Monday, September 6, 2021

ಹಣ, ಅಧಿಕಾರಕ್ಕೆ ಜನ ಬೆಂಬಲವಿಲ್ಲ : ಶಾರದ ಅಪ್ಪಾಜಿ

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರನ್ನು ವರಿಷ್ಠೆ ಶಾರದ ಅಪ್ಪಾಜಿ ಅಭಿನಂದಿಸಿದರು.
    ಭದ್ರಾವತಿ, ಸೆ. ೬: ಹಣ, ಅಧಿಕಾರಕ್ಕೆ ಜನ ಬೆಲೆ ಕೊಡುವುದಿಲ್ಲ. ಕೆಲಸ ಮಾಡುವವರಿಗೆ ಜನರು ಬೆಂಬಲಿಸುತ್ತಾರೆ ಎಂಬುದು ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಜೆಡಿಎಸ್ ವರಿಷ್ಠೆ ಶಾರದ ಅಪ್ಪಾಜಿ ಹೇಳಿದರು.
    ಅವರು ಸೋಮವಾರ ವಾರ್ಡ್ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.
    ಚುನಾವಣೆಯಲ್ಲಿ ಮತದಾರರು ನಮ್ಮ ಪರವಾಗಿ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಕ್ಷೇತ್ರದ ಮತದಾರರು ಎಂದಿಗೂ ನಮ್ಮೊಂದಿಗಿದ್ದಾರೆ. ಮತದಾರರಿಗೆ ಹಾಗು ಅತಿ ಹೆಚ್ಚಿನ ಅಂತರದ ಗೆಲುವಿಗೆ ಕಾರಣಕರ್ತರಾಗಿರುವ  ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
        ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ:
   ಜೆಡಿಎಸ್ ಅಭ್ಯರ್ಥಿ ಗೆಲುವು ಘೋಷಣೆಯಾಗುತ್ತಿದ್ದಂತೆ ತಾಲೂಕು ಕಛೇರಿ ಮುಂಭಾಗ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ನಂತರ ಮೆರವಣಿಗೆ ಮೂಲಕ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ತೆರಳಿ ಅಪ್ಪಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
    ವಾರ್ಡ್ ವ್ಯಾಪ್ತಿ ಬೃಹತ್ ಮೆರವಣಿಗೆ :
ವಾರ್ಡ್ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು. ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹಾಗು ಗೆಲುವು ಸಾಧಿಸಿದ ಅಭ್ಯರ್ಥಿ ಆರ್. ನಾಗರತ್ನಅನಿಲ್‌ಕುಮಾರ್ ಪರವಾಗಿ ಘೋಷಣೆ ಹಾಕುವ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಯಿತು.
    ಮುಖಂಡರಾದ ಎಸ್. ಕುಮಾರ್, ಎಂ.ಎ ಅಜಿತ್, ಅನಿಲ್ ಕುಮಾರ್, ಕರಿಯಪ್ಪ( ಕಬ್ಬಡಿ), ಕುಮಾರ್ (ಡಿವಿ ಪ್ಲಾಜಾ), ನಂಜುಂಡೇಗೌಡ (ಸೌದೆ), ಎಸ್.ಕೆ ಉಮೇಶ್, ಎಂ. ರಾಜು, ಲಕ್ಷ್ಮೀನಾರಾಯಣ್, ಬದ್ರಿನಾರಾಯಣ್,  ಮೈಲಾರಪ್ಪ, ಸುರೇಶ್(ಕ್ಲಬ್), ಎಸ್.ಬಿ ಮೋಹನ್‌ರಾವ್, ಡಿ.ಟಿ ಶ್ರೀಧರ್, ಲೋಕೇಶ್ವರ ರಾವ್, ಬಳ್ಳಿ ಕೃಷ್ಣಪ್ಪ, ಪಾಪಣ್ಣ, ರಾಜಣ್ಣ, ನಾಗರಾಜ್, ಉದಯಕುಮಾರ್, ಕೋಟೇಶ್ವರರಾವ್, ದಿಲೀಪ್, ನಂಜುಂಡಪ್ಪ, ಮೋಹನ್(ಚಕ್ಲಿ), ಸತೀಶ್ (ಬಸ್), ಪವನ್, ಎಚ್.ಡಿ ನಾಗರಾಜ್, ರಾಮಕೃಷ್ಣ, ಎ.ಟಿ ರವಿ, ಆರ್. ಮೋಹನ್‌ಕುಮಾರ್, ಮಲ್ಲೇಶ್, ಸತೀಶ್(ಟೇಲರ್), ಬಾಬು, ಸುರೇಶ್ ಬಾಬು, ವಾಸು(ಬೆಣ್ಣೆ), ಯತೀಶ್(ಪಿಗ್ಮಿ), ರಮೇಶ್(ಡಾನ್), ಸುಬ್ಬಾರೆಡ್ಡಿ, ಶಂಕರ್, ಗಿರೀಶ್, ರಾಕೇಶ್, ರೂಪೇಶ್, ಹರೀಶ್, ಯಶವಂತ್, ರಮೇಶ್ ನಾಯ್ಕ, ಲೀಲಾವತಿ ಕೃಷ್ಣಪ್ಪ, ಭಾಗ್ಯಮ್ಮ ಮಂಜುನಾಥ್, ಪರಮೇಶ್ವರಿ, ಧನಲಕ್ಷ್ಮಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ನಗರಸಭೆ ವಾರ್ಡ್ ನಂ.೨೯ ಚುನಾವಣೆ : ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಭರ್ಜರಿ ಗೆಲುವು

ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಅವರಿಗೆ  ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ್ ಹಾಗು ಸಹಾಯಕ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್ ಮತ್ತು ತಾಲೂಕು ಚುನಾವಣಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್‌  ಪ್ರಮಾಣ ಪತ್ರ ವಿತರಿಸಿದರು.
    ಭದ್ರಾವತಿ, ಆ. ೬: ನಗರಸಭೆ ವಾರ್ಡ್ ನಂ.೨೯ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ೪೫೦ ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
    ತಾಲೂಕು ಕಛೇರಿ ಸಭಾಂಗಣದಲ್ಲಿ ಬೆಳಿಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭಗೊಂಡು ಕೇವಲ ೩೦ ನಿಮಿಷದಲ್ಲಿ ಫಲಿತಾಂಶ ಪ್ರಕಟಗೊಂಡಿತು. ಜೆಡಿಎಸ್ ಅಭ್ಯರ್ಥಿ ಆರ್. ನಾಗರತ್ನ ಅನಿಲ್‌ಕುಮಾರ್ ೧೨೮೨ ಮತಗಳನ್ನು, ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಲೋಯಿತಾ ನಂಜಪ್ಪ ೮೩೨ ಮತಗಳನ್ನು ಹಾಗು ಬಿಜೆಪಿ ಅಭ್ಯರ್ಥಿ ರಮಾ ವೆಂಕಟೇಶ್ ಕೇವಲ ೭೦ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೨೨೦೦ ಮಂದಿ ಮತ ಚಲಾಯಿಸಿದ್ದು, ಈ ಪೈಕಿ ೧೬ ನೋಟಾ ಮತಗಳು ಚಲಾವಣೆಯಾಗಿವೆ.
    ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಲೋಯಿತಾ ನಂಜಪ್ಪ ವಿರುದ್ಧ ಸುಮಾರು ೪೫೦ ಮತಗಳ ಅಂತರದಿಂದ ಗೆಲುವು ಸಾಧಿಸಿದ ಆರ್. ನಾಗರತ್ನ ಅನಿಲ್‌ಕುಮಾರ್ ಅವರಿಗೆ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ್ ಹಾಗು ಸಹಾಯಕ ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್ ಮತ್ತು ತಾಲೂಕು ಚುನಾವಣಾಧಿಕಾರಿ, ತಹಸೀಲ್ದಾರ್ ಆರ್. ಪ್ರದೀಪ್‌ ಪ್ರಮಾಣ ಪತ್ರ ವಿತರಿಸಿದರು.
    ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದ ಸಂದರ್ಭದಲ್ಲಿ ವಾರ್ಡ್ ನಂ.೨೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆದಿದ್ದು, ಜೆಡಿಎಸ್ ತನ್ನ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ನಡೆಸಿದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
    ಪ್ರಸ್ತುತ ನಗರಸಭೆ ೩೫ ವಾರ್ಡ್‌ಗಳಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೪ ಮತ್ತು ಪಕ್ಷೇತರ-೧ ಸ್ಥಾನ ಹೊಂದಿವೆ. ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಎ.ಕೆ ಜಯಕುಮಾರ್ ನಿಧನ

ಎ.ಕೆ ಜಯಕುಮಾರ್    
ಭದ್ರಾವತಿ ಸೆ. ೬:  ಆರ್ಯವೈಶ್ಯ ಸಮಾಜದ ಮುಖಂಡ ಎ.ಕೆ ಜಯಕುಮಾರ್ (೪೮) ಭಾನುವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
      ತಾಯಿ ಹಾಗು ಕಿರಿಯ ಸಹೋದರನನ್ನು ಹೊಂದಿದ್ದರು.  ಜಯಕುಮಾರ್ ಪ್ರಸ್ತುತ ಶ್ರೀ ಕನ್ಯಕಾಪರಮೇಶ್ವರಿ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜದ ವತಿಯಿಂದ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.

