು ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ವಿಜಯಾರವರು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
೨ ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
      ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅಲ್ಲದೆ ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕರು ಸಂಘಟಿತವಾಗಿ ನಡೆಸಿದ ಪ್ರಯತ್ನದ ಫಲವಾಗಿ ೨ ಸ್ಥಾನ ಹೆಚ್ಚಳವಾಗಿದೆ ಎಂದರೆ ತಪ್ಪಾಗಲಾರದು.
       ಛಲವಾದಿ ಸಮಾಜದ ೪ ಮಂದಿ ಆಯ್ಕೆ :
     ಈ ಬಾರಿ ಚುನಾವಣೆಯಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ವಾರ್ಡ್ ನಂ.೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೫ರಲ್ಲಿ ಛಲವಾದಿ ಸಮಾಜದ ಮುಖಂಡ ಕೆ. ಉದಯಕುಮಾರ್ ಮೊದಲ ಬಾರಿಗೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಪತ್ನಿ ಪ್ರೇಮಾ ವಾರ್ಡ್ ನಂ.೨೩ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
       ಸೋಲು ಅನುಭವಿಸಿದ ಮಾಜಿ ಅಧ್ಯಕ್ಷರು:
   ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ, ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ವಾರ್ಡ್ ನಂ.೧೮ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕುರುಬ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೫ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ವಾರ್ಡ್ ನಂ.೧೬ರಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇದೆ ರೀತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವಾರ್ಡ್ ನಂ.೩೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.
     ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳು:
    ಗೀತಾ ರಾಜ್‌ಕುಮಾರ್(ವಾರ್ಡ್ ನಂ.೨), ಜಾರ್ಜ್(ವಾರ್ಡ್ ನಂ.೩), ಶ್ರೇಯಸ್ ಆರ್(ವಾರ್ಡ್ ನಂ.೬), ಬಿ.ಎಂ ಮಂಜುನಾಥ(ವಾರ್ಡ್ ನಂ.೭), ಬಷೀರ್ ಅಹಮದ್(ವಾರ್ಡ್ ನಂ. ೮), ಚನ್ನಪ್ಪ(ವಾರ್ಡ್ ನಂ.೯), ಎಂ. ಮಣಿ(ವಾರ್ಡ್ ನಂ.೧೧), ಕೆ. ಸುದೀಪ್ ಕುಮಾರ್(ವಾರ್ಡ್ ನಂ.೧೨), ಅನುಸುಧಾ ಮೋಹನ್ ಪಳನಿ(ವಾರ್ಡ್ ನಂ.೧೩), ಬಿ.ಟಿ ನಾಗರಾಜ್(ವಾರ್ಡ್ ನಂ.೧೪), ಟಿಪ್ಪು ಸುಲ್ತಾನ್(ವಾರ್ಡ್ ನಂ.೧೭), ಮಹಮದ್ ಯೂಸಫ್(ವಾರ್ಡ್ ನಂ.೧೮), ಬಿ.ಕೆ ಮೋಹನ್(ವಾರ್ಡ್ ನಂ.೨೨), ಸರ್ವಮಂಗಳ(ವಾರ್ಡ್ ನಂ.೨೬), ಕಾಂತರಾಜ್(ವಾರ್ಡ್ ನಂ.೨೮), ಸಯ್ಯದ್ ರಿಯಾಜ್(ವಾರ್ಡ್ ನಂ.೩೦), ಲತಾ ಚಂದ್ರಶೇಖರ್(ವಾರ್ಡ್ ನಂ.೩೪) ಮತ್ತು ಶೃತಿ ವಸಂತಕುಮಾರ್(ವಾರ್ಡ್ ನಂ.೩೫)
      ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳು:
   ರೇಖಾ ಟಿ. ಪ್ರಕಾಶ್(ವಾರ್ಡ್ ನಂ.೦೧), ಮಂಜುಳ ಸುಬ್ಬಣ್ಣ(ವಾರ್ಡ್ ನಂ.೧೫), ಬಸವರಾಜ ಬಿ(ವಾರ್ಡ್ ೧೯), ಜಯಶೀಲ(ವಾರ್ಡ್ ೨೦), ವಿಜಯ(ವಾರ್ಡ್ ನಂ.೨೧), ಪ್ರೇಮಾ(ವಾರ್ಡ್ ನಂ.೨೩), ಕೋಟೇಶ್ವರ ರಾವ್(ವಾರ್ಡ್ ನಂ.೨೪), ಕೆ. ಉದಯ್‌ಕುಮಾರ್(ವಾರ್ಡ್ ನಂ.೨೫), ರೂಪಾವತಿ(ವಾರ್ಡ್ ನಂ.೨೭), ಪಲ್ಲವಿ ದಿಲೀಪ್(ವಾರ್ಡ್ ನಂ.೩೧) ಮತ್ತು ಸವಿತಾ ಉಮೇಶ್(ವಾರ್ಡ್ ನಂ.೩೨)
       ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು:
ಅನುಪಮಾ ಚನ್ನೇಶ್(ವಾರ್ಡ್ ನಂ.೪), ಶಶಿಕಲಾ ಬಿ(ವಾರ್ಡ್ ನಂ.೫), ಅನಿತಾ ಮಲ್ಲೇಶ್(ವಾರ್ಡ್ ನಂ.೧೦) ಮತ್ತು  ವಿ. ಕದಿರೇಶ್(ವಾರ್ಡ್ ನಂ.೧೬)
       ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ: ಆರ್. ಮೋಹನ್‌ಕುಮಾರ್(ವಾರ್ಡ್ ನಂ.೩೩)

ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲು : ಪ್ರತಿಷ್ಠೆ ಮೆರೆದ ಶಾಸಕ ಬಿ.ಕೆ ಸಂಗಮೇಶ್ವರ್

ಕಾಂಗ್ರೆಸ್-೧೮, ಜೆಡಿಎಸ್-೧೧, ಬಿಜೆಪಿ-೪ ಹಾಗು ಪಕ್ಷೇತರ-೧ ಅಭ್ಯರ್ಥಿಗಳ ಗೆಲುವು

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಏ. ೩೦: ಬಹುತೇಕ ನಿರೀಕ್ಷೆಯಂತೆ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ೩೪ ವಾರ್ಡ್‌ಗಳ ಚುನಾವಣೆಯಲ್ಲಿ ಕಾಂಗ್ರೆಸ್ ೧೮ ಸ್ಥಾನಗಳೊಂದಿಗೆ ಬಹುಮತ ಪಡೆದುಕೊಂಡಿದೆ.
    ನಗರಸಭೆ ೩೫ ವಾರ್ಡ್‌ಗಳ ಪೈಕಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಉಳಿದ ೩೪ ವಾರ್ಡ್‌ಗಳ ಪೈಕಿ ೧೮-ಕಾಂಗ್ರೆಸ್, ೧೧-ಜೆಡಿಎಸ್, ೪-ಬಿಜೆಪಿ ಹಾಗು ೧-ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೧ರಲ್ಲಿ ಪಡಿತರ ವಿತರಕ ಪ್ರಕಾಶ್ ತಮ್ಮ ಪತ್ನಿ ರೇಖಾ. ಟಿ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೨ನೇ ವಾರ್ಡ್‌ನಲ್ಲಿ ಮಾಜಿ ನಗರಸಭಾ ಸದಸ್ಯ ಎಸ್.ಪಿ ಮೋಹನ್‌ರಾವ್‌ರವರು ತಮ್ಮ ಪತ್ನಿ ಶಾಂತ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಸೋಲು ಅನುಭವಿಸಿದ್ದಾರೆ. ಲಿಂಗಾಯಿತ ಸಮುದಾಯದ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ. ೩ನೇ ವಾರ್ಡ್‌ನಲ್ಲಿ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದ ಜಾರ್ಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೪ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ಸಂಬಂಧಿ ಎಚ್. ವಿದ್ಯಾ ವಿರುದ್ಧ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್ ತಮ್ಮ ಪತ್ನಿ ಅನುಪಮಾ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ೫ನೇ ವಾರ್ಡ್‌ನಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಭ್ಯರ್ಥಿ ಬಿ. ಶಶಿಕಲಾ ಬಿ.ಎಸ್ ನಾರಾಯಣಪ್ಪ ಗೆಲುವು ಸಾಧಿಸಿದ್ದಾರೆ. ೬ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಮೊದಲ ಬಾರಿಗೆ ಆಯ್ಕೆಯಾಗಿದ್ದು, ೭ನೇ ವಾರ್ಡ್‌ನಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್‌ರವರ ಪುತ್ರ ಬಿ.ಎಂ ಮಂಜುನಾಥ್ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ೮ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ ಗೆಲುವು ಸಾಧಿಸಿದ್ದಾರೆ. ೯ನೇ ವಾರ್ಡ್‌ನಲ್ಲಿ ೨ನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ಆಯ್ಕೆಯಾಗಿದ್ದಾರೆ.
      ೧೦ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅನಿತಾ ಮಲ್ಲೇಶ್ ಗೆಲುವು ಸಾಧಿಸಿದ್ದು, ೧೧ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಮಣಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ವಿರುದ್ದ ಗೆಲುವು ಸಾಧಿಸಿ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೨ನೇ ವಾರ್ಡ್‌ನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ. ಸುದೀಪ್‌ಕುಮಾರ್ ಆಯ್ಕೆಯಾಗಿದ್ದು, ಕಳೆದ ಬಾರಿ ಇವರ ಪತ್ನಿ ರೇಣುಕಾ ಸುದೀಪ್ ಆಯ್ಕೆಯಾಗಿದ್ದರು. ವಾರ್ಡ್ ನಂ.೧೪ರಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್ ಕಾಂಗ್ರೆಸ್ ಸ್ಪರ್ಧಿಸಿ ೩ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೫ನೇ ವಾರ್ಡ್‌ನಲ್ಲಿ ಮಂಜುಳ ಸುಬ್ಬಣ್ಣ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ೧೬ನೇ ವಾರ್ಡ್‌ನಲ್ಲಿ ಹಿರಿಯ ಬಿಜೆಪಿ ಮುಖಂಡ, ಸೂಡಾ ಸದಸ್ಯ ವಿ. ಕದಿರೇಶ್ ೫ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ೧೮ನೇ ವಾರ್ಡ್‌ನಲ್ಲಿ ಮಹಮದ್ ಯೂಸೂಫ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೧೯ರಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಜಿ. ಆನೇಕೊಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
    ವಾರ್ಡ್ ನಂ.೨೦ರಲ್ಲಿ ಜೆಡಿಎಸ್ ಮುಖಂಡ, ಕೇಬಲ್ ಸುರೇಶ್ ತಮ್ಮ ಪತ್ನಿ ಎಸ್. ಜಯಶೀಲ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೧ನೇ ವಾರ್ಡ್‌ನಲ್ಲಿ ಸಮಾಜ ಸೇವಕ ಅಶೋಕ್‌ಕುಮಾರ್ ತಮ್ಮ ತಾಯಿ ವಿಜಯ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವರ  ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ಸೋಲು ಅನುಭವಿಸಿದ್ದಾರೆ. ವಾರ್ಡ್‌ನಲ್ಲಿ ೨೨ರಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ೨ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೩ರಲ್ಲಿ ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ತಮ್ಮ ಪತ್ನಿ ಕೆ.ಪಿ ಪ್ರೇಮಾರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಾರ್ಡ್ ನಂ.೨೪ರಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೋಟೇಶ್ವರ ರಾವ್ ಗೆಲುವು ಸಾಧಿಸಿದ್ದಾರೆ. ಇದೆ ರೀತಿ ವಾರ್ಡ್ ನಂ.೨೫ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಉದಯಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
    ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ಎಸ್.ಎಸ್ ಭೈರಪ್ಪ ತಮ್ಮ ಪತ್ನಿ ಬಿ.ಪಿ ಸರ್ವಮಂಗಳ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೭ರಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಗುಣಶೇಖರ್ ಈ ಬಾರಿ ತಮ್ಮ ಪತ್ನಿ ರೂಪಾವತಿ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೮ರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
    ವಾರ್ಡ್ ೩೦ರಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಮುಸ್ಲಿಂ ಅಭ್ಯರ್ಥಿ ಸೈಯದ್ ರಿಯಾಜ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೧ರಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ದಿಲೀಪ್ ತಮ್ಮ ಪತ್ನಿ ಬಿ.ಇ ಪದವಿಧರೆ ಪಲ್ಲವಿ ಅವರನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ೩೨ರಲ್ಲಿ ಅಪ್ಪಾಜಿ ಬೆಂಬಲಿಗ ಉಮೇಶ್ ತಮ್ಮ ಪತ್ನಿ ಸವಿತಾ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
     ವಾರ್ಡ್ ನಂ.೩೩ರಲ್ಲಿ ಎಲ್ಲರ ನಿರೀಕ್ಷೆಯನ್ನು ಮೀರಿ ಪ್ರಬಲ ಅಭ್ಯರ್ಥಿಗಳ ನಡುವೆ ಪಕ್ಷೇತರ ಅಭ್ಯರ್ಥಿ ಆರ್. ಮೋಹನ್ ಕುಮಾರ್ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ವಾರ್ಡ್ ನಂ.೩೪ರಲ್ಲಿ ಮೊದಲ ಬಾರಿಗೆ ಒಕ್ಕಲಿಗ ಸಮಾಜದ  ಲತಾ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೩೫ರಲ್ಲಿ ಮಾಜಿ ನಗರಸಭಾ ಸದಸ್ಯ ಗಂಗಾಧರ್ ತಮ್ಮ ಸೊಸೆ ಶೃತಿ ವಸಂತಕುಮಾರ್ ಅರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
        ಅಪ್ಪ-ಮಕ್ಕಳ ಗೆಲುವು:
      ಈ ಬಾರಿ ನಗರಸಭೆ ಚುನಾವಣೆ ಫಲಿತಾಂಶದ ವಿಶೇಷತೆ ಎಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಮೋಹನ್ ೨೨ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಇವರ ಪುತ್ರ ಬಿ.ಎಂ ಮಂಜುನಾಥ್ ೭ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಹಿರಿಯ ಬಿಜೆಪಿ ಮುಖಂಡ ವಿ. ಕದಿರೇಶ್ ವಾರ್ಡ್ ನಂ.೧೬ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರ ಪುತ್ರ ಕೆ. ಸುದೀಪ್‌ಕುಮಾರ್ ವಾರ್ಡ್ ನಂ.೧೨ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
      ಸೊಸೆ ವಿರುದ್ದ ಗೆಲುವು ಸಾಧಿಸಿದ ಅತ್ತೆ:
    ವಾರ್ಡ್ ನಂ.೨೧ರಲ್ಲಿ ಜೆಡಿಎಸ್ ಅಭ್ಯರ್ಥಿ ವಿಜಯಾರವರು ತಮ್ಮ ಸೊಸೆ ಬಿಜೆಪಿ ಅಭ್ಯರ್ಥಿ ಅನುಷಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆ ವಿಜಯಾರವರು ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
     ೨ ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ:
    ಕಳೆದ ಬಾರಿ ಬಿಜೆಪಿ ಪಕ್ಷದಿಂದ ಕೇವಲ ಇಬ್ಬರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದರು. ಅಲ್ಲದೆ ಅಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದಿಂದ ಇಬ್ಬರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಬಿಜೆಪಿ ಪಕ್ಷದಿಂದ ೪ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕರು ಸಂಘಟಿತವಾಗಿ ನಡೆಸಿದ ಪ್ರಯತ್ನದ ಫಲವಾಗಿ ೨ ಸ್ಥಾನ ಹೆಚ್ಚಳವಾಗಿದೆ ಎಂದರೆ ತಪ್ಪಾಗಲಾರದು.
    ಛಲವಾದಿ ಸಮಾಜದ ೪ ಮಂದಿ ಆಯ್ಕೆ : 
ಈ ಬಾರಿ ಚುನಾವಣೆಯಲ್ಲಿ ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ ವಾರ್ಡ್ ನಂ.೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ.೨೫ರಲ್ಲಿ ಛಲವಾದಿ ಸಮಾಜದ ಮುಖಂಡ ಉದಯಕುಮಾರ್ ಮೊದಲ ಬಾರಿಗೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.೨೬ರಲ್ಲಿ ಛಲವಾದಿ ಸಮಾಜದ ಮುಖಂಡ ಎಸ್.ಎಸ್ ಭೈರಪ್ಪನವರ ಪತ್ನಿ ಬಿ.ಪಿ ಸರ್ವಮಂಗಳ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಛಲವಾದಿ ಸಮಾಜದ ಮಾಜಿ ಅಧ್ಯಕ್ಷ ಬದರಿನಾರಾಯಣ ಅವರ ಪತ್ನಿ ಪ್ರೇಮಾ ವಾರ್ಡ್ ನಂ.೨೩ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 

