Sunday, June 6, 2021

ದಿನಸಿ ಸಾಮಗ್ರಿ ವಿತರಿಸಿ ೫೫ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್

ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ನಿವಾಸಿ ಎಸ್. ಕುಮಾರ್‌ರವರು ತಮ್ಮ ೫೫ನೇ ಹುಟ್ಟುಹಬ್ಬವನ್ನು ಭಾನುವಾರ ವಿಶಿಷ್ಟವಾಗಿ ಆಚರಿಸಿಕೊಂಡರು.
    ಭದ್ರಾವತಿ, ಜೂ. ೬: ಜಿಲ್ಲಾ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ತಾಲೂಕಿನ ಕೆಂಚೇನಹಳ್ಳಿ ನಿವಾಸಿ ಎಸ್. ಕುಮಾರ್‌ರವರು ತಮ್ಮ ೫೫ನೇ ಹುಟ್ಟುಹಬ್ಬವನ್ನು ಭಾನುವಾರ ವಿಶಿಷ್ಟವಾಗಿ ಆಚರಿಸಿಕೊಂಡರು.
   ಕೊರೋನಾ ಪರಿಣಾಮ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಈ ನಡುವೆ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ದಾನಿಗಳು, ವಿವಿಧ ಸಂಘ-ಸಂಸ್ಥೆಗಳು ಮುಂದಾಗುತ್ತಿವೆ. ಕೆಲವರು ಮದುವೆ, ಹುಟ್ಟುಹಬ್ಬ ಸೇರಿದಂತೆ ಶುಭಾ ಸಮಾರಂಭಗಳನ್ನು ಸೇವಾ ಕಾರ್ಯಗಳ ಮೂಲಕ ಸಹ ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಾಲಿನಲ್ಲಿ ಎಸ್. ಕುಮಾರ್ ಸಹ ಸೇರಿದ್ದು, ತಾಲೂಕಿನ ಬಾರಂದೂರು, ಕಾರೇಹಳ್ಳಿ ಮತ್ತು ಮಾವಿನಕೆರೆ  ಒಟ್ಟು ೩ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಮತ್ತು ವಿಕಲಚೇತನರಿಗೆ ಸುಮಾರು ೧೫೦ ಮಂದಿಗೆ ಸ್ವಂತ ಖರ್ಚಿನಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ.
  ಬಾರಂದೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಸುಮಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹಾಗು ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ ಯುವಾ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಾನಿಗಳ ನೆರವಿನಿಂದ ಶಿಕ್ಷಕಿ ಅನಿತಾ ಮೇರಿ ನೇತೃತ್ವದಲ್ಲಿ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿಯಲ್ಲಿ ತಾಯಿ ಮಡಿಲು ಸೇವಾ ಸಂಸ್ಥೆ ಹಾಗು ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಮತ್ತು ದಾನಿಗಳ ಸಹಕಾರದಿಂದ ಕೊರೋನಾ ಪರಿಣಾಮ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
     ಭದ್ರಾವತಿ, ಜೂ. ೬ : ನಗರದ ತಾಯಿ ಮಡಿಲು ಸೇವಾ ಸಂಸ್ಥೆ ಹಾಗು ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಮತ್ತು ದಾನಿಗಳ ಸಹಕಾರದಿಂದ ಕೊರೋನಾ ಪರಿಣಾಮ ತೀರ ಸಂಕಷ್ಟದಲ್ಲಿರುವವರನ್ನು ಗುರುತಿಸಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
     ಸೇವೆಗಾಗಿ ಬಾಳು ಎಂಬ ಧ್ಯೇಯದೊಂದಿಗೆ ಸುಮಾರು ೪೦೦ಕ್ಕೂ ಹೆಚ್ಚು ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿರುವ ಶಿಕ್ಷಕಿ, ಸಮಾಜ ಸೇವಕಿ ಅನಿತಾ ಮೇರಿ ಹಾಗು  ಸೇವಾಕರ್ತರಾದ ಆಶಾ, ರಾಜು ಅವರನ್ನೊಳಗೊಂಡ ತಂಡ ಇದುವರೆಗೂ ತೀರ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು ೨೦ಕ್ಕೂ ಅಧಿಕ ಮಂದಿಯನ್ನು ಗುರುತಿಸಿ ಅಗತ್ಯವಿರುವ ದಿನಸಿ ಸಾಮಗ್ರಿ ವಿತರಿಸಿದೆ.
    ಈ ಕಾರ್ಯಕ್ಕೆ ನೆರವಾಗಿರುವ ಶಿವಮೊಗ್ಗ ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ಫಾಸ್ಟರ್ ಅಬ್ರಾಹಂ, ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷ ರಾಜು, ಜಯಪ್ರಕಾಶ್ ಸೇರಿದಂತೆ ಇನ್ನಿತರರಿಗೆ ದಾನಿಗಳ ಪರವಾಗಿ ಅನಿತಾ ಮೇರಿ ಕೃತಜ್ಞತೆ ಸಲ್ಲಿಸಿದ್ದಾರೆ.  

