Saturday, May 22, 2021

ಕೊರೋನಾ ನಿರ್ಮೂಲನೆ ಕುರಿತು ಜಾಗೃತಿ ಮೂಡಿಸುವುದೇ ದೇಶ ಸೇವೆ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಕೋವಿಡ್ ಸಂಬಂಧಿಗಳ ಅನುಕೂಲಕ್ಕಾಗಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ತೆರೆಯಲಾಗಿರುವ ತಂಗುದಾಣ ಹಾಗು ಕೋವಿಡ್ ಸುರಕ್ಷಾ ಪಡೆ ಮತ್ತು ಕೋವಿಡ್ ಸೋಂಕಿತರ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಚಾಲನೆ  ನೀಡಿದರು.
  ಭದ್ರಾವತಿ, ಮೇ. ೨೨: ಇಂದು ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದಲ್ಲಿ ಜನರಿಗೆ ಕೊರೋನಾ ಹರಡದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಕಾರ್ಯಪ್ರವೃತ್ತವಾಗಿದ್ದು, ಜಾಗೃತಿ ಮೂಡಿಸುವುದೇ ದೇಶ ಸೇವೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
   ಅವರು ಶನಿವಾರ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಕೋವಿಡ್ ಸಂಬಂಧಿಗಳ ಅನುಕೂಲಕ್ಕಾಗಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ತೆರೆಯಲಾಗಿರುವ ತಂಗುದಾಣ ಹಾಗು ಕೋವಿಡ್ ಸುರಕ್ಷಾ ಪಡೆ ಮತ್ತು ಕೋವಿಡ್ ಸೋಂಕಿತರ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆಗೆ ಚಾಲನೆ  ನೀಡಿ ಮಾತನಾಡಿದರು.
   ಪ್ರಸ್ತುತ ಸಮಾಜದಲ್ಲಿ ಜಾಗೃತಿ ಎಂಬುದರ ಅರ್ಥವೇ ಕಳೆದುಹೋಗಿದೆ. ನಾನು, ನನ್ನ ಕುಟುಂಬದವರು, ನನ್ನ ಅಕ್ಕಪಕ್ಕದವರು ಮತ್ತು ನನ್ನ ಸಮಾಜ ಕೊರೋನಾದಿಂದ ಮುಕ್ತವಾಗಬೇಕೆಂಬ ಜಾಗೃತ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು. ಆಗ ಮಾತ್ರ ಕೊರೋನಾ ನಿರ್ಮೂಲನೆ ಸಾಧ್ಯ ಎಂದರು.
   ಕೊರೋನಾ ಹರಡದಂತೆ ಎಚ್ಚರವಹಿಸುವುದು, ಒಂದು ವೇಳೆ ಕೊರೋನಾ ಕಾಣಿಸಿಕೊಂಡಲ್ಲಿ ಅನುಸರಿಸಬೇಕಾದ ಕ್ರಮಗಳು, ಸೋಂಕಿತರಿಗೆ ಹಾಗು ಅವರ ಕುಟುಂಬಸ್ಥರಿಗೆ ನೆರವಾಗುವ ಬಗೆ ಎಲ್ಲವನ್ನು ಅರಿತು ತಾಲೂಕು ಬಿಜೆಪಿ ಮಂಡಲ ಸೇವಾ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
         ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ:
     ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ೪ ದಿನಗಳ ಹಿಂದೆ ನಡೆಸಿದ ಸಭೆಯ ಫಲವಾಗಿ ತಾಲೂಕು ಆಡಳಿತ ಹಾಗು ನಗರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸೋಂಕಿನ ಪ್ರಕರಣಗಳು ಕಡಿಮೆಯಾಗುವವರೆಗೂ ಇದೆ ರೀತಿ ಬಿಗಿಯಾದ ಕ್ರಮ ಅನುಸರಿಸಬೇಕೆಂದರು.  
