Thursday, June 24, 2021

ಜೂ.೨೫ರಂದು ಎಲ್‌ಐಸಿ ಪ್ರತಿನಿಧಿಗಳ ವಿಶ್ರಾಂತಿ ಅಂದೋಲನ ಸಭೆ

ಭದ್ರಾವತಿ, ಜೂ. ೨೪: ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ವತಿಯಿಂದ ಜೂ.೩೦ರ ವರೆಗೆ ವಿಶ್ರಾಂತಿ ಅಂದೋಲನ ಹಮ್ಮಿಕೊಳ್ಳಲಾಗಿದೆ.
    ಅಂದೋಲನದ ಅಂಗವಾಗಿ ಜೂ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಜೀವವಿಮಾ ಶಾಖೆಯ ಆವರಣದಲ್ಲಿ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಹಲವು ಬೇಡಿಕೆಗಳ ಕುರಿತು ಪ್ರತಿನಿಧಿಗಳು ಘೋಷಣಾ ವಾಕ್ಯ ಮಂಡಿಸಲಿದ್ದಾರೆ.

ಭದ್ರಾವತಿಯಲ್ಲಿ ೨೭ ಕೊರೋನಾ ಸೋಂಕು

   ಭದ್ರಾವತಿ, ಜೂ. ೨೪: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಗುರುವಾರ ಕೇವಲ ೨೭ ಪ್ರಕರಣಗಳು ದಾಖಲಾಗಿವೆ.
   ಒಟ್ಟು ೫೯೩ ಮಾದರಿ ಸಂಗ್ರಹಿಸಲಾಗಿದ್ದು, ೨೭ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೯ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದುವರೆಗೂ ಒಟ್ಟು ೭೦೦೧ ಸೋಂಕು ಪ್ರಕರಣ ದಾಖಲಾಗಿದೆ. ಈ ಪೈಕಿ ೬೮೩೪ ಮಂದಿ ಗುಣಮುಖರಾಗಿದ್ದಾರೆ. ೧೪೬ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ನಗರ ಪ್ರದೇಶದಲ್ಲಿ ೨೬ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ೧೩೫ ತೆರವುಗೊಳಿಸಲಾಗಿದೆ. ಗ್ರಾಮಾಂತರ ಭಾಗದಲ್ಲಿ ೨೬ ಜೋನ್‌ಗಳಿದ್ದು, ೧೯ ತೆರವುಗೊಳಿಸಲಾಗಿದೆ.

ಉನ್ನತ ಶಿಕ್ಷಣದಿಂದ ಅರ್ಥಿಕ ಅಭಿವೃದ್ಧಿ, ಸಾಮಾಜಿಕ ಪರಿವರ್ತನೆ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಭದ್ರಾವತಿ, ಜೂ. ೨೪: ಉನ್ನತ ಶಿಕ್ಷಣದಿಂದ ಮಾತ್ರ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಬೊಮ್ಮನಕಟ್ಟೆ ಸರ್‌ಎಂವಿ ವಿಜ್ಞಾನ ಕಾಲೇಜು ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
   ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ನೈಪುಣ್ಯತೆ ಹೊಂದಬೇಕು. ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳನ್ನು ಜ್ಞಾನ ಸಂಪಾದನೆಗೆ ಉಪಯೋಗಿಸಿಕೊಳ್ಳಬೇಕು. ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
   ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಬೋಧನೆ ಜೊತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂದು ಕರೆ ನೀಡಿದರು.
   ಪ್ರಾಂಶುಪಾಲ ಡಾ. ರವೀಂದ್ರ ಹಾಗು ಕಾಲೇಜಿನ ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂ.ಜಿ ಉಮಾಶಂಕರ್ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕ ಡಾ. ವರದರಾಜು ನಿರೂಪಿಸಿದರು. ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ವಂದಿಸಿದರು.

ಕೊರೋನಾ ಸೋಂಕು ನಿಯಂತ್ರಣಕ್ಕೆ ಎಲ್ಲೆಡೆ ಜಾಗೃತಿ ಅಗತ್ಯ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಚಾಲನೆ ನೀಡಿದರು.
  ಭದ್ರಾವತಿ, ಜೂ. ೨೪: ಕೊರೋನಾ ಸೋಂಕು ನಿಯಂತ್ರಣದಲ್ಲಿ ಗ್ರಾಮೀಣ ಜನರ ಪಾತ್ರ ಹೆಚ್ಚಿನದ್ದಾಗಿದ್ದು, ಪ್ರಸ್ತುತ ಎಲ್ಲೆಡೆ ಜಾಗೃತಿ ಅತಿ ಅವಶ್ಯಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
  ಅವರು ಗುರುವಾರ ನಗರದ ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಡವರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪ್ರಸ್ತುತ ಕೋವಿಡ್-೧೯ರ ಪರಿಣಾಮ ಪ್ರಪಂಚದಾದ್ಯಂತ ಹಲವಾರು ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಶ್ರಮಿಸುತ್ತಿವೆ. ಈ ನಡುವೆ ಲೆಕ್ಕವಿಲ್ಲದಷ್ಟು ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದೆ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಕೇವಲ ನೆರವಿನ ಅಗತ್ಯ ಮಾತ್ರವಲ್ಲದೆ ಜಾಗೃತಿ ಸಹ ಅತಿ ಅವಶ್ಯಕವಾಗಿದೆ ಎಂದರು.
    ಗ್ರಾಮಮಟ್ಟದಲ್ಲಿ ಜಾಗೃತಿ ಪಡೆ ಹಾಗು ಗ್ರಾಮಸ್ಥರು ಕೋವಿಡ್-೧೯ರ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯವಾಗಿದ್ದು, ಪ್ರತಿ ಹಂತದ ಎಚ್ಚರಿಕೆ ಕ್ರಮಗಳು ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಗ್ರಾಮಮಟ್ಟದಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ನಗರಮಟ್ಟದಲ್ಲೂ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಜಾಗೃತಿ ಅಭಿಮಾನ ನಡೆಯಬೇಕಾಗಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕೆಂಬ ಉದ್ದೇಶದೊಂದಿಗೆ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಅರ್ಹ ಕಡು ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವಾರ್ಡ್‌ಗಳ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಗ್ರಿಗಳು ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
    ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ಪೌರಾಯುಕ್ತ ಕೆ. ಪರಮೇಶ್ ಹಾಗು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎಲ್ಲಾ ವಾರ್ಡ್‌ಗಳ ನಗರಸಭಾ ಸದಸ್ಯರು, ಒಂದೊಂದು ವಾರ್ಡ್‌ಗಳಿಂದ ತಲಾ ಇಬ್ಬರು ಫಲಾನುಭವಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