Saturday, June 5, 2021

ಭದ್ರಾವತಿ ವಿವಿಧೆಡೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಭದ್ರಾವತಿ ವಾರ್ಡ್ ನಂ.೩೩ರ ವ್ಯಾಪ್ತಿಯ ಹುತ್ತಾಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಧನ್ವಂತರಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

    ಭದ್ರಾವತಿ, ಜೂ. ೫: ಕೊರೋನಾ ೨ನೇ ಅಲೆ ನಡೆವೆಯೂ ಶನಿವಾರ ನಗರದ ವಿವಿಧೆಡೆ ಸಸಿ ನೆಡುವ ಮೂಲಕ ಸರಳವಾಗಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
   ವಾರ್ಡ್ ನಂ.೩೩ರ ವ್ಯಾಪ್ತಿಯ ಹುತ್ತಾಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಧನ್ವಂತರಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ನೂತನ ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಲತಾ ಚಂದ್ರಶೇಖರ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಮುಖಂಡರಾದ ಎನ್. ರಾಮಕೃಷ್ಣ, ಕಬಡ್ಡಿ ಕೃಷ್ಣೇಗೌಡ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ವಾರ್ಡ್ ನಂ.೨೬ರ ನ್ಯೂಟೌನ್ ಬೆಣ್ಣೆಕೃಷ್ಣ ವೃತ್ತದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.

    ವಾರ್ಡ್ ನಂ.೨೬ರ ನ್ಯೂಟೌನ್ ಬೆಣ್ಣೆಕೃಷ್ಣ ವೃತ್ತದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ನೂತನ ನಗರಸಭಾ ಸದಸ್ಯೆ ಸರ್ವಮಂಗಳ ಭೈರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ಪ್ರಶಾಂತ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಸಂತ್‌ಕುಮಾರ್ ಪಾಟೀಲ್, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭೆ ಮಾಜಿ ಸದಸ್ಯರಾದ ಮುಕುಂದಪ್ಪ, ಪ್ರಾನ್ಸಿಸ್, ಪ್ರಮುಖರಾದ ವಿಲ್ಸನ್‌ಬಾಬು, ಎಂ.ಜಿ ರಾಮಚಂದ್ರನ್, ಪ್ರಸನ್ನಕುಮಾರ್, ಹರೀಶ್ ಕುಮಾರ್, ವಿನೋದ್‌ಕುಮಾರ್ ಮತ್ತು ಶಂಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ಅರಣ್ಯ ರಕ್ಷಕ ಎಚ್. ರಷೀದ್, ಉದ್ಯಮಿ ಎ. ಮಾಧು, ಉಪನ್ಯಾಸಕಿ ಸೃಷ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು

೧೫೫ ಮಂದಿಗೆ ಸೋಂಕು : ಒಂದೇ ದಿನ ೬ ಮಂದಿ ಬಲಿ

ಭದ್ರಾವತಿ, ಜೂ. ೫: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಶನಿವಾರ ೧೫೫ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ಒಂದೇ ದಿನ ೬ ಮಂದಿ ಬಲಿಯಾಗಿದ್ದಾರೆ.
    ಒಟ್ಟು ೫೬೫ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೫೫ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೇವಲ ೯೧ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
   ಇದುವರೆಗೂ ಒಟ್ಟು ೫೭೭೯ ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ೪೭೧೮ ಮಂದಿ ಗುಣಮುಖರಾಗಿದ್ದಾರೆ. ೧೦೬೧ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಇದುವರೆಗೂ ಸೋಂಕಿನಿಂದ ೧೪೯ ಮಂದಿ ಮೃತಪಟ್ಟಿದ್ದು, ೫೩೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಭಾಗದಲ್ಲಿ ಒಂದೇ ದಿನ ೩೧ ಕಂಟೈನ್‌ಮೆಂಟ್ ಜೋನ್‌ಗಳನ್ನು ನಿರ್ಮಿಸಲಾಗಿದ್ದು, ಇದುವರೆಗೂ ಒಟ್ಟು ೭೯ ಜೋನ್‌ಗಳಿವೆ. ಗ್ರಾಮೀಣ ಭಾಗದಲ್ಲಿ ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೧೭ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ, ರಾಷ್ಟ್ರಪತಿಗಳಿಗೆ ಮನವಿ


ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ಭದ್ರಾವತಿಯಲ್ಲಿ ನಗರ ಯುವ ಕಾಂಗ್ರೆಸ್  ಅಧ್ಯಕ್ಷ ಜಿ. ವಿನೋದ್‌ಕುಮಾರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೫: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ನಗರ ಯುವ ಕಾಂಗ್ರೆಸ್  ಅಧ್ಯಕ್ಷ ಜಿ. ವಿನೋದ್‌ಕುಮಾರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
    ಕೊರೋನಾ ಎರಡನೇ ಅಲೆ ಪರಿಣಾಮವಾಗಿ ದೇಶಾದ್ಯಂತ ಜನ  ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ೩ನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದು ಖಂಡನೀಯ.
    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ  ಇಳಿಕೆಯಾಗಿದ್ದರೂ ಸಹ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡದೆ ಏರಿಕೆ ಮಾಡಿರುವುದು ಶ್ರೀಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿದೆ. ಕೊರೋನಾ ಪರಿಣಾಮ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಅವೈಜ್ಞಾನಿಕ ಲಾಕ್‌ಡೌನ್ ಘೋಷಣೆ ಮಾಡಿ ದೇಶದ ಜನರ ಜೀವ  ಹಾಗು ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಲಾಯಿತು.
    ತಕ್ಷಣ ಕೇಂದ್ರ ಸರ್ಕಾರ  ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿ ದೇಶದ ಜನ ಕೊರೋನಾ ಪರಿಣಾಮ ಉಂಟಾಗಿರುವ ಸಂಕಷ್ಟದಿಂದ ಹೊರಬರಲು ನೆರವಾಗಬೇಕು. ಇಲ್ಲವಾದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಜನವಿರೋಧಿ ನೀತಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಲಾಯಿತು.
   ಪ್ರಧಾನ ಕಾರ್ಯದರ್ಶಿಗಳಾದ ಶಂಕರ್, ಭರತ್, ವರುಣ್, ಕೇಶವ್, ಹೊಸಮನೆ ಕಾರ್ಯದರ್ಶಿಗಳಾದ ತೇಜಸ್, ಗಿರೀಶ್, ಮನು, ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಕ್ರಮ ಗಾಂಜಾ ಮಾರಾಟ : ಇಬ್ಬರು ಯುವಕರ ಸೆರೆ