     ಸೋಲು ಅನುಭವಿಸಿದ ಮಾಜಿ ಅಧ್ಯಕ್ಷರು:
   ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ, ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ವಾರ್ಡ್ ನಂ.೧೮ರಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಕುರುಬ ಸಮಾಜದ ಮುಖಂಡರು, ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೫ರಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಇದೆ ರೀತಿ ತಾಲೂಕು ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ವಾರ್ಡ್ ನಂ.೩೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

Thursday, April 29, 2021

ನಗರಸಭೆವತಿಯಿಂದ ವಿವಿಧೆಡೆ ಕೊರೋನಾ ಜಾಗೃತಿ ಕಾರ್ಯಕ್ರಮ

ಭದ್ರಾವತಿ, ಏ. ೨೯: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.
ಸಾಮಾಜಿಕ ಅಂತರ ಪಾಲಿಸಿ, ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಿ, ಮನೆಯಲ್ಲೇ ಇರೋಣ ಕೊರೋನಾ ತೊಲಗಿಸೋಣ, ಎಲ್ಲರೂ ಕೊರೋನಾ ವಿರುದ್ಧ ಹೋರಾಟ ನಡೆಸೋಣ ಇತ್ಯಾದಿ ಫಲಕಗಳೊಂದಿಗೆ ಸಿದ್ಧರೂಢನಗರದ ಮುಖ್ಯದ್ವಾರದ ಬಳಿ, ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಮುಂಭಾಗ ಇತ್ಯಾದಿ ಸ್ಥಳಗಳಲ್ಲಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಲೇಖಾಧಿಕಾರಿ ಸಯ್ಯದ್ ಮೆಹಬೂಬ್ ಆಲಿ,  ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಅಧಿಕಾರಿ ಹಾಗು ಸಿಬ್ಬಂದಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಚಿತ್ರ: ಡಿ೨೯-ಬಿಡಿವಿಟಿ೨
ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರಸಭೆ ಜಾಗೃತಿ ಕಾರ್ಯಪಡೆ ವತಿಯಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಗುರುವಾರ ಜಾಗೃತಿ ಮೂಡಿಸಲಾಯಿತು.

ನಗರಸಭೆ ೩೪ ವಾರ್ಡ್ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ದತೆ : ಕೋವಿಡ್ ಹಿನ್ನಲೆಯಲ್ಲಿ ಬಿಗಿ ಭದ್ರತೆ

