Friday, August 20, 2021

ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
      ಭದ್ರಾವತಿ, ಆ. ೨೦: ಕರ್ನಾಟಕ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ದೇವರಾಜ ಅರಸು ಎಂದಿಗೂ ಮರೆಯಲಾಗದ ಒಬ್ಬ ಅದ್ಭುತ ಆದರ್ಶ ವ್ಯಕ್ತಿಯಾಗಿದ್ದು, ಇಂದಿಗೂ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ರಾಜಕಾರಣದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಅಂದು ಅರಸು ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಸಹ ತಮಗಾಗಿ ಏನನ್ನು ಸಹ ಮಾಡಿಕೊಳ್ಳಲಿಲ್ಲ. ಸದಾ ಕಾಲ ಹಿಂದುಳಿದವರು, ದೀನದಲಿತರ ಪರವಾಗಿ ಚಿಂತನೆಗಳನ್ನು ನಡೆಸುವ ಮೂಲಕ ಅವರ ಅಭ್ಯುದಯಕ್ಕಾಗಿ ಶ್ರಮಿಸಿದರು.  ಪ್ರಾಮಾಣಿಕ ಹಾಗು ಸಜ್ಜನ ಗುಣಗಳಿಂದಾಗಿ ಎಲ್ಲಾ ರಾಜಕಾರಣಿಗಳಿಗಿಂತಲೂ ವಿಭಿನ್ನವಾಗಿ ಕಂಡು ಬರುತ್ತಾರೆ. ಈ ಹಿನ್ನಲೆಯಲ್ಲಿ ಅವರನ್ನು ಇಂದಿಗೂ ನಾವುಗಳು ನೆನಪು ಮಾಡಿಕೊಳ್ಳುತ್ತಿದ್ದೇವೆ. ಇವರ ಆದರ್ಶತನಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರಾಜೇಶ್ವರಿ, ಮೀನಾಕ್ಷಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಹಿಂದುಳಿದ ವರ್ಗಗಳ ಇಲಾಖೆಯ ರಮೇಶ್, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.  

Thursday, August 19, 2021

ಕಾಂಗ್ರೆಸ್ ಕಾರ್ಮಿಕ ವಿಭಾಗದ ತಾಲೂಕು ಅಧ್ಯಕ್ಷರಾಗಿ ಬಿ.ಎಸ್ ಅಭಿಲಾಷ್ ನೇಮಕ

ಕಾಂಗ್ರೆಸ್ ಕಾರ್ಮಿಕ ವಿಭಾಗದ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ಬಿ.ಎಸ್ ಅಭಿಲಾಷ್ ನೇಮಕಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಆದೇಶ ಪತ್ರ ವಿತರಿಸಿದರು.
     ಭದ್ರಾವತಿ, ಆ. ೧೯: ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಭಂಡಾರಹಳ್ಳಿ ಕವಲಗುಂದಿ ನಿವಾಸಿ ಬಿ.ಎಸ್ ಅಭಿಲಾಷ್ ನೇಮಕಗೊಂಡಿದ್ದಾರೆ.
     ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಸೂಚನೆ ಮೇರೆಗೆ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಕಾರ್ಮಿಕ ವಿಭಾಗದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ.
      ಅಭಿಲಾಷ್ ಈಗಾಗಲೇ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಯೂನಿಯನ್ ತಾಲೂಕು ಶಾಖೆ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಹೊಂದಿದ್ದಾರೆ.
    ಆದೇಶ ಪತ್ರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್ ವಿತರಿಸಿದರು. ಪ್ರಮುಖರಾದ ವಿಭಾಗದ ಜಿಲ್ಲಾಧ್ಯಕ್ಷ ಎಂ.ಕೆ ಪ್ರಮೋದ್ ನಗರಸಭಾ ಸದಸ್ಯ ಜಾರ್ಜ್, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಯೂನಿಯನ್ ತಾಲೂಕು ಶಾಖೆ ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಎಚ್. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಅಭಿಲಾಷ್ ಕೃತಜ್ಞತೆ ಸಲ್ಲಿಸಿದ್ದಾರೆ.

