Saturday, September 25, 2021

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನಕ್ಕೆ ಸಂತಾಪ

ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ    
ಭದ್ರಾವತಿ, ಸೆ. ೨೫: ಕುಪ್ಪೂರು ಗದ್ದಿಗೆ ಮಠದ ಡಾ. ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ನಿಧನಕ್ಕೆ ತಾಲೂಕಿನ ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸಂತಾಪ ಸೂಚಿಸಿದ್ದಾರೆ.
    ಶ್ರೀಗಳು ರಾಜ್ಯಾದ್ಯಂತ ಹೆಚ್ಚಿನ ಭಕ್ತರನ್ನು ಹೊಂದಿದ್ದು, ಕುಪ್ಪೂರು ಗದ್ದಿಗೆ ಮಠದ ಅಭಿವೃದ್ಧಿಯಲ್ಲಿ ಹೆಚ್ಚಿನ ಗಮನ ಹರಿಸುವ ಜೊತೆಗೆ ಆಧ್ಯಾತ್ಮಿಕ ಕಾರ್ಯಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಶ್ರೀಗಳು ಲಿಂಗೈಕ್ಯರಾಗಿರುವುದು ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಕೊಮಾರನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ

ಸಾಂದರ್ಭಿಕ ಚಿತ್ರ
    ಭದ್ರಾವತಿ, ಸೆ. ೨೫: ತಾಲೂಕಿನ ಕೊಮಾರನಹಳ್ಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಎದುರಾಗಿದೆ.
    ಕೊಮಾರನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆ ಬಂದು ಹೋಗಿರುವ ಮಾಹಿತಿಗಳಿದ್ದು, ಗ್ರಾಮದಲ್ಲಿ ನಾಯಿಗಳನ್ನು ಭೇಟೆಯಾಡಿರುವುದು ಗ್ರಾಮಸ್ಥರಿಗೆ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಆತಂಕ ಎದುರಾಗಿದೆ. ಮಾಹಿತಿ ತಿಳಿದ ತಕ್ಷಣ ಶುಕ್ರವಾರ ರಾತ್ರಿಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕಾಡಂಚಿನ ಗ್ರಾಮವಾಗಿರುವ ಹಿನ್ನಲೆಯಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬಂದು ಹೋಗುವುದು ಸಹಜವಾಗಿದ್ದು, ಈ ಭಾಗದಲ್ಲಿ ಸಿಬ್ಬಂದಿಗಳು ಪ್ರತಿದಿನ ರಾತ್ರಿ ವೇಳೆ ಗಸ್ತು ತಿರುಗುತ್ತಾರೆ. ಮುನ್ನಚ್ಚರಿಕೆ ಕ್ರಮವಾಗಿ ಕೊಮಾರನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ ಸಹ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಚಿರತೆ ಹಾವಳಿ ಹೆಚ್ಚಾದ್ದಲ್ಲಿ ಹಿಡಿಯಲು ಬೋನ್ ಅಳವಡಿಸಲಾಗುವುದು ಎಂದರು.

Friday, September 24, 2021

ಸೆ.೨೬ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಸೆ. ೨೪: ಮೆಸ್ಕಾಂ ಸೀಗೆಬಾಗಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಸ್.ಎಫ್-೧, ಭದ್ರಾ ಕಾಲೋನಿ ಮತ್ತು ಎಸ್.ಎಫ್-೨, ವೀರಾಪುರ ಫೀಡರ್‌ನ ೧೧ ಕೆ.ವಿ ಮಾರ್ಗ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಸೆ.೨೬ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಕಣಕಟ್ಟೆ, ಭದ್ರಾ ಕಾಲೋನಿ, ಮಜ್ಜಿಗೇನಹಳ್ಳಿ, ಬಾಬಳ್ಳಿ, ಗೌಡರಹಳ್ಳಿ, ಲಕ್ಷ್ಮೀಪುರ, ವೀರಾಪುರ, ಶ್ರೀರಾಮನಗರ, ಸೈಯ್ಯದ್ ಕಾಲೋನಿ, ಸೀಗೆಬಾಗಿ, ಶ್ರೀ ಸತ್ಯಸಾಯಿ ನಗರ ಇತ್ಯಾದಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಎ.ಜೆ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡದಿರಿ, ಸಾರ್ವಜನಿಕವಾಗಿ ಚರ್ಚೆಯಾಗಲಿ

