Monday, May 10, 2021

ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೨೪೮ ಮಂದಿಗೆ ಸೋಂಕು

ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ೬ ಮಂದಿ ಬಲಿ


   
ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್
ಭದ್ರಾವತಿ, ಮೇ. ೧೦: ಲಾಕ್‌ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಕೊರೋನಾ ಸೋಂಕು ಸ್ಪೋಟಗೊಂಡಿದ್ದು, ಒಂದೇ ದಿನ ೨೪೮ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಕೊರೋನಾ ಸೋಂಕಿಗೆ ತಾಲೂಕಿನ ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್(೩೮) ಬಲಿಯಾಗಿದ್ದಾರೆ.
    ಒಟ್ಟು ೩೬೯ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೪೮ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರ ಪ್ರದೇಶದಲ್ಲಿ ೧೫೬ ಹಾಗು ಗ್ರಾಮೀಣ ಪ್ರದೇಶದಲ್ಲಿ ೮೩ ಮಂದಿಗೆ ಸೋಂಕು ತಗುಲಿದೆ. ಈ ನಡುವೆ ೧೩೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ೧೮೦ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್ ತೆರವುಗೊಳಿಸಲಾಗಿದೆ.
      ಒಂದೇ ದಿನ ೬ ಮಂದಿ ಬಲಿ:
  ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಒಂದೇ ದಿನ ಕೊರೋನಾ ಸೋಂಕಿಗೆ ೬ ಮಂದಿ ಬಲಿಯಾಗಿದ್ದಾರೆ.
     ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸೋಂಕಿಗೆ ಬಲಿಯಾಗಿದ್ದು, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಶ್ರೀನಿವಾಸ್ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕಲ್ಲಿಹಾಳ್ ಶಕ್ತಿ ಕೇಂದ್ರದ ಪ್ರಮುಖರಾಗಿದ್ದರು. ಇವರ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
     ಉಳಿದಂತೆ ಗ್ರಾಮೀಣ ಭಾಗದ ಅರೆಬಿಳಚಿ ಒಂದೇ ಗ್ರಾಮದಲ್ಲಿ ೩ ಮಂದಿ ಬಲಿಯಾಗಿದ್ದು, ನಗರ ಪ್ರದೇಶದ ಜನ್ನಾಪುರ ಹಾಗು ಉಜ್ಜನಿಪುರದಲ್ಲಿ ತಲಾ ಓರ್ವ ಸೋಂಕಿಗೆ ಬಲಿಯಾಗಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ ನಿಧನ

ಎಂ.ಎಸ್ ಮುರುಳಿಧರ
   ಭದ್ರಾವತಿ, ಮೇ. ೧೦: ನಗರದ ರಂಗಪ್ಪ ವೃತ್ತ ಸರ್ಕಲ್ ಸ್ವೀಟ್ಸ್ ಮಾಲೀಕ, ಕಾಂಗ್ರೆಸ್ ಮುಖಂಡ ಎಂ.ಎಸ್ ಮುರುಳಿಧರ(೪೫) ಅನಾರೋಗ್ಯದಿಂದ ನಿಧನ ಹೊಂದಿದರು.
   ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮುರುಳಿಧರ್ ಕೆಲವು ವರ್ಷಗಳಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸರ್ಕಲ್ ಸ್ವೀಟ್ಸ್ ಹೆಸರಿನಲ್ಲಿಯೇ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಕೋವಿಡ್ ಆಸ್ಪತ್ರೆ ಬಳಕೆಗೆ ಎಂಪಿಎಂ ಕಲ್ಯಾಣ ಮಂಟಪ : ೧೦೦ ಹಾಸಿಗೆ ವ್ಯವಸ್ಥೆ

