Monday, October 25, 2021

ಅನುದಾನ ಮಂಜೂರಾತಿ ಮಾಡಿಸಿಕೊಟ್ಟಿದ್ದರೂ ಅಭಿವೃದ್ಧಿ ಕಾಮಗಾರಿಗಳು ವಿಳಂಬ

ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ

ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು.
    ಭದ್ರಾವತಿ, ಅ. ೨೫: ತಾಲೂಕಿನಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಕಿದಿದ್ದು, ಸರ್ಕಾರದಿಂದ ಕೋಟ್ಯಾಂತರ ರು. ಅನುದಾನ ಮಂಜೂರಾತಿ ಮಾಡಿಸಿಕೊಟ್ಟಿದ್ದರೂ ಸಹ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.
    ಅವರು ಸೋಮವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ಪ್ರಗತಿಯಲ್ಲಿರುವ ಹಾಗು ಬಾಕಿ ಇರುವ ಕಾಮಗಾರಿಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಆದರೆ ಸಭೆಗೆ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಸಭೆ ಯಾರಿಗಾಗಿ ನಡೆಸಬೇಕಾಗಿದೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.
    ಪ್ರಮುಖವಾಗಿ ತಾಲೂಕಿನಲ್ಲಿ ಸಾಕಷ್ಟುಗಳು ರಸ್ತೆಗಳು ಹಾಳಾಗಿದ್ದು, ತುರ್ತು ಕಾಮಗಾರಿಗಳಿಗಾಗಿ ಸರ್ಕಾರಿಂದ ೮೦ ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಹಾಗು ನೀರಾವರಿ ಇಲಾಖೆಗಳಿಗೆ ಕೋಟ್ಯಾಂತರ ರು. ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಲಾಗಿದೆ. ಆದರೆ ಬಹಳಷ್ಟು ಕಾಮಗಾರಿಗಳು ಬಾಕಿ ಉಳಿದಿದ್ದು, ಅಲ್ಲದೆ ಕಾಮಗಾರಿಗಳನ್ನು ವಿಳಂಬವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೆ ಕಾರಣಗಳು ತಿಳಿದು ಬರುತ್ತಿಲ್ಲ. ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕೆಂದರು.
    ಸಭೆಯಲ್ಲಿ ಪಾಲ್ಗೊಂಡಿದ್ದ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಕಂದಾಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು. ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿ ಮಾಹಿತಿಯನ್ನು ಮಂಡಿಸಿದರು.
    ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಚೈತನ್ಯ ಉಪಸ್ಥಿತರಿದ್ದರು. ಕೆಡಿಪಿ ಸಮಿತಿ ಸದಸ್ಯರಾದ ಸುನೀತಾ ಮೋಹನ್, ನಾಗರಾಜ್‌ರಾವ್ ಅಂಬೋರೆ, ಗಜೇಂದ್ರಜೈನ್ ಮತ್ತು ಚಂದ್ರಪ್ಪ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಆರ್. ಮೋಹನ್‌ಕುಮಾರ್,  ನ್ಯಾಯವಾದಿ ಟಿ. ಚಂದ್ರೇಗೌಡ,  ವಿವಿಧ ಇಲಾಖೆ ಅಧಿಕಾರಿಗಳಾದ ಎಸ್.ಎಸ್.ವೈ ಶಿರಸ್ತೇದಾರ್ ರಾಧಾಕೃಷ್ಣಭಟ್, ಸಹಾಯಕ ಕೃಷಿ ನಿರ್ದೇಶಕ ಶಶಿಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕದ ವ್ಯವಸ್ಥಾಪಕಿ ಅಂಬಿಕಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ನಗರಸಭೆ ಸಹಾಯಕ ಇಂಜಿನಿಯರ್ ಶ್ರೀರಂಗರಾಜ ಪುರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

