Tuesday, May 25, 2021

ವಿವಿಧೆ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪೋಸ್ಟರ್ ಚಳುವಳಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
    ಭದ್ರಾವತಿ, ಮೇ. ೨೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
   ಎಐಯುಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಮನೆಯಿಂದ, ಕೆಲಸದ ಸ್ಥಳದಿಂದಲೇ ಪೋಸ್ಟರ್ ಚಳುವಳಿ ನಡೆಸಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ವಿವಿಧ ಕೊರೋನಾ ವಾರಿಯರ್ಸ್‌ಗಳಿಗೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಕೋವಿಡ್ ವಿಶೇಷ ಪ್ರೋತ್ಸಾಹ ಧನ ಮಾಸಿಕ ರು. ೫೦೦೦ ನೀಡುವಂತೆ ಆಗ್ರಹಿಸಿದರು.
    ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಸೋಂಕಿನ ತೀವ್ರತೆಗೆ ಅನುಗುಣವಾಗಿ (ಕನಿಷ್ಠ ೨೫ ಸಾವಿರ ರು.) ಪರಿಹಾರ ನೀಡುವುದು. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ನೀಡುವುದು. ೩ ತಿಂಗಳು ಬಾಕಿ ಇರುವ ೪,೦೦೦ ರು. ಮಾಸಿಕ ಗೌರವ ಧನ ತಕ್ಷಣ ಬಿಡುಗಡೆಗೊಳಿಸುವುದು ಹಾಗು ಮೊದಲ ಅಲೆಯಲ್ಲಿ ನಿಧನ ಹೊಂದಿರುವ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಕೋವಿಡ್ ವಿಮೆ ಹಣ ತಕ್ಷಣ ನೀಡುವಂತೆ ಒತ್ತಾಯಿಸಿದರು.
   ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಚಳುವಳಿ ನಡೆಸಲಾಯಿತು. ಶಾಯಿನಾ ಬಾನು, ಚಂದ್ರಕಲಾ, ಆಶಾ, ವಸಂತ ಮತ್ತು ಸುಜಾತ ನಗರದಲ್ಲಿ ಚಳುವಳಿ ನಡೆಸುವ ಮೂಲಕ ಗಮನ ಸೆಳೆದರು.

೧೩೫ ಸೋಂಕು, ಶತಕ ದಾಟಿದ ಸಾವಿನ ಸಂಖ್ಯೆ

ಭದ್ರಾವತಿ, ಮೇ. ೨೫: ಮೊದಲ ಹಂತದ ಲಾಕ್‌ಡೌನ್ ಮುಗಿದು ಎರಡನೇ ಹಂತದ ಲಾಕ್‌ಡೌನ್ ಜಾಲ್ತಿಯಲ್ಲಿದ್ದು, ಆದರೂ ಸಹ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಮಂಗಳವಾರ ೧೩೫ ಸೋಂಕು ದೃಢಪಟ್ಟಿದೆ.
    ಒಟ್ಟು ೩೫೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೩೫ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ೮೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಂದು ಸಾವು ಸಂಭವಿಸಿದೆ.
     ತಾಲೂಕಿನಲ್ಲಿ ಒಟ್ಟು ಸಾವಿನ ಸಂಖ್ಯೆ ಶತಕ ದಾಟಿದ್ದು, ೧೦೧ ಮಂದಿ ಮೃತಪಟ್ಟಿದ್ದಾರೆ. ಒಟ್ಟು ೩೨೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕಿನ ನಗರ ವ್ಯಾಪ್ತಿಯಲ್ಲಿ ಒಟ್ಟು ೬೬ ಕಂಟೈನ್‌ಮೆಂಟ್ ಜೋನ್‌ಗಳಿವೆ.

