ಕೋವಿಡ್-೧೯ ಸಂದಿಗ್ದ ಪರಿಸ್ಥಿತಿಯಲ್ಲೂ ೭-೮ ತಿಂಗಳಿಂದ ವೇತನವಿಲ್ಲ
![](https://blogger.googleusercontent.com/img/b/R29vZ2xl/AVvXsEhaB1XVNF63KE_xEj3-7tvixfnMSQb22x-gmH-pSNEeqqwdXaJbO29b6_JY8McJzheDNOuOEJ6zfRl0iBRSxvRSDufkJNhfOM89HBftaeQ_iu-C5zJ5KeEfx66iD1_ccW2empWZipj0e8kH/w400-h190-rw/D17-BDVT-752590.jpg)
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ.
* ಅನಂತಕುಮಾರ್
ಭದ್ರಾವತಿ, ಜೂ. ೧೭: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡು ಸುಮಾರು ೬ ವರ್ಷಗಳು ಕಳೆದಿದ್ದು, ಆದರೆ ಇದುವರೆಗೂ ಕಾರ್ಮಿಕರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಕಳೆದ ೭-೮ ತಿಂಗಳಿನಿಂದ ವೇತನವಿಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
೨೦೧೫ರಲ್ಲಿ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡ ನಂತರ ಕಾರ್ಮಿಕರಿಗೆ ಎದುರಾದ ಸಂಕಷ್ಟಕ್ಕೆ ಇದುವರೆಗೂ ಮುಕ್ತಿ ಸಿಕ್ಕಿಲ್ಲ. ಒಂದೆಡೆ ಕಾರ್ಖಾನೆ ಪುನಃ ಆರಂಭಗೊಳ್ಳದೆ ಇತಿಹಾಸದ ಗತ ವೈಭವ ಕಣ್ಮರೆಯಾಗಿರುವಾಗ, ಮತ್ತೊಂದೆಡೆ ಸುಮಾರು ೩೦-೪೦ ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿದಿರುವ ಕಾರ್ಮಿಕರಿಗೆ ಕೊನೆ ಘಳಿಗೆಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಪ್ರಸ್ತುತ ಕಾರ್ಮಿಕರು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ೭-೮ ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ವೇತನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಲಾಗಿದೆ. ನಮ್ಮ ಅಳಲು ಯಾರು ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ.
-ದಿನೇಶ್, ಕಾರ್ಯದರ್ಶಿ, ಎಂ.ಪಿ.ಎಂ ಕಾರ್ಮಿಕರ ಸಂಘ.
ಒಂದು ಕಾಲದಲ್ಲಿ ಕಾರ್ಖಾನೆಯಲ್ಲಿ ೩ ರಿಂದ ೪ ಸಾವಿರ ಕಾಯಂ ಕಾರ್ಮಿಕರು, ಸುಮಾರು ೫ ಸಾವಿರ ಗುತ್ತಿಗೆ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರು. ವ್ಯಾಪಾರಸ್ಥರು, ಕೃಷಿಕರು ಸೇರಿದಂತೆ ಸುಮಾರು ೧೦ ಸಾವಿರಕ್ಕೂ ಅಧಿಕ ಕುಟುಂಬಗಳು ಕಾರ್ಖಾನೆಯನ್ನು ನಂಬಿ ಬದುಕು ಸಾಗಿಸುತ್ತಿದ್ದವು. ದೇಶ, ವಿದೇಶಗಳಲ್ಲಿ ತನ್ನದೇ ಆದ ಬ್ರಾಂಡ್‌ನೊಂದಿಗೆ ಮಾರುಕಟ್ಟೆ ಹೊಂದುವ ಮೂಲಕ ಭವ್ಯ ಪರಂಪರೆಯನ್ನು ಕಟ್ಟಿಕೊಂಡಿದ್ದ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಖಾಸಗಿಕರಣಗೊಳಿಸುವ ನಿಟ್ಟಿನಲ್ಲಿ ೨೦೧೭ರಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೊಳಿಸಿತ್ತು. ಈ ಸಂದರ್ಭದಲ್ಲಿ ೭೭೩ ಕಾಯಂ ಹಾಗು ೧೦೨೯ ಗುತ್ತಿಗೆ ಕಾರ್ಮಿಕರು ಸ್ವಯಂ ನಿವೃತ್ತಿ ಪಡೆದು ಕೊಂಡಿದ್ದರು. ಉಳಿದಂತೆ ೨೨೦ ಕಾಯಂ ನೌಕರರು ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಸರ್ಕಾರ ಒಟ್ಟು ೩೪೫ ಕೋ.ರು. ವಿಶೇಷ ಪ್ಯಾಕೇಜ್ ರೂಪಿಸಿ ಎರಡು ಹಂತದಲ್ಲಿ ಹಣ ಸಹ ಬಿಡುಗಡೆಗೊಳಿಸಿತ್ತು. ಆದರೆ ಬಹುತೇಕ ಕಾರ್ಮಿಕರಿಗೆ ಇನ್ನೂ ಪೂರ್ತಿ ಹಣ ಕೈಸೇರಿಲ್ಲ. ಬಾಕಿ ಹಣ ನೀಡುವಂತೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.
