Tuesday, May 18, 2021

ವೀರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ


ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ, ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾದರು.
   ಭದ್ರಾವತಿ, ಮೇ. ೧೮: ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್ ಯಶೋಧರಯ್ಯ ಆಯ್ಕೆಯಾದರು.
  ಉಪಾಧ್ಯಕ್ಷರಾಗಿ ಎಂ. ವೆಂಕಟೇಶ್ ಆಯ್ಕೆಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ೧೧ ಸದಸ್ಯ ಸ್ಥಾನಗಳನ್ನು ಹೊಂದಿರುವ ವೀರಾಪುರ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಆಸಿಯಾ ಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದರು.

ಪತ್ರಕರ್ತರಿಗೆ ಕೋವಿಡ್ ಲಸಿಕೆ


ಭದ್ರಾವತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ಪತ್ರಕರ್ತರಿಗೆ ಕೋವಿಡ್ ಲಸಿಕೆ ನೀಡಲಾಯಿತು.
    ಭದ್ರಾವತಿ, ಮೇ. ೧೮: ರಾಜ್ಯ ಸರ್ಕಾರ ಪತ್ರಕರ್ತರನ್ನು ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಘೋಷಿಸಿದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ಮಂಗಳವಾರ ನೀಡಲಾಯಿತು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಹಳೇನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಸಿಕಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಗಣೇಶ್‌ರಾವ್ ಸಿಂಧ್ಯಾ ಅವರಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಹಿರಿಯ ಪತ್ರಕರ್ತ ಕಣ್ಣಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗು ಆರೋಗ್ಯ ಇಲಾಖೆ ಲಸಿಕಾ ತಂಡದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಬಜರಂಗದಳದಿಂದ ಕೋವಿಡ್ ಮೃತದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೆ

    ಭದ್ರಾವತಿ, ಮೇ. ೧೮: ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಸೇವಾ ಕಾರ್ಯದಲ್ಲಿ ವಿಶಿಷ್ಟತೆ ಕಾಯ್ದುಕೊಂಡಿರುವ ಬಜರಂಗದಳ ಇದೀಗ ಮೃತ ದೇಹಗಳನ್ನು ಆಸ್ಪತ್ರೆಯಿಂದ ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸುವ  ಕಾರ್ಯದಲ್ಲೂ ಮುಂದಾಗಿದೆ.
    ಕೊರೋನಾ ಸೋಂಕಿನಿಂದ ಮೃತಪಟ್ಟವರ ದೇಹಗಳನ್ನು ಶಿವಮೊಗ್ಗದಿಂದ ಭದ್ರಾವತಿಗೆ ಸಾಗಿಸಲು ಖಾಸಗಿ ಅಂಬ್ಯುಲೆನ್ಸ್‌ಗಳಲ್ಲಿ ಸುಮಾರು ೧೦ ರಿಂದ ೧೨ ಸಾವಿರ ರು. ಬಾಡಿಗೆ ಪಡೆಯುತ್ತಿದ್ದು, ಇದರಿಂದಾಗಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ವಿಚಾರ ಅರಿತುಕೊಂಡಿರುವ ಬಜರಂಗದಳ ಕಾರ್ಯಕರ್ತರು ಇದೀಗ ಮೃತ ದೇಹಗಳ ಸಾಗಾಣಿಕೆಗೆ ವಾಹನ ವ್ಯವಸ್ಥೇ ಕೈಗೊಂಡಿದೆ.
    ಬಡವರ್ಗದವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರಾಘವನ್ ವಡಿವೇಲು ಮೊ: ೭೦೧೯೭೮೮೪೮೫, ದೇವರಾಜ್ ಅರಳಿಹಳ್ಳಿ ಮೊ: ೯೬೩೨೩೧೯೫೫೫, ಸುನಿಲ್ ಮೊ: ೯೪೮೩೪೧೮೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.  

ಕೋವಿಡ್-೧೯ : ಶಂಕರ ಜಯಂತಿ ಸರಳ ಆಚರಣೆ

ಕೋವಿಡ್-೧೯ರ ಹಿನ್ನಲೆಯಲ್ಲಿ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶಂಕರ ಜಯಂತಿ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಮೇ. ೧೮: ಕೋವಿಡ್-೧೯ರ ಹಿನ್ನಲೆಯಲ್ಲಿ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಶಂಕರ ಜಯಂತಿ ಸರಳವಾಗಿ ಆಚರಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ಲೋಕಾಕಲ್ಯಾಣಾರ್ಥವಾಗಿ ಶ್ರೀ ಆದಿ ಶಂಕರಚಾರ್ಯರ ಭಾವಚಿತ್ರದೊಂದಿಗೆ ಉತ್ಸವ ನಡೆಸಿ ಪ್ರಾರ್ಥಿಸಲಾಯಿತು. 
        ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ವಿವಿಧ ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ತೊಂಡಿದ್ದರು.
    ಹೊಸಸೇತುವೆ ರಸ್ತೆಯ ಸಿದ್ದರೂಢನಗರದಲ್ಲಿರುವ ಶ್ರೀ ಶಂಕರ ಮಠದಲ್ಲಿ ಶ್ರೀ ಆದಿ ಶಂಕರಚಾರ್ಯರ ಶಿಲಾಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು. ಮಠದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