ಕ್ಷೇತ್ರದ ಜನರ ಆರೋಗ್ಯ ಮುಖ್ಯ, ಎಷ್ಟೇ ಹಣ ಖರ್ಚಾದರೂ ವೈಯಕ್ತಿಕವಾಗಿ ನೀಡಲು ಬದ್ಧ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ಕಾಗದ ಎಂಪಿಎಂ ಕಲ್ಯಾಣ ಮಂಟಪವನ್ನು ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆಯನ್ನಾಗಿ ರೂಪಿಸಲಾಗಿದ್ದು, ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸೇವೆಗೆ ಸಮರ್ಪಿಸಿದರು.
    ಭದ್ರಾವತಿ, ಮೇ. ೧೦: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಕಾಳಜಿವಹಿಸಿ ಪ್ರಸ್ತುತ ಎಂಪಿಎಂ ಕಲ್ಯಾಣ ಮಂಟಪವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಜೊತೆಗೆ ಉಚಿತವಾಗಿ ೪ ಅಂಬ್ಯುಲೆನ್ಸ್‌ಗಳನ್ನು ಸಹ ಸಮರ್ಪಿಸಲಾಗುತ್ತಿದೆ. ಇನ್ನು ಹೆಚ್ಚಿನ ಅವಶ್ಯಕತೆಗಳಿದ್ದಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಲು ಬದ್ಧ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಅವರು ಸೋಮವಾರ ಎಂಪಿಎಂ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
      ಕಳೆದ ೩ ದಿನಗಳ ಹಿಂದೆ ನಡೆದ ಪೂರ್ವಭಾವಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಶಾಸಕರ ನಿಧಿಯಿಂದ ೧ ಕೋ.ರು ಅನುದಾನ ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಅದರಂತೆ ಪ್ರಸ್ತುತ ಎಂಪಿಎಂ ಕಲ್ಯಾಣ ಮಂಟಪವನ್ನು ೧೦೦ ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅಗತ್ಯವಿರುವ ಮಂಚ ಹಾಗು ಹಾಸಿಗೆಗಳನ್ನು ಖರೀದಿಸಲಾಗಿದೆ. ಇನ್ನೂ ಹೆಚ್ಚಿನ ಹಾಸಿಗೆಗಳ ಅವಶ್ಯಕತೆಗಳು ಕಂಡು ಬಂದಲ್ಲಿ ಇಲ್ಲಿಯೇ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
    ಸೋಂಕಿತರಿಗಾಗಿ ೨ ಅಂಬ್ಯುಲೆನ್ಸ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಇದರ ಜೊತೆಗೆ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಲಾ ಒಂದೊಂದು ಅಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ಒಟ್ಟು ೪ ಅಂಬ್ಯುಲೆನ್ಸ್‌ಗಳು ಸೇವೆಗೆ ಲಭ್ಯವಾಗಿವೆ.
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರಿಗೆ ಆಕ್ಸಿಜನ್, ವೆಂಟಿಲೇಟರ್ ಒಳಗೊಂಡಂತೆ ೫೦ ಹಾಸಿಗೆಗಳನ್ನು ಹಾಗು ಸಣ್ಣ ಪ್ರಮಾಣದಲ್ಲಿ ಸೋಂಕು ಹೊಂದಿರುವವರಿಗೆ ಪ್ರತ್ಯೇಕವಾಗಿ ೫೦ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳ ನಡುವೆ ಇನ್ನೂ ಹೆಚ್ಚಿನ ನೆರವು ಕಂಡುಬಂದಲ್ಲಿ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಎಷ್ಟೇ ಹಣ ಖರ್ಚಾದರೂ ವೈಯಕ್ತಿಕವಾಗಿ ನೀಡಲು ಬದ್ಧವಾಗಿದ್ದೇನೆ. ಹಣಕ್ಕಿಂತ ಕ್ಷೇತ್ರದ ಜನರ ಆರೋಗ್ಯ ಮುಖ್ಯ ಎಂದರು.
        ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಸಮಾಜ ಕಲ್ಯಾಣಾಧಿಕಾರಿ ಎನ್. ಕೃಷ್ಣಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಎಂಪಿಎಂ ಅಧಿಕಾರಿ ಸತೀಶ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಕುಂಚ ಕಲಾವಿದ ಬಿ. ಗುರು, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಕೋವಿಡ್-೧೯ ಸೋಂಕಿತರಿಗಾಗಿ ಉಚಿತವಾಗಿ ಕಲ್ಪಿಸಲಾಗಿರುವ ೪ ಅಂಬ್ಯುಲೆನ್ಸ್‌ಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಚಾಲನೆ ನೀಡಿದರು.

