Saturday, May 29, 2021

ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿದ ಸೋಂಕು : ಸ್ಥಳೀಯರಲ್ಲಿ ಆತಂಕ, ನಿರ್ಬಂಧದ ಶಿಕ್ಷೆ




ಭದ್ರಾವತಿ, ಮೇ. ೨೯: ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಒಂದೇ ದಿನ ೧೩ ಸೋಂಕು ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯ ಪಡೆ ವತಿಯಿಂದ ಎ.ಕೆ ಕಾಲೋನಿ ಬ್ಯಾಂಕ್ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ಬದುಕು ಸಾಗಿಸುವಂತಾಗಿದೆ. ಅಂಗಡಿ ಮುಂಗಟ್ಟುಗಳಿಂದ ನಿರ್ಬಂಧದ ಶಿಕ್ಷೆ ಎದುರುವಂತಾಗಿದೆ. 
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಕೆ ಕಾಲೋನಿಯಲ್ಲಿ ೬ ಮಂದಿಗೆ ಹಾಗು ಹಳ್ಳಿಕೆರೆ ವ್ಯಾಪ್ತಿಯಲ್ಲಿ ೭ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಎ.ಕೆ ಕಾಲೋನಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಬ್ಯಾಂಕ್ ರಸ್ತೆಯನ್ನು ಮಾತ್ರ ಬಂದ್ ಮಾಡಲಾಗಿದೆ. ಆದರೆ ಇಡೀ ಕಾಲೋನಿಯ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸೋಂಕು ಕಾಣಿಸಿಕೊಳ್ಳದ ರಸ್ತೆಗಳಲ್ಲಿನ ನಿವಾಸಿಗಳಿಗೂ ಹಾಲು, ಔಷಧ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳಲ್ಲಿ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತಿದೆ. ಜೊತೆಗೆ ಅಕ್ಕಪಕ್ಕದ ಕಾಲೋನಿಯವರು ಸಹ ಒಂದು ರೀತಿಯಲ್ಲಿ ನೋಡುತ್ತಿದ್ದಾರೆಂಬ ಅಸಮಾಧಾನ ಇಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತ, ಗ್ರಾಮ ಪಂಚಾಯಿತಿ ಕಾರ್ಯಪಡೆ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುವಂತಹ ವಾತಾವರಣ ಕಲ್ಪಿಸಿಕೊಡಬೇಕಾಗಿದೆ. 


