Friday, July 2, 2021

ಬಡ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟ ಶಾಸಕ ಬಿ.ಕೆ ಸಂಗಮೇಶ್ವರ್


ಬಹಳ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಭದ್ರಾವತಿ ನಗರಸಭೆ ೨೨ನೇ ವಾರ್ಡ್ ವ್ಯಾಪ್ತಿಯ ಬಡಕುಟುಂಬವೊಂದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
      ಭದ್ರಾವತಿ, ಜು. ೨:  ಬಹಳ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬವೊಂದಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
    ವಾರ್ಡ್ ನಂ. ೨೨ರ ಉಜ್ಜನಿಪುರದಲ್ಲಿ ಬಡ ಕುಟುಂಬವೊಂದು ಸುಮಾರು ೪೦ ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ವಂಚಿತವಾಗಿದ್ದು, ಈ ಮಾಹಿತಿ ಅರಿತ ತಕ್ಷಣ ಶಾಸಕರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಸುಮಾರು ೨೦ ಸಾವಿರ ರು. ಸ್ವಂತ ಹಣದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
    ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಸುದೀಪ್‌ಕುಮಾರ್, ನಗರಸಭೆ ಮಾಜಿ  ಸದಸ್ಯ ವೆಂಕಟಯ್ಯ ಸೇರಿದಂತೆ ಸ್ಥಳೀಯ ಮುಖಂಡರು, ನಿವಾಸಿಗಳು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಯು ವತಿಯಿಂದ ಪ್ರತಿಭಟನೆ

ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಜು. ೨: ಮೈಕ್ರೋ ಫೈನಾನ್ಸ್‌ಗಳಿಂದ ಉಂಟಾಗುತ್ತಿರುವ ತೊಂದರೆ ತಪ್ಪಿಸುವಂತೆ,  ಕಲ್ಲಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಹಾಗು ವಿಧವಾ ವೇತನ, ವೃದ್ಯಾಪ್ಯ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
    ಕೊರೋನಾ ಸಂಕಷ್ಟದ ಸಮಯದಲ್ಲೂ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊರತುಪಡಿಸಿ ತಾಲೂಕಿನಲ್ಲಿರುವ ಉಜ್ಜೀವನ್, ಎಸ್‌ಕೆಎಸ್, ಬಿಎಸ್‌ಎಸ್, ಮುತ್ತೋಟ್ ಫೈನಾನ್ಸ್, ಗ್ರಾಮ ಶಕ್ತಿ, ಗ್ರಾಮೀಣ ಕೂಟ, ದಿಶಾ, ಸ್ಪಂದನ, ನಿರಂತರ, ಡಿಸಿಬಿ, ಎಲ್&ಟಿ, ಇಕ್ವಿಟಕ್ಸ್ ಮತ್ತು ಬೆಲ್‌ಸ್ಟಾರ್ ಸೇರಿದಂತೆ ಬಹುತೇಕ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದ ಮಹಿಳೆಯರಿಗೆ ಸಾಲ ಮರುಪಾವತಿಗೆ ಸಮಯಾವಕಾಶ ನೀಡದೆ ಹಿಂದಿರುಗಿಸುವಂತೆ ಪೀಡಿಸುತ್ತಿದ್ದು, ಇದರಿಂದಾಗಿ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಆರೋಪಿಸಿ ತಕ್ಷಣ ಮೈಕ್ರೋ ಫೈನಾನ್ಸ್‌ಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
  ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ಕಲ್ಪಿಸಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಧವಾ ವೇತನ, ವೃದ್ಯಾಪ್ಯ ವೇತನ ಬಿಡುಗಡೆ ಮಾಡದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದರಿಂದಾಗಿ ವಯೋವೃದ್ಧರು, ವಿಧವಾ ಮಹಿಳೆಯರು ಸಂಕಷ್ಟ ಅನುವಭವಿಸುವಂತಾಗಿದೆ ಎಂದು ದೂರಲಾಯಿತು.
    ಅತಿವೃಷ್ಠಿ ಮಳೆಯಿಂದಾಗಿ ತಾಲೂಕಿನಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ೩-೪ ವರ್ಷಗಳು ಕಳೆದರೂ ಸಹ ಸೂಕ್ತ ಪರಿಹಾರ ಲಭಿಸಿಲ್ಲ. ಬಡ ಕುಟುಂಬಗಳ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ನೀಡಲಾಗುವ ನೆರವನ್ನು ಸಕಾಲದಲ್ಲಿ ನೀಡದೆ ೨-೩ ವರ್ಷಗಳ ನಂತರ ನೀಡಲಾಗುತ್ತಿದೆ. ಕಳೆದ ೩-೪ ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡದೆ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಂಡು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
   ಸಾಮಾಜಿಕ ಹೋರಾಟಗಾರ ಶಿವಕುಮಾರ್, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ, ವಸಂತಮ್ಮ, ಚಿನ್ನರಾಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Thursday, July 1, 2021

