ಸೈಕಲ್ ತುಳಿದು ಚಾಲನೆ ನೀಡಿದ ಶಾಸಕ ಬಿ.ಕೆ ಸಂಗಮೇಶ್ವರ್
ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬುಧವಾರ ಭದ್ರಾವತಿಯಲ್ಲಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್ ಸೈಕಲ್ ತುಳಿದು ಚಾಲನೆ ನೀಡಿದರು.
ಭದ್ರಾವತಿ, ಜು. ೭: ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬುಧವಾರ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಲಾಯಿತು.
ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಮಾಲಾರ್ಪಣೆ ಮಾಡುವ ಜೊತೆಗೆ ಸ್ವತಃ ಸೈಕಲ್ ತುಳಿದು ಚಾಲನೆ ನೀಡಿದರು.
ಸೈಕಲ್ ಜಾಥಾ ಹಾಲಪ್ಪವೃತ್ತ, ಮಾಧವಚಾರ್ ವೃತ್ತ ಮೂಲಕ ರಂಗಪ್ಪ ವೃತ್ತ ತಲುಪಿತು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರಗೌಡ ಮತ್ತು ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಅಲ್ಲದೆ ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿವೆ ಎಂದು ಆರೋಪಿಸಿದರು.
ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಕಾಂತರಾಜ್, ಚನ್ನಪ್ಪ, ಸೈಯದ್ ರಿಯಾಜ್, ನಗರಸಭೆ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಕಾಂಗ್ರೆಸ್ ನಗರ ಯುವ ಘಟಕದ ಅಧ್ಯಕ್ಷ ಜಿ. ವಿನೋದ್, ಮುಖಂಡರಾದ ಅಣ್ಣೋಜಿರಾವ್, ದಶರಥಗಿರಿ, ಅಮಿರ್‌ಜಾನ್, ಮುರಳಿಕೃಷ್ಣ, ಜಗದೀಶ್, ಸದಾಶಿವಮೂರ್ತಿ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.