Friday, May 28, 2021

ಕೊರೋನಾ ಸೋಂಕಿತರು, ಕ್ಯಾನ್ಸರ್ ರೋಗಿಗಳು, ಮುಂಚೂಣಿ ಕಾರ್ಯಕರ್ತರಿಗೆ ಹಣ್ಣು ಹಂಪಲು ವಿತರಣೆ


ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಕೈಗೊಂಡಿರುವ ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯಕ್ಕೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ  ಪರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಚಾಲನೆ ನೀಡಿದರು.
    ಭದ್ರಾವತಿ, ಮೇ. ೨೮: ದೇಶ ಸೇವೆಯೊಂದಿಗೆ ಸಮಾಜ ಸೇವೆಗೂ ಸಿದ್ದ ಎಂಬುದನ್ನು ನಗರದ ತಾಲೂಕು ಮಾಜಿ ಸೈನಿಕರ ಸಂಘ ಪ್ರತಿ ಬಾರಿ ಸಂಕಷ್ಟದ  ಸಂದರ್ಭದಲ್ಲಿ ಸಾಬೀತು ಮಾಡಿ ತೋರಿಸುತ್ತಿದೆ. ಈ ಬಾರಿ ಸಹ ಸೇವೆಯನ್ನು ಮುಂದುವರೆಸಿದ್ದು, ಶುಕ್ರವಾರ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ, ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಹಾಗು ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಪೌಷ್ಠಿಕಾಂಶವುಳ್ಳ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
     ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ  ಪರಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಚಾಲನೆ ನೀಡಿ ಮಾಜಿ ಸೈನಿಕರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ, ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದ ಕೋವಿಡ್ ಆರೈಕೆ ಕೇಂದ್ರದಲ್ಲಿರುವವರಿಗೆ, ಶಿವಮೊಗ್ಗ ಮಾಚೇನಹಳ್ಳಿಯ ಮಲ್ನಾಡ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯಲ್ಲಿರುವ ಕ್ಯಾನ್ಸರ್ ರೋಗಿಗಳಿಗೆ ಹಾಗು ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸೇವೆಯ ಸಾರ್ಥಕತೆಗೆ ಮಾಜಿ ಸೈನಿಕರು ಸಾಕ್ಷಿಯಾದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ನಗರಸಭೆ ಕಂದಾಯಾಧಿಕಾರಿ ರಾಜ್‌ಕುಮಾರ್, ಪರಿಸರ ಅಭಿಯಂತರ ಪ್ರಭಾಕರ್, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ದಿನೇಶ್‌ಕುಮಾರ್, ಕಾರ್ಯದರ್ಶಿ ವೆಂಕಟಗಿರಿ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಾವಿತ್ರಿ ಬಾಯಿ ನಿಧನ

ಸಾವಿತ್ರಿ ಬಾಯಿ
ಭದ್ರಾವತಿ, ಮೇ. ೨೮: ಪ್ರಿಂಟಿಂಗ್ ಪ್ರೆಸ್ ನೌಕರ ಅಜಯ್  ಅವರ ತಾಯಿ ಹಳೇನಗರದ ರಥಬೀದಿ ನಿವಾಸಿ ಸಾವಿತ್ರಿ ಬಾಯಿ(೫೭) ಶುಕ್ರವಾರ ನಿಧನ ಹೊಂದಿದರು.
   ಅನಾರೋಗ್ಯದಿಂದ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಮಲೆನಾಡು ಮುದ್ರಕರ ಮಾಲೀಕರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಗಣೇಶ್‌ರಾವ್ ಸಿಂಧ್ಯಾ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಒಂದೇ ದಿನ ಸೋಂಕಿಗೆ ೯ ಬಲಿ : ಬಾರಂದೂರು ಎ.ಕೆ ಕಾಲೋನಿ ಸೀಲ್‌ಡೌನ್


ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಎ.ಕೆ ಕಾಲೋನಿಯಲ್ಲಿ ಒಂದೇ ದಿನ ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಈ ಕಾಲೋನಿಯನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
ಭದ್ರಾವತಿ, ಮೇ. ೨೮: ಲಾಕ್‌ಡೌನ್ ೨ನೇ ಅವಧಿಯಲ್ಲಿಯೂ ಸಹ ತಾಲೂಕಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ೧೨೪ ಸೋಂಕು ಪತ್ತೆಯಾಗಿದೆ. ಒಂದೇ ದಿನ ೯ ಜನ ಬಲಿಯಾಗಿದ್ದು, ನಗರ ಹಾಗು ಗ್ರಾಮಾಂತರ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
    ಒಟ್ಟು ೩೯೨ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೧೨೪ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ೧೨೬ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೪೭೩೫ ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ೪೦೯೩ ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನ ೯ ಮಂದಿ ಬಲಿಯಾಗಿದ್ದು, ಇದುವರೆಗೂ ೧೧೭ ಮಂದಿ ಮೃತಪಟ್ಟಿದ್ದಾರೆ.
    ೨೮೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು ೩೯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಒಟ್ಟು ೫೨ ಕಂಟೈನ್‌ಮೆಂಟ್ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೯ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
       ಬಾರಂದೂರು ಎ.ಕೆ ಕಾಲೋನಿ ಸೀಲ್‌ಡೌನ್:
    ತಾಲೂಕಿನ ಬಾರಂದೂರು ಗ್ರಾಮದ ಎ.ಕೆ ಕಾಲೋನಿಯಲ್ಲಿ ಒಂದೇ ದಿನ ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಈ ಕಾಲೋನಿಯನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
     ಕಳೆದ ೩-೪ ದಿನಗಳ ಹಿಂದೆ ಈ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ವ್ಯಕ್ತಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಸುಮಾರು ೧೩ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಕೋವಿಡ್ ಕಾರ್ಯಪಡೆ ವತಿಯಿಂದ ರೋಗ ನಿರೋಧಕ ಔಷಧಿ ಸಿಂಪಡಿಸಲಾಗಿದ್ದು, ನಿವಾಸಿಗಳು ಸೋಂಕು ಕುರಿತು ಜಾಗೃತಿ ಮೂಡಿಸುವ ಮೂಲಕ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
    ಕಾಲೋನಿಯ ಮುಖ್ಯ ರಸ್ತೆಯನ್ನು ಬ್ಯಾರಿಗೇಡ್ ಮೂಲಕ ಸಂಪೂರ್ಣ ಬಂದ್ ಮಾಡಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