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ,  ಇಂತಹ ಸಂಕಷ್ಟ ಸಮಯದಲ್ಲೂ ಜನಪ್ರತಿನಿಧಿಗಳು ಮನೆಯಲ್ಲಿರದೆ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರುಗಳು ಸಹ ತಮ್ಮ ಕೈಲಾದ ಸೇವೆಯನ್ನು ಕೈಗೊಳ್ಳುತ್ತಿದ್ದಾರೆ. ಸೇವಾ ಕಾರ್ಯದಲ್ಲಿ ಬಿಜೆಪಿ ತಾಲೂಕು ಮಂಡಲ ಇಂದು ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
            ಬಜರಂಗದಳ ಕಾರ್ಯಕರ್ತರ ಸೇವೆಗೆ ಮೆಚ್ಚುಗೆ :
  ಇಲ್ಲಿನ ಬಜರಂಗದಳ ಕಾರ್ಯಕರ್ತರು ವಿಶೇಷವಾಗಿ ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ವಾಹನವೊಂದನ್ನು ಬಾಡಿಗೆಗೆ ಪಡೆದು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಇದುವರೆಗೂ ಕೊರೋನಾ ಸೋಂಕಿನಿಂದ ಹಾಗು ಇನ್ನಿತರ ಕಾರಣಗಳಿಂದ ಮೃತಪಟ್ಟ ಸುಮಾರು ೧೮ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇವರ ಕಾರ್ಯಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಇವರು ಸಹ ತಮ್ಮ ಆರೋಗ್ಯದ  ಕಡೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.  
         ಬ್ಲಾಕ್ ಪಂಗಸ್ ಆತಂಕ:
     ವಿಷಾದಕರ ಸಂಗತಿ ಎಂದರೆ ಕೊರೋನಾ ನಿರ್ಮೂಲನೆಗಾಗಿ ನಡೆಸುವ ಹೋರಾಟಗಳ ನಡುವೆ ಇದೀಗ ಬ್ಲಾಕ್ ಫಂಗಸ್ ಎಂಬ ಕಾಯಿಲೆ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.  ಈ ಕಾಯಿಲೆ ಜಿಲ್ಲೆಯಲ್ಲೂ ಕಂಡು ಬಂದಿದ್ದು, ಇದಕ್ಕೆ ರೋಗಿಯ ತೂಕದ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗಿರುತ್ತದೆ. ಇದಕ್ಕೆ ಲಕ್ಷಾಂತರ ರು. ವ್ಯಯವಾಗಲಿದೆ. ಈ ರೋಗಕ್ಕೆ ಒಳಗಾದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
   ಸೇವಾಕಾರ್ಯಕ್ಕೆ ನೆರವಾಗಿರುವ ಜೈನ್ ಸಮಾಜದ ಮುಖಂಡ ಅಶೋಕ್ ಜೈನ್ ಹಾಗು ಹೊಳೆಹೊನ್ನೂರಿನ ರಾಜಾರಾವ್ ಅವರನ್ನು ಸಚಿವ ಕೆ.ಎಸ್ ಈಶ್ವರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ಅಭಿನಂದಿಸಿದರು.
     ಪ್ರಮುಖರಾದ ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಶ್ರೀನಾಥ್, ಸೂಡಾ ಸದಸ್ಯ ವಿ.ಕದಿರೇಶ್, ಎಸ್. ದತ್ತಾತ್ರಿ, ಎಂ. ಮಂಜುನಾಥ್, ರಾಜು ರೇವಣ್‌ಕರ್, ನಾರಾಯಣಪ್ಪ, ಅರಳಿಹಳ್ಳಿ ಪ್ರಕಾಶ್, ಚನ್ನೇಶ್, ಶಶಿಕಲಾ, ಅನುಪಮಾ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.