Sunday, October 24, 2021

ಭಾರಿ ಮಳೆ : ಮನೆಗಳಿಗೆ ನುಗ್ಗಿದ ಕೆರೆ ನೀರು

ಭದ್ರಾವತಿ ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಸ್ಥಳಕ್ಕೆ ಕಂದಾಯಾಧಿಕಾರಿ ಪ್ರಶಾಂತ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಅ. ೨೪: ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಉಜ್ಜನಿಪುರದಲ್ಲಿರುವ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳದ ಕಾರಣ ಎರಡು ದಿನಗಳಿಂದ ಸಂಜೆ ವೇಳೆ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೆರೆ ನೀರು ಸಮೀಪದಲ್ಲಿರುವ ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದಾಗಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
    ಉಜ್ಜನಿಪುರ ಸರ್ವೆ ನಂ.೧೩ ಮತ್ತು ೧೫ರ ವ್ಯಾಪ್ತಿಯಲ್ಲಿನ ಕೆರೆ ಒತ್ತುವರಿ ಕಾರ್ಯಾಚರಣೆ ಕೈಗೊಳ್ಳಲು ತಾಲೂಕು ಆಡಳಿತ ಫೆಬ್ರವರಿ ತಿಂಗಳಿನಲ್ಲಿ ಮುಂದಾಗಿತ್ತು. ಈ ಸಂಬಂಧ ತಿಳುವಳಿಕೆ ಪತ್ರ ಸಹ ಹೊರಡಿಸಿತ್ತು. ಆದರೆ ಇದುವರೆಗೂ ಕಾರ್ಯಾಚರಣೆ ಕೈಗೊಂಡಿಲ್ಲ. ಕೆರೆ ನೀರು ಉಜ್ಜನಿಪುರದಲ್ಲಿ ಹಾದು ಹೋಗಿರುವ ಕಾಲುವೆಗೆ ಬಂದು ಸೇರ್ಪಡೆಗೊಳ್ಳುತ್ತಿದೆ. ಒತ್ತುವರಿಯಾಗಿರುವ ಕಾರಣ ನೀರು ಕಾಲುವೆಗೆ ಸರಾಗವಾಗಿ ನೀರು ಬಂದು ಸೇರುತ್ತಿಲ್ಲ. ಇದರಿಂದಾಗಿ ಕೆರೆ ನೀರು ಸಮೀಪದಲ್ಲಿರುವ ೫-೬ ಮನೆಗಳಿಗೆ ನುಗ್ಗುತ್ತಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿ ನೀರು ತುಂಬಿಕೊಳ್ಳುವ ಪರಿಣಾಮ ಇಡೀ ರಾತ್ರಿ ನಿದ್ರೆಯಿಲ್ಲದೆ ಕಾಲ ಕಳೆಯುವಂತಾಗಿದೆ. ಅಲ್ಲದೆ ಮನೆಗಳ ಗೋಡೆಗಳು ಶೀತದಿಂದ ಕುಸಿಯುವ ಭೀತಿ ಎದುರಾಗಿದೆ.
    ಭಾನುವಾರ ಬೆಳಿಗ್ಗೆ ಕಂದಾಯಾಧಿಕಾರಿ ಪ್ರಶಾಂತ್ ಹಾಗು ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಗರಸಭೆ ಮಾಜಿ ಸದಸ್ಯ ವೆಂಕಟಯ್ಯ ಉಪಸ್ಥಿತರಿದ್ದರು.

ಎಂಪಿಎಂ ಮುಚ್ಚುವಿಕೆ ಆದೇಶದ ವಿರುದ್ಧ ಸಿಡಿದೆದ್ದ ಕಾರ್ಮಿಕರು, ಕುಟುಂಬ ವರ್ಗದವರು

ಕಾರ್ಮಿಕರಿಗೆ ಉದ್ಯೋಗದ ಭದ್ರತೆ : ಸಂಸದ ಬಿ.ವೈ ರಾಘವೇಂದ್ರ ಭರವಸೆ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಹೊರಡಿಸಿರುವ ಆದೇಶ ಹಾಗು ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಿರುವ ಪತ್ರದ ವಿರುದ್ಧ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಸಿಡಿದೆದಿದ್ದು, ಭಾನುವಾರ ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
    ಭದ್ರಾವತಿ, ಅ. ೨೪: ನಗರದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಹೊರಡಿಸಿರುವ ಆದೇಶ ಹಾಗು ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಕಾರ್ಮಿಕರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಿರುವ ಪತ್ರದ ವಿರುದ್ಧ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಸಿಡಿದೆದಿದ್ದು, ಭಾನುವಾರ ಶಿವಮೊಗ್ಗದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಭೇಟಿಯಾಗಿ ಚರ್ಚಿಸಿದರು.
    ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಅ.೭ರಂದು ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಸಂಬಂಧ ಆದೇಶ ಹೊರಡಿಸಿದ್ದು, ಇದರಿಂದಾಗಿ ಪ್ರಸ್ತುತ ಕಾರ್ಖಾನೆಯಲ್ಲಿರುವ ೨೧೪ ಕಾರ್ಮಿಕರು ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ಯಾವುದೇ ಉದ್ಯೋಗದ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ೨೧೪ ಕಾರ್ಮಿಕರಿಗೆ ಉದ್ಯೋಗದ ಭರವಸೆ ನೀಡಿದ್ದು, ಈಗಾಗಲೇ ೧೪೨ ಮಂದಿ ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ೭೨ ಮಂದಿಗೆ ಯಾವುದೇ ಉದ್ಯೋಗವಿಲ್ಲದಂತಾಗಿದೆ. ಈ ನಡುವೆ ಮುಖ್ಯ ಆಡಳಿತಾಧಿಕಾರಿಗಳು ಕಾರ್ಮಿಕರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಸೂಚನೆ ಹೊರಡಿಸಿದ್ದಾರೆ. ಇದರಿಂದಾಗಿ ಕಾರ್ಮಿಕರು ಮತ್ತು ಕುಟುಂಬ ವರ್ಗದವರು ಅತಂತ್ರಕ್ಕೆ ಒಳಗಾಗಿದ್ದಾರೆಂದು ಅಳಲು ವ್ಯಕ್ತಪಡಿಸಿದರು.
    ಇದಕ್ಕೆ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರರವರು, ವಿವಿಧ ನಿಗಮ ಮಂಡಳಿಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವವರು ಅಲ್ಲಿಯೇ ಕರ್ತವ್ಯ ಮುಂದುವರೆಸಲು ಸಂಬಂಧಪಟ್ಟ ನಿಗಮ ಮಂಡಳಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹಾಗು ಯಾವುದೇ ಉದ್ಯೋಗವಿಲ್ಲದೆ ಉಳಿದು ಕೊಂಡಿರುವ ೭೨ ಕಾರ್ಮಿಕರಿಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
    ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾದ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಎರಡು ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಜಯರಾಂ ಸೇರಿದಂತೆ ಕಾರ್ಮಿಕರು, ಕುಟುಂಬ ವರ್ಗದವರು ಪಾಲ್ಗೊಂಡಿದ್ದರು ಎಂದು ಕಾರ್ಮಿಕ ಮುಖಂಡ ಎಚ್. ತಿಮ್ಮಪ್ಪ ತಿಳಿಸಿದರು.