೭-೮ ತಿಂಗಳಿಂದ ವೇತನವಿಲ್ಲ :
ಪ್ರಸ್ತುತ ಉಳಿದುಕೊಂಡಿರುವ ೨೧೬ ಕಾಯಂ ಕಾರ್ಮಿಕರ ಪೈಕಿ ೧೧೪ ಕಾರ್ಮಿಕರನ್ನು ಸರ್ಕಾರದ ವಿವಿಧ ಇಲಾಖೆಯಲ್ಲಿ ನಿಯೋಜನೆಗೊಳಿಸಲಾಗಿದೆ. ಉಳಿದಿರುವ ಸುಮಾರು ೯೦ ಕಾಯಂ ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೫೦ ಕಾರ್ಮಿಕರು ಹಾಗು ಭದ್ರತಾ ಮತ್ತು ಬೇಹುಗಾರಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೮೦ ಮಂದಿ ಹಾಗು ಅರಣ್ಯ ಕ್ಷೇತ್ರಪಾಲಕರು ಸುಮಾರು ೭-೮ ತಿಂಗಳಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸರ್ಕಾರದಿಂದ ಯಾವುದೇ ನೆರವಿಲ್ಲ:
ಕೋವಿಡ್-೧೯ರ ಪರಿಣಾಮ ಕಳೆದ ಸುಮಾರು ೨ ವರ್ಷದಿಂದ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಆದರೂ ಸಹ ಸರ್ಕಾರ ಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮತ್ತೊಂದೆಡೆ ಸರ್ಕಾರ ಕಾರ್ಮಿಕರಿಗೆ ಕೋವಿಡ್-೧೯ ವಿಶೇಷ ನೆರವು ಸಹ ನೀಡಿದಿರುವುದು ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಬಹುತೇಕ ಕಾರ್ಮಿಕರಿಗೆ ಕುಟುಂಬ ನಿರ್ವಹಣೆ ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಲಾದರೂ ಸರ್ಕಾರ ನೆರವಿಗೆ ಧಾವಿಸಬೇಕೆಂಬ ಅಳಲು ಕಾರ್ಮಿಕರಿಂದ ಕೇಳಿ ಬರುತ್ತಿದೆ.
ಖಾಸಗಿಕರಣಗೊಳಿಸುವ ಪ್ರಕ್ರಿಯೆ ಸಹ ವಿಫಲ:
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಭರವಸೆ ನೀಡುತ್ತಾ ಬಂದಿದೆಯಾದರೂ ಸಹ ಇದುವರೆಗೂ ಪುನಃ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವ ಸರ್ಕಾರದ ಪ್ರಸ್ತಾಪಕ್ಕೆ ಆರಂಭದಲ್ಲಿ ಪೂರಕ ಪ್ರತಿಕ್ರಿಯೆಗಳು ಕಂಡು ಬಂದರೂ ಸಹ ನಂತರದ ದಿನಗಳಲ್ಲಿ ಯಾವುದೇ ಖಾಸಗಿ ಕಂಪನಿಗಳು ಈ ಬಗ್ಗೆ ಆಸಕ್ತಿ ವಹಿಸದಿರುವುದು ಪುನಃ ಕಾರ್ಖಾನೆ ಆರಂಭಗೊಳ್ಳುವ ನಿರೀಕ್ಷೆಯನ್ನು ಹುಸಿಗೊಳಿಸಿದೆ.