ಸ್ಥಳಕ್ಕೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಭೇಟಿ
ಭದ್ರಾವತಿ ಜೈಭೀಮಾ ನಗರದಲ್ಲಿ ಕೊಲೆಯಾದ ನಗರಸಭೆ ಗುತ್ತಿಗೆ ನೌಕರ ಸುನಿಲ್
ಭದ್ರಾವತಿ, ಮೇ. ೨೬: ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಸಹ ನಗರಸಭೆ ವ್ಯಾಪ್ತಿಯ ಜೈ ಭೀಮಾ ನಗರದಲ್ಲಿ ಹೊರಗಿನಿಂದ ಬಂದು ವಿನಾಕಾರಣ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಪ್ರಶ್ನಿಸಿದ ಅಲ್ಲಿನ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ನಗರಸಭೆ ಗುತ್ತಿಗೆ ನೌಕರ ಸುನಿಲ್(೨೫) ಕೊಲೆಯಾಗಿದ್ದು, ಶ್ರೀಕಂಠ ಎಂಬ ಯುವಕ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಹಳೇನಗರದ ನಿರ್ಮಲಾ ಆಸ್ಪತ್ರೆ ಹಿಂಭಾಗ ಲಕ್ಷ್ಮೀ ಸಾಮಿಲ್‌ಗೆ ಹೋಗುವ ರಸ್ತೆಗೆ ಜೈ ಭೀಮಾ ನಗರದ ರಸ್ತೆ ಸಂಪರ್ಕಗೊಂಡಿದ್ದು, ಇಲ್ಲಿನ ನಿವಾಸಿಗಳಾದ ಸುನಿಲ್, ಶ್ರೀಕಂಠ ಮತ್ತು ರಹೀಂ ರಸ್ತೆ ಸಂಪರ್ಕಗೊಂಡಿರುವ ಸ್ಥಳದ ಸಮೀಪದಲ್ಲಿ ಮಾತನಾಡಿಕೊಂಡು ನಿಂತಿರುವ ಸಂದರ್ಭದಲ್ಲಿ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ವಿನಾಕಾರಣ ಜೈಭೀಮಾ ನಗರದಲ್ಲಿ ಸುತ್ತಾಡುವುದನ್ನು ಕಂಡು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಉಂಟಾಗಿದೆ. ಈ ಜಗಳ ಇಷ್ಟಕ್ಕೆ ಮುಗಿಯದೆ ಪುನಃ ಇಬ್ಬರು ಇನ್ನಿಬ್ಬರೊಂದಿಗೆ ಜೈ ಭೀಮಾ ನಗರಕ್ಕೆ ಆಗಮಿಸಿ ಸುನಿಲ್ ಮೇಲೆ ಜಾಕುವಿನಿಂದ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಬಿಡಿಸಲು ಬಂದ ಶ್ರೀಕಂಠ ಮತ್ತು ರಹೀಂ ಇಬ್ಬರ ಮೇಲೂ ಸಹ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಸುನಿಲ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಲ್ಲೆಗೊಳಗಾಗಿರುವ ಶ್ರೀಕಂಠ ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ೪ ಜನರ ಪೈಕಿ ಓರ್ವನನ್ನು ನಗರದ ಮೋಮಿನ್ ಮೊಹಲ್ಲಾ ನಿವಾಸಿ ಸಾಬೀತ್ ಎಂದು ತಿಳಿಸಿದ್ದು, ಉಳಿದ ಮೂವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಭದ್ರಾವತಿ ಜೈಭೀಮಾ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಹಲ್ಲೆಗೊಳಗಾಗಿರುವ ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ:
ಘಟನಾ ಸ್ಥಳಕ್ಕೆ ಬುಧವಾರ ಬೆಳಿಗ್ಗೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ರವಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ ಲಕ್ಷ್ಮಿಪ್ರಸಾದ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಿಂದ ಮಾಹಿತಿ ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದಾರೆ. ಕೊರೋನಾ ಲಾಕ್‌ಡೌನ್ ನಡುವೆಯೂ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಹೆಚ್ಚಳ :
ಘಟನೆ ಕುರಿತು ನಗರದ ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಎಂ ಖಾದರ್ ಹಳೇನಗರ ಪೊಲೀಸರ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೊಲೆ ಪ್ರಕರಣ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನಲೆಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದ್ವನಿ ಮುದ್ರಣ ರವಾನಿಸಿದ್ದು, ಹಳೇನಗರ ಭಾಗದ ಹಲವೆಡೆ ಗಾಂಜಾ, ಮಟ್ಕಾ, ಇಸ್ಪೀಟ್ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಈ ಸಂಬಂಧ ಸುಮಾರು ೬ ತಿಂಗಳ ಹಿಂದೆಯೇ ಸಾಕ್ಷ್ಯಾಧಾರಗಳೊಂದಿಗೆ ದೂರು ನೀಡಲಾಗಿತ್ತು. ಆದರೆ ಹಳೇನಗರ ಠಾಣೆ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ಈ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.