Thursday, May 20, 2021

ಕೊರೋನಾ ಸಂಕಷ್ಟದಲ್ಲಿಯೂ ಜನರ ಹಣ ಲೂಟಿ : ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
   ಭದ್ರಾವತಿ, ಮೇ. ೨೦: ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮಾನವೀಯತೆ ಎಂಬುದೇ ಗೊತ್ತಿಲ್ಲ. ಕೊರೋನಾ ಸಂಕಷ್ಟದಲ್ಲಿಯೂ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರ ಹಣ ಲೂಟಿ ಹೊಡೆಯುತ್ತಿದೆ. ಇಂತಹ ಸರ್ಕಾರ ಜನರಿಗೆ ಅಗತ್ಯವಿಲ್ಲ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
   ಅವರು ಗುರುವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕ ಕಛೇರಿ ಆವರಣದಲ್ಲಿ ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
   ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಏನೋ ಆಗಿಬಿಡುತ್ತದೆ ಎಂಬ ಭ್ರಮೆಯಲ್ಲಿ ಜನ ಮತವನ್ನು ಕೊಟ್ಟರು.  ಆದರೆ ಇದುವರೆಗೂ ಏನು ಆಗಿಲ್ಲ. ದೇಶದಲ್ಲಿ ೭೦ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಎಲ್ಲವನ್ನು ನೀಡಿದೆ. ಬಡವರು, ದೀನದಲಿತರು, ಕಟ್ಟಡ ಕಾರ್ಮಿಕರ ಪರವಾಗಿ ಸ್ಪಂದಿಸಿದೆ. ಮಲ್ಲಿಕಾರ್ಜುನಖರ್ಗೆಯವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹಲವಾರು ಬದಲಾವಣೆಗಳನ್ನು ತಂದು ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಇದೀಗ ಬಿಜೆಪಿ ಸರ್ಕಾರ ಬಂದ ಮೇಲೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವಿನಾಕಾರಣ ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು.
    ರಾಜ್ಯ ಸರ್ಕಾರ ಕಾರ್ಮಿಕರಿಗೆ ಕೇವಲ ೨,೦೦೦ ರು. ಪರಿಹಾರ ಘೋಷಣೆ ಮಾಡಿರುವುದು ಸರಿಯಲ್ಲ. ಕನಿಷ್ಠ ೧೦,೦೦೦ ರು. ಪರಿಹಾರ ನೀಡಬೇಕು. ಈ ಸಂಬಂಧ ಈಗಾಗಲೇ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯನವರು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದ್ದು, ಅಲ್ಲದೆ ಬಿಪಿಎಲ್ ಪಡಿತರ ಕುಟುಂಬಗಳಿಗೂ ೧೦,೦೦೦ ರು. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ ಎಂದರು.
      ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲ :
  ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಪ್ರತಿ ದಿನ ಸಾವಿರಾರು ಮಂದಿ ಸೋಂಕಿಗೆ ಒಳಗಾಗಿ ನರಳುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಪ್ರತಿ ದಿನ ೨೦ ರಿಂದ ೩೦ ಜನ ಸಾಯುತ್ತಿದ್ದಾರೆ.  ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಪ್ರಭಾವಿ ನಾಯಕರುಗಳಿದ್ದರೂ ಸಹ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.  
    ನೂತನ ನಗರಸಭಾ ಸದಸ್ಯರಾದ ಕೆ. ಸುದೀಪ್‌ಕುಮಾರ್, ಜಾರ್ಜ್ ಹಾಗು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ಮೇ.೨೨, ೨೩ ಎರಡು ದಿನ ಸಂಪೂರ್ಣ ಲಾಕ್‌ಡೌನ್

ಭದ್ರಾವತಿ, ಮೇ. ೨೦: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೇ.೨೨ ಮತ್ತು ೨೩ರಂದು ಎರಡು ದಿನ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
   ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮೇ.೧೯ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಪೂರ್ಣ ಲಾಕ್‌ಡೌನ್ ಈ ಹಿನ್ನಲೆಯಲ್ಲಿ ಹಾಲು ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಯಾವುದೇ ಅಂಗಡಿಮುಂಗಟ್ಟುಗಳು ತೆರೆಯುವಂತಿಲ್ಲ. ಅಲ್ಲದೆ ಅನಾವಶ್ಯಕವಾಗಿ ಜನ ಸಂಚಾರ ಸಹ ನಿಷೇಧಿಸಲಾಗಿದೆ. ಸಾರ್ವಜನಿಕರು ಮನೆಯಲ್ಲೇ ಇದ್ದು ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸುವಂತೆ ಕೋರಲಾಗಿದೆ.