ಬೆಳಿಗ್ಗೆ ೧೦ ಗಂಟೆಯೊಳಗೆ ಫಲಿತಾಂಶ ಪ್ರಕಟ, ಗುಂಪು ಸೇರುವುದು, ಮೆರವಣಿಗೆ ನಡೆಸುವುದು ನಿಷೇಧ

ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾದಿಕಾರಿ ಟಿ.ವಿ ಪ್ರಕಾಶ್ ಮಾತನಾಡಿದರು. 
   ಭದ್ರಾವತಿ, ಏ. ೨೯:  ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಎಣಿಕೆ ಕಾರ್ಯ ಶುಕ್ರವಾರ ಹಳೇನಗರದ ಸಂಚಿಯಹೊನ್ನಮ್ಮ ಸರ್ಕಾರಿ ಬಾಲಿಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಸಾಧ್ಯವಾದಷ್ಟು ಬೆಳಿಗ್ಗೆ ೧೦ ಗಂಟೆಯೊಳಗೆ ಮತ ಎಣಿಕೆ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು ಎಂದು ಚುನಾವಣಾ ನೋಡಲ್ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ತಿಳಿಸಿದರು.
    ಅವರು ಗುರುವಾರ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೋವಿಡ್-೧೯ರ ಹಿನ್ನಲೆಯಲ್ಲಿ ಮತ ಎಣಿಕೆ ತ್ವರಿತಗೊಳಿಸಲು ಅನುಕೂಲವಾಗುವಂತೆ ೨ ಹಂತದ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ.೧, ೨, ೩, ೪, ೩೩, ೩೪ ಮತ್ತು ೩೫ರ ಭಾಗ ಸಂಖ್ಯೆ ೧ ರಿಂದ ೧೭ ಮತ್ತು ೧೨೭ ರಿಂದ ೧೩೯ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೫, ೬, ೭ ಮತ್ತು ೮ರ ಭಾಗ ಸಂಖ್ಯೆ ೧೮ ರಿಂದ ೩೫ರವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ.
    ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೯, ೧೦ ಮತ್ತು ೧೧ರ ಭಾಗ ಸಂಖ್ಯೆ ೩೬ ರಿಂದ ೪೫ರವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೪ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ. ೧೨, ೧೩, ೧೪ ಮತ್ತು ೧೫ರ ಭಾಗ ಸಂಖ್ಯೆ ೪೬ ರಿಂದ ೬೧ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೫ರಲ್ಲಿ ಒಟ್ಟು ೩ ಟೇಬ್‌ಲ್‌ಗಳಿದ್ದು, ವಾರ್ಡ್ ನಂ. ೧೬, ೧೭ ಮತ್ತು ೧೮ರ ಭಾಗ ಸಂಖ್ಯೆ ೬೨ ರಿಂದ ೭೩ರ ವರೆಗಿನ ಮತಗಟ್ಟೆಗಳ ಎಣಿಕೆ ನಡಯಲಿದೆ.
     ಇದೆ ರೀತಿ ಎರಡನೇ ಹಂತದಲ್ಲಿ ಕೊಠಡಿ-೧ರಲ್ಲಿ ಒಟ್ಟು ೭ ಟೇಬಲ್‌ಗಳಿದ್ದು, ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರ ಭಾಗ ಸಂಖ್ಯೆ ೭೪ ರಿಂದ ೯೮ರ ವರೆಗಿನ ಮತಗಟ್ಟೆಗಳ ಎಣಿಕೆ ಮತ್ತು ಕೊಠಡಿ-೨ರಲ್ಲಿ ಒಟ್ಟು ೪ ಟೇಬಲ್‌ಗಳಿದ್ದು, ವಾರ್ಡ್ ನಂ.೨೬, ೨೭, ೨೮ ಮತ್ತು ೩೦ರ ಭಾಗ ಸಂಖ್ಯೆ ೯೯ ರಿಂದ ೧೧೮ರವರೆಗಿನ ಮತಗಟ್ಟೆಗಳ ಎಣಿಕೆ ಹಾಗು ಕೊಠಡಿ-೩ರಲ್ಲಿ ಒಟ್ಟು ೩ ಟೇಬಲ್‌ಗಳಿದ್ದು, ವಾರ್ಡ್ ನಂ.೩೧ ಮತ್ತು ೩೨ರ ಭಾಗ ಸಂಖೆಯ ೧೧೯ ರಿಂದ ೧೨೬ರ ವರೆಗಿನ ಮತಗಟ್ಟೆಗಳ ಎಣಿಕೆ ನಡೆಯಲಿದೆ ಎಂದರು.