ಗುತ್ತಿಗೆ ಪೌರ ನೌಕರನ ಹತ್ಯೆ ಪ್ರಕರಣ : ಬಿಜೆಪಿ ಪ್ರತಿಭಟನೆ



ಭದ್ರಾವತಿ ನಗರಸಭೆ ಗುತ್ತಿಗೆ ಪೌರ ನೌಕರನ ಹತ್ಯೆ ಪ್ರಕರಣದ ತನಿಖೆಯನ್ನು ಪ್ರಾಮಾಣಿಕವಾಗಿ ಕೈಗೊಳ್ಳುವ ಜೊತೆಗೆ ಹತ್ಯೆಗೆ ಕುಮ್ಮಕ್ಕು ನೀಡಿರುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮೇ. ೨೮: ನಗರಸಭೆ ಗುತ್ತಿಗೆ ಪೌರ ನೌಕರನ ಹತ್ಯೆ ಪ್ರಕರಣದ ತನಿಖೆಯನ್ನು ಪ್ರಾಮಾಣಿಕವಾಗಿ ಕೈಗೊಳ್ಳುವ ಜೊತೆಗೆ ಹತ್ಯೆಗೆ ಕುಮ್ಮಕ್ಕು ನೀಡಿರುವವರ ವಿರುದ್ಧ ಸಹ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಕೊರೋನಾ ವೈರಸ್ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಬಹುತೇಕ ಸ್ಥಳೀಯ ಪೊಲೀಸ್ ಅಧಿಕಾರಿಗಳು ಇಲ್ಲಿನ ಜನಪ್ರತಿನಿಧಿಗಳು ಹೇಳಿದಂತೆ ಕೇಳುತ್ತಾರೆ. ಇದರಿಂದಾಗಿ ಕ್ಷೇತ್ರದಲ್ಲಿ  ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಹಾಗು ಕುಮ್ಮಕ್ಕು ನೀಡುವವರಿಗೆ ಯಾವುದೇ ಭಯವಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೇ ಈ ಪ್ರಕರಣ ಕುರಿತು ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಸದರಿಗೆ ತಿಳಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದರು.
    ತಾಲೂಕು ಆಡಳಿತ, ಪೊಲೀಸ್ ಇಲಾಖೆ ಯಾರಿಗೂ ಹೆದರುವ  ಅಗತ್ಯವಿಲ್ಲ. ಪಕ್ಷ ಸದಾ ನಿಮಗೆ ಬೆಂಬಲ ನೀಡಲಿದೆ.  ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಹತ್ಯೆಯಾದವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲದೆ ದಲಿತ ಕುಟುಂಬಕ್ಕೆ ರಕ್ಷಣೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಂದು ವೇಳೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
   ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಪ್ರಮುಖರಾದ ಕೆ.ಆರ್ ಸತೀಶ್, ಕೆ. ಮಂಜಪ್ಪ, ರಾಮನಾಥಬರ್ಗೆ, ಎಂ. ಮಂಜುನಾಥ್, ಅವಿನಾಶ್, ಪಿ. ಗಣೇಶ್‌ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಚಿತ್ರ: ಡಿ೨೮-ಬಿಡಿವಿಟಿ