Wednesday, June 23, 2021

ಭದ್ರಾವತಿಯಲ್ಲಿ ೪೭ ಸೋಂಕು

ಭದ್ರಾವತಿ, ಜೂ. ೨೩: ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಏರಿಕೆಯಾಗಿದ್ದು, ಬುಧವಾರ ಒಬ್ಬರು ಮೃತಪಟ್ಟಿದ್ದಾರೆ.
   ಕೆಲವು ದಿನಗಳಿಂದ ಇಳಿಯಾಗಿದ್ದ ಸೋಂಕು ಪುನಃ ಏರಿಕೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ೨೪ ಹಾಗು ನಗರ ಭಾಗದಲ್ಲಿ ೨೩ ಸೇರಿ ಒಟ್ಟು ೪೭ ಪ್ರಕರಣಗಳು ದಾಖಲಾಗಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.

ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಮಾನವೀಯತೆ

ಭದ್ರಾವತಿಯಲ್ಲಿ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
   ಭದ್ರಾವತಿ, ಜೂ. ೨೩: ನಗರದ ಯುವಕರ ತಂಡವೊಂದು ಗಾಯಗೊಂಡಿದ್ದ ನಾಗರ ಹಾವಿಗೆ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುವ ಮೂಲಕ ಮಾನವೀಯತೆ ಮರೆದಿರುವ ಘಟನೆ ಬುಧವಾರ ನಡೆದಿದೆ.
   ಕಾಗದನಗರದ ರಸ್ತೆಯೊಂದರಲ್ಲಿ ಅಪಘಾತದಿಂದ ಗಾಯಗೊಂಡಿದ್ದ ನಾಗರ ಹಾವನ್ನು ರಕ್ಷಿಸಿ ತಕ್ಷಣ ಚಿಕಿತ್ಸೆ ನೀಡುವಲ್ಲಿ ಜಾಸ್ವಾ, ಬೆನ್ಸನ್, ಸತ್ಯ ಮತ್ತು ಭರತ್‌ರಾವ್ ತಂಡ ಯಶಸ್ವಿಯಾಗಿದೆ. ಚೇತರಿಸಿಕೊಂಡ ನಂತರ ಅರಣ್ಯಕ್ಕೆ  ಬಿಟ್ಟು ಬಂದಿದ್ದಾರೆ.

ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
  ಭದ್ರಾವತಿ, ಜೂ. ೨೩: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸ್ ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
   ಸರ್ವೆ ನಂ.೧೧೨ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಸುಮಾರು ೮೦೦ ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಹಿರೇಕೆರೆ ಸುತ್ತಲೂ ಬಸಿಕಾಲುವೆ(ಟ್ರಂಚ್) ನಿರ್ಮಿಸುವುದು. ಕೆರೆಯ ನೀರು ಸರಾಗವಾಗಿ ಹರಿಯಲು ೪ ಅಡಿ ವಿಸ್ತೀರ್ಣವುಳ್ಳ ೮ ಪೈಪ್‌ಗಳನ್ನು ಅಳವಡಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಜನಸಂದಣಿ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಿಸುವುದು ಹಾಗು  ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ಕೋರಲಾಗಿದೆ.
    ನಗರಸಭೆ ವ್ಯಾಪ್ತಿಯ ನ್ಯೂಟೌನ್ ಭಾಗದಲ್ಲಿ ಈಗಾಗಲೇ ಒಳಚರಂಡಿ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ತಕ್ಷಣ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳಿಸುವುದು. ಜನ್ನಾಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕ ಕಾಮಗಾರಿಗಳನ್ನು ಪೂರ್ಣಗೊಳಿಸುವುದು. ನಗರಸಭೆ ನ್ಯೂಟೌನ್ ಶಾಖಾ ಕಛೇರಿಯಲ್ಲಿ ಮನೆ ಹಾಗು ನೀರಿನ ಕಂದಾಯ ಪಾವತಿಸಲು ಕೌಂಟರ್ ತೆರೆಯುವಂತೆ ಮನವಿ ಮಾಡಲಾಗಿದೆ.
   ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್, ಕಾರ್ಯಾಧ್ಯಕ್ಷೆ ರಮಾವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಆರ್. ಮುರುಗೇಶ್, ಸಂಚಾಲಕರಾದ ಶೈಲಜಾ ರಾಮಕೃಷ್ಣ, ಗೀತಾಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.