Sunday, August 29, 2021

ಯುವ ಘಟಕದಿಂದ ಬಿಳಿಕಿ ಶ್ರೀಗಳಿಗೆ ಗುರು ನಮನ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾನುವಾರ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಶ್ರೀಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಗುರು ನಮನ ಸಲ್ಲಿಸಲಾಯಿತು.
    ಭದ್ರಾವತಿ, ಆ. ೨೯: ತಾಲೂಕಿನ ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ೫೦ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾನುವಾರ ಶ್ರೀ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಶ್ರೀಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ ಗುರು ನಮನ ಸಲ್ಲಿಸಲಾಯಿತು.
    ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಲಿಗೆರೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ತಾಲೂಕು ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷರಾದ ಆರ್.ಎನ್ ರುದ್ರೇಶ್, ಬಿ.ಎಸ್ ಶ್ರೀಕಾಂತ್, ಮಹಾದೇವ, ಪ್ರಧಾನ ಕಾರ್ಯದರ್ಶಿ ಕೆ.ಆರ್ ಆನಂದ್, ಖಜಾಂಚಿ ಬಿ.ಎಂ ರಮೇಶ್, ಸಹ ಕಾರ್ಯದರ್ಶಿ ಬಸವರಾಜ, ತಿಪ್ಪೇಸ್ವಾಮಿ, ಆನಂದಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಧರ್ಮಮಾರ್ಗದಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ : ಕೆ.ಎಸ್ ಈಶ್ವರಪ್ಪ

ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭ ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ನೆರವೇರಿಸಿದರು.
    ಭದ್ರಾವತಿ, ಆ. ೨೯: ಸಮಾಜದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬೇಕಾದರೆ ಎಲ್ಲರೂ ಧರ್ಮ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ ಎಂದು ಪಂಚಾಯತ್ ರಾಜ್ ಹಾಗು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
    ಅವರು ಭಾನುವಾರ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ನೂರಾರು ಸಮಸ್ಯೆಗಳಿದ್ದು, ಈ ನಡುವೆಯೂ ಮಠಮಂದಿರಗಳು ಸಮಾಜದ ಏಳಿಗೆಗಾಗಿ ಶ್ರಮಿಸುವ ಜೊತೆಗೆ ಉತ್ತಮ ಧರ್ಮ ಸಂಸ್ಕಾರ ನೀಡುತ್ತಿವೆ. ಧರ್ಮ ಮಾರ್ಗದಲ್ಲಿ ಸಾಗಿದರೆ ಮಾತ್ರ ಎಲ್ಲದಕ್ಕೂ ಪರಿಹಾರ ಕೊಂಡುಕೊಳ್ಳಬಹುದಾಗಿದೆ ಎಂದರು.
    ಗುರುಗಳು ತ್ಯಾಗಿಗಳಾಗಿದ್ದು, ಯಾವುದೇ ಸ್ವಾರ್ಥ ಬಯಸದೆ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿರುತ್ತಾರೆ. ಇಂತಹ ಗುರುಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಸಮಾಜದ ಏಳಿಗೆಗಾಗಿ ಗುರುಗಳು ಹೇಳಿದಂತೆ ನಡೆದುಕೊಳ್ಳಲು ಸಿದ್ದ. ಬಿಳಿಕಿ ಶ್ರೀ ಮತ್ತು ಬೆಕ್ಕಿನ ಕಲ್ಮಠ ಶ್ರೀಗಳಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
    ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೀಠಾಧಿಪತಿಯಾಗಿ ೩೧ ವರ್ಷಗಳು ಕಳೆದಿವೆ. ಯಾವುದೇ ಆದಾಯವಿಲ್ಲದಿದ್ದರೂ ಸಹ ಕೇವಲ ಅಂಚಿನ ಮನೆಯಲ್ಲಿದ್ದ ಮಠ ಇಂದು ಬೃಹದಾಗಿ ಬೆಳೆದಿದೆ. ಸಮಾಜದ ಪ್ರತಿಯೊಬ್ಬರು ಮಠದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ಮಠವಿದ್ದರೆ ಸಮಾಜ, ಸಮಾಜವಿದ್ದರೆ ಮಠ ಎಂಬುದು ಈ ಮೂಲಕ ಸಾಬೀತು ಮಾಡಿ ತೋರಿಸಲಾಗಿದೆ ಎಂದರು.
    ದಿವ್ಯ ಸಾನಿಧ್ಯವಹಿಸಿದ್ದ ಶಿವಮೊಗ್ಗ ಆನಂದಪುರ ಶ್ರೀ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮನೆಗೂ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಮಠಗಳು ಸಮಾಜ ಮುಖಿಯಾಗಿರಬೇಕು. ಸರ್ಕಾರ ಮಾಡುವ ಕೆಲಸಗಳನ್ನು ಮಠಮಂದಿರಗಳು ಮಾಡುತ್ತಿವೆ. ಈ ಹಿನ್ನಲೆಯಲ್ಲಿ ಮಠಮಂದಿರಗಳು ಸಹ ಬೆಳವಣಿಗೆ ಹೊಂದಬೇಕು. ಇವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರದ್ದಾಗಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ಅವಶ್ಯಕವಾಗಿದೆ. ಮಠ ಮಂದಿರಗಳು ಪ್ರತಿಯೊಬ್ಬರಿಗೂ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. ಆದರೆ ಸಮಾಜದಲ್ಲಿ ಕೆಲವರು ಧರ್ಮದ ಹೆಸರಿನಲ್ಲಿ ಅಪಪ್ರಚಾರ ನಡೆಸುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
    ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶೀಕೇಂದ್ರ ಸ್ವಾಮೀಜಿ, ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಡಾ. ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ,  ಶ್ರೀ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮತ್ತು ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ ಕಾಂತೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಹಿರೇಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ, ಮನೋಹರ್ ಅಬ್ಲಿಗೆರೆ, ಸಿದ್ದಲಿಂಗಯ್ಯ, ಪಾಪಿಬಾಯಿ, ಬಿ.ಎಂ. ಸಂತೋಷ್, ಯಶವಂತರಾವ್ ಘೋರ್ಪಡೆ, ಎ. ಮಾಧು, ಬಿ.ಟಿ ನಾಗರಾಜ್, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಎ.ಟಿ ರವಿ, ನಂದಿ ಮಲ್ಲಿಕಾರ್ಜುನ, ಡಾ.ಜಿ.ಎಂ ನಟರಾಜ್, ಪ್ರಶಾಂತ್, ಸಿದ್ದಬಸಪ್ಪ, ಎಂ.ಎಸ್ ಬಸವರಾಜ್, ವಸಂತ್, ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  



