Friday, September 17, 2021

ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯರಾಗಿ ಡಾ. ಕೆ.ಎ ವಿಷ್ಣುಮೂರ್ತಿ ನೇಮಕ

ಡಾ. ಕೆ.ಎ ವಿಷ್ಣುಮೂರ್ತಿ
ಭದ್ರಾವತಿ, ಸೆ. ೧೭: ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎ ವಿಷ್ಣುಮೂರ್ತಿ ಅವರನ್ನು ಕುವೆಂಪು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರನ್ನಾಗಿ ಸರ್ಕಾರ ನೇಮಕಗೊಳಿಸಿದೆ.
    ವಿಷ್ಣುಮೂರ್ತಿ ಅವರು ಪ್ರಸ್ತುತ ವಿಶ್ವವಿದ್ಯಾನಿಲಯದ ಆಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಇಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಶಾಸಕ ಬಿ.ಕೆ ಸಂಗಮೇಶ್ವರ್ ವಿಷ್ಣುಮೂರ್ತಿ ಅವರನ್ನು ಅಭಿನಂದಿಸಿದ್ದಾರೆ.  

ಡಾ.ವಿಷ್ಣವರ್ಧನ್ ೭೧ನೇ ಜನ್ಮದಿನ : ನೃತ್ಯ ಸಂಭ್ರಮ, ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ

    ಭದ್ರಾವತಿ, ಸೆ. ೧೭: ಡಾ. ವಿಷ್ಣುವರ್ಧನ್‌ರವರ ೭೧ನೇ ಜನ್ಮ ದಿನೋತ್ಸವ ಅಂಗವಾಗಿ ನಗರದ ಅಪೇಕ್ಷ ನೃತ್ಯ ಕಲಾವೃಂದ ಹಾಗು ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣು ಗಾನ ನೃತ್ಯ ಸಂಭ್ರಮ, ವಿಶೇಷ ಸಾಧಕರು ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.೧೮ರಂದು ಮಧ್ಯಾಹ್ನ ೩ ಗಂಟೆಗೆ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ ಭಾರತಿಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ತಹಸೀಲ್ದಾರ್ ಆರ್. ಪ್ರದೀಪ್ ವಿಷ್ಣುಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಶ್ರೀ ಬಸವೇಶ್ವರ ಧರ್ಮಸಂಸ್ಥೆ ಸಂಸ್ಥಾಪಕ ಶಿವಕುಮಾರ್, ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಡಾ. ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಕಿಯರ ಪ್ರೌಢಶಾಲೆ ಸಹ ಶಿಕ್ಷಕ ಎಂ. ದಿವಾಕರ್, ಅರಹತೊಳಲು ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಅರಳೆಹಳ್ಳಿ ಅಣ್ಣಪ್ಪ, ಬಿಆರ್‌ಪಿ ಲೇಖಕ ಹೊಸಹಳ್ಳಿ ದಾಳೇಗೌಡ, ಶಿವಮೊಗ್ಗ ರಾಗಿಗುಡ್ಡ ಡಾ. ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ಕ್ರಾಫ್ಟ್ ಶಿಕ್ಷಕಿ ಮೇರಿ ಎಂ. ಡಿಸೋಜ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆ ದೈಹಿಕ ಶಿಕ್ಷಕ ಬಿ.ಆರ್ ಶ್ರೀಧರ್ ಸಾವಂತ್, ಬಿಆರ್‌ಸಿ ಸಿ. ಚನ್ನಪ್ಪ ಮತ್ತು ಶಿವಮೊಗ್ಗ ಜ್ಯೂನಿಯರ್ ರಾಜ್‌ಕುಮಾರ್ ಎಚ್. ದೇವರಾಜ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ದೈಹಿಕ ಶಿಕ್ಷಕಿ ಅನಿತಾ ಮೇರಿಗೆ ಸನ್ಮಾನ, ಅಭಿನಂದನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ ಮೇರಿ ಅವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಸನ್ಮಾನಿಸಿ ಅಭಿನಂದಿಸಲಾಯಿತು.