ಕೊರೋನಾ ಸೋಂಕಿಗೆ ಒಳಗಾಗದವರಿಗೆ ಉಚಿತ ಔಷಧ ಸಾಮಾಗ್ರಿ ವಿತರಣೆ

ಕೊರೋನಾ ಸಂಕಷ್ಟದಿಂದ ಬಳಲುತ್ತಿರುವವರ ನೆರವಿಗೆ ಭದ್ರಾವತಿಯಲ್ಲಿ ಬಂಜಾರ ಸಮುದಾಯದವರು ಮುಂದಾಗಿದ್ದು, ಸೋಂಕಿತರಿಗೆ ಅಗತ್ಯವಿರುವ ಔಷಧ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
  ಭದ್ರಾವತಿ, ಮೇ. ೨೦: ಕೊರೋನಾ ಸಂಕಷ್ಟದಿಂದ ಬಳಲುತ್ತಿರುವವರ ನೆರವಿಗೆ ಬಂಜಾರ ಸಮುದಾಯದವರು ಮುಂದಾಗಿದ್ದು, ಸೋಂಕಿತರಿಗೆ ಅಗತ್ಯವಿರುವ ಔಷಧ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
   ಬಂಜಾರ ಸಮುದಾಯದ ಬಹುತೇಕ ತಾಂಡಗಳು ನಗರ ಪ್ರದೇಶಗಳಿಂದ ಹೊರಭಾಗದಲ್ಲಿದ್ದು, ತಾಂಡಗಳಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಗತ್ಯವಿರುವ ಔಷಧ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಯಿತು.
   ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ್, ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ್, ಪ್ರಮುಖರಾದ ಪ್ರವೀಣ್‌ಕುಮಾರ್, ನಾಗರಾಜನಾಯ್ಕ್, ಉಮಾಮಹೇಶ್ವರ, ಚಂದ್ರನಾಯ್ಕ್ ಸೇರಿದಂತೆ ಇನ್ನಿತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

Wednesday, May 19, 2021

ಹಿಂದಿ ಶಿಕ್ಷಕಿ ರೇಖಾ ನಾಗರಾಜ್ ನಿಧನ

ಹಿಂದಿ ಶಿಕ್ಷಕಿ ರೇಖಾ ನಾಗರಾಜ್
    ಭದ್ರಾವತಿ, ಡಿ. ೧೯: ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಿಂದಿ ಶಿಕ್ಷಕಿ ರೇಖಾ ನಾಗರಾಜ್(೪೨) ಬುಧವಾರ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
   ಪತಿ ಅರಳಿಹಳ್ಳಿ ಸರ್ಕಾರಿ ಶಾಲೆಯ ಹಿಂದಿ ಶಿಕ್ಷಕ ನಾಗರಾಜ್, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಇವರು ದಲಿತ ಸಂಘರ್ಷ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಶಿಕ್ಷಕ ವೃಂದದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಉಕ್ಕಿನ ನಗರದ ರಸ್ತೆಗಳಲ್ಲಿ ಬೆಳಿಗ್ಗೆ ೮ ಗಂಟೆ ನಂತರ ಯಾವುದೇ ವಾಹನಗಳು ಕಾಣಿಸಬಾರದು

ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ನೀವೇ ಹೊಣೆಗಾರರು  : ಸಚಿವ ಕೆ.ಎಸ್ ಈಶ್ವರಪ್ಪ


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
      ಭದ್ರಾವತಿ, ಮೇ. ೧೯: ಯಾವುದೇ ಕಾರಣಕ್ಕೂ ಒಂದೆಡೆ ಜನ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.
     ಅವರು ಬುಧವಾರ ಸಂಜೆ ನಗರಸಭೆ ಸಭಾಂಗಣದಲ್ಲಿ ಜರುಗಿದ ತುರ್ತು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಭದ್ರಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಹೆಚ್ಚಳವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದರು.
    ಭದ್ರಾವತಿಯಲ್ಲಿ ಪೊಲೀಸ್ ಇಲಾಖೆ ಇದೆಯೋ, ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕ್ರೈಗೊಳ್ಳುತ್ತಿಲ್ಲ. ಬಹುತೇಕ ರಸ್ತೆಗಳಲ್ಲಿ ಜನಸಂದಣಿ ಕಂಡು ಬರುತ್ತಿದೆ. ಎಷ್ಟು ವಾಹನಗಳನ್ನು ವಶಕ್ಕೆ ಪಡೆದಿದ್ದೀರಾ ಎಂಬುದೇ ಗೊತ್ತಿಲ್ಲ. ಸರ್ಕಾರ ಮದುವೆಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ. ಬಹುತೇಕ ಕಲ್ಯಾಣ ಮಂಟಪಗಳಲ್ಲಿ, ಸಮುದಾಯ ಭವನಗಳಲ್ಲಿ, ಮನೆಗಳಲ್ಲಿ ಮದುವೆಗಳು ನಡೆಯುತ್ತಿವೆ. ಜೊತೆಗೆ ಇನ್ನಿತರ ಶುಭ ಸಮಾರಂಭಗಳು ಜರುಗುತ್ತಿದ್ದು, ಒಂದೆಡೆ ಜನ ಸೇರುತ್ತಿದ್ದಾರೆ.  ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಲಾಕ್‌ಡೌನ್ ಎಂಬುದರ ಅರ್ಥವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸಚಿವರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ, ಇದುವರೆಗೂ ಮಾಸ್ಕ್ ಇಲ್ಲದ ೩೬೯೨ ಮಂದಿಗೆ ದಂಡ ವಿಧಿಸಲಾಗಿದೆ. ಉಳಿದಂತೆ ೭೪೫ ದ್ವಿಚಕ್ರ ವಾಹನ, ೧೧೧ ನಾಲ್ಕು ಚಕ್ರದ ವಾಹನ, ೯೨ ಆಟೋ ರಿಕ್ಷಾ ಸೇರಿದಂತೆ ಒಟ್ಟು ೯೪೮ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
    ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಬೆಳಗಿನ ಸಮಯದಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ನಮ್ಮ ನಿವಾಸದ ಸಮೀಪದಲ್ಲಿರುವ ಮಾರುಕಟ್ಟೆಯಲ್ಲಿಯೇ ನೂರಾರು ಜನರು ಸೇರುತ್ತಿದ್ದಾರೆ. ಎಲ್ಲಿಯವರೆಗೂ ಜನ ಸೇರುವುದಿಲ್ಲ ಅಲ್ಲಿಯ ವರೆಗೂ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ನಗರಸಭೆ ಸದಸ್ಯರೊಂದಿಗೆ ಈಗಾಗಲೇ ಈ ವಿಚಾರ ಚರ್ಚಿಸಲಾಗಿದೆ. ಬಹುತೇಕ ಸದಸ್ಯರು ೪ ದಿನ ಕಟ್ಟುನಿಟ್ಟಾಗಿ ಲಾಕ್‌ಡೌನ್ ಮಾಡುವಂತೆ ಆಗ್ರಹಿಸುತ್ತಿದ್ದಾರೆಂದರು.
    ಸಚಿವರು ಮಾತನಾಡಿ, ಯಾವುದೇ ಕಾರಣಕ್ಕೂ ಜನ ಸೇರಬಾರದು. ಪೊಲೀಸ್ ಇಲಾಖೆ ಮುಲ್ಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆ ೫ ರಿಂದ ೮ ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಬೇಕು. ಆ ನಂತರ ರಸ್ತೆಯಲ್ಲಿ ಯಾವುದೇ ವಾಹನ ಕಾಣಿಸಬಾರದು. ವಾಹನಗಳು ಕಂಡು ಬಂದಲ್ಲಿ ವಶಕ್ಕೆ ಪಡೆಯುವುದು. ಮೇ.೨೪ರ ವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಆ ನಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಮುಂದುವರೆಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಚರ್ಚೆ ನಡೆಸೋಣ ಎಂದರು.
   ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೈಗೊಂಡಿರುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಇಲ್ಲಿಯೂ ಕೈಗೊಳ್ಳಬೇಕೆಂಬ ಉದ್ದೇಶವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
   ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ  ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹಾಗು ನೂತನ ನಗರಸಭಾ ಸದಸ್ಯರು ಮತ್ತು ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಜನ್ನಾಪುರ ಕೆ.ಸಿ ಬ್ಲಾಕ್ ವೃತ್ತದ ಕಾಮಗಾರಿ ಕೈಗೊಳ್ಳಲು ಸ್ಥಳೀಯರಿಂದ ಆಗ್ರಹ

