Friday, August 13, 2021

ಶಿವಪಾರ್ವತಿದೇವಿ, ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ

ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಿದ ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
     ಭದ್ರಾವತಿ, ಆ. ೧೩:  ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಶುಕ್ರವಾರ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಿದರು. ಇದಕ್ಕೂ ಮೊದಲು ಧಾರ್ಮಿಕ ಆಚರಣೆಗಳು ಜರುಗಿದವು.  ಶ್ರೀ ಕ್ಷೇತ್ರ ಭದ್ರಗಿರಿ ಮುರುಗೇಶ್ ಸ್ವಾಮೀಜಿ ಉಪಸ್ಥಿತರಿದ್ದರು.
     ವೇದಿಕೆ ಕಾರ್ಯಕ್ರಮದಲ್ಲಿ ವಿಗ್ರಹ ದಾನಿಗಳಾದ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ, ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ನೂತನ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಗಂಗಯ್ಯ, ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಮಾಜ ಸೇವಕ, ಪೊಲೀಸ್ ಉಮೇಶ್ ಅವರಿಂದ ಅನ್ನಸಂತರ್ಪಣೆ ನೆರವೇರಿತು. ಪೂರ್ಣಿಮಾ ನಿರಂಜನ್ ಸ್ವಾಗತಿಸಿದರು. ನಾಗಲಕ್ಷ್ಮಿ ನಿರೂಪಿಸಿದರು.

ಆ.೧೬ರಂದು ಜೆಡಿಎಸ್ ಮುಖಂಡರಿಂದ ಬಾಗಿನ ಸಮರ್ಪಣೆ

    ಭದ್ರಾವತಿ, ಆ. ೧೩: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯಕ್ಕೆ ಜಾತ್ಯಾತೀತ ಜನತಾದಳ ಮುಖಂಡರು ಆ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗಂಗಾಪೂಜೆಯೊಂದಿಗೆ ಬಾಗಿನ ಸಮರ್ಪಿಸಲಿದ್ದಾರೆ.
    ಪಕ್ಷದ ವಿವಿಧ ಘಟಕಗಳ ಹಾಗು ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಸಮಸ್ತ ನಾಗರೀಕರು ಕೋವಿಡ್-೧೯ ಪಾಲಿಸುವುದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಕೋರಿದ್ದಾರೆ.

ನಗರದೆಲ್ಲೆಡೆ ನಾಗರಪಂಚಮಿ ಅದ್ದೂರಿ ಆಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಹಾಲಪ್ಪಶೆಡ್‌ನಲ್ಲಿರುವ ನಾಗರ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.  
     ಭದ್ರಾವತಿ, ಆ. ೧೩: ನಗರದೆಲ್ಲೆಡೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಶುಕ್ರವಾರ ಅದ್ದೂರಿಯಾಗಿ ಜರುಗಿತು.
    ನಾಗರ ದೇವಸ್ಥಾನ, ನಾಗಬನ, ನಾಗರಕಟ್ಟೆ ಹಾಗು ವಿವಿಧ ದೇವಸ್ಥಾನಗಳಲ್ಲಿ ನಾಗರಪಂಚಮಿ ಅಂಗವಾಗಿ ನಾಗರ ಹುತ್ತಕ್ಕೆ ತುಪ್ಪದ ನೈವೇದ್ಯದೊಂದಿಗೆ ಹಾಲು ಎರೆಯಲಾಯಿತು. ಮಳೆ ಇಲ್ಲದ ಕಾರಣ ಭಕ್ತರು ಮನೆಗಳಿಂದ ಹೊರಬಂದು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡರು.
     ಕಳೆದ ವರ್ಷ ಕೋವಿಡ್-೧೯ ಸೋಂಕು ವ್ಯಾಪಕವಾಗಿ ವ್ಯಾಪಿಸಿದ್ದ ಹಿನ್ನಲೆಯಲ್ಲಿ ಆಚರಣೆ ಮೊಟಕುಗೊಂಡಿದ್ದು, ಈ ಬಾರಿ ೩ನೇ ಅಲೆ ಪ್ರಾರಂಭದ ಹಂತದಲ್ಲಿರುವ ಮುನ್ಸೂಚನೆ ಕಂಡು ಬರುತ್ತಿದೆ. ಆದರೂ ಸಹ ಭಕ್ತರು ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸದೆ ಇರುವುದು ಕಂಡು ಬಂದಿತು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಕೆರೆ ಸಮೀಪದಲ್ಲಿರುವ ಶ್ರೀ ಅಶ್ವಥ್‌ಕಟ್ಟೆ ಮತ್ತು ಶ್ರೀ ನಾಗದೇವರ ಕಟ್ಟೆ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿರುವುದು.

ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆ : ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌ ನೇತೃತ್ವದಲ್ಲಿ  ತಹಸೀಲ್ದಾರ್, ಅಬಕಾರಿ, ರಕ್ಷಣಾ ಇಲಾಖೆಗೆ ಮನವಿ


ಭದ್ರಾವತಿ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ   ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್‌ ನೇತೃತ್ವದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೧೩: ನಗರದ ಡೈರಿ ಸರ್ಕಲ್ ಬಳಿ ತೆರೆಯಲಾಗಿರುವ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಡೈರಿ ಸರ್ಕಲ್ ಅದರಲ್ಲೂ ಬಸ್ ನಿಲ್ದಾಣದ ಬಳಿಯೇ ಅನೇಕ ವರ್ಷಗಳಿಂದ ಎರಡು ಮದ್ಯದಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ.
    ಸಮೀಪದಲ್ಲಿ ಆಯುರ್ವೇದಿಕ್ ಕಾಲೇಜು, ಡೈರಿ, ಕೆಎಸ್‌ಆರ್‌ಪಿ ಹಾಗು ಕೈಗಾರಿಕಾ ಪ್ರದೇಶವಿದ್ದು, ಪ್ರತಿದಿನ ಗಾರ್ಮೆಂಟ್ಸ್ ಕೆಲಸಕ್ಕೆ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪ್ರಯಾಣಿಕರು ಇದೆ ರಸ್ತೆಯಲಿ ಓಡಾಡಬೇಕಾಗಿದೆ. ಈ ಮದ್ಯದಂಗಡಿಗಳಲ್ಲಿ ಮದ್ಯ ಸೇವನೆ ಮಾಡಲು ಬರುವವರಿಂದ ವಿನಾಕಾರಣ ತೊಂದರೆ ಎದುರಾಗಿದೆ. ಆಗಾಗ ಮದ್ಯಸೇವನೆ ಮಾಡುವವರ ನಡುವೆ ಗಲಾಟೆ ನಡೆದು ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎರಡು ಮದ್ಯದಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
   ತಹಸೀಲ್ದಾರ್ ಆರ್. ಪ್ರದೀಪ್ ಹಾಗು ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ಮತ್ತು ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ಭಾರತಿ ಅವರಿಗೆ ಮನವಿ ಸಲ್ಲಿಸಲಾಯಿತು.
    ರಕ್ಷಣಾವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷರಾದ ಅನಿತಾ, ಗೌರಮ್ಮ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಗೀತಾ, ರೂಪನಾರಾಯಣ, ಪದಾಧಿಕಾರಿಗಳಾದ ನಾಗರತ್ನ, ಶೋಭಾ, ಆಸ್ಮಿತ್‌ತಾಜ್, ಪದ್ಮಮ್ಮ, ಆಯುರ್ವೇದಿಕ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಹಿರೇಮಠ್, ಮುಖಂಡರಾದ ನಾರಾಯಣ ಐಹೊಳೆ, ಪೊಲೀಸ್ ಇಲಾಖೆಯ ಸೋಮಶೇಖರ್, ಪ್ರಶಾಂತ್, ಯಶವಂತ್, ನವೀನ್, ಮಾಯಣ್ಣ, ಬಾಲಕೃಷ್ಣ ಹಾಗು ವಿದ್ಯಾರ್ಥಿಗಳು, ಸ್ಥಳೀಯರು ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Thursday, August 12, 2021