Sunday, May 9, 2021

೨೬ ಮಂದಿಗೆ ಕೊರೋನಾ ಸೋಂಕು, ೪ ಬಲಿ

ಭದ್ರಾವತಿ, ಮೇ. ೯: ಕೊರೋನಾ ಸೋಂಕು ೨ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ತಾಲೂಕಿನಲ್ಲಿ ಭಾನುವಾರ ಒಟ್ಟು ೨೬ ಮಂದಿಗೆ ಸೋಂಕು ದೃಢಪಟ್ಟಿದೆ.
     ಒಟ್ಟು ೬೮ ಮಂದಿಯ ಗಂಟಲು ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೬ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ೪೨ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಭಾನುವಾರ ಒಂದೇ ದಿನ ೪ ಮಂದಿ ಸೋಂಕಿಗೆ ಬಲಿಯಾಗಿದ್ದು, ಇದುವರೆಗೂ ೪೪ ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಒಟ್ಟು ೫೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
         ಮೇ.೧೦ರಂದು ಕೋವಿಡ್ ಆಸ್ಪತ್ರೆ ಉದ್ಘಾಟನೆ:
   ೧೦೦ ಹಾಸಿಗೆಯುಳ್ಳ ಹಳೇನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್-೧೯ ಆಸ್ಪತ್ರೆಯನ್ನಾಗಿ ರೂಪಿಸಲಾಗಿದ್ದು, ಮೇ.೧೦ರಂದು ಬೆಳಿಗ್ಗೆ ೧೨ ಗಂಟೆಗೆ ಉದ್ಘಾಟನೆ ನಡೆಯಲಿದೆ.
ಈಗಾಗಲೇ ಕೊರೋನಾ ಸೋಂಕಿನ ಲಕ್ಷಣವಿರುವವರಿಗೆ ನಿಗಾ ವಹಿಸಲು ಹಾಗು ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ನ್ಯಾಯಬೆಲೆ ಅಂಗಡಿ ಮಾಲೀಕ ಪುಟ್ಟೇಗೌಡ ನಿಧನ

ಪುಟ್ಟೇಗೌಡ
   ಭದ್ರಾವತಿ, ಮೇ. ೯: ಪಡಿತರ ನ್ಯಾಯಬೆಲೆ ಅಂಗಡಿ ಮಾಲೀಕ ಪುಟ್ಟೇಗೌಡ(೫೬) ಅನಾರೋಗ್ಯದಿಂದ ನಿಧನ ಹೊಂದಿದರು.
  ಪತ್ನಿ, ಓರ್ವ ಪುತ್ರನನ್ನು ಹೊಂದಿದ್ದರು. ಜೆಪಿಎಸ್ ಕಾಲೋನಿಯಲ್ಲಿ ಪಡಿತರ ನ್ಯಾಯಬೆಲೆ ಅಂಗಡಿ ಹೊಂದಿದ್ದ ಪುಟ್ಟೇಗೌಡರು ಚಿರಪರಿಚಿತರಾಗಿದ್ದರು.  
    ಇವರ ನಿಧನಕ್ಕೆ ರಾಜ್ಯ ಪಡಿತರ ವಿತರಕರ ಸಂಘದ ಸಹ ಕಾರ್ಯದರ್ಶಿ ಸಿದ್ದಲಿಂಗಯ್ಯ,  ತಾಲೂಕು ಅಧ್ಯಕ್ಷ ಎಸ್.ಆರ್ ನಾಗರಾಜ್ ಹಾಗು ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಪಿಡಬ್ಲ್ಯೂಡಿ ನೌಕರ ಕೃಷ್ಣ ಕೊರೋನಾ ಸೋಂಕಿಗೆ ಬಲಿ