ನ್ಯಾಯಮೂರ್ತಿ  ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬಾರದೆಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ಭದ್ರಾವತಿ ತಾಲೂಕು ಘಟಕದ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  
    ಭದ್ರಾವತಿ, ಸೆ. ೨೪; ದೇಶದ ಸಂವಿಧಾನಕ್ಕೆ ವಿರೋಧವಾಗಿರುವ ಮತ್ತು ವಾಸ್ತವಿಕತೆಗೆ ದೂರವಾಗಿರುವ ಅಂಕಿಅಂಶಗಳನ್ನು ಒಳಗೊಂಡಿರುವ
    ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದೆಂದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡರು ಆಗ್ರಹಿಸಿದರು.
    ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿಯವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದನ್ನು ವಿರೋಧಿಸಿ ಹಾಗು ವರದಿಯನ್ನು ಸಾರ್ವಜನಿಕ ಚರ್ಚೆಗಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ನಗರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೂ ಹಮ್ಮಿಕೊಳ್ಳಲಾಗಿದ್ದಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖಂಡರು, ಸದಾಶಿವ ಆಯೋಗದ ವರದಿ ಕುರಿತಂತೆ ನಡೆಯುತ್ತಿರುವ ಹೋರಾಟ ನೆನ್ನೆ ಮೊನ್ನೆಯದಲ್ಲ. ಕಳೆದ ೧೫ ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಈ ವರದಿ ಭೋವಿ. ಬಂಜಾರ, ಕೊರಚ, ಕೊರಮ, ಅಲೆಮಾರಿ, ಸುಡುಗಾಡು ಸಿದ್ದ ಸೇರಿದಂತೆ ಇನ್ನಿತರೆ ಸಮುದಾಯಗಳಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
    ದಲಿತ, ಹಿಂದುಳಿದ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಮಿತಿಯನ್ನು ಶೇ. ೫೦ ರಿಂದ ೭೦ಕ್ಕೆ ಹೆಚ್ಚಿಸಬೇಕು. ಮೀಸಲಾತಿಯನ್ನು ಮೂಲಭೂತ ಹಕ್ಕಿನಡಿಯಲ್ಲಿ ಸೇರಿಸಬೇಕು. ಹೋರಾಟಗಳ ಹೆಸರಿನಲ್ಲಿ ಬಂಜಾರ ಕುಲಗುರು ಶ್ರೀ ಸಂತ ಸೇವಾಲಾಲ್ ಮತ್ತು ಸಚಿವ ಪ್ರಭುಚೌಹಾಣ್ ಅವರನ್ನು ಅವಹೇಳನ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗಳ ಸಹೋದರ ಸಮುದಾಯಗಳ ಮಧ್ಯೆ ದ್ವೇಷ, ಪ್ರಚೋದನೆ ಬಿತ್ತಲು ಹೊರಟಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ರಾಜ್ಯ ಸಚಿವ ಗೋವಿಂದ ಕಾರಜೋಳ ಅವರುಗಳನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದರು.
  ಪ್ರತಿಭಟನೆಯಲ್ಲಿ ಪ್ರಮುಖರಾದ ಬೆಂಗಳೂರಿನ ಸಾಮಾಜಿಕ ಚಳುವಳಿಗಾರ ರಾಜಾನಾಯ್ಕ, ಮೀಸಲಾತಿ ಸಂರಕ್ಷಣಾ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಪೂಜಾರ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ, ತಾಲೂಕು ಘಟಕದ ಗೌರವಾಧ್ಯಕ್ಷ ಟಿ.ಎಂ ಮಂಜುನಾಥ್, ಉಪಾಧ್ಯಕ್ಷರಾದ ನವೀನ್‌ಕುಮಾರ್, ಹನುಮಂತನಾಯ್ಕ, ಟಿ. ರಂಗನಾಥ್, ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಸೋಮೇಶ್‌ನಾಯ್ಕ, ಧನಿಕನಾಯ್ಕ, ನಾಗೇಶ್, ಮಂಜುನಾಥ್, ಪ್ರವೀಣ್‌ನಾಯ್ಕ, ಅಣ್ಣಪ್ಪ, ಖಜಾಂಚಿ ಜುಂಜಾನಾಯ್ಕ, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಬಂಜಾರ ಯುವ ಘಟಕದ ಅಧ್ಯಕ್ಷ ಕೃಷ್ಣನಾಯ್ಕ, ಬಿ.ಎನ್ ನಿದೀಶ್, ಜಿ. ಆನಂದಕುಮಾರ್, ಬಿ.ಟಿ ನಾಗರಾಜ್, ಚೌಡಪ್ಪ, ಹಾಜ್ಯನಾಯ್ಕ, ರವಿನಾಯ್ಕ, ಅಣ್ಣಾಮಲೈ, ವಿದ್ಯಾರ್ಥಿ ಘಟಕದ ಗಿರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಅಖಿಲ ಭಾರತ ಮುಷ್ಕರ ನಡೆಸಲಾಯಿತು.  
ಭದ್ರಾವತಿ, ಸೆ. ೨೪:  ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಅಖಿಲ ಭಾರತ ಮುಷ್ಕರದಲ್ಲಿ ಆಗ್ರಹಿಸಲಾಯಿತು.
    ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಸಮಿತಿ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮುಷ್ಕರದಲ್ಲಿ ಯೋಜನೆಗಳ ಮುಂಚೂಣಿ ಕೆಲಸಗಾರರಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಕ್ಷಣ ಉಚಿತವಾಗಿ ಕೋವಿಡ್-೧೯ ಲಸಿಕೆ ನೀಡುವುದು. ಸುರಕ್ಷತಾ ಸಾಧನಗಳನ್ನು ಒದಗಿಸುವ ಜೊತೆಗೆ ಕಡ್ಡಾಯವಾಗಿ ಕೋವಿಡ್-೧೯ ತಪಾಸಣೆ ನಡೆಸಿ ಸೋಂಕಿನಿಂದ ರಕ್ಷಿಸುವುದು. ಜಿ.ಡಿ.ಪಿ ಶೇ.೬ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಆರೋಗ್ಯ ವ್ಯವಸ್ಥೆ ಬಲಪಡಿಸುವುದು. ೫೦ ಲಕ್ಷ ರು. ಮೌಲ್ಯದ ಆರೋಗ್ಯ ವಿಮೆ ಭದ್ರತೆ ಒದಗಿಸುವ ಜೊತೆಗೆ ಕರ್ತವ್ಯದಲ್ಲಿದ್ದಾಗ ನಿಧನ ಹೊಂದಿದ್ದಲ್ಲಿ ಸೌಲಭ್ಯ ಕಲ್ಪಿಸಿಕೊಡುವುದು. ಕೋವಿಡ್-೧೯ರ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಮಾಸಿಕ ೧೦ ಸಾವಿರ ರು. ಭತ್ಯೆ ನೀಡುವುದು. ಕರ್ತವ್ಯದಲ್ಲಿದ್ದಾಗ ಸೋಂಕಿಗೆ ಒಳಗಾದಲ್ಲಿ ಕನಿಷ್ಠ ೧೦ ಲಕ್ಷ ರು. ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು.
    ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು. ಕೇಂದ್ರ ಯೋಜನೆ ಐಸಿಡಿಎಸ್ ಕೆಲಸಗಾರರನ್ನು ಖಾಯಂಗೊಳಿಸಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವುದು. ಸೇವಾ ಹಿರಿತನದ ಆಧಾರದಲ್ಲಿ ದೀರ್ಘಸೇವೆ ಸಲ್ಲಿಸಿದವರ ಹಾಗು ಹೊಸದಾಗಿ ನೇಮಕಾತಿ ಹೊಂದಿದವರ ನಡುವೆ ಇರುವ ತಾರತಮ್ಯ ಸರಿಪಡಿಸಿ ಗೌರವಧನ ಹೆಚ್ಚಳ ಮಾಡುವುದು ಹಾಗು ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಿ ಆರ್ಥಿಕ ಸಂಗ್ರಹಣೆ ಹೆಚ್ಚಿಸುವ ಮೂಲಕ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡುವುದು ಸೇರಿದಂತೆ ಒಟ್ಟು ೧೬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ಪ್ರಧಾನ ಮಂತ್ರಿಗಳಿಗೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹಾಗು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. 
    ಫೆಡರೇಷನ್ ತಾಲೂಕು ಶಾಖೆ ಅಧ್ಯಕ್ಷೆ ಸುಶೀಲಬಾಯಿ ನೇತೃತ್ವ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಆರ್. ಭಾಗ್ಯಮಣಿ, ಪ್ರಮುಖರಾದ ಕೆ.ಸಿ ವಿಶಾಲ, ಜಿ.ಕೆ ಸುಲೋಚನ ಮತ್ತು ಆರ್. ವೇದಾವತಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.

