Monday, May 17, 2021

ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಕಾರ್ಯದಲ್ಲಿ ಬಜರಂಗದಳ ಕಾರ್ಯಕರ್ತರು

ಬಡ ಕುಟುಂಬಗಳಿಗೆ ಆತ್ಮಸ್ಥೈರ್ಯ, ಹಿಂದೂ ರುದ್ರಭೂಮಿಗೆ ಉಚಿತ ಸೌದೆ


ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪಾಲ್ಗೊಂಡಿರುವುದು.
      ಭದ್ರಾವತಿ, ಮೇ. ೧೭: ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆ ಜೊತೆಗೆ ವಿಭಿನ್ನ ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
     ಕೊರೋನಾ ಸೋಂಕಿನ ೨ನೇ ಅಲೆ ಪರಿಣಾಮದಿಂದಾಗಿ ಜನರ ಬದುಕು ತೀರ ಸಂಕಷ್ಟಕ್ಕೆ ಒಳಗಾಗಿದೆ. ಪ್ರತಿದಿನ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ಬಜರಂಗ ಇದೀಗ ವಿಶಿಷ್ಟ ರೀತಿಯ ಸೇವಾ ಕಾರ್ಯಕ್ಕೆ ಮುಂದಾಗಿದೆ.
    ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಬಜರಂಗದಳ ಕಾರ್ಯಕರ್ತರು ಯಾವುದನ್ನು ಲೆಕ್ಕಿಸದೆ ಹಲವು ದಿನಗಳಿಂದ ಸೋಂಕಿತರ ಪರವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿತರ ಬಡ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ.
    ಬಜರಂಗದಳ ಪ್ರಮುಖರಾದ ವಡಿವೇಲು, ಸುನಿಲ್‌ಕುಮಾರ್, ಕೃಷ್ಣ, ಶಿವಶಂಕರ್, ಅರಳಿಹಳ್ಳಿ ದೇವರಾಜ್, ಕಿರಣ್, ರಂಗನಾಥ್, ಅಜಿತ್, ಶ್ರೀಕಾಂತ್, ಸವಾಯಿ ಸಿಂಗ್, ಮಣಿಕಂಠ ಮತ್ತು ರಮೇಶ್ ಸೇರಿದಂತೆ ಸುಮಾರು ೧೦ ಮಂದಿ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದುವರೆಗೂ ಸುಮಾರು ೮ ಬಡ ಕುಟುಂಬಗಳ ಅಂತ್ಯಸಂಸ್ಕಾರ ಕಾರ್ಯಕ್ಕೆ ನೆರವಾಗಿದ್ದಾರೆ.
       ಹಿಂದೂ ರುದ್ರಭೂಮಿಗೆ ಸೌದೆ ವಿತರಣೆ:
    ಬಜರಂಗದಳ ಕಾರ್ಯಕರ್ತರು ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆಯನ್ನು ಸಹ ಒದಗಿಸಿಕೊಡುತ್ತಿದ್ದಾರೆ.
    ಇದುವರೆಗೂ ಸುಮಾರು ೧೦ ಟನ್ ಸೌದೆಯನ್ನು ದಾನಿಗಳಿಂದ ಸಂಗ್ರಹಿಸಿ ಹಿಂದೂ ಭೂಮಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌದೆ ಸಂಗ್ರಹಿಸಿ ಕೊಡುವ ಗುರಿ ಹೊಂದಿದ್ದಾರೆ. ಒಟ್ಟಾರೆ ವಿಶಿಷ್ಟ ಕಾರ್ಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.



ಭದ್ರಾವತಿ ಬಜರಂಗದಳ ಕಾರ್ಯಕರ್ತರು ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆಯನ್ನು ಒದಗಿಸಿಕೊಡುತ್ತಿದ್ದಾರೆ.


No comments:

Post a Comment