೨ ಕೆ.ಜಿ ೧೦೦ ಗ್ರಾಂ. ತೂಕದ ಗಾಂಜಾ ವಶ

ಸೈಯ್ಯದ್ ಅರ್ಬಾಜ್ ಅಲಿಯಾಸ್ ಮಂಡ್ಯಾ
    ಭದ್ರಾವತಿ, ಜೂ. ೫: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಯುವಕರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
     ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಶುಕ್ರವಾರ ಸಂಜೆ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಗರದ ಮೊಮಿನ್ ಮೊಹಲ್ಲಾ ನಿವಾಸಿ ಸೈಯ್ಯದ್ ಅರ್ಬಾಜ್ ಅಲಿಯಾಸ್ ಮಂಡ್ಯಾ(೨೩) ಹಾಗು ನೆಹರು ನಗರ ನಿವಾಸಿ ಪರ್ವೀಜ್ ಅಲಿಯಾಸ್ ಮಾಯಾ(೨೨) ಈ ಇಬ್ಬರನ್ನು ಬಂಧಿಸಿ ೨ ಕೆ.ಜಿ ೧೦೦ ಗ್ರಾಂ ತೂಕದ ಗಾಂಜಾ, ೧,೬೦೦ ರು. ನಗದು ಮತ್ತು ೧ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಹಳೇನಗರದ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಪರ್ವೀಜ್ ಅಲಿಯಾಸ್ ಮಾಯಾ
    ಅನ್ವರ್ ಕಾಲೋನಿ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಸೇವನೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಈ ನಡುವೆ ಗುರುವಾರ ಬಳ್ಳಾರಿ ಜಿಲ್ಲಾ ಪೊಲೀಸರು ಅಕ್ರಮ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ಅನ್ವರ್ ಕಾಲೋನಿಯ ೩ ಯುವಕರನ್ನು ಬಂಧಿಸಿದ್ದರು. ಇದೀಗ ನಗರದಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ಲಸಿಕಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ : ವಿನಾಕಾರಣ ಅಪಪ್ರಚಾರ