ನಿರ್ಮಲಾ ನಿಧನ

ನಿರ್ಮಲಾ
   ಭದ್ರಾವತಿ, ಮೇ. ೨೫: ನಗರದ ಹೊಸಮನೆ ನಿವಾಸಿ, ಸುಗಮ ಸಂಗೀತ ಗಾಯಕ ಹಾಗು ಚಿತ್ರ ಕಲಾವಿದ ವಾಣಿ ಆರ್ಟ್ಸ್‌ನ ಸುಬ್ರಹ್ಮಣ್ಯ ಕೆ. ಅಯ್ಯರ್ ಅವರ ಪತ್ನಿ ನಿರ್ಮಲಾ(೪೯) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿಯನ್ನು ಹೊಂದಿದ್ದರು. ನಿರ್ಮಲಾ ಅವರು ಸುಬ್ರಹ್ಮಣ್ಯ ಅವರ ಕಲಾ ಕ್ಷೇತ್ರದ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ಬೆನ್ನೆಲುಬಾಗಿದ್ದರು. ಇವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ರಂಗಪ್ಪ ನಿಧನ

ರಂಗಪ್ಪ  
   ಭದ್ರಾವತಿ, ಮೇ. ೨೫: ತಾಲೂಕಿನ ಬಾರಂದೂರು ಗ್ರಾಮದ ನಿವಾಸಿ ರಂಗಪ್ಪ(೭೦) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.
  ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮಾದಿಗ ಸಮಾಜ, ಆದಿ ಜಾಂಬವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಹಿರಿಯ ಮಾರ್ಗದರ್ಶಕರಾಗಿ ಬಾರಂದೂರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು.
  ಇವರ ನಿಧನಕ್ಕೆ ಬಾರಂದೂರು ಗ್ರಾಮಸ್ಥರು, ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ವಾಡ್.೨೯ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ವಾರ್ಡ್‌ನಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಇದನ್ನು ಮನಗಂಡು ರಾಧಮ್ಮ ಕುಟುಂಬದವರು ಸುಮಾರು ೭೦ ಕುಟುಂಬಗಳಿಗೆ ವೈಯಕ್ತಿಕವಾಗಿ ದಿನಸಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ. ಕಳೆದ ಬಾರಿ ಸಹ ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿತ್ತು.

ಮೆಸ್ಕಾಂ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಮೆಸ್ಕಾಂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
   ಭದ್ರಾವತಿ, ಮೇ. ೨೫: ಆರೋಗ್ಯ ಇಲಾಖೆ ವತಿಯಿಂದ ಆದ್ಯತೆ ಆಧಾರದ ಮೇಲೆ ಮೆಸ್ಕಾಂ ಸಿಬ್ಬಂದಿಗಳಿಗೆ ಮಂಗಳವಾರ ಕೊರೋನಾ ಲಸಿಕೆ ನೀಡಲಾಯಿತು.
    ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ಘಟಕ-೧ರ ಕಛೇರಿಯಲ್ಲಿ ೧೮ ರಿಂದ ೪೫ ವರ್ಷದೊಳಗಿನ ಸುಮಾರು ೧೦೦ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಎನ್. ಕೃಷ್ಣಪ್ಪ, ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಪ್ರಸಾದ್, ಕಾರ್ಯನಿರ್ವಾಹಕ ಇಂಜಿನಿಯರ್ ಕಿಶೋರ್, ನಗರದ ವಿಭಾಗೀಯ ಕಛೇರಿ ಸಹಾಯಕ ಲೆಕ್ಕಾಧಿಕಾರಿ ಅಶ್ವಿನಿಕುಮಾರ್, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಆನಂದ, ಹೇಮಣ್ಣ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, May 24, 2021

