Friday, July 2, 2021

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೆಡಿಯು ವತಿಯಿಂದ ಪ್ರತಿಭಟನೆ

ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಜು. ೨: ಮೈಕ್ರೋ ಫೈನಾನ್ಸ್‌ಗಳಿಂದ ಉಂಟಾಗುತ್ತಿರುವ ತೊಂದರೆ ತಪ್ಪಿಸುವಂತೆ,  ಕಲ್ಲಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಹಾಗು ವಿಧವಾ ವೇತನ, ವೃದ್ಯಾಪ್ಯ ವೇತನ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
    ಕೊರೋನಾ ಸಂಕಷ್ಟದ ಸಮಯದಲ್ಲೂ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊರತುಪಡಿಸಿ ತಾಲೂಕಿನಲ್ಲಿರುವ ಉಜ್ಜೀವನ್, ಎಸ್‌ಕೆಎಸ್, ಬಿಎಸ್‌ಎಸ್, ಮುತ್ತೋಟ್ ಫೈನಾನ್ಸ್, ಗ್ರಾಮ ಶಕ್ತಿ, ಗ್ರಾಮೀಣ ಕೂಟ, ದಿಶಾ, ಸ್ಪಂದನ, ನಿರಂತರ, ಡಿಸಿಬಿ, ಎಲ್&ಟಿ, ಇಕ್ವಿಟಕ್ಸ್ ಮತ್ತು ಬೆಲ್‌ಸ್ಟಾರ್ ಸೇರಿದಂತೆ ಬಹುತೇಕ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದ ಮಹಿಳೆಯರಿಗೆ ಸಾಲ ಮರುಪಾವತಿಗೆ ಸಮಯಾವಕಾಶ ನೀಡದೆ ಹಿಂದಿರುಗಿಸುವಂತೆ ಪೀಡಿಸುತ್ತಿದ್ದು, ಇದರಿಂದಾಗಿ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಆರೋಪಿಸಿ ತಕ್ಷಣ ಮೈಕ್ರೋ ಫೈನಾನ್ಸ್‌ಗಳ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
  ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ರಸ್ತೆ ಕಲ್ಪಿಸಿಕೊಡುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿಧವಾ ವೇತನ, ವೃದ್ಯಾಪ್ಯ ವೇತನ ಬಿಡುಗಡೆ ಮಾಡದೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇದರಿಂದಾಗಿ ವಯೋವೃದ್ಧರು, ವಿಧವಾ ಮಹಿಳೆಯರು ಸಂಕಷ್ಟ ಅನುವಭವಿಸುವಂತಾಗಿದೆ ಎಂದು ದೂರಲಾಯಿತು.
    ಅತಿವೃಷ್ಠಿ ಮಳೆಯಿಂದಾಗಿ ತಾಲೂಕಿನಲ್ಲಿ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ೩-೪ ವರ್ಷಗಳು ಕಳೆದರೂ ಸಹ ಸೂಕ್ತ ಪರಿಹಾರ ಲಭಿಸಿಲ್ಲ. ಬಡ ಕುಟುಂಬಗಳ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ನೀಡಲಾಗುವ ನೆರವನ್ನು ಸಕಾಲದಲ್ಲಿ ನೀಡದೆ ೨-೩ ವರ್ಷಗಳ ನಂತರ ನೀಡಲಾಗುತ್ತಿದೆ. ಕಳೆದ ೩-೪ ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರನ್ನು ಬೇರೆಡೆಗೆ ವರ್ಗಾವಣೆ ಮಾಡದೆ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಂಡು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
   ಸಾಮಾಜಿಕ ಹೋರಾಟಗಾರ ಶಿವಕುಮಾರ್, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ, ವಸಂತಮ್ಮ, ಚಿನ್ನರಾಜು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment