ಭದ್ರಾವತಿ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಜೂ. ೨: ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠವಾಗಿದ್ದು, ಉಜ್ವಲ ಭವಿಷ್ಯವನ್ನು ರೂಪಿಸುವ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಇಂತಹ ವಿದ್ಯಾದಾನಕ್ಕೆ ನೆರವಾಗುವ ದಾನಿಗಳ ಶ್ರಮ ಸಾರ್ಥಕವಾಗಬೇಕೆಂದು ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಅರಳಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಶ್ರೀ ವಿನಾಯಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾನಿಗಳ ಶ್ರಮ ಸಾರ್ಥಕವಾಗಬೇಕಾದರೆ ಅವರು ಕಲ್ಪಿಸಿಕೊಡುವ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ವಿದ್ಯಾಭ್ಯಾಸದಲ್ಲಿ ಗುರಿ ಸಾಧಿಸಬೇಕೆಂದರು.
ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಎ. ಧರ್ಮೇಂದ್ರ ಮಾತನಾಡಿ, ಈ ಹಿಂದೆ ಬಹಳಷ್ಟು ಜನ ಬಡತನದಲ್ಲಿ ಶಿಕ್ಷಣ ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗದೆ ವಂಚಿತರಾಗಿದ್ದಾರೆ. ಆದರೂ ಸಹ ಕೊರಗಿನ ನಡುವೆಯೂ ಶ್ರಮದ ಮೂಲಕ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ದುಡಿಮೆಯ ಶ್ರಮ ವ್ಯರ್ಥವಾಗಬಾರದೆಂಬ ಆಶಯದ ಜೊತೆಗೆ ತಾವು ಪೂರೈಸಲು ಸಾಧ್ಯವಾಗದ ಶಿಕ್ಷಣದ ಗುರಿಯನ್ನು ಭವಿಷ್ಯದ ಮಕ್ಕಳು ಪೂರೈಸಬೇಕೆಂಬ ಬಯಕೆ ಹೊಂದಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ತಾವು ಸಹ ಒಬ್ಬರಾಗಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾ ಕಾರ್ಯವನ್ನು ಕಳೆದ ೩ ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆರಂಭದಲ್ಲಿ ಕೇವಲ ೫೦೦ ಮಕ್ಕಳಿಗೆ ಮಾತ್ರ ನೋಟ್ ಬುಕ್ ವಿತರಿಸಲು ಸಾಧ್ಯವಾಯಿತು. ನಂತರ ೧೦೦೦ ಮಕ್ಕಳಿಗೆ, ಇದೀಗ ೧೫೦೦ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ವರ್ಷದಲ್ಲಿ ಸುಮಾರು ೫೦೦೦ ಮಕ್ಕಳಿಗೆ ನೋಟ್ ಬುಕ್ ವಿತರಿಸಬೇಕೆಂಬ ಗುರಿ ಹೊಂದಲಾಗಿದೆ. ಇಂತಹ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಮೋತಿನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ್ ಮಂಜಾನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಪಾರ್ಥಿಬನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಲೋಕೇಶ್, ಜಗದೀಶ್, ರಮೇಶ್, ಸಹಾಯಕ ಪೊಲೀಸ್ ಠಾಣಾಧಿಕಾರಿ ಕುಮಾರ್, ಮಲ್ಲಿಕಾರ್ಜುನ, ಗಣಪತಿಭಟ್, ಶಾಲೆಯ ಶಿಕ್ಷಕರು, ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
super job
ReplyDelete