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ


ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಗುರುವಾರ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
    ಭದ್ರಾವತಿ, ಜು. ೧: ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಗುರುವಾರ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
    ಸೇವಾ ಭಾರತಿ ಮತ್ತು ಪ್ರೇರಣಾ ಟ್ರಸ್ಟ್ ವತಿಯಿಂದ ಭದ್ರಾವತಿಗೆ ಸುಮಾರು ೨೦೦೦ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗುತ್ತಿದೆ.
    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಪ್ರಾಂಶುಪಾಲರಾದ ಡಾ.ಎಂ.ಜಿ ಉಮಾಶಂಕರ್, ಡಾ. ಬಿ.ಜಿ ಧನಂಜಯ, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಡಾ.ಎಂ.ವಿ ಅಶೋಕ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
  ಭದ್ರಾವತಿ, ಜು. ೧: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ  ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಯಿತು.
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ನಿರ್ದೇಶಕರಾದ ನಾಗರಾಜು, ಕೃಷ್ಣ, ವಿದ್ಯಾ ಸಂಸ್ಥೆ ಸಹಾಯಕ ಆಡಳಿತಾಧಿಕಾರಿ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಮುಖ್ಯಸ್ಥರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ವ ಸಹಾಯ ಸಂಘಗಳಿಗೆ ಪೂರ್ಣ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಶ್ಲಾಘನೆ

ಭದ್ರಾವತಿ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಿದರು.
   ಭದ್ರಾವತಿ, ಜೂ. ೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಹಿಳಾ ಸದಸ್ಯರಿಗೆ ಸಾಲದ ಜೊತೆಗೆ ಪೂರ್ಣ ಪ್ರಮಾಣದ ಲಾಭಾಂಶ ಸಹ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಗುರುವಾರ ಹಳೇನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಾಭಾಂಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಬ್ಯಾಂಕ್ ಸಹ ಸಾಲದ ಜೊತೆಗೆ ಪೂರ್ಣ ಲಾಭಾಂಶವನ್ನು ತನ್ನ ಗ್ರಾಹಕರಿಗೆ ನೀಡುವುದಿಲ್ಲ. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲದ ಜೊತೆಗೆ ಪೂರ್ಣ ಲಾಭಾಂಶ ಸಹ ನೀಡುತ್ತಿರುವುದು ಸದಸ್ಯರ ಅದೃಷ್ಟವಾಗಿದೆ. ಈ ಲಾಭಾಂಶವನ್ನು ಪುನಃ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಹಿಳೆಯರು ಸಾಮಾಜಿಕ ಕಾಳಜಿಯನ್ನು ಹೊಂದಬೇಕು. ಆ ಮೂಲಕ ಸಮಾಜದಲ್ಲಿ ಪರಿವರ್ತನೆಗೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
    ಯೋಜನಾಧಿಕಾರಿ ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ಕಳೆದ ೧೪ ವರ್ಷಗಳಿಂದ ಯೋಜನೆ ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಪ್ರಗತಿನಿಧಿ ಸಾಲ ಪಡೆದು ಶಿಸ್ತು ಬದ್ಧ ವ್ಯವಹಾರದ ಜೊತೆಗೆ ಉಳಿತಾಯದ ಶಿಸ್ತು ತಿಳುವಳಿಕೆಯಡಿಯಲ್ಲಿ ಪ್ರತಿ ಸದಸ್ಯರು ಉಳಿತಾಯವನ್ನು ಮಾಡುತ್ತಿದ್ದಾರೆ. ಉಳಿತಾಯ ಮತ್ತು ಬ್ಯಾಂಕಿನ ಸಾಲ ಸದ್ಬಳಕೆ ಮಾಡಿಕೊಂಡು ಮರುಪಾವತಿ ಮಾಡಿದ್ದಲ್ಲಿ ಸಂಘಗಳಿಗೆ ಲಾಭಾಂಶ ಬರುತ್ತದೆ. ಇದುವರೆಗೂ ಒಟ್ಟು ೩ ಬಾರಿ ಲಾಭಾಂಶ ವಿತರಣೆ ಮಾಡಲಾಗಿದೆ.  ಈ ಬಾರಿ  ೨.೯೪ ಕೋ. ರು. ಒಟ್ಟು ಲಾಭಾಂಶವಾಗಿದ್ದು, ತಾಲೂಕಿನ ಒಟ್ಟು ೨೦೮೪ ಸಂಘಗಳ ೧೭,೭೦೭ ಸದಸ್ಯರು ಲಾಭಾಂಶದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
   ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿದರು. ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.
   ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ಸೇವಾ ಪ್ರತಿನಿಧಿಗಳಾದ ರಾಜೇಶ್ವರಿ, ಶೃತಿ, ಶಾರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 30, 2021