     ಬಹುತೇಕ ವಾರ್ಡ್‌ಗಳ ಮತ ಎಣಿಕೆ ೪ ಸುತ್ತುಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಕೇವಲ ೨ ರಿಂದ ೩ ವಾರ್ಡ್‌ಗಳ ಮತ ಎಣಿಕೆ ಮಾತ್ರ ೫ನೇ ಸುತ್ತು ತಲುಪಲಿದೆ. ಬೆಳಿಗ್ಗೆ ೮ ಗಂಟೆ ನಿಗದಿತ ಸಮಯದಲ್ಲಿ ಎಣಿಕೆ ಆರಂಭಗೊಳ್ಳಲಿದೆ. ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಹೆಚ್ಚಿನ ಜನರು ಸೇರದಂತೆ ಎಚ್ಚರವಹಿಸಲಾಗುತ್ತಿದೆ ಎಂದರು.
      ಎಚ್ಚರ ವಹಿಸಲು ಆರೋಗ್ಯಾಧಿಕಾರಿ ಸೂಚನೆ:
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೊರೋನಾ ಸೋಂಕು ೨ನೇ ಅಲೆ ತೀವ್ರವಾಗಿ ಹರಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುವವರು ಎಚ್ಚರವಹಿಸುವುದು ಅಗತ್ಯವಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದರು.
         ಪೊಲೀಸ್ ಭದ್ರತೆ :
      ಪೊಲೀಸ್ ಇಲಾಖೆ ವತಿಯಿಂದ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ೧-ಡಿವೈಎಸ್ಪಿ, ೩-ಸಿಪಿಐ, ೧೪-ಪಿಎಸ್‌ಐ, ೩೦-ಎಪಿಎಸ್‌ಐ, ೧೫೦-ಎಚ್‌ಪಿಸಿ, ೧-ಕೆಎಸ್‌ಆರ್‌ಪಿ ತುಕಡಿ, ೨-ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
     ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ ಅಥವಾ ಅವರ ಪರವಾಗಿ ಓರ್ವ ಏಜೆಂಟರ್‌ಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದಂತೆ ಯಾರಿಗೂ ಅವಕಾಶವಿಲ್ಲ. ಕನಕಮಂಟಪ ಮೈದಾನದಲ್ಲಿ ಸಾರ್ವಜನಿಕರು ಸೇರುವಂತಿಲ್ಲ. ಎಲ್ಲೂ ಸಹ ಗುಂಪು ಸೇರುವಂತಿಲ್ಲ. ಮೆರವಣಿಗೆ ನಡೆಸುವಂತಿಲ್ಲ.
     ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಪೊಲೀಸ್  ಉಪಾಧೀಕ್ಷಕ ಕೃಷ್ಣಮೂರ್ತಿ, ನಗರಸಭೆ ಪೌರಾಯುಕ್ತ ಮನೋಹರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರವೃತ್ತ ನಿರೀಕ್ಷಕ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ ೩೪ ವಾರ್ಡ್‌ಗಳ ಚುನಾವಣೆ ಮತ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಬಿಗಿ ಭದ್ರತೆಯಲ್ಲಿಟ್ಟಿರುವುದು.

