Monday, October 18, 2021

ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ತೆರವು : ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ನಿವಾಸಿಗಳಿಂದ ಮನವಿ


ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಜಾಗ ಬಿಟ್ಟುಕೊಡುವ ನಿವಾಸಿಗಳಿಗೆ, ವ್ಯಾಪಾರಸ್ಥರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧೮: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಕಡದಕಟ್ಟೆ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಈ ಜಾಗದಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೋಮವಾರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜೂ.೬ರಂದು ನಡೆದ ಸಭೆಯಲ್ಲಿ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಾಗು ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ ತೆರವು ಮಾಡುವಂತೆ ಮೌಕಿಕವಾಗಿ ಸೂಚಿಸುವ ಮೂಲಕ ನಿವಾಸಗಳನ್ನು ಹೊಂದಿರುವವರಿಗೆ ಪರಿಹಾರವಾಗಿ ೫ ಲಕ್ಷ ರು. ಹಾಗು ಜೇಡಿಕಟ್ಟೆಯಲ್ಲಿ ೨೦*೩೦ ನಿವೇಶನ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ನಡುವೆ ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಪ್ರಸ್ತುತ ೫ ಲಕ್ಷ ರು. ವೆಚ್ಚದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪರಿಹಾರ ಮೊತ್ತವನ್ನು ೧೦ ಲಕ್ಷ  ರು. ಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದ್ದರು.
    ಈ ಜಾಗದಲ್ಲಿ ಕುಲುಮೆ, ಕಟಿಂಗ್ ಶಾಪ್, ಹೋಟೆಲ್, ಚಿಲ್ಲರೆ ಅಂಗಡಿ ಹಾಗು ಜೆರಾಕ್ಸ್ ಅಂಗಡಿ ಸೇರಿದಂತೆ ಇನ್ನಿತರ ವ್ಯಾಪಾರ ವ್ಯವಹಾರ ನಡೆಸಿಕೊಂಡು ಜೀವನ ಸಾಗಿಸುತ್ತಿರುವವರು ಮುಂದೆ ಸಹ ಇದೆ ವೃತ್ತಿಗಳನ್ನು ನಡೆಸಿಕೊಂಡು ಹೋಗುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ವಿನಂತಿಸಲಾಗಿತ್ತು.
    ಈ ಹಿನ್ನಲೆಯಲ್ಲಿ ಇದೀಗ ಈ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ನಿವಾಸಿಗಳು ಮನವಿ ಸಲ್ಲಿಸಿದರು.

Sunday, October 17, 2021

ನ್ಯಾಯಾಲಯದಲ್ಲಿ ಮೇಲ್ಮನವಿ ಬಾಕಿ ಇರುವಾಗ ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿರುವ ಎಂ. ಗುರುಮೂರ್ತಿ

ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಪತ್ರಿಕಾಗೋಷ್ಠಿಯಲ್ಲಿ ಆರೋಪ


ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಸೇರಿದಂತೆ ಇನ್ನಿತರರು ಮಾತನಾಡಿದರು.
    ಭದ್ರಾವತಿ, ಅ. ೧೭: ಪ್ರೊ. ಬಿ. ಕೃಷ್ಣಪ್ಪ ಅವರು ೭೦ರ ದಶಕದಲ್ಲಿ ರಾಜ್ಯಾದ್ಯಂತ ಹುಟ್ಟುಹಾಕಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಸಂಬಂಧಿಸಿದಂತೆ ಕಿರಿಯ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ಹಂತದಲ್ಲಿ ಎಂ. ಗುರುಮೂರ್ತಿ ಎಂಬುವರು ಸಮಿತಿಗೆ ಸಂಬಂಧಿಸಿದ ವಿಚಾರದಲ್ಲಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂದು ಎಂ. ಗುರುಮೂರ್ತಿ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಸಮಿತಿಯ ಹೆಸರನ್ನು ನನ್ನ ಹೊರತುಪಡಿಸಿ ಬೇರೆ ಯಾರೂ ಬಳಸಬಾರದು, ಬಳಸಿದರೆ ಕೇಸು ದಾಖಲಿಸುತ್ತೇನೆ. ಭದ್ರಾವತಿ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ನನ್ನ ಹೊರತುಪಡಿಸಿ ರಾಜ್ಯದಲ್ಲಿ ಬೇರೆ ಯಾರೂ ಸಮಿತಿಯ ಹೆಸರನ್ನು ಬಳಸಕೂಡದು ಎಂದು ನ್ಯಾಯಾಲಯದ ಆದೇಶವಾಗಿರುತ್ತದೆ ಎಂದು ಹೇಳಿಕೊಂಡು ಗೊಂದಲ ಮೂಡಿಸುತ್ತಿದ್ದಾನೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ವಿಚಾರಣೆ ಬಾಕಿ ಇರುವಾಗ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ೨೦೦೪ ರಿಂದ ೨೦೦೮ರವರೆಗಿನ ಅವಧಿಯಲ್ಲಿ ಚಿಂತಾಮಣಿಯ ಎನ್. ಶಿವಣ್ಣನವರು ಅಧಿಕೃತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾಗಿದ್ದರು. ಈ ಅವಧಿಯಲ್ಲಿ ಅವರು ಅನಾರೋಗ್ಯದ ನಿಮಿತ್ತ ಸಮಿತಿಯ ನವೀಕರಣ ಮಾಡಲು ಸಾಧ್ಯವಾಗಲಿಲ್ಲ. ಇದೆ ಸಮಯವನ್ನು ಬಳಸಿಕೊಂಡು ಶಿವಮೊಗ್ಗ ತಾಲೂಕಿಗೆ ಸೀಮಿತವಾದಂತೆ ಕೆಲ ಸ್ಥಳೀಯರನ್ನು ಸೇರಿಸಿಕೊಂಡು ರಾಜ್ಯ ಪದಾಧಿಕಾರಿಗಳೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಯಾರಿಗೂ ತಿಳಿಯದಂತೆ ಸಮಿತಿಗೆ ದ್ರೋಹ ಮಾಡಿ ಎನ್. ಗಿರಿಯಪ್ಪನವರನ್ನು ರಾಜ್ಯ ಸಂಚಾಲಕರೆಂದು ೪ ವರ್ಷಗಳ ನವೀಕರಣವನ್ನು ಏಕಕಾಲದಲ್ಲಿ ಒಂದೇ ದಿನಾಂಕದಂದು ನವೀಕರಿಸಿಕೊಂಡಿರುತ್ತಾರೆಂದು ಆರೋಪಿಸಿದರು.