Monday, May 17, 2021

ದಿನಸಿ ಸಾಮಾಗ್ರಿ, ಕನಿಷ್ಠ ಕೂಲಿ ವೇತನ ಪಾವತಿಸಿ : ಎಷ್ಟು ದಿನವಾದರೂ ಲಾಕ್‌ಡೌನ್ ಜಾರಿಗೊಳಿಸಿ

ಕುವೆಂಪು ಪ್ರವಾಸಿ ವಾಹನ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜು


     ಡಿ. ರಾಜು
  ಭದ್ರಾವತಿ, ಮೇ. ೧೭: ರಾಜ್ಯಾದ್ಯಂತ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುವ ಮೂಲಕ ಹೆಚ್ಚಿನ ದುಷ್ಪರಿಣಾಮವನ್ನುಂಟು ಮಾಡುತ್ತಿದೆ. ಈ ನಡುವೆ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವುದು ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಬಡವರ ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಕೂಲಿ ವೇತನ ಪಾವತಿಸಬೇಕೆಂದು ನಗರದ ಕುವೆಂಪು ಪ್ರವಾಸಿ ವಾಹನ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜು ಆಗ್ರಹಿಸಿದ್ದಾರೆ.
.   ಸರ್ಕಾರ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿರುವುದು ಸರಿಯಲ್ಲ. ಲಾಕ್‌ಡೌನ್ ಪರಿಣಾಮದಿಂದಾಗಿ ಖಾಸಗಿ ಬಸ್, ಲಾರಿ, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ದಿನದ ಕೂಲಿ ನಂಬಿ ಬದುಕುತ್ತಿರುವವರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರುವುದು ಅನಿವಾರ್ಯವಾಗಿದೆ.
    ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನಿಂದ ಸಾಯುವವರಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕನಿಷ್ಠ ಕೂಲಿ ವೇತನವನ್ನು ಬ್ಯಾಂಕ್ ಖಾತೆಗಳಿಗೆ ಪಾವತಿಸುವ ಜೊತಗೆ ಅಗತ್ಯವಿರುವಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಿಸಬೇಕು. ಆ ನಂತರ ಎಷ್ಟು ದಿನವಾದರೂ ಲಾಕ್‌ಡೌನ್ ಜಾರಿಗೊಳಿಸಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದು ಡಿ. ರಾಜು ತಿಳಿಸಿದ್ದಾರೆ.

ಶಾಸಕರ ಕುಟುಂಬದಿಂದ ಗೋ ಶಾಲೆಗಳಿಗೆ ಉಚಿತ ಮೇವು


ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು ಗೋ ಶಾಲೆಗಳಿಗೆ ಉಚಿತ ಮೇವು ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
   ಭದ್ರಾವತಿ, ಮೇ. ೧೭: ಕೊರೋನಾ ಸಂಕಷ್ಟಕ್ಕೆ ಒಳಗಾಗಿರುವುದು ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಸಹ ಸಂಕಷ್ಟಕ್ಕೆ ಒಳಗಾಗಿವೆ. ಅವುಗಳ ನೆರವಿಗೂ ಮುಂದಾಗಬೇಕೆಂಬ ಮನೋಭಾವನೆಯೊಂದಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಗೋ ಶಾಲೆಗಳಿಗೆ ಉಚಿತ ಮೇವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ಶಾಸಕರ ಸಹೋದರ, ನಗರಸಭಾ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇಡೀ ಕುಟುಂಬ ಮೇವು ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಶಿವಮೊಗ್ಗ ಮಂಡೆಕೊಪ್ಪದಲ್ಲಿರುವ ಭಾನುಪ್ರಕಾಶ್‌ರವರ ಸುರಬಿ ಗೋ ಶಾಲೆಗೆ ೫ನೇ ಬಾರಿಗೆ ಮೇವು ಒದಗಿಸಲಾಗಿದೆ. 
    ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲೂ ಸಹ ಜಾನುವಾರುಗಳಿಗೆ ಅಗತ್ಯವಿರುವ ಮೇವು ಸಂಗ್ರಹಿಸಿ ಗೋ ಶಾಲೆಗಳಿಗೆ ವಿತರಿಸಲಾಗಿತ್ತು.


೬೨ಕ್ಕೆ ಇಳಿಕೆಯಾದ ಸೋಂಕಿತರ ಸಂಖ್ಯೆ


    
ಭದ್ರಾವತಿ, ಮೇ. ೧೭: ತಾಲೂಕಿನಲ್ಲಿ ಕೆಲವು ದಿನಗಳಿಂದ ೧೦೦ ರಿಂದ ೩೦೦ರ ಗಡಿವರೆಗೆ ತಲುಪಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ೬೨ಕ್ಕೆ ಬಂದು ತಲುಪಿದೆ.
   ಒಟ್ಟು ೫೬೮ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೬೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೨೦ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೩ ಮಂದಿ ಬಲಿಯಾಗಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ ೭೧ಕ್ಕೆ ಏರಿಕೆಯಾಗಿದ್ದು, ಒಟ್ಟು ೩೫೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.