ಭದ್ರಾವತಿ ತಾಲೂಕಿನ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನ ಉದ್ಘಾಟನಾ ಸಮಾರಂಭದಲ್ಲಿ ೫೦ ವರ್ಷ ಪೂರೈಸಿದ ಬಿಳಿಕಿ ಶ್ರೀ ಹಾಗೂ ೭೦ ವರ್ಷ ಪೂರೈಸಿದ ಬೆಕ್ಕಿನಕಲ್ಮಠ ಶ್ರೀಗಳಿಗೆ ಭಕ್ತ ವೃಂದದಿಂದ ಗುರು ನಮನ ಸಲ್ಲಿಸಲಾಯಿತು.  

Saturday, August 28, 2021

ಆ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

ಭದ್ರಾವತಿ, ಆ. ೨೮: ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನಲೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಆ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ಹಾಗು ಮಾಂಸಹಾರ ತಯಾರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕುರಿ, ಕೋಳಿ ಮತ್ತು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್ ಮತ್ತು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಎಚ್ಚರಿಸಿದ್ದಾರೆ.

Friday, August 27, 2021

ಅಂತರ್ಜಾತಿ ವಿವಾಹ : 30ಕ್ಕೂ ಹೆಚ್ಚು ದಂಪತಿಗಳಿಗೆ ರಾಷ್ಟ್ರೀಯ ಉಳಿತಾಯ ಪತ್ರ ವಿತರಣೆ

ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 3 ವರ್ಷ ಅವಧಿಯ ನಿಶ್ಚಿತ ಠೇವಣಿಯ ರಾಷ್ಟ್ರೀಯ ಉಳಿತಾಯ ಪತ್ರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶುಕ್ರವಾರ ವಿತರಿಸಿದರು.
    ಭದ್ರಾವತಿ, ಆ. 27: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಡಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 3 ವರ್ಷ ಅವಧಿಯ ನಿಶ್ಚಿತ ಠೇವಣಿಯ ರಾಷ್ಟ್ರೀಯ ಉಳಿತಾಯ ಪತ್ರವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶುಕ್ರವಾರ ವಿತರಿಸಿದರು.
    ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ದಂಪತಿಗಳಿಗೆ ಉಳಿತಾಯ ಪತ್ರಗಳನ್ನು ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸಿದ್ದಬಸಪ್ಪ, ಸಹಾಯಕ ನಿರ್ದೇಶಕ ಗ್ರೇಡ್-1 ಎಸ್. ಗೋಪಿನಾಥ್, ವಾರ್ಡ್‌ನ್ ಎಸ್.ವಿ ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಛೇರಿಗಾಗಿ ಕಟ್ಟಡ ದಾನ

ಭದ್ರಾವತಿ ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಈ ಸಂಬಂಧ ದಾನ ಪತ್ರ ಹಸ್ತಾಂತರಿಸಿದರು.
    ಭದ್ರಾವತಿ, ಆ. ೨೭: ನಗರದ ಬಿ.ಎಚ್ ರಸ್ತೆಯಲ್ಲಿರುವ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಛೇರಿಗಾಗಿ ಜನ್ನಾಪುರ ನಿವಾಸಿ ಟಿ.ಆರ್ ಶ್ರೀಧರ್ ಎಂಬುವರು ಜಯಶ್ರೀ ಕಲ್ಯಾಣ ಮಂಟಪದ ಮುಂಭಾಗ ನೂತನವಾಗಿ ಕಟ್ಟಿಸಿರುವ ನಿವಾಸದ ಮೇಲ್ಭಾಗದ ಕಟ್ಟಡದಲ್ಲಿ ಶಾಶ್ವತವಾಗಿ ನೆಲೆಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
    ಈ ಸಂಬಂಧ ಸೊಸೈಟಿ ಆಡಳಿತ ಮಂಡಳಿಗೆ ದಾನಪತ್ರ ಸಹ ಬರೆದುಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದಾನ ಪತ್ರವನ್ನು ಸೊಸೈಟಿ ಅಧ್ಯಕ್ಷ ಜೆ.ಎನ್ ಆನಂದರಾವ್ ಸ್ವೀಕರಿಸಿದರು. ಸೆ.೧ರಿಂದ ನೂತನ ಕಟ್ಟಡದಲ್ಲಿ ಕಛೇರಿಯ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳಲಿವೆ.
    ಉಪಾಧ್ಯಕ್ಷ ಕೇಶವಮೂರ್ತಿ, ನಿರ್ದೇಶಕರಾದ ಜಿ. ರಮಾಕಾಂತ, ಸಿ.ಕೆ ರಾಮರಾವ್, ತಾರಾಮಣಿ, ಶ್ವೇತ, ಕೆ. ಮಂಜುನಾಥ್, ಕೆ.ಎಸ್ ಸುಬ್ರಮಣ್ಯ, ಎಸ್.ಸಿ ನೀಲಕಂಠ ಜೋಯ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.೨೮ರಂದು ವಿದ್ಯುತ್ ಸ್ಥಗಿತ


ಭದ್ರಾವತಿ, ಆ. ೨೭: ಮೆಸ್ಕಾಂ ಘಟಕ-೨ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.೨೮ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಹೊಸಸೇತುವೆ ರಸ್ತೆ, ಸಿದ್ದಾರೂಢ ನಗರ, ಶಂಕರ ಮಠದ ರಸ್ತೆ, ಕನಕನಗರ, ಹಳೇನಗರ, ಕೋಟೆ ಏರಿಯಾ, ಖಾಜಿ ಮೊಹಲ್ಲಾ, ಕಂಚಿನಬಾಗಿಲು, ಕೆಎಸ್‌ಆರ್‌ಟಿಸಿ ಘಟಕದ ಸುತ್ತಮುತ್ತ, ಅಂಬೇಡ್ಕರ್ ನಗರ, ಹನುಮಂತ ನಗರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಧರ್ಮ ಜಾಗೃತಿ ಮೂಡಿಸುತ್ತಿರುವ ಬಿಳಿಕಿ ಶ್ರೀಗಳಿಗೆ ೫೦ರ ಸಂಭ್ರಮ

ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣಭವನ ಉದ್ಘಾಟನೆ

ಬಿಳಿಕಿ ಶ್ರೀಗಳು ಮತ್ತು ಸುವರ್ಣ ಮಹೋತ್ಸವ ಭವನ
* ಅನಂತಕುಮಾರ್
    ಭದ್ರಾವತಿ: 'ಮಾನವ ಜನ್ಮ ಶ್ರೇಷ್ಠ, ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ' ಎಂಬ ಧ್ಯೇಯ ಘೋಷ ಹೊಂದುವ ಮೂಲಕ ಮಲೆನಾಡಿನಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದಿಂದ ತಾಲೂಕಿನ ಬಿಳಿಕಿ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟ ಶಾಖಾ ಹಿರೇಮಠ ಇಂದು ಬೃಹತ್ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.    
    ನಗರ ಪ್ರದೇಶದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಬಿಳಿಕಿ ಇನ್ನೂ ಗ್ರಾಮೀಣ ಪರಿಸರದಿಂದ ಮುಕ್ತವಾಗಿಲ್ಲ. ಈ ಕಾರಣದಿಂದಲೇ ಬಿಳಿಕಿ ಗ್ರಾಮದಲ್ಲಿರುವ ಹಿರೇಮಠ ತನ್ನ ಸೌಂದರ್ಯವನ್ನು ರಕ್ಷಿಸಿಕೊಂಡಿದೆ. ಜನದಟ್ಟಣೆ ಇಲ್ಲ. ವಾಹನಗಳ ಕಿರಿಕಿರಿ ಇಲ್ಲ. ಕಸದ ರಾಶಿ ಇಲ್ಲ. ಸ್ವಚ್ಛ ಗ್ರಾಮ, ಆರೋಗ್ಯ ಗ್ರಾಮ ಎಂಬ ಮಹಾತ್ಮ ಗಾಂಧಿಯವರ ಮಾತು ಬಿಳಿಕಿ ಗ್ರಾಮಸ್ಥರು ನಿಜವಾಗಿಸಿದ್ದಾರೆ. ಪಾನ ಮುಕ್ತ ಗ್ರಾಮ ಸಹ ಇದಾಗಿದೆ.
    ಪೀಠಾಧ್ಯಕ್ಷರಾಗಿ ಕಳೆದ ೩ ದಶಕಗಳಿಂದ ಹಿರೇಮಠದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸುತ್ತಿರುವ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳಿಗೆ ಇದೀಗ ೫೦ರ ಸಂಭ್ರಮ. ಬಾಲ್ಯದಿಂದಲೇ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗಿ ಬಂದಿರುವ ಶ್ರೀಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಸಹ ಮೈಗೂಡಿಸಿಕೊಂಡಿದ್ದಾರೆ.
        ಶ್ರೀಗಳ ಪ್ರಾಥಮಿಕ ಶಿಕ್ಷಣ :
    ಹಿರೇಮಠದ ಪೂರ್ವಾಶ್ರಮದ ಶ್ರೀಮತಿ ನಾಗಮ್ಮ ಮತ್ತು ವೇ|| ಮುರುಗೇಂದ್ರಯ್ಯನವರ ಸುಪುತ್ರರಾಗಿ ಜನಿಸಿ, ತಮ್ಮ ಬಾಲ್ಯದ ಅಧ್ಯಯನವನ್ನು ಬಿಳಿಕಿ ಮತ್ತು ಕಡದಕಟ್ಟೆ ಗ್ರಾಮಗಳಲ್ಲಿ ಪೂರೈಸಿ ನಂತರ ಸಾಲೂರು ಹಿರೇಮಠದ ಲಿಂ|| ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೈದಿಕ, ಜ್ಯೋತಿಷ್ಯ, ಆಗಮ ಶಾಸ್ತ್ರಗಳಲ್ಲಿ ಪರಿಣಿತರಾದರು. ಶ್ರೀ ಜಗದ್ಗುರು ಶ್ರೀ ಪಂಚಪೀಠಾಧೀಶ್ವರರ ಸಾನಿಧ್ಯದಲ್ಲಿ ೧೯೯೦ ಫೆಬ್ರವರಿ ೨ ರಂದು ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿದರು.
    ಹಿರೇಮಠಕ್ಕೆ ಶ್ರೀಗಳ ಸೇವೆ :