ಭದ್ರಾವತಿ ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರು ಲಸಿಕೆ ಪಡೆಯುತ್ತಿರುವುದು.
    ಭದ್ರಾವತಿ, ಜೂ. ೫: ಕಾಗದ ನಗರದ ಸರ್ಕಾರಿ ಪಶ್ಚಿಮ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕೊರೋನಾ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ಕೆಲವರು ಲಸಿಕಾ ಕೇಂದ್ರದಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಂತೋಣಿ ಸೇರಿದಂತೆ ಸ್ಥಳೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ.
     ಶನಿವಾರ ಲಸಿಕಾ ಕೇಂದ್ರದಲ್ಲಿ ಮಾತನಾಡಿದ ಅಂತೋಣಿ, ಕೆಲವರು ವಿನಾಕಾರಣ ಲಸಿಕಾ ಕೇಂದ್ರ ಕುರಿತು ಅಪಪ್ರಚಾರ ನಡೆಸುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿ ಸ್ವಯಂ ಪ್ರೇರಣೆಯಿಂದ ಕೆಲವು ಸ್ಥಳೀಯ ಯುವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸತ್ತಿದ್ದಾರೆ. ಜನಸಂದಣಿ ಸೇರಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುತ್ತಿದ್ದಾರೆ. ಲಭ್ಯವಿರುವ ಲಸಿಕೆ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಅನಗತ್ಯವಾಗಿ ಲಸಿಕಾ ಕೇಂದ್ರಕ್ಕೆ ಬಂದು ಹೋಗುವುದನ್ನು ತಪ್ಪಿಸುತ್ತಿದ್ದಾರೆ ಹೊರತು ಯಾವುದೇ ರೀತಿ ಅವ್ಯವಹಾರ ನಡೆಸುತ್ತಿಲ್ಲ ಎಂದರು.
    ಕಾಂಗ್ರೆಸ್ ಎಸ್‌ಸಿ ನಗರ ಘಟಕದ ಉಪಾಧ್ಯಕ್ಷ ಮಹೇಶ್ ಮಾತನಾಡಿ, ಈ ಭಾಗದಲ್ಲಿ ಒಟ್ಟು ೪ ವಾರ್ಡ್‌ಗಳಿವೆ. ಸುಮಾರು ೧೨ ರಿಂದ ೧೩ ಸಾವಿರ ಜನಸಂಖ್ಯೆಗೆ ಒಂದೇ ಒಂದು ನಗರ ಆರೋಗ್ಯ ಪ್ರಾಥಮಿಕ ಕೇಂದ್ರವಿದ್ದು, ಈ ಕೇಂದ್ರದಲ್ಲಿಯೇ ಲಸಿಕಾ ಕೇಂದ್ರ ತೆರೆಯಲು ಸರ್ಕಾರ ಆದೇಶಿಸಿತ್ತು. ಆದರೆ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದ ಕಾರಣ ಜನಸಂದಣಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯರ ಒತ್ತಾಯದ ಮೇರೆಗೆ ವಾರ್ಡಿನ ನಗರಸಭಾ ಸದಸ್ಯರಾದ ಬಿ.ಕೆ ಮೋಹನ್‌ರವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಶಾಲೆಯಲ್ಲಿ ಲಸಿಕಾ ಕೇಂದ್ರ ತೆರೆಯಲು ಕಾರಣಕರ್ತರಾಗಿದ್ದಾರೆ. ಈ ಭಾಗದ ಮುಖಂಡರು, ಕಾರ್ಯಕರ್ತರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಅಪ್ರಪಚಾರದಲ್ಲಿ ತೊಡಗಿದ್ದಾರೆ. ಸಾರ್ವಜನಿಕರು ಇದಕ್ಕೆ ಕಿವಿಗೊಡದೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಲಸಿಕೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
    ಈ ಭಾಗದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ನಿವಾಸಿಗಳು ಆತಂಕದಲ್ಲಿ ಬದುಕುತ್ತಿದ್ದಾರೆ. ನಿವಾಸಿಗಳಿಗೆ ತಕ್ಷಣ ಲಸಿಕೆ ಹಾಕಿಸುವ ಕಡೆ ಗಮನ ಹರಿಸುವುದನ್ನು ಬಿಟ್ಟು ಅಪ್ರಚಾರದಲ್ಲಿ ತೊಡಗಿರುವುದು ಸರಿಯಲ್ಲ ಎಂದು ಮುಖಂಡ ಕಂಚಿ ರಾಜ ಅಸಮಾಧಾನ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಎಸ್‌ಸಿ ವಿಭಾಗದ ತಾಲೂಕು ಅಧ್ಯಕ್ಷ ಹಾಗು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಆರ್. ಅರುಣ್ ಮಾತನಾಡಿ, ಲಸಿಕಾ ಕೇಂದ್ರದಲ್ಲಿ ಅವ್ಯವಹಾರ ಕಂಡು ಬಂದಲ್ಲಿ ಸಾಬೀತು ಮಾಡಿ ತೋರಿಸಲಿ. ಅದು ಬಿಟ್ಟು ವಿನಾಕಾರಣ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಎಚ್ಚರಿಸಿದರು.
ನಡುವೆ ಲಸಿಕೆ ಪಡೆದ ಕೆಲವರು ಮಾತನಾಡಿ, ಲಸಿಕಾ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ. ಕೆಲವು ಯುವಕರು ಸ್ವಯಂ ಪ್ರೇರಣೆಯಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಾರು ಸಹ ಸಮಾಜಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.
     ನಗರಸಭೆ ಮಾಜಿ ಸದಸ್ಯ ಮಹೇಶ್, ಜಿ. ರಾಜು ಹಾಗು ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.