    ಭದ್ರಾವತಿ, ಸೆ. ೧೭:  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಅನಿತಾ ಮೇರಿ ಅವರನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ  ಸನ್ಮಾನಿಸಿ ಅಭಿನಂದಿಸಲಾಯಿತು.
    ಅನಿತಾ ಮೇರಿ ಅವರು ಈ ಬಾರಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶಾಖೆಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಪ್ರಶಂಸಾನ ಪತ್ರ ನೀಡಿ ಗೌರವಿಸಿದರು.
    ಅನಿತಾ ಮೇರಿ ಅವರಿಗೆ ಶಿಕ್ಷಕ ವೃಂದದವರು, ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. ಅನಿತಾ ಮೇರಿ ಅವರು ಶಿಕ್ಷಕ ವೃತ್ತಿ ಜೊತೆಗೆ ಸಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು, ಇದುವರೆಗೂ ಸುಮಾರು ೪೧೭ ಬಡ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ. ನಿವೃತ್ತಿ ಹಂಚಿನಲ್ಲಿರುವ ಇವರು ಇದೀಗ ತಾಯಿ ಮಡಿಲು ಎಂಬ ಸೇವಾ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲು ಮುಂದಾಗಿದ್ದಾರೆ.

Thursday, September 16, 2021

ಶಿವರಾಮ ಶಾಸ್ತ್ರಿ ನಿಧನ

ಶಿವರಾಮ ಶಾಸ್ತ್ರಿ
    ಭದ್ರಾವತಿ, ಸೆ. ೧೭: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ಹೊಸಮನೆ ನಿವಾಸಿ ಶಿವರಾಮ ಶಾಸ್ತ್ರಿ(೭೩) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹೊಂದಿದ್ದರು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಹೊಸಮನೆ ನಗರಸಭೆ ೧೨ನೇ ವಾರ್ಡ್ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ದೇವಸ್ಥಾನ ಸೇವಾ ಸಮಿತಿ ಉಪಾಧ್ಯಕ್ಷರಾಗಿದ್ದರು.  
    ಮೃತ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಮಾಜಿ ಸೈನಿಕರ ಸಂಘದಿಂದ ಸರ್‌ಎಂವಿ ಜನ್ಮದಿನ ಆಚರಣೆ

ಭದ್ರಾವತಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಭಾರತರತ್ನ, ಅನ್ನದಾತ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಅದ್ದೂರಿಯಾಗಿ ಆಚರಿಸಲಾಯಿತು.
    ಭದ್ರಾವತಿ, ಸೆ. ೧೬:  ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಭಾರತರತ್ನ, ಅನ್ನದಾತ ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನ ಅದ್ದೂರಿಯಾಗಿ ಆಚರಿಸಲಾಯಿತು.
    ರೈಲ್ವೆ ನಿಲ್ದಾಣದ ಆವರಣದ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗಿರುವ ಸರ್.ಎಂ ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
    ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜಪುರೆ ಮತ್ತು ಕಿರಿಯ ಅಭಿಯಂತರ ಎಸ್.ಆರ್ ಸತೀಶ್, ರೈಲ್ವೆ ನಿಲ್ದಾಣದ ಅರುಣ್, ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ತಾಲೂಕು ಅಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಹಿರಿಯ ಮಾಜಿ ಸೈನಿಕರಾದ ಗೋವಿಂದಪ್ಪ, ಮುದುಗಲ ರಾಮರೆಡ್ಡಿ, ಕುಂಚ ಕಲಾವಿದರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸೆ.೧೭ರಂದು ಉಚಿತ ಲಸಿಕಾ ಮಹಾಮೇಳ : ಒಂದೇ ದಿನ ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ

    ಭದ್ರಾವತಿ, ಸೆ. ೧೬: ಕೋವಿಡ್-೧೯ ಸೋಂಕು ನಿರ್ಮೂಲನೆಗಾಗಿ ಕೈಗೊಂಡಿರುವ ಲಸಿಕಾ ಅಭಿಯಾನ ಮತ್ತಷ್ಟು ಚುರುಕುಗೊಳಿಸಲು ತಾಲೂಕು ಆಡಳಿತ, ನಗರಸಭೆ ಹಾಗು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸೆ.೧೭ರಂದು ಉಚಿತ ಲಸಿಕಾ ಮಹಾಮೇಳ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ ಒಂದೇ ದಿನ ಸುಮಾರು ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ತಾಲೂಕಿನಲ್ಲಿ ಇದುವರೆಗೂ ಒಟ್ಟು ೧,೧೦,೪೪೮ ಮಂದಿ ಮೊದಲ ಹಂತದ ಲಸಿಕೆ ಹಾಗು ೩೫,೨೨೦ ಮಂದಿ ಎರಡನೇ ಹಂತದ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಂದಿ ಲಸಿಕೆ ಪಡೆದುಕೊಳ್ಳಬೇಕಾಗಿದೆ. ಈ ನಡುವೆ ಉಚಿತ ಲಸಿಕಾ ಮಹಾಮೇಳದ ಹಿನ್ನಲೆಯಲ್ಲಿ ಒಂದೇ ದಿನ ೧೬ ಸಾವಿರ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.
    ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಬೆಳಿಗ್ಗೆ ೭ ಗಂಟೆಯಿಂದ ೭ ಗಂಟೆವರೆಗೂ ಲಸಿಕಾ ಮಹಾಮೇಳ ನಡೆಯಲಿದೆ.

ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ : ಶ್ರೀ ಸಂಗಮೇಶ್ವರ ದೇವಸ್ಥಾನ ಮುಳುಗಡೆ

ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿದು ಬಿಟ್ಟಿರುವ ಹಿನ್ನಲೆಯಲ್ಲಿ ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಮುಳುಗಡೆಗೊಂಡಿರುವುದು.
    ಭದ್ರಾವತಿ, ಸೆ. ೧೬: ಕಳೆದ ಕೆಲವು ದಿನಗಳಿಂದ ಭದ್ರಾ ಜಲಾಶಯದ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ  ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ೩-೪ ದಿನಗಳಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ನದಿಗೆ ಹರಿದು ಬಿಡಲಾಗುತ್ತಿದೆ.
    ಗುರುವಾರ ಜಲಾಶಯದ ಪ್ರಮಾಣ ೧೮೫ ಅಡಿಗಳಿದ್ದು, ಕಳೆದ ಬಾರಿ ಸಹ ಇಷ್ಟೆ ಪ್ರಮಾಣದ ನೀರು ಸಂಗ್ರಹವಾಗಿತ್ತು. ಈ ಬಾರಿ ಜಲಾಶಯ  ಬಹುಬೇಗನೆ ಆಗಸ್ಟ್ ತಿಂಗಳ ಆರಂಭದಲ್ಲಿಯೇ ಪೂರ್ಣವಾಗಿ ಭರ್ತಿಯಾಗಿದ್ದು, ಕ್ಷೇತ್ರದಲ್ಲಿ ಈ ವರ್ಷ ಸಹ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ದೂರವಾಗಿವೆ. ಇದರಿಂದಾಗಿ ರೈತರು ನೆಮ್ಮದಿ ಕಾಣುವಂತಾಗಿದ್ದು, ಆದರೂ ಸಹ ಈ ನಡುವೆ ಅಕಾಲಿಕ ಅತಿವೃಷ್ಟಿಗಳಿಂದಾಗಿ ರೈತರು ಸಂಕಷ್ಟಗಳಿಗೆ ಒಳಗಾಗುತ್ತಿರುವುದು ತಪ್ಪುತ್ತಿಲ್ಲ.
    ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿದು ಬಿಟ್ಟಿರುವ ಹಿನ್ನಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಹೊಸಸೇತುವೆ ಶೇ.೭೫ರಷ್ಟು ಮುಳುಗಡೆಗೊಂಡಿದ್ದು, ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಮುಳುಗಡೆಗೊಂಡಿದೆ. ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಲ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಲಿದೆ.