Monday, May 17, 2021

ದಿನಸಿ ಸಾಮಾಗ್ರಿ, ಕನಿಷ್ಠ ಕೂಲಿ ವೇತನ ಪಾವತಿಸಿ : ಎಷ್ಟು ದಿನವಾದರೂ ಲಾಕ್‌ಡೌನ್ ಜಾರಿಗೊಳಿಸಿ

ಕುವೆಂಪು ಪ್ರವಾಸಿ ವಾಹನ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜು


     ಡಿ. ರಾಜು
  ಭದ್ರಾವತಿ, ಮೇ. ೧೭: ರಾಜ್ಯಾದ್ಯಂತ ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುವ ಮೂಲಕ ಹೆಚ್ಚಿನ ದುಷ್ಪರಿಣಾಮವನ್ನುಂಟು ಮಾಡುತ್ತಿದೆ. ಈ ನಡುವೆ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವುದು ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಬಡವರ ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಕೂಲಿ ವೇತನ ಪಾವತಿಸಬೇಕೆಂದು ನಗರದ ಕುವೆಂಪು ಪ್ರವಾಸಿ ವಾಹನ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಡಿ. ರಾಜು ಆಗ್ರಹಿಸಿದ್ದಾರೆ.
.   ಸರ್ಕಾರ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿರುವುದು ಸರಿಯಲ್ಲ. ಲಾಕ್‌ಡೌನ್ ಪರಿಣಾಮದಿಂದಾಗಿ ಖಾಸಗಿ ಬಸ್, ಲಾರಿ, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ದಿನದ ಕೂಲಿ ನಂಬಿ ಬದುಕುತ್ತಿರುವವರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರುವುದು ಅನಿವಾರ್ಯವಾಗಿದೆ.
    ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನಿಂದ ಸಾಯುವವರಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕನಿಷ್ಠ ಕೂಲಿ ವೇತನವನ್ನು ಬ್ಯಾಂಕ್ ಖಾತೆಗಳಿಗೆ ಪಾವತಿಸುವ ಜೊತಗೆ ಅಗತ್ಯವಿರುವಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಿಸಬೇಕು. ಆ ನಂತರ ಎಷ್ಟು ದಿನವಾದರೂ ಲಾಕ್‌ಡೌನ್ ಜಾರಿಗೊಳಿಸಲಿ ಇದಕ್ಕೆ ಸಂಪೂರ್ಣ ಸಹಕಾರ ನೀಡಲು ಬದ್ಧ ಎಂದು ಡಿ. ರಾಜು ತಿಳಿಸಿದ್ದಾರೆ.

No comments:

Post a Comment