ಮ್ಯಾರಥಾನ್ ಸ್ಪರ್ಧೆ : ಸರ್‌ಎಂವಿ ಕಾಲೇಜಿನ ೫ ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ರಾಜೀವ್ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್  ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರನ್ ಫಾರ್ ರಾಜೀವ್ ೫ ಕಿ.ಮೀ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ  ಸ್ಕೌಟ್ಸ್ ಮತ್ತು ರೋವರ್ ೫ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
   ಭದ್ರಾವತಿ, ಆ. ೧೯: ರಾಜೀವ್ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್  ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರನ್ ಫಾರ್ ರಾಜೀವ್ ೫ ಕಿ.ಮೀ ಮ್ಯಾರಾಥಾನ್ ಸ್ಪರ್ಧೆಯಲ್ಲಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ  ಸ್ಕೌಟ್ಸ್ ಮತ್ತು ರೋವರ್ ೫ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
   ಮ್ಯಾರಥಾನ್ ಸ್ಪರ್ಧೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು,  ಈ ಪೈಕಿ ಮೊದಲ ೧೦ ಸ್ಥಾನಗಳಲ್ಲಿ ಆರ್.ಮನೋಜ್, ಎಂ.ಸಚಿನ್. ಸುರೇಶ್ ರಾಥೋಡ್, ಎ.ನಾಗರಾಜ ಮತ್ತು  ಮುನೀರ್ ಪಾಷ ಸೇರಿದಂತೆ ೫ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.
   ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗು ಸದಸ್ಯರು, ಪ್ರಾಂಶುಪಾಲ ಡಾ.ಎಂ.ಜಿ ಉಮಾ ಶಂಕರ್, ರೋವರ್ ಲೀಡರ್ ಪ್ರೊ.ಎಸ್. ವರದರಾಜ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಡಿ ವಿಶ್ವನಾಥ್, ಯೋಗೇಶ್, ಶಫಿ, ದೇವರಾಜ ಅರಸ್ ಹಾಗು ಬೋಧಕ ಮತ್ತು ಬೋಧಕೇತರ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಹಳೇ ವಿದ್ಯಾರ್ಥಿಗಳಿಂದ ನವೀಕರಣಗೊಂಡ ಕಾಗದನಗರ ಆಂಗ್ಲ ಶಾಲೆ

