ಬುಧವಾರ, ಜುಲೈ 21, 2021

ಸ್ವಾಮೀಜಿಗಳ ನಿಯೋಗದ ತೀರ್ಮಾನಕ್ಕೆ ಬಿಳಿಕಿ ಶ್ರೀ ಬೆಂಬಲ

ಯಡಿಯೂರಪ್ಪ ಬದಲಿಸದಿರಲು ಬಿಜೆಪಿ ಹೈಕಮಾಂಡ್‌ಗೆ ಆಗ್ರಹ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಭದ್ರಾವತಿ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ.
   ಭದ್ರಾವತಿ, ಜು. ೨೧: ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ವದಂತಿ ಹಿನ್ನಲೆಯಲ್ಲಿ ಸ್ವಾಮೀಜಿಗಳ ನಿಯೋಗ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ನಿಯೋಗದಲ್ಲಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು.
   ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸುವ ಸಂಬಂಧ ಸ್ವಾಮೀಜಿಗಳ ನಿಯೋಗ ಕೈಗೊಂಡ ತೀರ್ಮಾನಕ್ಕೆ ಬಿಳಿಕಿ ಶ್ರೀಗಳು ಬದ್ಧರಾಗಿದ್ದು, ಅಲ್ಲದೆ ಶ್ರೀಗಳು ವೈಯಕ್ತಿಕವಾಗಿ ಸಹ ಬಿ.ಎಸ್ ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸದಿರುವಂತೆ ಬಿಜೆಪಿ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.

ಜೆಡಿಎಸ್ ನೂತನ ಪದಾಧಿಕಾರಿಗಳ ಆಯ್ಕೆ ಜವಾಬ್ದಾರಿ ಶಾರದ ಅಪ್ಪಾಜಿ ಹೆಗಲಿಗೆ

ಭದ್ರಾವತಿ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸರದ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು.  
    ಭದ್ರಾವತಿ, ಜು. ೨೧: ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಜಾತ್ಯಾತೀತ ಜನತಾದಳ ಕ್ಷೇತ್ರದಲ್ಲಿ ಹೆಚ್ಚು ಸಂಘಟಿತಗೊಳ್ಳುವ ಉದ್ದೇಶದಿಂದ ಹೊಸ ಪದಾಧಿಕಾರಿಗಳ ಆಯ್ಕೆಗೆ ಮುಂದಾಗಿದೆ.
    ಈ ಸಂಬಂಧ ಬುಧವಾರ ಹುತ್ತಾಕಾಲೋನಿ ಚಂದ್ರಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗು ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
    ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಹೋರಾಟದ ಆದರ್ಶಗಳನ್ನು ಮುಂದಿಟ್ಟುಕೊಂಡು ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಶಾರದ ಅಪ್ಪಾಜಿಯವರನ್ನು ಪ್ರತಿಯೊಬ್ಬರು ಬೆಂಬಲಿಸುವ ಜೊತೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಅವರ ವಿವೇಚನೆಗೆ ನೀಡಬೇಕೆಂಬ ಒಮ್ಮತದ ತೀರ್ಮಾನ ಸಭೆಯಲ್ಲಿ ಕೈಗೊಳ್ಳಲಾಯಿತು.
    ಪಕ್ಷದ ತಾಲೂಕು ಅಧ್ಯಕ್ಷ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾರದ ಅಪ್ಪಾಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮುಖಂಡರಾದ ಡಿ.ಟಿ ಶ್ರೀಧರ್, ಕರಿಯಪ್ಪ, ಬದರಿನಾರಾಯಣ, ಎಂ.ಎ ಅಜಿತ್, ಮೈಲಾರಪ್ಪ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪರನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸದಿರಿ

ಭದ್ರಾವತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.
   ಭದ್ರಾವತಿ, ಜು. ೨೧: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ಹಾಗು ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಸಮರ್ಪಕವಾಗಿ ಆಡಳಿತ ನಿರ್ವಹಿಸಿರುವ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
     ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ ರಾಜಿನಾಮೆ ಪಡೆಯುತ್ತಾರೆಂಬ ವದಂತಿ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಈಗಾಗಲೇ ಎಲ್ಲೆಡೆ ಪ್ರತಿರೋಧ ಸಹ ವ್ಯಕ್ತವಾಗುತ್ತಿದೆ. ಯಡಿಯೂರಪ್ಪ ಅವರನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆಗೊಳಿಸಬಾರದು. ಇದರಿಂದಾಗಿ ಭವಿಷ್ಯದಲ್ಲಿ ಪಕ್ಷ ಹಾಗು ರಾಜ್ಯದ ಜನತೆ ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮಠಾಧೀಶರು, ವಿರೋಧ ಪಕ್ಷದ ನಾಯಕರು ಸಹ ತಿಳಿಸಿದ್ದಾರೆ ಎಂದರು.
    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಯಡಿಯೂರಪ್ಪನವರ ಶ್ರಮ ಹೆಚ್ಚಿನದ್ದಾಗಿದೆ. ಅಲ್ಲದೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಜಾತಿ, ಜನಾಂಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ರಾಜ್ಯದ ಆಡಳಿತ ಯಂತ್ರವನ್ನು ಮುಂದೆ ಸಹ  ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಹುದ್ದೆಯಿಂದ ಬಿಡುಗಡೆಗೊಳಿಸಬಾರದು ಎಂದು ಮನವಿ ಮಾಡಿದರು.
   ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಸಿ ವೀರಭದ್ರಪ್ಪ, ಅಡವೀಶಯ್ಯ, ತೀರ್ಥಯ್ಯ, ಆರ್. ಮಹೇಶ್‌ಕುಮಾರ್, ಸಿದ್ದಲಿಂಗಯ್ಯ, ಬಿ.ಎಸ್ ಮಹೇಶ್‌ಕುಮಾರ್, ಬಸವರಾಜ್, ಯಶೋಧ ವೀರಭದ್ರಪ್ಪ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಂಗಳವಾರ, ಜುಲೈ 20, 2021

ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್‌ಗೆ ಅಭಿನಂದನೆ

ಸುಮಾರು ೯ ತಿಂಗಳ ಕಾಲ ಭದ್ರಾವತಿ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರನ್ನು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಜು. ೨೦: ಸುಮಾರು ೯ ತಿಂಗಳ ಕಾಲ ತಾಲೂಕಿನ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಅವರನ್ನು ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಸಮಿತಿ ಹೋರಾಟಕ್ಕೆ ಸ್ಪಂದಿಸಿದ ತಹಸೀಲ್ದಾರ್‌ಗೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಅಭಿನಂದಿಸುವ ಜೊತೆಗೆ ಇನ್ನೂ ಉನ್ನತ ಹುದ್ದೆ ಲಭಿಸಲಿ ಎಂದು ಹಾರೈಸಲಾಯಿತು.
ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಮಿತಿಯ ಪ್ರಮುಖರಾದ ಸುಬ್ಬೇಗೌಡ, ಎರೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವರಾಮ್, ಎನ್. ಮಂಜುನಾಥ್, ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದ ಉಪಾಧ್ಯಕ್ಷ ತಬ್ರೆಸ್‌ಖಾನ್, ಕಾರ್ಯದರ್ಶಿ ಶಂಕರ್, ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೧೩ ಕೊರೋನಾ ಸೋಂಕು