Thursday, May 27, 2021

ಭದ್ರಾವತಿ ಪುನಃ ೨ ದಿನ ಮೇ.೨೯, ೩೦ರಂದು ಸಂಪೂರ್ಣ ಲಾಕ್‌ಡೌನ್

ಭದ್ರಾವತಿ, ಮೇ. ೨೭: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇನ್ನೂ ಇಳಿಮುಖವಾಗದ ಹಿನ್ನಲೆಯಲ್ಲಿ ಪುನಃ ಎರಡು ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
     ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರು ಮೇ.೨೯ ಮತ್ತು ೩೦ ಶನಿವಾರ ಹಾಗು ಭಾನುವಾರ ೨ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿ ಆದೇಶಿಸಿದ್ದಾರೆ. ಹಾಲು ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವಂತಿಲ್ಲ. ಅಲ್ಲದೆ ಸಾರ್ವಜನಿಕರು ವಿನಾಕಾರಣ ತಿರುಗಾಡುವಂತಿಲ್ಲ. ಸಂಪೂರ್ಣ ಲಾಕ್‌ಡೌನ್‌ಗೆ ಎಲ್ಲರೂ ಸಹಕಾರ ನೀಡುವಂತೆ ಕೋರಲಾಗಿದೆ.

ವಿವಿಧ ಸೇವಾ ಸಂಸ್ಥೆಗಳಿಂದ ಸಂಕಷ್ಟದಲ್ಲಿರುವವರಿಗೆ ನೆರವು


ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಕೋವಿಡ್ ಚಿಕಿತ್ಸೆ ಪಡೆಯುವವರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರುತಿ ಇಕೊ ಮೊಬೈಲ್ ವ್ಯಾನ್ ಉಚಿತ ಸೇವೆಗಾಗಿ ಮೀಸಲಿಡಲಾಗಿದೆ.
    ಭದ್ರಾವತಿ, ಮೇ. ೨೭: ತಾಲೂಕಿನಲ್ಲಿ ಕೊರೋನಾ ಸೋಂಕು ೨ನೇ ಅಲೆ  ಭೀತಿ ನಡುವೆಯೂ ಲಾಕ್‌ಡೌನ್ ಪರಿಣಾಮ ಸಂಕಷ್ಟಕ್ಕೆ ಒಳಗಾಗಿರುವವರ ನೆರವಿಗೆ ದಾನಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗು ಸ್ವಯಂ ಸೇವಾ ಸಂಸ್ಥೆಗಳು ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿವೆ.
       ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು :
     ಸೇವೆಯಲ್ಲಿ ಭಗವಂತನನ್ನು ಕಾಣಬೇಕೆಂಬ ಮನೋಭಾವನೆಯೊಂದಿಗೆ ನಿರಂತರವಾಗಿ ಹಲವಾರು ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ನಗರದ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸೇವಾ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿವೆ.
      ಮೇ.೪ ರಿಂದ ಕೊರೋನಾ ಸಂದಭದಲ್ಲಿನ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಕೋವಿಡ್ ಚಿಕಿತ್ಸೆ ಪಡೆಯುವವರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರುತಿ ಇಕೊ ಮೊಬೈಲ್ ವ್ಯಾನ್ ಉಚಿತ ಸೇವೆಗಾಗಿ ಮೀಸಲಿಡಲಾಗಿದೆ. ಮೇ.೭ರಿಂದ ಪ್ರತಿದಿನ ಸುಮಾರು ೧೫೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ಹಸಿವಿನಿಂದ ಬಳಲುತ್ತಿರುವವರಿಗೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವಿತರಿಸಲಾಗುತ್ತಿದೆ. ಜೊತೆಗೆ ಭಿಕ್ಷುಕರು, ನಿರ್ಗತಿಕರು, ಅಸಹಾಯಕರಿಗೆ ಊಟದ ಜೊತೆ ಬಟ್ಟೆ ಸಹ ವಿತರಿಸಲಾಗುತ್ತಿದೆ. ಇವೆಲ್ಲದರ ಜೊತೆಗೆ ಸೋಂಕಿನಿಂದ ಗುಣಮುಖರಾಗಿರುವವರಿಗೆ ಒಂದು ಆಕ್ಸಿಜನ್ ಕಾನ್ಸನ್‌ಟ್ರೇಟರ್ ಮೀಸಲಾಗಿದ್ದು, ಸಂಸ್ಥೆಯ ಭಕ್ತರು ಹಾಗು ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲಾ ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.