ಸುಮಾರು ೪ ದಶಕಗಳಿಂದ  ಶಿಕ್ಷಣ ನೀಡುತ್ತಿರುವ ಪ್ರತಿಷ್ಠಿತ ಶಾಲೆ

ಭದ್ರಾವತಿ ಕಾಗದ ನಗರ ಆಂಗ್ಲ ಶಾಲೆ

     * ಅನಂತಕುಮಾರ್
    ಭದ್ರಾವತಿ: ತಾವು ವಿದ್ಯೆ ಕಲಿತ ಸ್ಥಳ ಭವಿಷ್ಯದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸ್ಪೂರ್ತಿಯನ್ನು ನೀಡಲಿ. ವಿದ್ಯಾ ಸಂಸ್ಥೆ ಮತ್ತಷ್ಟು ಉನ್ನತ ಮಟ್ಟದಲ್ಲಿ ಸಾಗಲಿ ಎಂಬ ಧ್ಯೇಯದೊಂದಿಗೆ ಕಾಗದ ನಗರ ಆಂಗ್ಲ ಶಾಲೆಯ ಹಳೇಯ ವಿದ್ಯಾರ್ಥಿಗಳು ತಾವು ದುಡಿದ ಹಣದಲ್ಲಿ ಒಂದಿಷ್ಟನ್ನು ವಿದ್ಯಾಸಂಸ್ಥೆಗಾಗಿ ಮೀಸಲಿಡುವ ಜೊತೆಗೆ ಕಟ್ಟಡ ನವೀಕರಣ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  
     ಈ ಶಾಲೆಯಲ್ಲಿ ೧೯೯೨ ರಿಂದ ೨೦೧೪ರವರೆಗಿನ ಅವಧಿಯಲ್ಲಿ ವ್ಯಾಸಂಗ ನಡೆಸಿರುವ ವಿನೂತನ್, ಎಚ್.ಆರ್ ಮಮತ, ಪ್ರೀತಮ್, ಡಾ. ಮಹಾನಂದ, ಅರುಣ್‌ಕುಮಾರ್, ದಿಲೀಪ್ ಮತ್ತು ಶರತ್ ಅವರನ್ನೊಳಗೊಂಡ ತಂಡ ಕಳೆದ ಸುಮಾರು ೨ ತಿಂಗಳಿನಿಂದ ನಿರಂತರವಾಗಿ ಶ್ರಮವಹಿಸಿ ಶಾಲೆಯ ಕಟ್ಟಡ ನವೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದೆ.
     ಕಟ್ಟಡ ಹಲವಾರು ವರ್ಷಗಳಿಂದ ಸುಣ್ಣಬಣ್ಣ ಕಾಣದೆ ಜೊತೆಗೆ ಕಟ್ಟಡದ ಸುತ್ತ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಪಾಚಿಯಿಂದ ಆವರಿಸಿಕೊಂಡಿತ್ತು. ಅದರಲ್ಲೂ ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ರ ಹಿನ್ನಲೆಯಲ್ಲಿ ಭೌತಿಕವಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಪಾಳುಬಿದ್ದ ಕಟ್ಟಡದಂತೆ ಕಂಡು ಬರುತ್ತಿತ್ತು. ಹಳೇ ವಿದ್ಯಾರ್ಥಿಗಳ ಪ್ರಯತ್ನದಿಂದಾಗಿ ಇದೀಗ ಶಾಲೆಯ ಕಟ್ಟಡ ಹಾಗು ಸುತ್ತಲಿನ ಕಾಂಪೌಂಡ್ ಹೊಸದಾಗಿ ಸುಣ್ಣ ಬಣ್ಣದಿಂದ ಆಕರ್ಷಕವಾಗಿ ಕಂಗೊಳಿಸುತ್ತಿದೆ.

ಶಿಕ್ಷಣ ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮನೋಭಾವನೆಗಳು ಹಳೇಯ ವಿದ್ಯಾರ್ಥಿಗಳಲ್ಲಿ ಮೂಡಿಬರಲು ಶಾಲಾ ಕಾಲೇಜುಗಳು ನೀಡಿದ ಶಿಕ್ಷಣವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ.
                                                             -ರವಿಕುಮಾರ್, ಎಂಪಿಎಂ ಶಿಕ್ಷಣ ಸಂಸ್ಥೆ, ಭದ್ರಾವತಿ
    
