ಭದ್ರಾವತಿ ಪೇಪರ್ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಗಾರದ ಸರ ಅಪಹರಿಸಿ ಪರಾರಿಯಾಗಿದ್ದ ೩ ಯುವಕರನ್ನು ಬಂಧಿಸಿವುದು.
ಭದ್ರಾವತಿ, ಜೂ. ೨೦: ಕಾಗದನಗರ ಅಂಚೆ ಕಛೇರಿ ರಸ್ತೆಯಲ್ಲಿ ಎಂಪಿಎಂ ಜೆಂಟ್ಸ್ ಕ್ಲಬ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ೩ ಯುವಕರನ್ನು ಪಿ.ಐ ಪೇಪರ್ ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ೧ ಗಂಟೆ ಅವಧಿಯಲ್ಲಿ ಬಂಧಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸುಮಾರು ೧೧.೪೫ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ೩ ಯುವಕರು ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸ್ಥಳೀಯರು ವಾಹನ ಹಿಂಬಾಲಿಸಿ ಕೊಂಡು ಹೋಗಿ ತಕ್ಷಣ ತುರ್ತು ಸಂಖ್ಯೆ ೧೧೨ಕ್ಕೆ ಕರೆ ಮಾಡಿ ದ್ವಿಚಕ್ರ ವಾಹನ ಸಂಖ್ಯೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್ಗಳಿಗೆ ಮಾಹಿತಿ ರವಾನಿಸಿದ್ದು, ಮಧ್ಯಾಹ್ನ ೧೨.೪೫ರ ಸಮಯದಲ್ಲಿ ಕಾರೇಹಳ್ಳಿ ಚೆಕ್ ಪೋಸ್ನಲ್ಲಿ ಯುವಕರು ಸಿಕ್ಕಿ ಬಿದಿದ್ದಾರೆ.
ಎರೇಹಳ್ಳಿ ಗ್ರಾಮದ ನಿವಾಸಿ ಪವನ್(೧೯), ಉಂಬ್ಳೆಬೈಲ್ ರಸ್ತೆ ಸಂಜಯ್ ಕಾಲೋನಿ ನಿವಾಸಿ ವಿ. ವಿಷ್ಣು ಅಲಿಯಾಸ್ ಪೊಲ್ಲಾರ್ಡ್(೧೯) ಮತ್ತು ಹೆಬ್ಬಂಡಿ ಗ್ರಾಮದ ನಿವಾಸಿ ಎಂ ಮಹೇಶ್(೧೯) ಬಂಧಿತ ಯುವಕರಾಗಿದ್ದು, ಒಂದು ಬಂಗಾರದ ಸರ ಮತ್ತು ೨ ಬಂಗಾರದ ಲಕ್ಷ್ಮೀ ಕಾಸ್ ಸೇರಿದಂತೆ ಒಟ್ಟು ೧೦೩ ಗ್ರಾಂ ತೂಕದ ಒಟ್ಟು ೪,೬೩,೫೦೦ ರು. ಮೌಲ್ಯದ ಬಂಗಾರದ ಆಭರಣಗಳನ್ನು ಹಾಗು ಕೃತ್ಯಕ್ಕೆ ಬಳಸಿದ ೨ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ೩ ಯುವಕರು ೨೦೧೯ರಲ್ಲಿ ಪೇಪರ್ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣ ಹಾಗು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ೨ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಅಧೀಕ್ಷಕ ಹಾಗು ಸಹಾಯಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಈ.ಓ. ಮಂಜುನಾಥ್, ಪೇಪರ್ಟೌನ್ ಠಾಣಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ಸಹಾಯಕ ಠಾಣಾಧಿಕಾರಿ ರತ್ನಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚನ್ನಕೇಶವ, ಅರುಣ, ಗಂಗಾಧರ, ಹನಮಂತ ಆವಟ್ಟಿ, ಚಿನ್ನನಾಯ್ಕ, ಧರ್ಮನಾಯ್ಕ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.