ಭದ್ರಾವತಿ ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ ಭಿಕ್ಷುಕರು, ನಿರ್ಗತಿಕರು, ಅಸಹಾಯಕರಿಗೆ ಸಿದ್ದಪಡಿಸಿದ ಆಹಾರದ ಜೊತೆಗೆ ಬಟ್ಟೆ ಸಹ ವಿತರಿಸುತ್ತಿರುವುದು.

     ಸಂಸ್ಥೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಮೊ: ೯೮೪೪೨೩೮೫೮೬ ಅಥವಾ ಮೊ: ೯೧೪೧೬೪೨೪೩೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ನಗರದಲ್ಲಿ ಸೇವಾ ಕಾರ್ಯಗಳು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯನವರ ನೇತೃತ್ವದಲ್ಲಿ ನಡೆಯುತ್ತಿವೆ. ಈಗಾಗಲೇ ಸಂಸ್ಥೆಯ ಅನೇಕ ಭಕ್ತರು ಸ್ವಯಂ ಪ್ರೇರಣೆಯಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.
    ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ನೆರವು:
   ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.
    ತಾಲೂಕಿನಲ್ಲಿ ಒಟ್ಟು ಸುಮಾರು ೪೦೦೦ ಕಟ್ಟಡ ಕಾರ್ಮಿಕರಿದ್ದು, ಈ ಪೈಕಿ ಬಹುತೇಕ ಮಂದಿ ಬಡತನ ರೇಖೆಗಿಂತ ಕೆಳಗಿನವರಾಗಿದ್ದಾರೆ. ಇಂತಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ನಗರದ ವಿವಿಧೆಡೆ ನೆಲೆಸಿರುವ ಕಟ್ಟಡ ಕಾರ್ಮಿಕರಿಗೆ ಆಯಾ ಭಾಗದಲ್ಲಿಯೇ ದಿನ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಇದುವರೆಗೂ ಸುಮಾರು ೫೦೦ ರಿಂದ ೬೦೦ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇನ್ನೂ ಸುಮಾರು ೧೦೦೦ ಮಂದಿಗೆ ವಿತರಿಸಬೇಕಾಗಿದೆ.
    ಗುರುವಾರ ಭಂಡಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ನಗರಸಭೆ ಮಾಜಿ ಸದಸ್ಯ ಗಂಗಾಧರ್, ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷಣ್, ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಗೌರವಾಧ್ಯಕ್ಷ ಸುರೇಶ್‌ಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ನಾಗರಾಜ್, ಮನೋಹರ್, ಶೇಖರ್, ಪೇಂಟಿಂಗ್ ಸಂಘದ ಅಧ್ಯಕ್ಷ ಶಿವಣ್ಣ, ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ನಾಗೇಶ್, ಗುರು, ಅಂತೋಣಿ ಕ್ರೂಸ್, ನಾರಾಯಣ ಸ್ವಾಮಿ, ಅಭಿಲಾಷ್, ಮಂಜುನಾಥ್, ಸುಬ್ರಮಣ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ಭಂಡಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.