     ಇದರ ಜೊತೆಗೆ ಆಧುನಿಕ ಶಿಕ್ಷಣ ಪದ್ದತಿಗೆ ಅನುಗುಣವಾಗಿ ತರಗತಿ ನಡೆಸಲು ಅತ್ಯಾಧುನಿಕ ಉಪಕರಣಗಳೊಂದಿಗೆ ಡಿಜಿಟಲ್ ಕೊಠಡಿ ಸೌಲಭ್ಯ ಸಹ ಕಲ್ಪಿಸಿಕೊಡಲಾಗಿದೆ. ಇದರೊಂದಿಗೆ ತಮದೇ ಆದ ರೀತಿಯಲ್ಲಿ ಸಾರ್ಥಕ ಸೇವೆಯನ್ನು ಸಮರ್ಪಿಸಿಕೊಂಡಿದ್ದಾರೆ.
       ಎಂಪಿಎಂ ಕಾರ್ಮಿಕರ ಕುಟುಂಬಗಳಿಗಾಗಿ ಆರಂಭಗೊಂಡ ಶಾಲೆ:
    ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಕುಟುಂಬಗಳ ಮಕ್ಕಳಿಗಾಗಿ ಈ ಶಾಲೆಯನ್ನು ೧೯೮೧ರಲ್ಲಿ ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಕಾಗದ ನಗರದ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಸಹ ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಲಾರಂಭಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ ಕಳೆದ ೪ ದಶಕಗಳಿಂದ ನಿರಂತರವಾಗಿ ಮುನ್ನೆಡೆದುಕೊಂಡು ಬರುತ್ತಿದೆ.
     ಕಳೆದ ಸುಮಾರು ೬ ವರ್ಷಗಳಿಂದ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿದ್ದು, ಕಾರ್ಮಿಕರ ಸಂಖ್ಯೆ ಶೂನ್ಯಕ್ಕೆ ಇಳಿಸಲಾಗಿದೆ. ಇದರಿಂದಾಗಿ ಕಾರ್ಮಿಕ ಕುಟುಂಬಗಳು ಬೇರೆಡೆಗೆ ಸ್ಥಳಾಂತರಗೊಂಡಿವೆ. ಈ ನಡುವೆ ಕಾರ್ಖಾನೆ ಆಡಳಿತ ಕಾರ್ಖಾನೆ ಅಧೀನಕ್ಕೆ ಒಳಪಟ್ಟಿರುವ ಶಾಲೆಗಳನ್ನು ಎಂಪಿಎಂ ಶಿಕ್ಷಣ ಸಂಸ್ಥೆ ಅಧೀನಕ್ಕೆ ಒಳಪಡಿಸಿದೆ. ಪ್ರಸ್ತುತ ಶಿಕ್ಷಣ ಸಂಸ್ಥೆ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹಳೇ ವಿದ್ಯಾರ್ಥಿಗಳು ಶಾಲೆಯ ನವೀಕರಣ ಕಾರ್ಯ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರೆ ತಪ್ಪಾಗಲಾರದು.
        ಗುಣಮಟ್ಟದ ಶಿಕ್ಷಣ :
     ಈ ಶಾಲೆ ಕಳೆದ ೪ ವರ್ಷಗಳಿಂದ ಮುನ್ನಡೆದುಕೊಂಡು ಬರಲು ಪ್ರಮುಖ ಕಾರಣ ಗುಣಮಟ್ಟದ ಶಿಕ್ಷಣ. ಈ ಶಾಲೆಯಲ್ಲಿ ವ್ಯಾಸಂಗ ನಡೆಸಿರುವ ಬಹುತೇಕ ಹಳೇಯ ವಿದ್ಯಾರ್ಥಿಗಳು  ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು, ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಜೊತೆಗೆ ಗುರುತಿಸಿಕೊಂಡಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಳ್ಳುತ್ತಿದೆ. ಜೊತೆ ಕ್ರೀಡೆ ಹಾಗು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು, ಈ ಹಿನ್ನಲೆಯಲ್ಲಿ ನಗರದ ಪ್ರತಿಷ್ಠಿತ ಶಾಲೆಗಳ ಪೈಕಿ ಇದು ಸಹ ಒಂದಾಗಿ ಗುರುತಿಸಿಕೊಂಡಿದೆ.

ಹಳೇಯ ವಿದ್ಯಾರ್ಥಿಗಳು ಶಾಲೆಗೆ ನೀಡಿರುವ ಕೊಡುಗೆ ಅಪಾರ. ಇಂದಿನ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣ ನೀಡಿದ ಶಿಕ್ಷಕರು ಕಂಡರೂ ಕಾಣದ ರೀತಿಯಲ್ಲಿ ವರ್ತಿಸುತ್ತಾರೆ. ಈ ನಡುವೆ ಹಳೇಯ ವಿದ್ಯಾರ್ಥಿಗಳಲ್ಲಿರುವ ಆಸಕ್ತಿ, ಉತ್ಸುಕತೆ, ಶ್ರದ್ದೆ ನಿಜಕ್ಕೂ ಶಿಕ್ಷಣ ನೀಡಿದ ಗುರುಗಳು ಸಹ ಹೆಮ್ಮೆ ಪಡುವ ವಿಚಾರವಾಗಿದೆ.
                                               - ಸತೀಶ್, ಪ್ರಾಂಶುಪಾಲರು, ಕಾಗದ ನಗರ ಆಂಗ್ಲ ಶಾಲೆ, ಭದ್ರಾವತಿ.
      ಸಂಭ್ರಮಿಸಿದ ಹಳೇಯ ವಿದ್ಯಾರ್ಥಿಗಳು:
ನವೀಕರಣ ಕಾರ್ಯ ಯಶಸ್ವಿಗೊಂಡ ಹಿನ್ನಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಮಾರಂಭ ಏರ್ಪಡಿಸುವ ಜೊತೆಗೆ ಸಂಭ್ರಮಿಸಿದರು. ತಮ್ಮ ಅನಿಸಿಕೆಗಳನ್ನು ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗು ಆಡಳಿತ  ಸಂಸ್ಥೆಯೊಂದಿಗೆ ಹಂಚಿಕೊಂಡರು.  
     ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್, ಶಾಲೆಯ ಪ್ರಾಂಶುಪಾಲ ಸತೀಶ್, ಉಪಪ್ರಾಂಶುಪಾಲ ನಾಗರಾಜ್, ದೈಹಿಕ ಶಿಕ್ಷಕ ಸಿದ್ದಪ್ಪ ಸೇರಿದಂತೆ  ಶಿಕ್ಷಕ ವರ್ಗದವರು, ಸಿಬ್ಬಂದಿಗಳು ಉಪಸ್ಥಿತರಿದ್ದರು.