ದೇಶದಲ್ಲಿ ಮಹಿಳೆಯರಿಂದ ವಿಶಿಷ್ಟ ಕೊಡುಗೆ, ಆರ್ಥಿಕವಾಗಿ ಮುಂದೆ ಬರಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ವೀರಶೈವ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರಸಭೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮತ್ತು ಹೊಸಸಿದ್ದಾಪುರದ ಸಹ್ಯಾದ್ರಿ ಪ್ರದೇಶ ಮಟ್ಟದ ಒಕ್ಕೂಟ ಹಾಗು ಫ್ಲಿಫ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳಡಿ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ವಸ್ತು ಮತ್ತು ಉಪಕರಣಗಳ ಛಾಯಾಚಿತ್ರ ತೆಗೆಯುವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಛಾಯಾ ಗ್ರಾಹಕರಾಗಿ ಕೆಲ ಕ್ಷಣ ಅಚ್ಚರಿ ಮೂಡಿಸಿದರು.
     ಭದ್ರಾವತಿ, ಆ. ೧೨: ದೇಶದಲ್ಲಿ ಮಹಿಳೆಯರು ತಮ್ಮದೇ ಆದ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಿದ್ದು, ಮಹಿಳೆಯರು ಸಹ ಆರ್ಥಿಕವಾಗಿ ಮುಂದೆ ಬರಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
     ಅವರು ಗುರುವಾರ ನಗರದ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಗರಸಭೆ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಮತ್ತು ಹೊಸಸಿದ್ದಾಪುರದ ಸಹ್ಯಾದ್ರಿ ಪ್ರದೇಶ ಮಟ್ಟದ ಒಕ್ಕೂಟ ಹಾಗು ಫ್ಲಿಫ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳಡಿ ಬೆಂಗಳೂರು ಮತ್ತು ಮೈಸೂರು ವಿಭಾಗ ಮಟ್ಟದ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ವಸ್ತು ಮತ್ತು ಉಪಕರಣಗಳ ಛಾಯಾಚಿತ್ರ ತೆಗೆಯುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳ ಮಹಿಳೆಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸದ್ಬಳಕೆಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದರು.
     ಮಹಿಳೆಯರು ಆರ್ಥಿಕವಾಗಿ ಬೆಳವಣಿಗೆ ಸಾಧಿಸಿದ್ದಲ್ಲಿ ಕುಟುಂಬ ಸಹ ಬೆಳವಣಿಗೆ ಹೊಂದುತ್ತದೆ. ಅಲ್ಲದೆ ಮಕ್ಕಳ ಉತ್ತಮ ಭವಿಷ್ಯಕ್ಕೆ ಮಹಿಳೆಯರು ಸಹ ಕೈ ಜೋಡಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಮತ್ತು ಉತ್ತಮ ವಾತಾವರಣ ಮೂಡುತ್ತದೆ ಎಂದರು.
    ಜಿಲ್ಲಾ ಕೌಶಲ್ಯಾಭಿವೃದ್ಧಿ ಸಹ ಸಂಚಾಲಕ ಸುರೇಶ್ ಮತ್ತು ಸಮನ್ವಯ ಕಾಶಿ ಮಾತನಾಡಿ, ಇಲಾಖೆಯಿಂದ ಲಭ್ಯವಾಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭದ್ರಾವತಿ ತಾಲೂಕಿನಲ್ಲಿ  ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳಿಗೆ ಶಾಸಕರು ಹೆಚ್ಚಿನ ಸಹಕಾರ ನೀಡುತ್ತಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚಿನ ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವ ವಿಶ್ವಾಸವಿದೆ ಎಂದರು.
    ಪೌರಾಯುಕ್ತ ಕೆ. ಪರಮೇಶ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಹಾಗು ಮಹಿಳಾ ಒಕ್ಕೂಟ ಮತ್ತು ಸ್ವ-ಸಹಾಯ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೆ.೩ರಂದು ವಾರ್ಡ್ ನಂ.೨೯ಕ್ಕೆ ಚುನಾವಣೆ