    ಅಧಿಕೃತ ಸಮಿತಿಯ ಅಂದಿನ ರಾಜ್ಯ ಸಂಚಾಲಕರಾಗಿದ್ದ ಎನ್. ಶಿವಣ್ಣರವರು ೨೦೦೭ರಲ್ಲಿ ಮರಣ ಹೊಂದಿದ ನಂತರ ಹಂಗಾಮಿ ರಾಜ್ಯ ಸಂಚಾಲಕರಾಗಿ ನೇಮಕಗೊಂಡಿದ್ದ ವೆಂಕಟಗಿರಿಯಯ್ಯನವರ ನಾಯಕತ್ವದಲ್ಲಿ ೨೦೦೯ರಲ್ಲಿ ಮುಂದಿನ ಅವಧಿಗೆ ನವೀಕರಣ ಮಾಡಿಕೊಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ. ಈ ಹಂತದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ನವೀಕರಣ ಮಾಡಲು ವಿಳಂಬ ಮಾಡಿದಾಗ ರಾಜ್ಯ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು. ದೂರಿಗೆ ಸ್ಪಂದಿಸಿದ ರಾಜ್ಯ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನವೀಕರಣ ಮಾಡಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಜಿಲ್ಲಾ ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ ಎನ್. ಗಿರಿಯಪ್ಪನವರಿಗೆ ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಹಿಂಬರಹ ನೀಡಿರುತ್ತಾರೆ. ೨೦೦೯ ರಿಂದ ೨೦೨೧ರ ವರೆಗೆ ಸಮಿತಿ ನವೀಕರಣವನ್ನು ಯಾರಿಗೂ ನೀಡದೆ ತಡೆ ಹಿಡಿಯಲಾಗಿದೆ. ಇಲ್ಲಿಯವರೆಗೂ ಯಾರಿಗೂ ಕೂಡ ನವೀಕರಣವನ್ನು ಜಿಲ್ಲಾ ನೋಂದಣಾಧಿಕಾರಿಗಳು ನೀಡಿರುವುದಿಲ್ಲ. ಈ ನಡುವೆ ಎನ್. ಗಿರಿಯಪ್ಪನವರು ನಗರದ ಜೆಎಂಎಫ್‌ಸಿ ಕಿರಿಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ವಿಚಾರಣೆ ನಡೆದು ತೀರ್ಪು ಸಹ ಪ್ರಕಟಗೊಂಡಿದೆ. ಈ ತೀರ್ಪನ್ನು ಪ್ರಶ್ನಿಸಿ ಹಿರಿಯ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
    ಈ ನಡುವೆ ಎಂ. ಗುರುಮೂರ್ತಿ ಸಮಾಜದಲ್ಲಿ ಎಲ್ಲರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದು, ಇವರ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿರುವ ಆರೋಪ, ಪರಿಶಿಷ್ಟ ಜಾತಿಯವರನ್ನು ವಂಚಿಸಿರುವ ಆರೋಪಗಳಿವೆ. ಸಮಿತಿಯು ಸಾಮಾಜಿಕ ಚಳುವಳಿ ಆಗಿರುವುದರಿಂದ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆಗಳು ನಡೆದಂತಹ ಸಂದರ್ಭದಲ್ಲಿ ಅನ್ಯಾಯ ಪ್ರಶ್ನಿಸುವ, ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರದಾಗಿದೆ. ಸಮಿತಿ ಹೆಸರನ್ನು ಬಳಸಬಾರದು ಎಂಬುದಕ್ಕೆ ಯಾರಿಗೂ ಅಧಿಕಾರವಿರುವುದಿಲ್ಲ. ಈ ವಿಚಾರವಾಗಿ ಎಂ. ಗುರುಮೂರ್ತಿ ವಿರುದ್ಧ ಎ.ಡಿ.ಜಿ.ಪಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಏಳುಮಲೈ, ವಿ. ವಿನೋದ್ ಮತ್ತು ತಾಲೂಕು ಸಂಘಟನಾ ಸಂಚಾಲಕ ಸಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, October 16, 2021