    
ಕೃಷ್ಣ
   ಭದ್ರಾವತಿ, ಮೇ. ೯: ಲೋಕೋಪಯೋಗಿ ಇಲಾಖೆ ಡಿ ಗ್ರೂಪ್ ನೌಕರರಾಗಿ ಶಿಕಾರಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಹುಣಸೇಕಟ್ಟೆ ಗ್ರಾಮದ ನಿವಾಸಿ ಕೃಷ್ಣ(೩೯) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
   ಪತ್ನಿ, ಓರ್ವ ಪುತ್ರಿ ಹಾಗು ಓರ್ವ ಪುತ್ರನನ್ನು ಹೊಂದಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು ೧೫ ವರ್ಷ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ಕಳೆದ ೨ ವರ್ಷಗಳ ಹಿಂದೆ ಕಾಯಂಗೊಂಡಿದ್ದರು. ಇವರ ನಿಧನಕ್ಕೆ ಹುಣಸೇಕಟ್ಟೆ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.  

ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಾಯುಕ್ತರ ವರ್ಗಾವಣೆ ರದ್ದುಗೊಳಿಸಿ

ಮುಖ್ಯಮಂತ್ರಿಗಳಿಗೆ  ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನವಿ


ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾನುವಾರ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮೇ. ೯: ಮುಂದಿನ ಎರಡು ವರ್ಷಗಳಲ್ಲಿ  ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ಅವರ ವರ್ಗಾವಣೆಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಸುಮಾರು ೨೫ ವರ್ಷಗಳಿಂದ ಅಭಿವೃದ್ಧಿ ಕಾಣದ ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮನೋಹರ್ ಹೆಚ್ಚಿನ ಶ್ರಮ ವಹಿಸಿದ್ದಾರೆ. ತಾಲೂಕು ಆಡಳಿತದ ಸಹಕಾರದೊಂದಿಗೆ ಸುಮಾರು ೭೦ ಕೆರೆಗಳ ಬೌಂಡರಿ ನಿಗದಿಪಡಿಸಿ ಒತ್ತುವರಿ ತೆರವುಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸ್ಥಳೀಯ ರೈತರು, ದಾನಿಗಳ ಸಹಕಾರದೊಂದಿಗೆ ಕೆರೆಗಳ ಹೂಳು ತೆಗೆಯುವ ಕಾರ್ಯ ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ೩ನೇ ಹಂತದ ಕುಡಿಯುವ ನೀರಿನ ಯೋಜನೆ ಹಾಗು ೩ನೇ ಹಂತದ ಒಳಚರಂಡಿ ಕಾಮಗಾರಿ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
   ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಜೀವದ ಹಂಗನ್ನು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ೨ನೇ ಅಲೆ ನಿರ್ಮೂಲನೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳ ಹಕ್ಕುಪತ್ರಗಳಿಗೆ ಖಾತೆ ಮಾಡಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿರುವ  ವಸತಿ ರಹಿತರಿಗೆ ಜಿ+೩ ಮಾದರಿ ೪೦೦೦ ಮನೆಗಳನ್ನು ನಿರ್ಮಿಸಿಕೊಡಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಜನಸ್ಪಂದಕ ಅಧಿಕಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂದಿನ ೨ ವರ್ಷಗಳಲ್ಲಿ ಭದ್ರಾವತಿ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ.
    ಪೌರಾಯುಕ್ತರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದು ನಗರದ ಜನತೆಯನ್ನು ದಿಗ್ಭ್ರಮೆಗೊಳಿಸಿದೆ. ವಿವಿಧ ಸಂಘ-ಸಂಸ್ಥೆಗಳು ಹಾಗು ಸ್ಥಳೀಯರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಪೌರಾಯುಕ್ತರ ವರ್ಗಾವಣೆಯನ್ನು ರದ್ದುಗೊಳಿಸಬೇಕು. ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಮತ್ತು ಆಯನೂರು ಮಂಜುನಾಥ್‌ರವರು ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಮುಖಂಡರಾದ ವಿಶ್ವೇಶ್ವರರಾವ್ ಗಾಯಕ್‌ವಾಡ್, ಜಗದೀಶ್ ಪಟೇಲ್, ಗಿರಿ ನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.