ಕೊರೋನಾದಿಂದ ಸ್ಮೈಲ್ ಪ್ಲೀಸ್ ಎಂದವರ ಬದುಕು ಅತಂತ್ರ

     
ಭದ್ರಾವತಿ ತಾಲೂಕು ಛಾಯಾಗ್ರಾಹಕರ ತಂಡ.
  * ಅನಂತಕುಮಾರ್
      ಭದ್ರಾವತಿ, ಮೇ. ೨೪: ಸಮಾಜದಲ್ಲಿ ಛಾಯಾಗ್ರಾಹಕ ವೃತ್ತಿಗೂ ಒಂದು ವಿಶಿಷ್ಟ ಪರಂಪರೆ ಇದೆ. ಛಾಯಾಗ್ರಾಹಕರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ರಾಜ್ಯಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯನ್ನು ನಂಬಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಇವರ ಬದುಕು ತೀರ ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ. ಈ ನಡುವೆ ಸರ್ಕಾರ ಸಹ ನಿರ್ಲಕ್ಷ್ಯತನ ವಹಿಸಿರುವುದು ಛಾಯಾಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
      ರಾಜ್ಯಾದ್ಯಂತ ಸುಮಾರು ೨ ಲಕ್ಷಕ್ಕೂ ಅಧಿಕ ಮಂದಿ ಛಾಯಾಗ್ರಾಹಕ ವೃತ್ತಿಯನ್ನು ನಂಬಿಕೊಂಡು ಬದುಕುತ್ತಿದ್ದು, ತಾಲೂಕಿನಾದ್ಯಂತ ಛಾಯಾಗ್ರಾಹಕ ವೃತ್ತಿಯಲ್ಲಿ ಪೋಟೋಗ್ರಾಫರ್ ಹಾಗು ವಿಡಿಯೋಗ್ರಾಫರ್ ಮತ್ತು ಸ್ಟುಡಿಯೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಳಗೊಂಡಂತೆ ಸುಮಾರು ೨೭೦ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.  ಇತರೆ ವೃತ್ತಿಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಛಾಯಾಗ್ರಾಹಕ ವೃತ್ತಿಯೇ ವಿಭಿನ್ನವಾಗಿದ್ದು, ಈ ವೃತ್ತಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸವೂ ಇಲ್ಲ, ಆದಾಯವೂ ಇಲ್ಲ. ವರ್ಷದಲ್ಲಿ ೫-೬ ತಿಂಗಳು ಮಾತ್ರ ಆದಾಯ ಎದುರು ನೋಡುವಂತಾಗಿದೆ.  ಮದುವೆ, ಆರಕ್ಷತೆ, ನಾಮಕರಣ ಸೇರಿದಂತೆ ಶುಭಾ ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರರ ಸಭೆ, ಸಮಾರಂಭಗಳನ್ನು ನಂಬಿಕೊಂಡು ಬದುಕುತ್ತಿರುವ ಛಾಯಾಗ್ರಾಹಕರು ಇದೀಗ ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
      ಹಲವು ಸವಾಲು:
    ತಂತ್ರಜ್ಞಾನ ಬೆಳವಣಿಗೆಯಾದಂತೆ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ತೀವ್ರ ಪೈಪೋಟಿ ನಡುವೆ ಹಲವು ಸವಾಲುಗಳು ಎದುರಾಗುತ್ತಿದ್ದು, ಛಾಯಾಗ್ರಾಹಕರ ವೃತ್ತಿಯಲ್ಲೂ ಸಹ ಹಲವು ಸವಾಲುಗಳು ಎದುರಾಗಿವೆ. ಬಹುಮುಖ್ಯವಾಗಿ ಸ್ಮಾರ್ಟ್ ಮೊಬೈಲ್ ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಛಾಯಾಗ್ರಾಹಕರ ಅಗತ್ಯ ಬಹುತೇಕ ಕಡಿಮೆಯಾಗಿದೆ. ಸರ್ಕಾರಿ ಹಾಗು ಖಾಸಗಿ ಕಛೇರಿಗಳಲ್ಲಿ ಡಿಜಿಟಲೀಕರಣದ ಪರಿಣಾಮದಿಂದ ಛಾಯಾಗ್ರಾಹಕರನ್ನು ಬಹುತೇಕ ದೂರವೇ ಇಡಲಾಗಿದೆ. ಇವೆಲ್ಲ ಸವಾಲು ಹಾಗು ಪೈಪೋಟಿಗಳ ನಡುವೆ ಛಾಯಾಗ್ರಾಹಕರು ತಮ್ಮ ಅಸ್ತಿತ್ವ ಉಳಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.


ಎಚ್. ಶ್ರೀನಿವಾಸ್


    ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಸೌಲಭ್ಯಗಳು ನಮಗೆ ಲಭಿಸಿಲ್ಲ. ಜೊತೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಕಳೆದ ಬಾರಿ ಹಾಗು ಈ ಬಾರಿ ಘೋಷಿಸಿರುವ ಪರಿಹಾರ ಸಹ ಛಾಯಾಗ್ರಾಹಕರಿಗೆ ಲಭಿಸಿಲ್ಲ. ಪ್ರಸ್ತುತ ಛಾಯಾಗ್ರಾಹಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಇವರ ನೆರವಿಗೆ ಮುಂದಾಗಬೇಕು.
                                                                      
-ಎಚ್. ಶ್ರೀನಿವಾಸ್, ಅಧ್ಯಕ್ಷರು, ತಾಲೂಕು ಛಾಯಾಗ್ರಾಹಕರ ಸಂಘ, ಭದ್ರಾವತಿ.



        ಸ್ಮೈಲ್ ಪ್ಲೀಸ್ ಎಂದವರ ನಗು ಕಿತ್ತುಕೊಂಡ ಕೊರೋನಾ:
     ಕೊರೋನಾ ಸೋಂಕು ಕಾಣಿಸಿಕೊಂಡಾಗಿನಿಂದಲೂ ಛಾಯಾಗ್ರಾಹಕರ ಬದುಕು ಅತಂತ್ರವಾಗಿದ್ದು,  ಅದರಲ್ಲೂ ಲಾಕ್‌ಡೌನ್ ಸಂದರ್ಭದಲ್ಲಿ ಅವರ ಸ್ಥಿತಿ ಹೇಳತಿಹದು. ತಾಲೂಕಿನಲ್ಲಿರುವ ಸುಮಾರು ೨೭೦ ಛಾಯಾಗ್ರಾಹಕರ ಪೈಕಿ ಸುಮಾರು ೬೦ ಮಂದಿ ಲಕ್ಷಾಂತರ ರು. ಸಾಲಸೋಲ ಮಾಡಿ ಸ್ವಂತ ಸ್ಟುಡಿಯೋಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಾಲದ ಬಾಕಿ, ಸ್ಟುಡಿಯೋ ಬಾಡಿಗೆ ಕಟ್ಟಲು ಸಾಧ್ಯವಾಗದೆ ಪರಿತಪ್ಪಿಸುತ್ತಿದ್ದಾರೆ. ಉಳಿದಂತೆ ಛಾಯಾಗ್ರಾಹಕ ವೃತ್ತಿಯನ್ನೇ ನಂಬಿ ಕುಟುಂಬ ನಿರ್ವಹಣೆಯಲ್ಲಿ ತೊಡಗಿರುವವರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೊರೋನಾ ಮಹಾಮಾರಿ ಸ್ಮೈಲ್ ಪ್ಲೀಸ್ ಎನ್ನುವವರ ನಗು ಕಿತ್ತುಕೊಂಡಿದೆ.
        ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ:
     ಛಾಯಾಗ್ರಾಹಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ೨೦೧೦ರಿಂದಲೂ  ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯಗಳು ಲಭಿಸಿಲ್ಲ.  ೨೦೧೩ರಲ್ಲಿ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ವಲಯದ ೪೨ನೇ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೂ ಸಹ ಯಾವುದೇ ಸೌಲಭ್ಯಗಳು ಛಾಯಾಗ್ರಾಹಕರಿಗೆ ಲಭಿಸುತ್ತಿಲ್ಲ. ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಪರಿಹಾರ ಧನ ಸಹ ಇವರಿಗೆ ಲಭಿಸಿಲ್ಲ. ಉಳಿದಂತೆ ಸ್ಥಳೀಯ ಸಂಸ್ಥೆಗಳಿಂದಲೂ ಯಾವುದೇ ಸೌಲಭ್ಯಗಳಿಲ್ಲ. ಇದರಿಂದಾಗಿ ಕೇವಲ ಹೆಸರಿಗೆ ಮಾತ್ರ ಅಸಂಘಟಿತ ಕಾರ್ಮಿಕರಾಗಿ ಉಳಿದುಕೊಂಡಿದ್ದಾರೆ.