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಹಲವು ವಿಶೇಷತೆ

 ೪ ಜನರ ಪೈಕಿ ಗೀತಾಗೆ ಒಲಿದ ಅದೃಷ್ಟ, ಛಲವಾದಿ ಸಮಾಜದ ಅಧ್ಯಕ್ಷನಿಗೆ ಒಲಿದ ಅದೃಷ್ಟ

ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್
    ಭದ್ರಾವತಿ, ಅ. ೧೬: ಈ ಬಾರಿ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ಹಲವು ವಿಶೇಷತೆಗಳು ಕಂಡು ಬಂದವು.
    ಪ್ರಮುಖವಾಗಿ ಅಧ್ಯಕ್ಷ ಸ್ಥಾನಕ್ಕೆ ಸಹೋದರಿಬ್ಬರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿದ್ದು ವಿಶೇಷವಾಗಿ ಕಂಡು ಬಂದಿತು. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಿಂದ ಬಿ.ಎಸ್ ಸುಬ್ಬಣ್ಣ ತಮ್ಮ ಪತ್ನಿ, ವಾರ್ಡ್ ನಂ.೧೫ರ ಸದಸ್ಯೆ ಮಂಜುಳ ಅವರನ್ನು ಹಾಗು ಬಿಜೆಪಿ ಪಕ್ಷದಿಂದ ಬಿ.ಎಸ್ ನಾರಾಯಣ್ಣಪ್ಪ ತಮ್ಮ ಪತ್ನಿ, ವಾರ್ಡ್ ನಂ.೫ರ ಸದಸ್ಯೆ ಶಶಿಕಲಾ ಅವರನ್ನು ಕಣಕ್ಕಿಳಿಸಿದ್ದರು. ಮಂಜುಳ ೧೨ ಮತಗಳನ್ನು ಶಶಿಕಲಾ ೪ ಮತಗಳನ್ನು ಪಡೆದು ಪರಾಭವಗೊಂಡರು.
ಪರಿಶಿಷ್ಟ ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪಕ್ಷಗಳು ಒಂದೇ ಸಮುದಾಯದವರನ್ನು ಕಣಕ್ಕಿಳಿಸಿರುವುದು ಮತ್ತೊಂದು ವಿಶೇಷವಾಗಿ ಕಂಡು ಬಂದಿತು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಾರ್ಡ್ ನಂ.೯ರ ಸದಸ್ಯ ಚನ್ನಪ್ಪ ಮತ್ತು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ವಾರ್ಡ್ ನಂ.೨೫ರ ಸದಸ್ಯ ಕೆ. ಉದಯಕುಮಾರ್ ಇಬ್ಬರು ಛಲವಾದಿ ಸಮಾಜದವರಾಗಿದ್ದು, ಚನ್ನಪ್ಪ ೨೦ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಉದಯಕುಮಾರ್ ೧೨ ಮತಗಳನ್ನು ಪಡೆದು ಪರಾಭವಗೊಂಡರು.



