Monday, May 17, 2021

ನಿರುದ್ಯೋಗಿಗಳಿಗೆ ಮಾದರಿಯಾದ ನೂತನ ನಗರಸಭಾ ಸದಸ್ಯ ಬಸವರಾಜ್

ಬದುಕಿನ ಕೈ ಹಿಡಿದ ಕುರಿ ಸಾಕಾಣಿಕೆ, ನರ್ಸರಿ ಫಾರಂ


ಭದ್ರಾವತಿ ನಗರಸಭೆ ೧೯ನೇ ವಾರ್ಡಿನ ನಗರಸಭಾ ಸದಸ್ಯ ಬಸವರಾಜ್ ಬಿ ಆನೇಕೊಪ್ಪ ತೋಟದಲ್ಲಿ ತೆಂಗಿನ ಕಾಯಿ ಕೀಳುತ್ತಿರುವುದು.

       * ಅನಂತಕುಮಾರ್
      ಭದ್ರಾವತಿ, ಮೇ. ೧೩: ನಗರದ ಎರಡು ಕಣ್ಣುಗಳಾದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ರೋಗಗ್ರಸ್ತ ಕಾರ್ಖಾನೆಗಳಾಗಿ ಉದ್ಯೋಗವಿಲ್ಲದೆ ಕಾರ್ಮಿಕರು ಬೀದಿ ಪಾಲಾಗಿರುವ ಸಂದರ್ಭದಲ್ಲಿ ಇಲ್ಲಿನ ಯುವ ಸಮುದಾಯಕ್ಕೆ ನೂತನ ನಗರಸಭಾ ಸದಸ್ಯ ಬಸವರಾಜ್ ಬಿ ಆನೇಕೊಪ್ಪ ಮಾದರಿಯಾಗಿದ್ದಾರೆ.
       ಒಂದು ಕಾಲದಲ್ಲಿ ಎಂಪಿಎಂ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ  ನಿರ್ವಹಿಸುತ್ತಿದ್ದ ಬಸವರಾಜ್ ಕಾರ್ಖಾನೆ ಸ್ಥಗಿತಗೊಂಡ ನಂತರ ಊರು ಬಿಡದೆ ಛಲಗಾರರಾಗಿ ಹೈನುಗಾರಿಕೆಯೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.  ಮೂಲತಃ ವಾಲ್ಮೀಕಿನಾಯಕ ಸಮುದಾಯಕ್ಕೆ ಸೇರಿರುವ ಬಸವರಾಜ್ ಕುಟುಂಬದೊಂದಿಗೆ ಆನೇಕೊಪ್ಪದಲ್ಲಿಯೇ ನೆಲೆಸಿದ್ದು, ಇವರ ಶ್ರಮದ ಬದುಕು ಜೀವನದ ದಿಕ್ಕನ್ನು ಬದಲಿಸಿದೆ.
     ಇವರು ಎಂಪಿಎಂ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದ ಸಂದರ್ಭದಲ್ಲಿ ತಿಂಗಳ ಸಂಬಳಕ್ಕಾಗಿ ಎದುರು ನೋಡುತ್ತಿದ್ದರು. ಕಾರ್ಖಾನೆ ಸ್ಥಗಿತಗೊಂಡ ನಂತರ ಕುರಿ ಸಾಕಾಣಿಕೆ ತರಬೇತಿ ಪಡೆದು ಸರ್ಕಾರದ ಆರ್ಥಿಕ ನೆರವಿನೊಂದಿಗೆ ತಮ್ಮ ತೋಟದಲ್ಲಿಯೇ ಕುರಿ ಶೆಡ್ ನಿರ್ಮಾಣ ಮಾಡಿ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇವರ ಹೆಚ್ಚಿನ ಪರಿಶ್ರಮದ ಫಲವಾಗಿ ಪ್ರಸ್ತುತ ಈ ಹೈನುಗಾರಿಕೆಯೇ ಇವರ ಬದುಕಿನ ಕೈ ಹಿಡಿದಿದೆ. ಇವರ ಬಳಿ ವಿವಿಧ ಜಾತಿಯ ತಳಿಗಳಿದ್ದು, ಹೆಚ್ಚಿನ ಆದಾಯ ತಂದು ಕೊಡುತ್ತಿವೆ.
     ಕೇವಲ ಕುರಿ ಸಾಗಾಣಿಕೆ ಮಾತ್ರವಲ್ಲದೆ ನರ್ಸರಿ ಫಾರಂ ಸಹ ನಿರ್ಮಿಸಿರುವ ಇವರು ಅಡಕೆ, ತೆಂಗು, ನಿಂಬೆ ಸೇರಿದಂತೆ ವಿವಿಧ ಸಸಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ತೋಟದಲ್ಲಿರುವ ಅಡಕೆ, ತೆಂಗು ಬೆಳೆ ಸಹ ಇವರಿಗೆ ಆದಾಯ ತಂದು ಕೊಡುತ್ತಿದೆ.
      ಕೇವಲ ತಾನು ಮಾತ್ರ ಬದುಕು ಕಟ್ಟಿಕೊಳ್ಳದೆ ಇತರರಿಗೂ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಇವರು ಭರವಸೆ ಮೂಡಿಸುತ್ತಿದ್ದಾರೆ. ಇವರ ಹೈನುಗಾರಿಕೆಯಿಂದ ಬೆರಗಾಗಿರುವ ಬಹಳಷ್ಟು ಮಂದಿ ಇವರ ಬಳಿ ಬರುತ್ತಿದ್ದು, ಕುರಿ ಸಾಗಾಣಿಕೆ ಹಾಗು ನರ್ಸರಿ ಫಾರಂ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಇವರ ದಾರಿಯಲ್ಲಿಯೇ ಸಾಗುವ  ಮೂಲಕ ಬದುಕು ರೂಪಿಸಿಕೊಂಡಿದ್ದಾರೆ.