Sunday, September 5, 2021

ವಾರ್ಡ್ ನಂ.೨೯ ಚುನಾವಣೆ : ಸೆ.೬ರಂದು ಮತ ಎಣಿಕೆ

ಭದ್ರಾವತಿ, ಸೆ. ೫: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ಮತ ಎಣಿಕೆ ಸೋಮವಾರ ಬೆಳಿಗ್ಗೆ ೮ ಗಂಟೆಗೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
    ನಗರಸಭೆ ೩೫ ವಾರ್ಡ್‌ಗಳಿಗೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದ್ದ ಸಂದರ್ಭದಲ್ಲಿ ವಾರ್ಡ್ ನಂ.೨೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ವೇಳೆ ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಉಳಿದ ೩೪ ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಸಹ ಪ್ರಕಟಗೊಂಡಿದೆ. ಉಳಿದಂತೆ ವಾರ್ಡ್ ನಂ.೨೯ಕ್ಕೆ ಸೆ.೩ರಂದು ಮತದಾನ ನಡೆದಿದೆ. ಸೆ.೬ರ ಸೋಮವಾರ ಮತ ಎಣಿಕೆ ನಡೆಯಲಿದೆ.
    ಈಗಾಗಲೇ ಮತ ಎಣಿಕೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಬಿ.ಜಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಆರ್. ನಾಗರತ್ನ ಮತ್ತು ಬಿಜೆಪಿ ಪಕ್ಷದಿಂದ ರಮಾ ವೆಂಕಟೇಶ್ ಸ್ಪರ್ಧಿಸಿದ್ದು, ೩ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಳಿಗ್ಗೆ ೧೦ ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ. ಯಾರಿಗೆ ವಿಜಯ ಮಾಲೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಪ್ರಬಲ ಸ್ಪರ್ಧೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಕ್ಕಳ ಉಜ್ವಲ ಭವಿಷ್ಯದಿಂದ ದೇಶದ ಸಂವಿಧಾನ ಉಳಿವು ಸಾಧ್ಯ : ಶಾಸಕ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಸೆ. ೫: ಅಮೂಲ್ಯವಾದ ಸೇವೆ ನೀಡುತ್ತಿರುವ ಶಿಕ್ಷಕರೇ ಸಮಾಜದ ನಿಜವಾದ ಸಂಪತ್ತು.  ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ಸಮರ್ಪಕವಾಗಿ ನಿರ್ವಹಿಸಿದ್ದಲ್ಲಿ ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಶ್ರೀ ಸತ್ಯಸಾಯಿಬಾಬಾ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮದಿನಾಚರಣೆ ಹಾಗು ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  
    ತಂದೆ-ತಾಯಿ ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಜ್ಞಾನ ನೀಡುವ ಪ್ರತ್ಯಕ್ಷ ದೇವರುಗಳಾಗಿದ್ದಾರೆ. ಜ್ಞಾನ ಸಂಪತ್ತು ಎಂಬುದು ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ವಸ್ತು ಅಲ್ಲ. ಬದಲಾಗಿ ಶ್ರದ್ಧೆ, ಶ್ರಮದಿಂದ ಪಡೆಯುವುದಾಗಿದೆ ಎಂದರು.
ಸಮಾಜ ಸುಧಾರಣೆಯಲ್ಲಿ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದ್ದು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶಿಕ್ಷಕರು ಎಂದಿಗೂ ಅಮರ. ತಮ್ಮ ಜವಾಬ್ದಾರಿಗಳನ್ನು ಅರಿತು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹಾದಿಯಲ್ಲಿ ಎಲ್ಲರೂ ಸಾಗಿ ಶಿಕ್ಷಕ ವೃತ್ತಿಯ ಘನತೆ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ರಮೇಶ್,  ಕೃಷ್ಣ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ನಗರಸಭಾ ಸದಸ್ಯರಾದ ಸರ್ವಮಂಗಳ, ರಿಯಾಜ್ ಅಹ್ಮದ್, ಮುಖಂಡರಾದ ಎಸ್.ಎಸ್ ಭೈರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರಿಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಕಾರ್ಯದರ್ಶಿ ಎಸ್.ಪಿ ಮೋಹನ್, ನಗರಸಭೆ ಪರಿಸರ ಇಂಜಿನಿಯರ್ ಪ್ರಭಾಕರ್, ಶಿಕ್ಷಕರ ಸಂಘದ ಮುಖಂಡರಾದ ಹನುಮಂತು, ಸುಮತಿ ಕಾರಂತ್, ಎಂ.ಸಿ ಆನಂದ್, ಸಿ. ಜಯಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು. ಸುಮತಿ ಕಾರಂತ್ ಸಂಗಡಿಗರು ಪ್ರಾರ್ಥಿಸಿದರು. ಬಿಆರ್‌ಸಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವೈ.ಗಣೇಶ್ ವಂದಿಸಿದರು.  ತಾಲೂಕು ಕ್ರೀಡಾಧಿಕಾರಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.  ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಒಟ್ಟು ೮೦ ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಕೊಡಲಾಯಿತು

ಅಂತರಂಗದ ಶುದ್ದಿಯಿಂದ ಒಳ್ಳೆಯ ಸಮಾಜ : ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ

ಭದ್ರಾವತಿ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪ ಹಾಗು ದಾಸೋಹ ಮಂದಿರದ ಉದ್ಘಾಟನಾ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನೆರವೇರಿಸಿದರು.
    ಭದ್ರಾವತಿ, ಸೆ. ೫: ಲೋಕಾ ಕಲ್ಯಾಣಾರ್ಥವಾಗಿ ಸ್ವಾಮೀಜಿಗಳು ಕೈಗೊಳ್ಳುವ ತಪಸ್ಸಿನಲ್ಲಿ ಅದ್ಭುತವಾದ ಶಕ್ತಿ ಅಡಗಿದ್ದು, ಇದನ್ನು ಭಕ್ತರು ಮನಗಾಣಬೇಕು. ಪ್ರತಿಯೊಬ್ಬರಲ್ಲೂ ಅಂತರಂಗದ ಶುದ್ದಿಯಾಗಬೇಕಾಗಿದೆ. ಆಗ ಮಾತ್ರ ಒಳ್ಳೆಯ ಕುಟುಂಬದೊಂದಿಗೆ ಒಳ್ಳೆಯ ಸಮಾಜ ರೂಪುಗೊಳ್ಳಲು ಸಾಧ್ಯ ಎಂದು ತುಮಕೂರು ಸುಕ್ಷೇತ್ರ ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
    ಶ್ರೀಗಳು ಭಾನುವಾರ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪ ಹಾಗು ದಾಸೋಹ ಮಂದಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ನಮ್ಮಲ್ಲಿನ ಅಂತರಂಗ ಹಾಗು ಬಹಿರಂಗ ಎರಡರಲ್ಲೂ ಶುದ್ಧತೆ ಕಾಣಬೇಕು. ಆದರೆ ಅಂತರಂಗದ ಶುದ್ಧತೆಯಲ್ಲಿ ನಾವು ಹಿನ್ನಡೆಯನ್ನು ಕಾಣುತ್ತಿದ್ದೇವೆ. ಅಂತರಂಗದ ಶುದ್ದತೆಗೆ ಉತ್ತಮ ಪರಿಸರ ಅಗತ್ಯವಾಗಿದೆ. ಇಂತಹ ಪರಿಸರ ನಾಡಿನ ಮಠ ಮಂದಿರಗಳು ಹೊಂದಿವೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ದೇಶದಲ್ಲಿ ಮಠ-ಮಂದಿರಗಳ ಕೊಡುಗೆ ಬಹುದೊಡ್ಡಾಗಿದೆ. ಮಠ-ಮಂದಿರಗಳ ಪರಂಪರೆ ದೇಶದ ಭದ್ರಾ ಬುನಾದಿಗೆ ನಾಂದಿಯಾಗಿದೆ. ಭಾರತ ಪ್ರಪಂಚದ ಇತರೆ ರಾಷ್ಟ್ರಗಳೊಂದಿಗೆ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಈ ಪರಂಪರೆ ಕಾರಣವಾಗಿದೆ ಎಂಬುದನ್ನು ಯಾರು ಮರೆಯಬಾರದು. ಜಗಜ್ಯೋತಿ ಬಸವಣ್ಣನವರ ಆದರ್ಶಗಳಂತೆ ಅಕ್ಕ ನಾಗಮ್ಮನವರು ನೆಲೆಸಿರುವ ಶ್ರೀ ಕ್ಷೇತ್ರದಲ್ಲಿ ಶೀಲ ಸಂಪಾದನೆ ಮಹತ್ವ ಸಾರುತ್ತಿರುವ ೧೯ನೇ ಪೀಠಾಧಿಪತಿಗಳಾದ ಸಿದ್ದಲಿಂಗ ಸ್ವಾಮೀಜಿಯವರು ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಗುಣಗಳನ್ನು ಮೈಗೂಡಿಸಿಕೊಂಡು ನಾಡಿನ ಮಹಾನ್ ತಪ್ಪಸ್ವಿಗಳ ಅನುಗ್ರಹದೊಂದಿಗೆ ಲೋಕ ಕಲ್ಯಾಣಾರ್ಥವಾಗಿ ಹಲವು ಬಾರಿ ತಪೋನುಷ್ಠಾನ ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಇಂತಹ ಶ್ರೀಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಮಠ-ಮಂದಿರಗಳ ಮಹತ್ವವನ್ನು ಅಂದಿನ ಕಾಲದಲ್ಲಿಯೇ ಸ್ವಾಮಿ ವಿವೇಕಾನಂದರು ಜಗತ್ತಿಗೆ ತಿಳಿಸಿಕೊಟ್ಟಿದ್ದರು. ಎಲ್ಲಿಯವರೆಗೆ ಮಠ-ಮಂದಿರಗಳು ಇರುತ್ತವೆಯೋ ಅಲ್ಲಿಯವರೆಗೂ ಈ ದೇಶ ಸುಭದ್ರವಾಗಿರುತ್ತದೆ. ಸಮಾಜಕ್ಕೆ ಮಠ-ಮಂದಿಗಳ ಕೊಡುಗೆ ಅನನ್ಯವಾಗಿದೆ. ಇಂತಹ ಮಠ-ಮಂದಿರಗಳ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕು. ಶ್ರೀ ಕ್ಷೇತ್ರದ ಸಿದ್ದಲಿಂಗಸ್ವಾಮೀಜಿಯವರು ಮಠದ ಬೆಳವಣಿಗೆಗೆ ಹೆಚ್ಚಿನ ಶ್ರಮ ವಹಿಸಿದ್ದು, ಅಲ್ಲದೆ ಶಿಕಾರಿಪುರದ ಮಠದ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ಶ್ರೀಗಳ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು.
    ತಾವರೆಕೆರೆ ಶಿಲಾಮಠ ಹಾಗು ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಶ್ರೀ ಗುರು ಹಾಲಸ್ವಾಮಿ ಮಠದ ಶ್ರೀ ಗುರು ಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಶ್ರೀ ಬಸವ ಕೇಂದ್ರ ಹಾಗು ಚಿಕ್ಕಮಗಳೂರು ಬಸವ ಮಂದಿರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ತಾವರೆಕೆರೆ ಶ್ರೀ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಮತ್ತು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕೈಗಾರಿಕೋದ್ಯಮಿ ಬಿ.ಕೆ ನಂಜುಂಡಶೆಟ್ಟರ್, ನಿವೃತ್ತ ಐಎಎಸ್ ಅಧಿಕಾರಿ ಎಸ್. ದಯಾಶಂಕರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ ವೀರಭದ್ರಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ ಯೋಗೇಶ್ ಉಪಸ್ಥಿತರಿದ್ದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಡೈರಿ ಆಯುವೇರ್ದಿಕ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಹಿರೇಮಠ್ ಸ್ವಾಗತಿಸಿದರು. ಸಮನ್ವಯ ಕಾಶಿ ನಿರೂಪಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಮಂಗೋಟೆ ರುದ್ರೇಶ್, ಜಯಕರ್ನಾಟಕ ಸಂಘಟನೆಯ ತ್ಯಾಗರಾಜ್, ಗ್ರಾ.ಪಂ. ಮಾಜಿ ಸದಸ್ಯ ಡಿ.ಟಿ ಶಶಿಕುಮಾರ್, ತಾವರಘಟ್ಟ, ಸಿಂಗನಮನೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗು ಗ್ರಾಮಸ್ಥರು, ರಾಜ್ಯದ ವಿವಿಧೆಡೆಗಳಿಂದ ನೂರಾರು ಭಾಗವಹಿಸಿದ್ದರು.  


