ಭದ್ರಾವತಿಯಲ್ಲಿ ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್ ಅವರನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಸೆ. ೨೦: ರಾಜ್ಯ ಮಾಧ್ಯಮ ಆಕಾಡೆಮಿಗೆ ರಾಜ್ಯ ಸರ್ಕಾರ ೩ ಕೋ. ರು. ಅನುದಾನ ಮೀಸಲಿಟ್ಟಿದ್ದು, ಈ ಅನುದಾನದಲ್ಲಿ ದತ್ತಿ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ವರ್ಷಕ್ಕೆ ೪೦ ಲಕ್ಷ ರು. ಗಳನ್ನು ನೀಡಲು ಆಕಾಡೆಮಿ ತೀರ್ಮಾನಿಸಿದೆ ಎಂದು ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್ ತಿಳಿಸಿದರು.
ಅವರು ರಾಜ್ಯ ಮಾಧ್ಯಮ ಆಕಾಡೆಮಿ ಸದಸ್ಯರಾಗಿ ನೇಮಕಗೊಂಡ ಹಿನ್ನಲೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಈ ಅನುದಾನ ಬಳಸಿಕೊಂಡು ಸಂಘದ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಕಳೆದ ಎರಡು ವರ್ಷಗಳಿಂದ ಸಂಘದ ಚಟುವಟಿಕೆಗಳು ಕೆಲ ಕಾರಣಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನಡೆಸಲು ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಮಾಧ್ಯಮ ಆಕಾಡೆಮಿ ಸದಸ್ಯರಾಗಿರುವುದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಪತ್ರಕರ್ತರ ಹಿತ ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಬೃಹತ್ ದತ್ತಿ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾಭವನ ಕಟ್ಟಡ ಸಮಿತಿ ಅಧ್ಯಕ್ಷರಾದ ಕಣ್ಣಪ್ಪ, ರಾಜ್ಯ ಸಂಘದ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಕಾರ್ಯದರ್ಶಿ ಫಿಲೋಮಿನಾ, ಖಜಾಂಚಿ ಅನಂತ ಕುಮಾರ್, ಹಿರಿಯ ಪತ್ರಕರ್ತರಾದ ಎನ್.ಬಾಬು, ಬಿ.ಆರ್.ಬದರಿನಾಯಣ ಶೆಟ್ಟಿ, ಟಿ.ಎಸ್.ಆನಂದ ಕುಮಾರ್, ಹೆಚ್.ಕೆ. ಶಿವಶಂಕರ್, ಕೆ.ಎನ್.ರವೀದ್ರನಾಥ್, ಗಂಗಾನಾಯ್ಕ್, ಸುಭಾಷ್‌ರಾವ್ ಸಿಂದ್ಯಾ, ಸುದರ್ಶನ್, ಶೈಲೇಶ್‌ಕೋಠಿ, ಪ್ರಶಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.