ಭದ್ರಾವತಿ ನಗರಸಭೆ ೧೯ನೇ ವಾರ್ಡಿನ ನಗರಸಭಾ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಅವರು ಕುರಿ ಶೆಡ್ ನಿರ್ಮಿಸಿರುವುದು.
         ವಾರ್ಡ್ ನಂ.೧೯ರಿಂದ ನಗರಸಭೆಗೆ ಆಯ್ಕೆ:
   ಬಸವರಾಜ್ ಇತ್ತೀಚೆಗೆ ನಗರಸಭೆಗೆ ನಡೆದ ಚುನಾವಣೆಯಲ್ಲಿ ಬಹುತೇಕ ಎಂಪಿಎಂ ವಸತಿ ಗೃಹಗಳನ್ನು ಹಾಗು ಆನೇಕೊಪ್ಪ ಕೊಳಚೆಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೧೯ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
     ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡ ನಂತರ ಬಹಳಷ್ಟು ಕುಟುಂಬಗಳು ಊರು ತೊರೆದಿದ್ದು, ಶಿವಮೊಗ್ಗ, ತರೀಕೆರೆ ಸೇರಿದಂತೆ ಇತರೆಡೆ ನೆಲೆ ನಿಂತಿದ್ದಾರೆ. ಅತಿ ಕಡಿಮೆ ಮತದಾರರನ್ನು ಹೊಂದಿರುವ ವಾರ್ಡ್ ಇದಾಗಿದ್ದು,  ಪ್ರಸ್ತುತ ನೆಲೆ ನಿಂತಿರುವ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ಸಮಪರ್ಕವಾಗಿ ಕಲ್ಪಿಸಿಕೊಡುವ ಜೊತೆಗೆ ವಾರ್ಡ್ ಸರ್ವತೋಮುಖ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇವರು ಗಮನ ಹರಿಸಬೇಕಾಗಿದೆ.
     ಬಸವರಾಜ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಉಣ್ಣೆ ನಿಗಮದ ನಿರ್ದೇಶಕರೂ ಸಹ ಆಗಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಇಂದಿನ ಯುವ ಸಮುದಾಯಕ್ಕೆ ಈ ನೂತನ ನಗರಸಭಾ ಸದಸ್ಯ ಮಾದರಿ ಎಂದರೆ ತಪ್ಪಾಗಲಾರದು.

No comments:

Post a Comment