೧೦೦ ಹಾಸಿಗೆಯುಳ್ಳ ಆರೈಕೆ ಕೇಂದ್ರ ಮೇ.೧೪ ರಿಂದ ಕಾರ್ಯಾರಂಭ
ಕಳೆದ ೪ ದಿನಗಳ ಹಿಂದೆ ಭದ್ರಾವತಿ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ
ಭದ್ರಾವತಿ, ಮೇ. ೧೩: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ೪ ದಿನ ಕಳೆದಿದ್ದು, ಈ ನಡುವೆ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ ೨೭೭ ಸೋಂಕು ಪತ್ತೆಯಾಗಿದೆ.
ಸೋಂಕಿನ ಪ್ರಮಾಣ ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ೪ ದಿನಗಳಿಂದ ಏರಿಕೆ ಹಂತದಲ್ಲಿಯೇ ಸಾಗುತ್ತಿದೆ. ಒಟ್ಟು ೩೩೮ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೨೭೭ ಸೋಂಕು ದೃಢಪಟ್ಟಿದೆ. ಈ ನಡುವೆ ೭೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ೪ ಜನ ಬಲಿಯಾಗಿದ್ದಾರೆ.
ಇದುವರೆಗೂ ಒಟ್ಟು ೫೮ ಮಂದಿ ಮೃತಪಟ್ಟಿದ್ದು, ೨೮೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್ ತೆರವುಗೊಳಿಸಲಾಗಿದೆ.
ಆರೈಕೆ ಕೇಂದ್ರ ಖಾಲಿ:
ಕಳೆದ ೪ ದಿನಗಳ ಹಿಂದೆ ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ೧೦೦ ಹಾಸಿಗೆಯುಳ್ಳ ಕೋವಿಡ್ ಆರೈಕೆ ಕೇಂದ್ರ ಇನ್ನೂ ಕಾರ್ಯಾರಂಭಗೊಂಡಿಲ್ಲ. ಪ್ರಸ್ತುತ ವಿಐಎಸ್‌ಎಲ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ೧೨ ಮಂದಿ ಇದ್ದು, ಇವರನ್ನು ಶುಕ್ರವಾರ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ತಿಳಿಸಿದ್ದಾರೆ.