Friday, May 21, 2021

ಭದ್ರಾವತಿಯಲ್ಲಿ ಕೊರೋನಾ ಸೋಂಕಿಗೆ ೭ ಬಲಿ, ೧೮೨ ಮಂದಿಗೆ ಸೋಂಕು

ಭದ್ರಾವತಿ, ಮೇ. ೨೧: ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸದ್ಯಕ್ಕೆ ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಶುಕ್ರವಾರ ಒಟ್ಟು ೧೮೨ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ೭ ಮಂದಿ ಬಲಿಯಾಗಿದ್ದಾರೆ.
   ಒಟ್ಟು ೪೧೪ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೮೨ ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಪುನಃ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೇವಲ ೬೨ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದುವರೆಗೂ ಒಟ್ಟು ೮೮ ಮಂದಿ ಮೃತಪಟ್ಟಿದ್ದಾರೆ.  ಒಟ್ಟು ೪೮೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ತಾಲೂಕಿನಲ್ಲಿ ಒಟ್ಟು ೪೯ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
          ೨೨ರಂದು ಕೋವಿಡ್ ಸಂಬಂಧಿಗಳ ತಂಗುದಾಣ ಉದ್ಘಾಟನೆ :
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಕಟ್ಟಡದಲ್ಲಿ ಕೋವಿಡ್ ಸಂಬಂಧಿಗಳ ಅನುಕೂಲಕ್ಕಾಗಿ ಬಿಜೆಪಿ ಪಕ್ಷದವತಿಯಿಂದ ತೆರೆಯಲಾಗಿರುವ ತಂಗುದಾಣದ ಉದ್ಘಾಟನೆ ಮೇ.೨೨ರಂದು ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ. ಸಂಸದ ಬಿ.ವೈ ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಲಾಕ್ ಡೌನ್ ಗೆ ಸಹಕರಿಸಲು ಸಂಗಮೇಶ್ವರ ಮನವಿ

ಸಿಐಟಿಯು ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ

ಏಕಾಂಗಿ ಹೋರಾಟದ ಮೂಲಕ ಗಮನ ಸೆಳೆದ ಜಿಲ್ಲಾ ಪ್ರಧಾನ ಕರ್ಯದರ್ಶಿ ಎಂ. ನಾರಾಯಣ


ಭದ್ರಾವತಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
    ಭದ್ರಾವತಿ, ಮೇ. ೨೧: ಕೊರೋನಾ ಸೋಂಕು ೨ನೇ ಅಲೆ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ತಕ್ಷಣ ಎಲ್ಲರಿಗೂ ಉಚಿತ ಲಸಿಕೆ ನೀಡುವ ಜೊತೆಗೆ ಲಾಕ್‌ಡೌನ್ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರಿಗೆ ೩ ತಿಂಗಳು ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ಶುಕ್ರವಾರ ಮನೆಗಳಲ್ಲಿ ಪ್ರತಿಭಟನೆ ವಿಶಿಷ್ಟ ಹೋರಾಟ ನಡೆಸಲಾಯಿತು.
     ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಗಮನ ಸೆಳೆದರು.
    ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಆಟೋ, ಟ್ಯಾಕ್ಸಿ, ಗೂಡ್ಸ್ ಸೇರಿದಂತೆ ಇನ್ನಿತರ ವಾಹನಗಳ ಚಾಲಕರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿಗಳು, ಬಿಸಿಯೂಟ ನೌಕರರು, ದಿನಗೂಲಿಗಳು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು, ಮೆಕ್ಯಾನಿಕ್‌ಗಳು, ಕ್ಷೌರಿಕರು, ದೋಬಿಗಳು, ಸೆಕ್ಯೂರಿಟಿಗಳು ಸೇರಿದಂತೆ ಎಲ್ಲಾ ಅಸಂಘಟಿತ ಶ್ರಮಜೀವಿಗಳು, ಆದಾಯ ತೆರಿಗೆ ಪಾವತಿ ವ್ಯಾಪ್ತಿಯಲ್ಲಿ ಬರದಿರುವ ರೈತಕೂಲಿಕಾರರು, ಬಡರೈತರು ಹಾಗು ದಲಿತರು ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ತಕ್ಷಣ ಕನಿಷ್ಠ ಮಾಸಿಕ ೧೦,೦೦೦ ರು. ಪರಿಹಾರ ೩ ತಿಂಗಳು ನೀಡಬೇಕೆಂದು ಆಗ್ರಹಿಸಿದರು.
     ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಹಾಗು ಸಂಘಟಿತ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ನೀಡಲಾಗಿರುವ ರಜೆಗಳನ್ನು ಸಂಬಳ ಸಹಿತ ರಜೆ ಎಂದು ಘೋಷಿಸಬೇಕು. ಕೃಷಿ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಬೇಕು. ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಜೊತೆಗೆ ಪ್ರೋತ್ಸಾಹಧನ ನೀಡಬೇಕು. ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ೨೦೦ ದಿನ ಉದ್ಯೋಗ ನೀಡಬೇಕು. ದಿನಕೂಲಿಯನ್ನು ೭೦೦ ರು. ಗಳಿಗೆ ಹೆಚ್ಚಿಸಬೇಕು. ಇಂದಿರಾ ಕ್ಯಾಂಟಿನ್‌ಗಳಲ್ಲಿ ಪೌಷ್ಠಿಕಾಂಶಯುಳ್ಳ ಗುಣಮಟ್ಟದ ಆಹಾರ ವಿತರಿಸಬೇಕು. ಪ್ರತಿ ವ್ಯಕ್ತಿಗೆ ಮಾಸಿಕ ೧೦ ಕೆ.ಜಿ ಅಕ್ಕಿ ೬ ತಿಂಗಳು ನೀಡಬೇಕು. ಕೊರೋನಾ ಚಿಕಿತ್ಸೆಯಲ್ಲಿ ಕಂಡು ಬರುತ್ತಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿಕೊಂಡು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