ಭದ್ರಾವತಿ ಜನ್ನಾಪುರ ಕಿತ್ತೂರುರಾಣಿ ಚೆನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ಮುಖ್ಯ ರಸ್ತೆಯಲ್ಲಿ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದೆ ಇರುವುದು.
    ಭದ್ರಾವತಿ, ಮೇ. ೧೯: ಜನ್ನಾಪುರ ಕಿತ್ತೂರುರಾಣಿ ಚೆನ್ನಮ್ಮ ಬಡಾವಣೆ (ಕೆ.ಸಿ ಬ್ಲಾಕ್) ಮುಖ್ಯ ರಸ್ತೆಯಲ್ಲಿ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುವಂತೆ ಸ್ಥಳೀಯರು ದೂರಿದ್ದಾರೆ.
     ಸುಮಾರು ೨ ತಿಂಗಳ ಹಿಂದೆಯೇ ಬಡಾವಣೆಯಲ್ಲಿರುವ ಮುಖ್ಯ ರಸ್ತೆಯ ಕಾಂಕ್ರಿಟ್ ಕಾಮಗಾರಿ ಮುಕ್ತಾಯಗೊಂಡಿದ್ದು, ಆದರೆ ರಸ್ತೆ ಕೊನೆಯ ಭಾಗದ ವೃತ್ತದಲ್ಲಿ ಕಾಮಗಾರಿ ಕೈಗೊಂಡಿಲ್ಲ. ಈ ಕುರಿತು ಹಲವು ಬಾರಿ ನಗರಸಭೆ ಪೌರಾಯುಕ್ತರಿಗೆ ಹಾಗು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಕೆ.ಸಿ ಬ್ಲಾಕ್, ಹಾಲಪ್ಪ ಶೆಡ್, ವಿದ್ಯಾಮಂದಿರ ಹಾಗು ಜನ್ನಾಪುರ ಕೆರೆ ಮಾರ್ಗವಾಗಿ ಸಂಪರ್ಕಿಸುವ ರಸ್ತೆಗೆ ಈ ವೃತ್ತ ಹೊಂದಿಕೊಂಡಿದೆ. ಪ್ರತಿದಿನ ನೂರಾರು ವಾಹನ ಸವಾರರು ಸಂಚರಿಸುತ್ತಾರೆ. ಇದರಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.

Tuesday, May 18, 2021

ಎಚ್.ಸಿ ಸಿದ್ರಾಮಪ್ಪ ನಿಧನ


ಎಚ್.ಸಿ ಸಿದ್ರಾಮಪ್ಪ
   ಭದ್ರಾವತಿ, ಮೇ. ೧೮: ನಗರದ ನ್ಯೂಟೌನ್ ಬಿಪಿಎಲ್ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಜಗದೀಶ್ ಅವರ ಚಿಕ್ಕಪ್ಪ ಎಚ್.ಸಿ ಸಿದ್ರಾಮಪ್ಪ(೬೯) ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ ಆರ್. ನಾಗರತ್ನಮ್ಮ, ಒಂದು ಗಂಡು, ಒಂದು ಹೆಣ್ಣು ಮಕ್ಕಳು, ಸಹೋದರ ಎಚ್.ಸಿ ಬೇಲೂರಪ್ಪ ಅವರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ಬಿಪಿಎಲ್ ಸಂಘ ಹಾಗು ಜಯಕರ್ನಾಟಕ ಸಂಘಟನೆ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.