ಭದ್ರಾವತಿ ತಾಲೂಕಿನ ಸುಕ್ಷೇತ್ರ ಶೀ ಶೀಲಸಂಪಾದನಾಮಠದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಹಾ ತಪಸ್ವಿ ಶ್ರೀ ಸಿದ್ದಲಿಂಗಮಹಾಸ್ವಾಮೀಜಿಯವರ ೨೩ ತಿಂಗಳ ತಪೋನುಷ್ಠಾನ ಸಮಾರೋಪದಲ್ಲಿ ತುಮಕೂರು ಸುಕ್ಷೇತ್ರ ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ಶ್ರೀಗಳಿಗೆ ಗೌರವ ಸಮರ್ಪನೆ ಸಲ್ಲಿಸಿದರು.

Saturday, September 4, 2021

ಮರಗಳ್ಳತನ ಪ್ರಕರಣ : ವಲಯ ಅರಣ್ಯಾಧಿಕಾರಿ ವಿರುದ್ಧ ದೂರು

ಭದ್ರಾವತಿ ಚನ್ನಗಿರಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವ ಮರಗಳ್ಳತನ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಿ, ನಿರ್ಲಕ್ಷ್ಯ ವಹಿಸಿರುವ ವಲಯ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಾಮನಗಟ್ಟಿ ಅವರಿಗೆ ದೂರು ಸಲ್ಲಿಸಿದ್ದಾರೆ.
    ಭದ್ರಾವತಿ, ಸೆ. ೪: ಚನ್ನಗಿರಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವ ಮರಗಳ್ಳತನ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಿ, ನಿರ್ಲಕ್ಷ್ಯ ವಹಿಸಿರುವ ವಲಯ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಾಮನಗಟ್ಟಿ ಅವರಿಗೆ ದೂರು ಸಲ್ಲಿಸಿದ್ದಾರೆ.
    ಚನ್ನಗಿರಿ ವಲಯ ವ್ಯಾಪ್ತಿಗೆ ಬರುವ ಅರಣ್ಯದಲ್ಲಿ ಭದ್ರಾವತಿ-ಚನ್ನಗಿರಿ ಹೆದ್ದಾರಿ ಪಕ್ಕದಲ್ಲಿಯೇ ಲಕ್ಷಾಂತರ ರು. ಬೆಲೆಬಾಳುವ ೧೩ ಸಾಗುವಾನಿ ಮರಗಳನ್ನು ಆ.೨೫ರಂದು ರಾತ್ರಿ ಕಡಿತಲೆ ಮಾಡಿ ಕಳವು ಮಾಡಲಾಗಿದೆ. ಈ ವಿಚಾರ ಆ.೨೭ರಂದು ತಮ್ಮ ಗಮನಕ್ಕೂ ತರಲಾಗಿದೆ. ಆದರೆ ಈ ಭಾಗದ ವಲಯ ಅರಣ್ಯಾಧಿಕಾರಿ ಸತೀಶ್ ಅವರು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದು, ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸದಿರುವುದು ಕಂಡು ಬರುತ್ತಿದೆ. ಹೆದ್ದಾರಿ ಪಕ್ಕದಲ್ಲಿಯೇ ಈ ರೀತಿಯ ಘಟನೆ ನಡೆದಿರುವಾಗ ಸುಮಾರು ೪೫ ಸಾವಿರ ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಅರಣ್ಯದಲ್ಲಿರುವ ಬೆಲೆಬಾಳಲುವ ಮರಗಳ ರಕ್ಷಣೆ ಇವರಿಂದ ಅಸಾಧ್ಯ ಎಂಬುದು ಕಂಡು ಬರುತ್ತಿದೆ.
    ಸತೀಶ್ ಅವರು ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸದಿರುವ ಬಗ್ಗೆ ಸಾಕಷ್ಟು ಲೋಪಗಳಿದ್ದು, ಅಲ್ಲದೆ ಇವರ ವರ್ತನೆ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಸತೀಶ್ ಅವರನ್ನು ತಕ್ಷಣ ಅಮಾನತುಗೊಳಿಸಿ ಈ ಮರಗಳ್ಳತನ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.