ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಅಖಿಲ ಭಾರತ ಮುಷ್ಕರ ನಡೆಸಲಾಯಿತು.
ಭದ್ರಾವತಿ, ಸೆ. ೨೪: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಮುಷ್ಕರದಲ್ಲಿ ಆಗ್ರಹಿಸಲಾಯಿತು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಸಮಿತಿ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮುಷ್ಕರದಲ್ಲಿ ಯೋಜನೆಗಳ ಮುಂಚೂಣಿ ಕೆಲಸಗಾರರಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಕ್ಷಣ ಉಚಿತವಾಗಿ ಕೋವಿಡ್-೧೯ ಲಸಿಕೆ ನೀಡುವುದು. ಸುರಕ್ಷತಾ ಸಾಧನಗಳನ್ನು ಒದಗಿಸುವ ಜೊತೆಗೆ ಕಡ್ಡಾಯವಾಗಿ ಕೋವಿಡ್-೧೯ ತಪಾಸಣೆ ನಡೆಸಿ ಸೋಂಕಿನಿಂದ ರಕ್ಷಿಸುವುದು. ಜಿ.ಡಿ.ಪಿ ಶೇ.೬ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಆರೋಗ್ಯ ವ್ಯವಸ್ಥೆ ಬಲಪಡಿಸುವುದು. ೫೦ ಲಕ್ಷ ರು. ಮೌಲ್ಯದ ಆರೋಗ್ಯ ವಿಮೆ ಭದ್ರತೆ ಒದಗಿಸುವ ಜೊತೆಗೆ ಕರ್ತವ್ಯದಲ್ಲಿದ್ದಾಗ ನಿಧನ ಹೊಂದಿದ್ದಲ್ಲಿ ಸೌಲಭ್ಯ ಕಲ್ಪಿಸಿಕೊಡುವುದು. ಕೋವಿಡ್-೧೯ರ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಮಾಸಿಕ ೧೦ ಸಾವಿರ ರು. ಭತ್ಯೆ ನೀಡುವುದು. ಕರ್ತವ್ಯದಲ್ಲಿದ್ದಾಗ ಸೋಂಕಿಗೆ ಒಳಗಾದಲ್ಲಿ ಕನಿಷ್ಠ ೧೦ ಲಕ್ಷ ರು. ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು.
ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು. ಕೇಂದ್ರ ಯೋಜನೆ ಐಸಿಡಿಎಸ್ ಕೆಲಸಗಾರರನ್ನು ಖಾಯಂಗೊಳಿಸಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವುದು. ಸೇವಾ ಹಿರಿತನದ ಆಧಾರದಲ್ಲಿ ದೀರ್ಘಸೇವೆ ಸಲ್ಲಿಸಿದವರ ಹಾಗು ಹೊಸದಾಗಿ ನೇಮಕಾತಿ ಹೊಂದಿದವರ ನಡುವೆ ಇರುವ ತಾರತಮ್ಯ ಸರಿಪಡಿಸಿ ಗೌರವಧನ ಹೆಚ್ಚಳ ಮಾಡುವುದು ಹಾಗು ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಿ ಆರ್ಥಿಕ ಸಂಗ್ರಹಣೆ ಹೆಚ್ಚಿಸುವ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡುವುದು ಸೇರಿದಂತೆ ಒಟ್ಟು ೧೬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
ಪ್ರಧಾನ ಮಂತ್ರಿಗಳಿಗೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹಾಗು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಫೆಡರೇಷನ್ ತಾಲೂಕು ಶಾಖೆ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಆರ್. ಭಾಗ್ಯಮಣಿ, ಪ್ರಮುಖರಾದ ಕೆ.ಸಿ ವಿಶಾಲ, ಜಿ.ಕೆ ಸುಲೋಚನ ಮತ್ತು ಆರ್. ವೇದಾವತಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.