೨ ದಿನದ ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸಿ : ಬಿ.ಕೆ ಸಂಗಮೇಶ್ವರ್

ಬಿ.ಕೆ ಸಂಗಮೇಶ್ವರ್
ಭದ್ರಾವತಿ, ಮೇ. ೨೧: ಕೊರೋನಾ ಸೋಂಕು ಎಲ್ಲೆಡೆ ಹೆಚ್ಚಳವಾಗುತ್ತಿದ್ದು, ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದ್ದಾರೆ.
    ಈ ಕುಡಿತು ಪತ್ರಿಕೆಯೊಂದಿಗೆ ಮಾತನಾಡಿ, ಕೊರೋನಾ ಸೋಂಕು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರು ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕುರಿತು ಜಾಗೃತಿ ಹೊಂದಬೇಕು. ಜೊತೆಗೆ ವ್ಯಾಯಾಮ, ಧ್ಯಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು.
  ಕ್ಷೇತ್ರದ ಪ್ರತಿಯೊಬ್ಬರ ಆರೋಗ್ಯ ಮುಖ್ಯವಾಗಿದ್ದು, ೨ ದಿನದ ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸುವ ಮೂಲಕ ಕೊರೋನಾ ತೊಲಗಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾರ್ಯಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.

https://youtu.be/JPBlhvNDAwA

Thursday, May 20, 2021

ಬಡ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿ ವಿಶಿಷ್ಟ ರೀತಿಯ ಪ್ರತಿಭಟನೆ


ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಗುರುವಾರ ಭದ್ರಾವತಿ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕರ ಕಛೇರಿ ಮುಂಭಾಗ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
   ಭದ್ರಾವತಿ, ಮೇ. ೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಗುರುವಾರ ನಗರದ ಸಿ.ಎನ್ ರಸ್ತೆಯಲ್ಲಿರುವ ಕಾರ್ಮಿಕರ ಕಛೇರಿ ಮುಂಭಾಗ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.
   ಕಟ್ಟಡ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂಕಷ್ಟದಲ್ಲಿರುವ ಬಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ವಿಶಿಷ್ಟವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ತಕ್ಷಣ ಕಟ್ಟಡ ಕಾರ್ಮಿಕರಿಗೆ ೧೦,೦೦೦ ರು. ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
  ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಂತ್ರಿಕ ಸಲಹೆಗಾರ ಕೆ. ಮನೋಹರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ಪ್ರಮುಖರಾದ ಸುಬ್ರಮಣ್ಯ, ನಾರಾಯಣ ಸ್ವಾಮಿ, ಜಿ. ಸುರೇಶ್‌ಕುಮಾರ್, ನಿಸಾರ್, ಮೆಹಬೂಬ್, ಷಣ್ಮುಗಂ, ಲಿಯಾಖತ್, ಮಣಿಕಂಠ, ಕುಮಾರ್, ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಬೇಕಾಬಿಟ್ಟಿ ಚರಂಡಿ ಕಾಮಗಾರಿ

ಗುಣಮಟ್ಟ ಸಹ ಕಳಪೆ, ಸ್ಥಳೀಯರಿಂದ ದೂರು



ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಚರಂಡಿ ಕಾಮಗಾರಿ ಕೈಗೊಂಡಿರುವುದು.
   ಭದ್ರಾವತಿ, ಮೇ. ೨೦: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಹಾಗು ಕಳಪೆ ಗುಣಮಟ್ಟದಿಂದ ಕೈಗೊಳ್ಳಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.  
  ವಾರ್ಡ್ ನಂ.೨೮ರ ಎಂ.ಎಂ ರಸ್ತೆ ಜಯಶ್ರೀ ವೃತ್ತದಿಂದ ವಾರ್ಡ್ ೨೯ರ ಮಲ್ಲೇಶ್ವರ ಸಭಾಭವನದವರೆಗೂ ಮುಖ್ಯರಸ್ತೆಯಲ್ಲಿ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಸಕರ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಸಾಕಷ್ಟು ಲೋಪದೋಷ ವೆಸಗಿರುವುದು ಬೆಳಕಿಗೆ ಬಂದಿದೆ.
    ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಮಳೆಗಾಲದಲ್ಲಿ  ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ನಿಂತುಕೊಳ್ಳಲಿದೆ. ಮತ್ತೊಂದೆಡೆ ಒಂದು ವೇಳೆ ವಿದ್ಯುತ್ ಕಂಬಗಳನ್ನು  ಸ್ಥಳಾಂತರಿಸಬೇಕಾದರೆ ನಿರ್ಮಾಣಗೊಂಡಿರುವ ಚರಂಡಿಯನ್ನು ಒಡೆಯಬೇಕಾಗುತ್ತದೆ. ಇದರಿಂದ ಕಾಮಗಾರಿ ಪುನಃ ಕೈಗೊಳ್ಳಬೇಕಾಗುತ್ತದೆ. ಅಲ್ಲದೆ ಸಾರ್ವಜನಿಕ ಹಣ ಪೋಲಾಗುತ್ತದೆ ಎಂದು ಆರೋಪಿಸಿದ್ದಾರೆ.
   ಚರಂಡಿ ಕಾಮಗಾರಿ ಗುಣಮಟ್ಟ ಸಹ ಕಳಪೆಯಿಂದ ಕೂಡಿದ್ದು, ಸಾಕಷ್ಟು ಲೋಪದೋಷಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
   ವಾರ್ಡ್ ನಂ.೨೮ರ ನೂತನ ನಗರಸಭಾ ಸದಸ್ಯ ಕಾಂತರಾಜ್ ಪತ್ರಿಕೆಯೊಂದಿಗೆ ಮಾತನಾಡಿ, ಕಾಮಗಾರಿಯಲ್ಲಿ ಲೋಪದೋಷಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಕಾಮಗಾರಿ ನಡೆಯುವಾಗ ನಗರಸಭೆ ಚುನಾವಣೆ ಪ್ರಕ್ರಿಯೆಯಲ್ಲಿತ್ತು. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ದೂರುಗಳು ಸಾಧ್ಯವಾಗಲಿಲ್ಲ. ಕಳೆದ ೨ ತಿಂಗಳಿನಿಂದ ಗುತ್ತಿಗೆ ಕಾಮಗಾರಿ ಸ್ಥಗಿತಗೊಳಿಸಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.