Thursday, September 23, 2021

ಸೆ.೨೪ರಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಮುಷ್ಕರ

ಭದ್ರಾವತಿ, ಸೆ. ೨೪: ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಸಮಿತಿ ತಾಲೂಕು ಶಾಖೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.೨೪ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸಿಕೊಡುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿಗಳಿಗೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಹಾಗು  ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಧ್ಯಕ್ಷೆ ಸುಶೀಲಾಬಾಯಿ, ಕಾರ್ಯಕಾರಿ ಸಮಿತಿ ಮುಖಂಡರಾದ ಆರ್. ವೇದಾವತಿ, ಕೆ.ಸಿ ವಿಶಾಲ ಕೋರಿದ್ದಾರೆ.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ವಿರೋಧಿಸಿ ಸೆ.೨೪ರಂದು ಪ್ರತಿಭಟನಾ ಮೆರವಣಿಗೆ

    ಭದ್ರಾವತಿ, ಸೆ. ೨೩: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದೆಂದು ಆಗ್ರಹಿಸಿ ಸೆ.೨೪ರಂದು ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
    ಬೆಂಗಳೂರಿನಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಚಿಂತನಾ ಸಮಾವೇಶದ ಸಭೆಯ ನಿರ್ಣಯದಂತೆ ಹೋರಾಟ ಹಮ್ಮಿಕೊಳ್ಳಲಾಗಿದೆ. ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.