    ಭದ್ರಾವತಿ, ಆ. ೧೨: ಇಲ್ಲಿನ ನಗರಸಭೆಗೆ ಏಪ್ರಿಲ್ ತಿಂಗಳಿನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ.೨೯ರ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನಲೆಯಲ್ಲಿ ರದ್ದು ಮಾಡಲಾಗಿದ್ದ ವಾರ್ಡಿನ ಚುನಾವಣೆ ಸೆ.೩ರಂದು ನಡೆಯಲಿದೆ.
     ಚುನಾವಣಾ ಆಯೋಗ ನಗರಸಭೆ ೩೫ ವಾರ್ಡ್‌ಗಳಿಗೆ ಏಪ್ರಿಲ್‌ನಲ್ಲಿ ಚುನಾವಣೆ ಘೋಷಿಸಿತ್ತು. ವಾರ್ಡ್ ನಂ. ೨೯ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ ಶೃತಿ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಆಯೋಗ ಚುನಾವಣೆಯನ್ನು ರದ್ದುಗೊಳಿಸಿತ್ತು.
    ಇದೀಗ ಪುನಃ ಚುನಾವಣೆ ಘೋಷಿಸಿತ್ತು. ಆ.೧೬ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.೨೩ ಹಾಗು ನಾಮಪತ್ರ ಹಿಂಪಡೆಯಲು ಆ. ೨೬ ಕೊನೆಯ ದಿನವಾಗಿದೆ. ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಮತ ಎಣಿಕೆ ನಡೆಯಲಿದೆ.
     ಈಗಾಗಲೇ ೩೪ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಅತಿ ಹೆಚ್ಚು ೧೮ ಸ್ಥಾನಗಳನ್ನು, ಜೆಡಿಎಸ್ ೧೧ ಸ್ಥಾನಗಳನ್ನು ಮತ್ತು ಬಿಜೆಪಿ ೪ ಸ್ಥಾನಗಳನ್ನು ಪಡೆದುಕೊಂಡಿದ್ದು,  ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ವಾರ್ಡ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನಲಾಗಿದ್ದು, ಉಳಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪ್ರತಿಷ್ಠೆಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಾಗಿದೆ.

ಶ್ರೀನಿವಾಸ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರಕ್ಕೆ ೨ ಲಕ್ಷ ರು. ಆರ್ಥಿಕ ನೆರವು

ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಭದ್ರಾವತಿ, ಆ. ೧೨: ಸಾಮಾಜಿಕ ಕಾರ್ಯ ಯೋಜನೆಯಡಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಿದ್ಧಾರೂಢ ನಗರದಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ಕಟ್ಟಡ ಅಭಿವೃದ್ಧಿ ಕಾಮಗಾರಿಗಳಿಗೆ ರು. ೨ ಲಕ್ಷ ಆರ್ಥಿಕ ನೆರವು ನೀಡಲಾಯಿತು.
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಆಶಯದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳಿಗೆ ಯೋಜನೆವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.
ಗುರುವಾರ ರು.೨ ಲಕ್ಷ ನೆರವಿನ ಚೆಕನ್ನು ದೇವಸ್ಥಾನ ಸಂಕರ್ಷಣ ಧರ್ಮ ಸಂಸ್ಥೆ ಟ್ರಸ್ಟ್‌ಗೆ ಯೋಜನಾಧಿಕಾರಿ ಪ್ರಕಾಶ್ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಜಿ. ಆನಂದಕುಮಾರ್ ಸಮ್ಮುಖದದಲ್ಲಿ ವಿತರಿಸಿದರು.
    ವಲಯದ ಮೇಲ್ವಿಚಾರಕ ವಿ.ಎನ್ ಪ್ರಶಾಂತ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಾಸು ವೇದಮೂರ್ತಿ, ಉಪಾಧ್ಯಕ್ಷ ರಾಘವೇಂದ್ರ, ಸುಬ್ರಮಣ್ಯ, ಎಚ್. ಮಧುಸೂದನ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.