Wednesday, April 28, 2021

ಕಲ್ಯಾಣ ಮಂಟಪಗಳಿಗೆ ಭೇಟಿ : ಮದುವೆ ಕಾರ್ಯ ಪರಿಶೀಲನೆ

ಕೋವಿಡ್-೧೯ ಮಾರ್ಗಸೂಚಿ ಪಾಲನೆ ಕಡ್ಡಾಯ

     ಭದ್ರಾವತಿ, ಏ. ೨೮: ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.

     ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ, ಮಾಧವನಗರದಲ್ಲಿರುವ ದೈವಜ್ಞ ಕಲ್ಯಾಣ ಮಂಟಪ, ಸಿದ್ದಾರೂಢನಗರದ ಶ್ರೀ ಶಂಕರ ಮಠ ಸಮುದಾಯ ಭವನ ಸೇರಿದಂತೆ ವಿವಿಧ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿದ ತಂಡ, ಊಟದ ಕೊಠಡಿ, ಮದುವೆ ಸ್ಥಳ, ಆಸನಗಳ ಪರಿಶೀಲನೆ, ಸಾಮಾಜಿಕ ಅಂತರ ಹಾಗು ಮದುವೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡುವುದು ಸೇರಿದಂತೆ ಇನ್ನಿತರೆ ಪರಿಶೀಲನೆಗಳನ್ನು ನಡೆಸಲಾಯಿತು.
ಸರ್ಕಾರ ಈಗಾಗಲೇ ನಿಗದಿಪಡಿಸಿರುವ ಮದುವೆ ಕಾರ್ಯಗಳಲ್ಲಿ ಸುಮಾರು ೫೦ ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಮದುವೆ ಕಾರ್ಯಗಳಿಗೂ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಮದುವೆ ಕಾರ್ಯಗಳಿಗೆ ಅನುಮತಿ ನೀಡುವ ಅಧಿಕಾರ ಹೊಂದಿದ್ದಾರೆ.

ಭದ್ರಾವತಿ ನಗರದ ವಿವಿಧೆಡೆ ಕಲ್ಯಾಣಮಂಟಪಗಳಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-೧೯ ಮಾರ್ಗಸೂಚಿಗಳನ್ನು ಸರಿಯಾಗಿ ಕಟ್ಟುನಿಟ್ಟಿನಿಂದ ಪಾಲಿಸುವಂತೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಮದುವೆ ಆಯೋಜಕರು ಹಾಗು ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚಿಸಿತು.

ಜನತಾ ಕರ್ಪ್ಯೂ ಮೊದಲ ದಿನ ಬಹುತೇಕ ಯಶಸ್ವಿ

ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು.
     ಭದ್ರಾವತಿ, ಏ. ೨೮: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಜನತಾ ಕರ್ಪ್ಯೂ ಬುಧವಾರ ಮೊದಲ ದಿನ ಬಹುತೇಕ ಯಶಸ್ವಿಯಾಗಿದ್ದು, ಸಾರ್ವಜನಿಕರು, ವ್ಯಾಪಸ್ಥರು ಪೂರಕವಾಗಿ ಸ್ಪಂದನೆ ವ್ಯಕ್ತಪಡಿಸಿದರು
    ಮಂಗಳವಾರ ನಗರಸಭೆ ಚುನಾವಣೆ ಮುಗಿದ ತಕ್ಷಣ ಪೊಲೀಸರು ನಗರದೆಲ್ಲೆಡೆ ಕರ್ಪ್ಯೂ ಯಶಸ್ವಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದರು. ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸುವ ಜೊತೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೆಲವೆಡೆ ಪೊಲೀಸರು ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸುವ ಜೊತೆಗೆ ಅನ್ಯವಶ್ಯಕವಾಗಿ ತಿರುಗಾಡುವವರಿಗೆ ಎಚ್ಚರಿಕೆ ನೀಡಿದರು.
     ಬೆಳಿಗ್ಗೆ ೬ ರಿಂದ ೧೦ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಜನರು ಸ್ವಲ್ಪಮಟ್ಟಿಗೆ ನಿರಾಳವಾಗಿದ್ದು, ಸರ್ಕಾರಿ ಹಾಗು ಖಾಸಗಿ ಬಸ್‌ಗಳು ಮತ್ತು ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದಾಗಿ ತುರ್ತು ಅಗತ್ಯವಿರುವ ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಶಿವಮೊಗ್ಗ, ತರೀಕೆರೆ, ಚನ್ನಗಿರಿ ಸೇರಿದಂತೆ ಇನ್ನಿತರ ಭಾಗಗಳಿಗೆ ಸಂಚರಿಸುವಂತಾಯಿತು. ಉಳಿದಂತೆ ಕೆಲವೆಡೆ ಆಟೋಗಳ ಸೇವೆ ಲಭ್ಯವಿರುವುದು ಕಂಡು ಬಂದಿತು. ಸರ್ಕಾರಿ ಕಛೇರಿಗಳು, ಬ್ಯಾಂಕ್‌ಗಳು, ಎಂದಿನಂತೆ ತೆರೆದಿದ್ದವು. ಆದರೆ ಬಹುತೇಕ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬಂದಿತು. ಬ್ಯಾಂಕ್‌ಗಳಲ್ಲಿ ತುರ್ತು ಅಗತ್ಯವಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿತ್ತು.
     ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಯಾವುದೇ ವಾಹನಗಳು ಬರದಂತೆ ಎರಡು ಕಡೆ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈ ನಡುವೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಬೆಳಿಗ್ಗೆ ನಗರಕ್ಕೆ ಅಗಮಿಸಿ ಪರಿಶೀಲನೆ ನಡೆಸಿದರು.  ಸ್ಥಳೀಯ ಪೊಲೀಸರಿಗೆ ಅನಾವಶ್ಯಕವಾಗಿ ತಿರುಗಾಡುವವರ ಹಾಗು ಸರ್ಕಾರದ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ಭದ್ರಾವತಿಯಲ್ಲಿ ಬುಧವಾರ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಣೆ ನಡೆಸಿ ಸಂಚರಿಸಲು ಅವಕಾಶ ನೀಡುತ್ತಿರುವುದು.

ಕೋವಿಡ್-೧೯ ಸೋಂಕಿತರಿಗೆ ಇಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-೧೯ರ ಹಿನ್ನಲೆಯಲ್ಲಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
   ಭದ್ರಾವತಿ, ಏ. ೨೮: ಕೋವಿಡ್-೧೯ ಸೋಂಕಿತರಿಗೆ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
   ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್-೧೯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅವರು ಬುಧವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಸಭೆಯ ನೇತೃತ್ವ ವಹಿಸಿ ಮಾತನಾಡಿದರು.  
    ಕೋವಿಡ್-೧೯ ಪುನಃ ಕಾಣಿಸಿಕೊಳ್ಳುವುದಿಲ್ಲ ಎಂಬ ಜನರಲ್ಲಿನ ಮನೋಭಾವನೆ ಹಾಗು ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಪ್ರಸ್ತುತ ಇನ್ನಾದರೂ ಎಚ್ಚೆತ್ತುಕೊಂಡು ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಸರ್ಕಾರ ಕೇವಲ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-೧೯ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೌಲರ್ಭ್ಯಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸೋಂಕಿತರನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಆದರೆ ಅಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಅವಕಾಶ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿಕೊಂಡು ವೆಂಟಿಲೇಟರ್ ಹಾಗು ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕೆಂದರು.
    ಕೋವಿಡ್-೧೯ ನಿಯಂತ್ರಣಕ್ಕೆ ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಮಾತನಾಡಿ, ಕೋವಿಡ್-೧೯ ಸೋಂಕಿತರ ತಪಾಸಣೆ ನಡೆಸಿ ಸೋಂಕು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ೧೧ ಕೋವಿಡ್-೧೯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ೧೬ ವೆಂಟಿಲೇಟರ್ ಮತ್ತು ಆಕ್ಸಿಜನ್ ಇದ್ದು, ಪ್ರಸ್ತುತ ಯಾವುದೇ ಕೊರತೆ ಕಂಡು ಬಂದಿಲ್ಲ  ಎಂದು ಮಾಹಿತಿ ನೀಡಿದರು.
    ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್ ಹಾಗು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕೊವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಉಪಸ್ಥಿತರಿದ್ದರು. ನಗರ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.