ಭದ್ರಾವತಿ, ಜು. ೨೦: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಕಳೆದ ೩-೪ ದಿನಗಳಿಂದ ೧೦ರ ಗಡಿ ದಾಟಿದ್ದು, ಮಂಗಳವಾರ ೧೩ ಪ್ರಕರಣಗಳು ಪತ್ತೆಯಾಗಿವೆ.
    ಒಟ್ಟು ೬೭೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ೧೩ ಜನರಲ್ಲಿ ಸೋಂಕು ದೃಢಪಟ್ಟಿದೆ. ೭ ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ೭೫೧೪ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೭೪೬೦ ಜನರು ಗುಣಮುಖರಾಗಿದ್ದಾರೆ. ೫೪ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿದ್ದು, ಇದುವರೆಗೂ ಸೋಂಕಿಗೆ ೧೫೫ ಜನ ಬಲಿಯಾಗಿದ್ದಾರೆ. ನಗರ ವ್ಯಾಪ್ತಿಯಲ್ಲಿ ೨ ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿದ್ದು, ಇದುವರೆಗೂ ೧೭೦ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಲಿಡ್ಕರ್‌ಗೆ ಎರವಲು ಸೇವೆಗೆ ನಿಯೋಜನೆಗೊಂಡ ಉದ್ಯೋಗಿ ರಮೇಶ್‌ಗೆ ಬೀಳ್ಕೊಡುಗೆ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ನಗರಾಡಳಿತ ವಿಭಾಗದ ಉದ್ಯೋಗಿ ರಮೇಶ್ ಕರ್ನಾಟಕ ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್(ಲಿಡ್ಕರ್)ಗೆ ಎರವಲು ಉದ್ಯೋಗಿಯಾಗಿ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳವಾರ ನಗರಾಡಳಿತ ವಿಭಾಗದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
   ಭದ್ರಾವತಿ, ಜು. ೨೦: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಗರಾಡಳಿತ ವಿಭಾಗದ ಉದ್ಯೋಗಿ ರಮೇಶ್ ಕರ್ನಾಟಕ ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್(ಲಿಡ್ಕರ್)ಗೆ ಎರವಲು ಉದ್ಯೋಗಿಯಾಗಿ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳವಾರ ನಗರಾಡಳಿತ ವಿಭಾಗದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ನೌಕರರನ್ನು ವಿವಿಧ ನಿಗಮ-ಮಂಡಳಿಗಳಲ್ಲಿ ಎರವಲು ಸೇವೆಗೆ ನಿಯೋಜನೆಗೊಳಿಸಲು ಆದೇಶಿಸಿದ್ದು, ಈಗಾಗಲೇ ಬಹುತೇಕ ಉದ್ಯೋಗಿಗಳು ವಿವಿಧ ನಿಗಮ ಮಂಡಳಿಗಳಲ್ಲಿ ಎರವಲು ಸೇವೆಗೆ ನಿಯೋಜನೆಗೊಂಡಿದ್ದಾರೆ.
   ನಗರಾಡಳಿತ ವಿಭಾಗದಲ್ಲಿ ಉದ್ಯೋಗಿಯಾಗಿರುವ ರಮೇಶ್‌ರವರು ಲಿಡ್ಕರ್ ಬೆಳಗಾವಿ ಶಾಖೆಯಲ್ಲಿ ಎರವಲು ಸೇವೆಗೆ ನಿಯೋಜನೆಗೊಂಡಿದ್ದಾರೆ. ಇವರನ್ನು ನಗರಾಡಳಿತಾಧಿಕಾರಿ ಸತೀಶ್, ನಗರಸಭೆ ಸದಸ್ಯ ಬಸವರಾಜ ಬಿ. ಆನೇಕೊಪ್ಪ, ಸಹದ್ಯೋಗಿ ಎಪಿಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

ಸೋಮವಾರ, ಜುಲೈ 19, 2021

ಯಶಸ್ವಿವಾಗಿ ನಡೆದ ಮೊದಲ ದಿನದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ೪,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರು

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ ಹಿಂದಿಗುತ್ತಿರುವ ವಿದ್ಯಾರ್ಥಿಗಳು.
    ಭದ್ರಾವತಿ, ಜು. ೧೯: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನಾದ್ಯಂತ ಯಶಸ್ವಿಯಾಗಿದ್ದು, ಸುಮಾರು ೪೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಗಮನ ಸೆಳೆದರು.
   ಮೊದಲ ಬಾರಿಗೆ ಪರೀಕ್ಷಾ ಮಂಡಳಿ ನಡೆಸಿದ ಓ.ಎಂ.ಆರ್ ಗುರುತು ಮಾಡುವ ಹೊಸ ಮಾದರಿ ಪರೀಕ್ಷೆಗೆ ಪೂರಕ ಸ್ಪಂದನೆ ವ್ಯಕ್ತವಾಗಿದ್ದು, ವಿಷಯ-೧ಕ್ಕೆ ೪,೫೧೮, ವಿಷಯ-೨ಕ್ಕೆ ೪,೩೯೧ ಮತ್ತು ವಿಷಯ-೩ಕ್ಕೆ ೪,೨೬೧ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ ವಿಷಯ-೧ಕ್ಕೆ ೧೮, ವಿಷಯ-೨ಕ್ಕೆ ೧೪ ಹಾಗು ವಿಷಯ-೩ಕ್ಕೆ ೧೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
    ಅನಾರೋಗ್ಯದಿಂದ ಓರ್ವ ವಿದ್ಯಾರ್ಥಿ ವಿಶೇಷ ಕೊಠಡಿಯಲ್ಲಿ ಹಾಗು ಕೊರೋನಾ ಸೋಂಕಿಗೆ ಒಳಗಾದ ಓರ್ವ ವಿದ್ಯಾರ್ಥಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಪರೀಕ್ಷೆ ಬರೆದಿದ್ದು, ವಸತಿ ನಿಲಯಗಳ ೨೦ ವಿದ್ಯಾರ್ಥಿಗಳು ಹಾಗು ೬೧ ವಲಸೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ.
   ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮುಂಜಾಗ್ರತೆ ವಹಿಸಲಾಯಿತು.