    ಹಿರೇಮಠಕ್ಕೆ ಯಾವುದೇ ಮೂಲ ಆದಾಯಗಳು ಇಲ್ಲದಿದ್ದರೂ ಸಹ ಭಕ್ತರ ದೇಣಿಗೆ ನೆರವಿನಿಂದ ಎಲ್ಲರ ಸಹಕಾರ ದೊಂದಿಗೆ ಶಿಥಿಲಾವಸ್ಥೆಯಲ್ಲಿದ್ದ ಮಠವನ್ನು ಶ್ರೀಗಳು ತಮ್ಮ ದ್ವಾದಶ ಪಟ್ಟಾಧಿಕಾರದ ಸಂದರ್ಭದಲ್ಲಿ ನವೀಕರಣಗೊಳಿಸಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಮತ್ತು ಶ್ರೀ ಗುರು ನಿವಾಸವನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಗೊಳಿಸಿದ್ದಾರೆ. ೦೨-೦೨-೨೦೧೫ರಲ್ಲಿ ತಮ್ಮ ೨೫ನೇ ವರ್ಷದ ಪಟ್ಟಾಧಿಕಾರದ ಸಂಭ್ರಮಾಚರಣೆ ಸಂದರ್ಭದಲ್ಲಿ ಶ್ರೀ ಗುರು ಸಿದ್ದೇಶ್ವರ ಪ್ರಸಾದ ನಿಲಯವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದೀಗ ಜನ್ಮ ಸುವರ್ಣ ಮಹೋತ್ಸವದಂದು ಸುವರ್ಣ ಭವನ ಲೋಕಾರ್ಪಣೆಗೆ ಮುಂದಾಗಿದ್ದಾರೆ.
       ಆ.೨೯ರಂದು ಜನ್ಮ ಸುವರ್ಣ ಮಹೋತ್ಸವ, ಸುವರ್ಣ ಭವನ ಉದ್ಘಾಟನೆ:
    ಹಿರೇಮಠದ ಆವರಣದಲ್ಲಿ ಆ.೨೯ರಂದು ಬೆಳಿಗ್ಗೆ ೧೧.೩೦ಕ್ಕೆ ಜನ್ಮ ಸುವರ್ಣ ಮಹೋತ್ಸವ ಹಾಗು ಸುವರ್ಣ ಭವನದ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಶಿವಮೊಗ್ಗ ಆನಂದಪುರ ಶ್ರೀ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಾಳೆಹೊನ್ನೂರು ಖಾಸಾ ಶಾಖಾಮಠ, ಎಡೆಯೂರು, ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಅರಸೀಕೆರೆ ಯಳ್ನಾಡು ಸಂಸ್ಥಾನಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶೀಕೇಂದ್ರ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆಮಠದ ಶ್ರೀ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ರಟ್ಟೇಹಳ್ಳಿ ಕಬ್ಬಿಣ ಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಬಂಕಾಪುರ ಸದಾಶಿವಪೇಟೆ, ವಿರಕ್ತಮಠದ ಶ್ರೀ ಗುದ್ದಲೀಶ್ವರ ಸ್ವಾಮೀಜಿ, ಜಡೆ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೆ. ಬಿದರೆ ದೊಡ್ಡಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಕವಲೇದುರ್ಗ ಮಠದ ಶ್ರೀ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವಜಯಚಂದ್ರ ಸ್ವಾಮೀಜಿ, ಮೇಟಿಕುರ್ಕೆ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮತ್ತು ಹಣ್ಣೆ ಹಿರೇಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ ಸುವರ್ಣ ಭವನ ಉದ್ಘಾಟಿಸುವರು. ಗೃಹ ಸಚಿವ ಅರಗಜ್ಞಾನೇಂದ್ರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸುವರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಎಸ್ ಜ್ಯೋತಿ ಪ್ರಕಾಶ್ ಮತ್ತು ಹಿರೇಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.