ಭದ್ರಾವತಿ ಕಾಗದ ನಗರದ ಆಂಗ್ಲ ಶಾಲೆಯಲ್ಲಿ ಡಿಜಿಟಲ್ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡುವ ಜೊತೆಗೆ ಕಟ್ಟಡ ನವೀಕರಣ ಕಾರ್ಯ ಯಶಸ್ವಿಗೊಳಿಸಿದ ಹಿನ್ನಲೆಯಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸಮಾರಂಭವನ್ನು ಎಂಪಿಎಂ ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್ ಉದ್ಘಾಟಿಸಿದರು.

Wednesday, August 18, 2021

ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಿರಂತರವಾಗಿರಲಿ : ಎಂ. ಗುರುಮೂರ್ತಿ.

ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದ ವಿಶ್ವ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಉದ್ಘಾಟಿಸಿದರು.
     ಭದ್ರಾವತಿ, ಆ.೧೮: ದೇಶದಲ್ಲಿ ನೆಲೆಯೂರಿರುವ ಜಾತಿ ವ್ಯವಸ್ಥೆಯನ್ನು ಸುಲಭವಾಗಿ ಕಿತ್ತು ಹಾಕಲು ಸಾಧ್ಯವಿಲ್ಲ. ಇದರ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.
   ಅವರು ತಾಲೂಕಿನ ಅರಬಿಳಚಿ ಕ್ಯಾಂಪ್ ಗ್ರಾಮದ ವಿಶ್ವ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.
     ಜಾತಿ ವ್ಯವಸ್ಥೆ ಎಂಬುದು ಮಣ್ಣು, ಇಟ್ಟಿಗೆಗಳಿಂದ ಕಟ್ಟಿದ ಗೋಡೆಯಲ್ಲ ಅಥವಾ ಮುಳ್ಳುತಂತಿಗಳಿಂದ ನಿರ್ಮಿಸಿದ ಬೇಲಿಯೂ ಅಲ್ಲ. ಈ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಕಿತ್ತು ಹಾಕುವುದು ಸುಲಭದ ಕೆಲಸವಲ್ಲ. ಈ ವ್ಯವಸ್ಥೆಯನ್ನು ರೂಪಿಸಿರುವವರ ಮನಸ್ಥಿತಿ ಬದಲಾಗಬೇಕಾಗಿದೆ. ದಲಿತರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಅಲ್ಲದೆ ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾಗಿದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದರು.  
     ಕಾರ್ಯಕ್ರಮ ಅಧ್ಯಕ್ಷತೆ ಮಧುಸೂಧನ್ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ  ಅಣ್ಣಾಮಲೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್, ಸದಸ್ಯ ರಾಜಣ್ಯ, ಸಮಿತಿ ಜಿಲ್ಲಾ ಸಂಚಾಲಕ ಎ. ಅರ್ಜುನ್, ಜಿಲ್ಲಾ ಸಂಘಟನಾ ಸಂಚಾಲಕ ಎಂ. ಏಳುಕೋಟಿ, ಶಿವಬಸಪ್ಪ, ತಾಲೂಕು ಸಂಚಾಲಕ ರವಿನಾಯ್ಕ್, ಮುಖಂಡರಾದ ಬೊಮ್ಮನಕಟ್ಟೆ ಕೃಷ್ಣ, ಹೊಳೆಹೊನ್ನೂರು ಹರೀಶ್, ವೆಂಕಟೇಶ್, ತಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಆಡಳಿತದಿಂದ ಕಡತ ವಿಲೇವಾರಿ ವಿಳಂಬ : ರೈತರ ಸಂಘದಿಂದ ಪ್ರತಿಭಟನೆ