ಕೇಂದ್ರ, ರಾಜ್ಯ ಸರ್ಕಾರಗಳಿಂದ ಲಸಿಕಾ ರಾಜಕಾರಣ : ಕಾಂಗ್ರೆಸ್ ಆರೋಪ

ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ


ಭದ್ರಾವತಿ ರಂಗಪ್ಪ ವೃತ್ತದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಮನ್ ಕೀ ಬಾತ್ ಸಾಕು ಲಸಿಕೆ ಬೇಕು, ಲಸಿಕೆ ರಾಜಕಾರಣ ನಿಲ್ಲಿಸಿ ಇತ್ಯಾದಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
   ಭದ್ರಾವತಿ, ಜೂ. ೩೦: ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಲಸಿಕಾ ರಾಜಕಾರಣ ನಡೆಸುತ್ತಿದ್ದು, ಪ್ರತಿಯೊಬ್ಬರಿಗೂ ಲಸಿಕೆ ನೀಡುವಲ್ಲಿ ವಿಫಲವಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರು ಆರೋಪಿಸಿದರು.
   ಬುಧವಾರ ನಗರದ ರಂಗಪ್ಪ ವೃತ್ತದಲ್ಲಿ ಮನ್ ಕೀ ಬಾತ್ ಸಾಕು ಲಸಿಕೆ ಬೇಕು, ಲಸಿಕೆ ರಾಜಕಾರಣ ನಿಲ್ಲಿಸಿ ಇತ್ಯಾದಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಮುಖಂಡರು,  ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಇದುವರೆಗೂ ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಲಸಿಕೆ ನೀಡದೆ ನಿರ್ಲಕ್ಷ್ಯ ವಹಿಸಿವೆ. ತಕ್ಷಣ ಪ್ರತಿಯೊಬ್ಬರು ಲಸಿಕೆ ಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ನೇತೃತ್ವ ವಹಿಸಿದ್ದರು. ನಗರಸಭಾ ಸದಸ್ಯರಾದ ಜಾರ್ಜ್, ಆರ್. ಶ್ರೇಯಸ್, ಲತಾ ಚಂದ್ರಶೇಖರ್, ರಿಯಾಜ್ ಅಹಮದ್, ಮುಖಂಡರಾದ ಎಚ್.ಎಸ್ ಶಂಕರ್‌ರಾವ್, ಎಂ. ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಯುವ ಕಾಂಗ್ರೆಸ್ ಗ್ರಾಮಾಂತರ ಘಟಕ ಉಪಾಧ್ಯಕ್ಷ ಪ್ರವೀಣ್ ಕಲ್ಪನಹಳ್ಳಿ  ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭದ್ರಾವತಿಯಲ್ಲಿ ೪೫ ಕೊರೋನಾ ಸೋಂಕು ಪತ್ತೆ

ಭದ್ರಾವತಿ, ಜೂ. ೩೦: ತಾಲೂಕಿನ ಬುಧವಾರ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
   ತಾಲೂಕಿನ ಗ್ರಾಮಾಂತರ ಭಾಗದಲ್ಲಿ ೨೨ ಹಾಗು ನಗರ ಭಾಗದಲ್ಲಿ ೨೩ ಸೋಂಕು ಸೇರಿದಂತೆ ಒಟ್ಟು ೪೫ ಸೋಂಕು ಪತ್ತೆಯಾಗಿವೆ. ನಗರ ಭಾಗದಲ್ಲಿ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಸ್ವಲ್ಪ ಮಟ್ಟಿಗೆ ಸೋಂಕು ಏರಿಕೆಯಾಗಿರುವುದು ಪುನಃ ಆತಂಕ ಹೆಚ್ಚು ಮಾಡಿದೆ.