ಭದ್ರಾವತಿ ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ
    ಮತ್ತೊಂದು ವಿಶೇಷ ಎಂದರೆ ಬಿಜೆಪಿ ಸದಸ್ಯರು ಅಧ್ಯಕ್ಷರ ಚುನಾವಣೆಯಲ್ಲಿ ಮಾತ್ರ ಮತ ಚಲಾಯಿಸಿದ್ದು, ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇಲ್ಲದ ಕಾರಣ ತಟಸ್ಥರಾಗಿ ಉಳಿದರು.
    ಗೀತಾಗೆ ಒಲಿದ ಅದೃಷ್ಟ :
  ವಾರ್ಡ್ ನಂ.೨ರ ಗೀತಾ ರಾಜ್‌ಕುಮಾರ್, ವಾರ್ಡ್ ನಂ.೧೩ರ ಅನುಸುಧಾ ಮೋಹನ್, ವಾರ್ಡ್ ನಂ.೩೪ರ ಲತಾ ಚಂದ್ರಶೇಖರ್ ಮತ್ತು ವಾರ್ಡ್ ನಂ.೩೫ರ ಶೃತಿ ವಸಂತಕುಮಾರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದರು. ಈ ನಾಲ್ವರು ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಗೊಂದಲ ನಿರ್ಮಾಣವಾಗಿತ್ತು. ಅಂತಿಮವಾಗಿ ಶನಿವಾರ ಬೆಳಿಗ್ಗೆ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೀತಾ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು ೩೦ ತಿಂಗಳ ಅಧಿಕಾರದ ಅವಧಿಯಲ್ಲಿ ನಾಲ್ವರಿಗೂ ಅವಕಾಶ ಕಲ್ಪಿಸಿಕೊಡುವುದಾಗಿ ಸಭೆಯಲ್ಲಿ ಭರವಸೆ ನೀಡಲಾಗಿದ್ದು, ಒಂದು ವೇಳೆ ಈ ರೀತಿ ನಡೆದುಕೊಂಡಲ್ಲಿ ಗೀತಾ ಅವರ ಅವಧಿ ಕೇವಲ ೭.೫ ತಿಂಗಳು ಮಾತ್ರ ಎನ್ನಲಾಗಿದೆ.
    ಛಲವಾದಿ ಸಮಾಜದ ಅಧ್ಯಕ್ಷನಿಗೆ ಉಪಾಧ್ಯಕ್ಷ ಸ್ಥಾನ :
    ತಾಲೂಕು ಛಲವಾದಿ ಸಮಾಜದ ಅಧ್ಯಕ್ಷ, ವಾರ್ಡ್ ನಂ.೯ರ ಸದಸ್ಯ ಚನ್ನಪ್ಪ ಈ ಬಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ನಗಸಭೆಗೆ ಆಯ್ಕೆಯಾಗಿದ್ದು, ಒಂದು ಬಾರಿ ನಾಮನಿರ್ದೇಶನ ಸದಸ್ಯರಾಗಿ ಒಟ್ಟು ೩ ಬಾರಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಅಲ್ಲದೆ ಚನ್ನಪ್ಪ ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಛಲವಾದಿ ಸಮಾಜದ ಅಧ್ಯಕ್ಷರಾಗಿದ್ದ ಬದರಿನಾರಾಯಣ ಅವರು ಕಳೆದ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆ ಅಭಿವೃದ್ಧಿಗೆ ಶ್ರಮಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೀತಾ ಕೆ.ಜಿ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಅವರು ಶಾಸಕ ಬಿ.ಕೆ ಸಂಗಮೇಶ್ವರ್ ಅವರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
    ಭದ್ರಾವತಿ: ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಜವಾಬ್ದಾರಿ ಹೆಚ್ಚಿನದ್ದಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶನಿವಾರ ನಗರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೀತಾ ಕೆ.ಜಿ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಆಯ್ಕೆಯಾದ ಚನ್ನಪ್ಪ ಅವರನ್ನು ಅಭಿನಂದಿಸಿ ಮಾತನಾಡಿದರು.
    ಯಾವುದೇ ಪಕ್ಷ ಬೇಧಭಾವವಿಲ್ಲದೆ ನಗರಸಭೆ ಎಲ್ಲಾ ೩೫ ವಾರ್ಡ್‌ಗಳ ಸದಸ್ಯರುಗಳು ಒಗ್ಗಟ್ಟಾಗಿ ನಗರದ ಬೆಳವಣಿಗೆಗೆ ಶ್ರಮಿಸಬೇಕು. ನಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂಬ ಭಾವನೆ ಯಾರು ಸಹ ಬೆಳೆಸಿಕೊಳ್ಳಬಾರದು. ಎಲ್ಲರಿಗೂ ಜವಾಬ್ದಾರಿ ಇದ್ದು, ಅದನ್ನು ಅರಿತುಕೊಂಡು ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಕರೆ ನೀಡಿದರು.
    ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ನಗರಸಭೆ ಎಲ್ಲಾ ಸದಸ್ಯರಿಗೆ ಹಾಗೂ ಶಾಸಕರಿಗೆ ಮತ್ತು ಚುನಾವಣೆ ಯಶಸ್ವಿಯಾಗಿ ನಡೆಯಲು ಕಾರಣರಾದ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶಕ್ತಿ ಮೀರಿ ಶ್ರಮಿಸುತ್ತೇನೆ. ಮುಂದಿನ ದಿನಗಳಲ್ಲಿ ಸ್ವಚ್ಛ, ಸುಂದರ ನಗರವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
    ನೂತನ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕರ ಮಾರ್ಗದರ್ಶನದಲ್ಲಿ ನಗರಸಭೆ ಎಲ್ಲಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಸಹಕಾರದೊಂದಿಗೆ ಮುಂದಿನ ದಿನಗಳನ್ನು ನಗರಸಭೆ ಆದಾಯವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದರು.
          ಸಂಭ್ರಮಾಚರಣೆ :
   ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನಗರಸಭೆ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ನಗರಸಭೆ ಎಲ್ಲಾ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು.
    ನಂತರ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ತಾಲೂಕು ನಗರ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ನಾಡಹಬ್ಬ ದಸರಾ ಮೆರವಣಿಗೆ : ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನಕ್ಕೆ ೨ನೇ ಬಹುಮಾನ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಅ. ೧೬: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲಂಕೃತಗೊಂಡ ದೇವಾನುದೇವತೆಗಳಲ್ಲಿ ಹಳೇನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದೆ.
    ನಗರದ ವಿವಿಧೆಡೆಗಳಿಂದ ಸುಮಾರು ೩೦ಕ್ಕೂ ಅಧಿಕ ಅಲಂಕೃತಗೊಂಡ ದೇವಾನುದೇವತೆಗಳು ಪಾಲ್ಗೊಂಡಿದ್ದವು. ಈ ಪೈಕಿ ಶ್ರೀ ಕುಕ್ಕುವಾಡೇಶ್ವರಿ ದೇವಸ್ಥಾನ ೨ನೇ ಬಹುಮಾನ ಪಡೆದುಕೊಂಡಿದ್ದು, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಕೂಡ್ಲಿಗೆರೆ ಎಸ್ ಮಹಾದೇವ ಹಾಗು ಖಜಾಂಚಿ ಎಚ್. ವಿಶ್ವನಾಥ್ ಬಹುಮಾನ ಪಡೆದುಕೊಂಡರು. ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಉಪಸ್ಥಿತರಿದ್ದರು.

ಶಾಲೆಯ ಅಭಿವೃದ್ಧಿಯಲ್ಲಿ ಹಳೇಯ ವಿದ್ಯಾರ್ಥಿಗಳ ಪಾತ್ರ ಗಮನಾರ್ಹ : ಟಿ.ಎನ್ ಸೋಮಶೇಖರಯ್ಯ

ಭದ್ರಾವತಿ ಕಾಗದನಗರ ಆಂಗ್ಲ ಶಾಲೆಯಲ್ಲಿ ಶನಿವಾರ ೪೦ನೇ ವರ್ಷದ ಸವಿನೆನಪಿನಲ್ಲಿ ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮವನ್ನು ಶಾಲೆಯ ಹಿರಿಯ ನಿವೃತ್ತ ಪ್ರಾಂಶುಪಾಲ ವೈ. ಶೇಷಾಚಲ ಉದ್ಘಾಟಿಸಿದರು.
    ಭದ್ರಾವತಿ, ಅ. ೧೬: ಶಾಲಾ ಅಭಿವೃದ್ಧಿಯಲ್ಲಿ ಕಾಗದನಗರ ಆಂಗ್ಲ ಶಾಲೆಯ ಹಳೇಯ ವಿದ್ಯಾರ್ಥಿಗಳ ಪಾತ್ರ ಗಮನಾರ್ಹವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಶನಿವಾರ ಶಾಲೆಯಲ್ಲಿ ೪೦ನೇ ವರ್ಷದ ಸವಿನೆನಪಿನಲ್ಲಿ ೧೯೮೮ ರಿಂದ ೨೦೨೦ರ ವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸುಮಾರು ೬೦೦ ರಿಂದ ೭೦೦ ಮಂದಿ ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹಳೇಯ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮುಂದಿನ ಪೀಳಿಗೆಯವರಿಗೆ ಮಾದರಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಅಲ್ಲದೆ ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರ ಬಗ್ಗೆ ಹೊಂದಿರುವ ಕಾಳಜಿ ಅಭಿನಂದನಾರ್ಹ ಎಂದರು.  
    ಎಂಪಿಎಂ ಶಿಕ್ಷಣ ಸಂಸ್ಥೆಗಳ ಖಜಾಂಚಿ ಎಂ.ಡಿ ರವಿಕುಮಾರ್ ಮಾತನಾಡಿ, ಹಳೇಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಯಲ್ಲಿ ತೋರಿರುವ ಕಾಳಜಿಯಿಂದಾಗಿ ಅವರ ಮೇಲೆ ಗೌರವದ ಭಾವನೆಗಳು ಮೂಡುತ್ತಿವೆ. ಶಿಕ್ಷಕರನ್ನು ಗೌರವಿಸುವ ಅವರ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ನನ್ನ ಬಾಲ್ಯದ ಶಿಕ್ಷಣದ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ ಎಂದರು.
    ಶಾಲೆಯ ಹಿರಿಯ ನಿವೃತ್ತ ಪ್ರಾಂಶುಪಾಲ ವೈ. ಶೇಷಾಚಲ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಗದನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್, ಕ್ಷೇತ್ರ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿ ಸಿ. ಚನ್ನಪ್ಪ, ಪಿಟಿಜೆಸಿ ಪ್ರಾಂಶುಪಾಲ ಲಕ್ಷ್ಮೀಕಾಂತ್, ಉಪಪ್ರಾಂಶುಪಾಲ ಡಿ. ನಾಗರಾಜ್, ಹಳೇಯ ವಿದ್ಯಾರ್ಥಿಗಳಾದ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿನೂತನ್, ಪ್ರೀತಮ್, ಅರುಣ್, ಎಚ್.ಆರ್ ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಹೊರ ರಾಜ್ಯ ಹಾಗು ರಾಜ್ಯದ ವಿವಿಧ ಮೂಲೆಗಳಿಂದ ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿರುವ ಶಿಕ್ಷಕರು, ವ್ಯಾಸಂಗ ಮಾಡಿರುವ ಹಳೇಯ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಗರಸಭೆ ಅಧ್ಯಕ್ಷರಾಗಿ ಗೀತಾ ಕೆ.ಜಿ ರಾಜ್‌ಕುಮಾರ್, ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆ

ಎರಡೂವರೆ ವರ್ಷಗಳ ನಂತರ ಜನಪ್ರತಿನಿಧಿಗಳ ಆಡಳಿತ


ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಚನ್ನಪ್ಪ ಶನಿವಾರ ನಡೆದ ಚುನಾವಣೆ ಆಯ್ಕೆಯಾದರು. ಚುನಾವಣಾಧಿಕಾರಿ ಟಿ.ವಿ ಪ್ರಕಾಶ್, ಶಾಸಕ ಬಿ.ಕೆ ಸಂಗಮೇಶ್ವರ್, ಪೌರಾಯುಕ್ತ ಕೆ. ಪರಮೇಶ್ ಅಭಿನಂದಿಸಿದರು.
    ಭದ್ರಾವತಿ, ಅ. ೧೬: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ.೨ರ ಸದಸ್ಯೆ ಗೀತಾ ಕೆ.ಜಿ ರಾಜ್‌ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಚನ್ನಪ್ಪ ತಲಾ ೮ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ಕೆ.ಜಿ ರಾಜ್‌ಕುಮಾರ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೧೫ರ ಮಂಜುಳ ಬಿ.ಎಸ್ ಸುಬ್ಬಣ್ಣ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೫ರ ಶಶಿಕಲಾ ಬಿ.ಎಸ್ ನಾರಾಯಣಪ್ಪ ಸ್ಪರ್ಧಿಸಿದ್ದು, ಈ ಪೈಕಿ ಗೀತಾ ೨೦, ಮಂಜುಳ ೧೨ ಮತ್ತು ಶಶಿಕಲಾ ೪ ಮತಗಳನ್ನು ಪಡೆದುಕೊಂಡರು.
    ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೯ರ ಚನ್ನಪ್ಪ ಮತ್ತು  ಜೆಡಿಎಸ್ ಪಕ್ಷದಿಂದ ವಾರ್ಡ್ ನಂ. ೨೫ರ ಕೆ. ಉದಯ ಕುಮಾರ್ ಸ್ಪರ್ಧಿಸಿದ್ದು, ಈ ಪೈಕಿ ಚನ್ನಪ್ಪ ೨೦ ಮತಗಳನ್ನು ಹಾಗು ಕೆ. ಉದಯ ಕುಮಾರ್ ೧೨ ಮತಗಳನ್ನು ಪಡೆದುಕೊಂಡರು. ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೪ ಸದಸ್ಯರು ತಟಸ್ಥವಾಗಿ ಉಳಿದುಕೊಂಡರು.
    ಒಟ್ಟು ೩೪ ಸದಸ್ಯರಿದ್ದು, ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ೧ ಮತ ಹೊಂದಿದ್ದಾರೆ. ಒಟ್ಟು ೩೬ ಮತಗಳು ಚಲಾವಣೆಗೊಂಡಿವೆ. ನಗರಸಭೆಯಲ್ಲಿ ಕಾಂಗ್ರೆಸ್ ೧೮, ಜೆಡಿಎಸ್ ೧೨, ಬಿಜೆಪಿ ೪ ಮತ್ತು ೧ ಪಕ್ಷೇತರ ಸದಸ್ಯರಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸಿದರು. ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಶಾಸಕ ಬಿ.ಕೆ ಸಂಗಮೇಶ್ವರ್ ಉಪಸ್ಥಿತರಿದ್ದರು.