ಭದ್ರಾವತಿ ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್‌ಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಆ. ೧೮: ತಾಲೂಕು ಕಛೇರಿ ಆಡಳಿತ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ  ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
   ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಗ್ರಾಮಸ್ಥರು ಕಡತ ವಿಲೇವಾರಿಯಿಂದಾಗಿ ಗ್ರಾಮೀಣಾ ಭಾಗದ ರೈತರು ಹಾಗು ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ವಿಕಲಚೇತನ, ವೃದ್ಧಾಪ್ಯ ಹಾಗು ವಿಧವಾ ವೇತನ ಸಹ ವಿಳಂಬವಾಗುತ್ತಿದ್ದು, ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರು ತಾಲೂಕು ಕಛೇರಿ ಅಲೆದಾಡುವಂತಾಗಿದೆ. ಕಛೇರಿಯಲ್ಲಿ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರತಿ ಬಾರಿ ವಿದ್ಯುತ್ ಸಮಸ್ಯೆ ಇರುವುದಾಗಿ ಉತ್ತರ ನೀಡುತ್ತಾರೆ. ಅಲ್ಲದೆ ಕಛೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
   ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಮನವಿ ಸ್ವೀಕರಿಸಿ ಕಡತ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ತಕ್ಷಣ ಬಗೆಹರಿಸುವುದಾಗಿ ಭರವಸೆ ನೀಡಿದರು.
    ಸಂಘದ ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಪ್ರಮುಖರಾದ ಶರತ್ಚಂದ್ರ, ರುದ್ರೇಶ್, ಹನುಮಂತಪ್ಪ, ಮಹಂತೇಶ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ

ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಪ್ರತಿಭಟನೆ ನಡೆಸಿ ಮನವಿ

   ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಬುಧವಾರ ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಬಕಾರಿ ಇನ್ಸ್‌ಪೆಕ್ಟರ್ ಸುನಿಲ್ ಕಲ್ಲಾಪುರ್ ಅವರಿಗೆ ಮನವಿ ಸಲ್ಲಿಸಿದರು.
   ಭದ್ರಾವತಿ, ಆ. ೧೮: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜನತಾದಳ (ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಬುಧವಾರ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಅಬಕಾರಿ ಇನ್ಸ್‌ಪೆಕ್ಟರ್ ಸುನಿಲ್ ಕಲ್ಲಾಪುರ್ ಅವರಿಗೆ ಮನವಿ ಸಲ್ಲಿಸಿದರು.
   ಸರ್ವೋಚ್ಛ ನ್ಯಾಯಾಲಯ ೨೦೧೬ರಲ್ಲಿ ಹೆದ್ದಾರಿ ಪಕ್ಕದ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದು, ಇದೀಗ ಪುನಃ ಇದೆ ಆದೇಶವನ್ನು ಹೊರಡಿಸಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ.
    ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ೨೦೧೯ ರಿಂದ ಇಲ್ಲಿಯವರೆಗೂ ಸುಮಾರು ೪.೫ ಲಕ್ಷ ಅಪಘಾತಗಳು ನಡೆದಿದ್ದು,  ಈ ಪೈಕಿ ೧.೫ ಲಕ್ಷ ಜನರು ಮೃತಪಟ್ಟಿದ್ದಾರೆ.  ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸುಮಾರು ೧ ಲಕ್ಷ ಜನರು ಮೃತಪಟ್ಟಿದ್ದಾರೆ. ಸುಮಾರು ೨ ಲಕ್ಷ ಜನರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಈ ವಿಚಾರವನ್ನು ಅಬಕಾರಿ ಇಲಾಖೆ ಗಂಭೀರವಾಗಿ ಪರಿಗಣಿಸಿ ತಕ್ಷಣ ತಾಲೂಕಿನಾದ್ಯಂತ ಹೆದ್ದಾರಿ ಪಕ್ಕದಲ್ಲಿ ೫೦೦ ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸೆ.೧ರಿಂದ ನ್ಯಾಯ ಸಿಗುವವರೆಗೂ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.