Saturday, October 23, 2021

ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧಕ್ಕೆ ಖಂಡನೆ : ಪಂಜಿನ ಮೆರವಣಿಗೆ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಖಂಡಿಸಿ ಶನಿವಾರ ಸಂಜೆ ಯುವ ಬ್ರಿಗೇಡ್ ವತಿಯಿಂದ ಪಂಚಿನ ಪಂಜಿನ ಮೆರವಣಿಗೆ ನಡೆಸಲಾಯಿತು.
    ಭದ್ರಾವತಿ, ಸೆ. ೨೩: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ಖಂಡಿಸಿ ಶನಿವಾರ ಸಂಜೆ ಯುವ ಬ್ರಿಗೇಡ್ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.
    ಕೆಎಸ್‌ಆರ್‌ಸಿ ಮುಖ್ಯ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದ ವರೆಗೂ ಪಂಜಿನ ಮೆರವಣಿಗೆ ನಡೆಸಿ ಹಿಂದೂಗಳ ನೆರಮೇಧವನ್ನು ತೀವ್ರವಾಗಿ ಖಂಡಿಸಲಾಯಿತು. ಅಲ್ಲದೆ ಮೇಣದ ಬತ್ತಿ ಹಚ್ಚಿ ಬಲಿಯಾಗಿರುವ ಅಮಾಯಕ ಹಿಂದೂಗಳ ಆತ್ಮಕ್ಕೆ ಶಾಂತಿ ಕೋರಲಾಯಿತು.
    ಕರ್ನಾಟಕ ರಾಮ್ ಸೇನಾ ಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್‌ಗೌಡ, ತಾಲೂಕು ಅಧ್ಯಕ್ಷ ಸಚಿನ್ ಎಂ. ವರ್ಣೇಕರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಧನುಷ್ ಬೋಸ್ಲೆ, ಯುವ ಬ್ರಿಗೇಡ್ ತಾಲೂಕು ಸಂಚಾಲಕ ಮೋಹನ್ ಕುಮಾರ್, ದರ್ಶನ್, ಸಂಜು, ಮಂಜುನಾಥ್, ಶ್ರೇಯಸ್, ಕೃಷ್ಣ, ಜೋಗಿ, ರಮೇಶ್, ಪ್ರಭು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಎಂಪಿಎಂ ಕಾರ್ಮಿಕರಿಂದ ತುರ್ತು ಸಭೆ : ಮುಂದಿನ ಹೋರಾಟಕ್ಕೆ ನಿರ್ಣಯ

    ಭದ್ರಾವತಿ, ಅ. ೨೩: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಪ್ರಸ್ತುತ ಮಸ್ಟರ್ ರೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ತವ್ಯಕ್ಕೆ ಹಾಜರಾಗದಿರುವಂತೆ ಮುಖ್ಯ ಆಡಳಿತಾಧಿಕಾರಿ ಸೂಚನೆ ಪತ್ರ ಹೊರಡಿಸಿರುವ ಹಿನ್ನಲೆಯಲ್ಲಿ ಶನಿವಾರ ಕಾರ್ಖಾನೆಯ ಎರಡು ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಸಭೆ ನಡೆಸಿದ್ದು, ಮುಂದಿನ ಹೋರಾಟಕ್ಕೆ ಸಂಬಂಧಿಸಿ ಹಲವು ನಿರ್ಣಯಗಳನ್ನು ಕೈಗೊಂಡಿವೆ.
    ದಿ ಮೈಸೂರು ಪೇಪರ್ ಮಿಲ್ಸ್ ಎಂಪ್ಲಾಯಿಸ್ ಅಸೋಸಿಯೇಷನ್ ಮತ್ತು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಈ ಎರಡು ಕಾರ್ಮಿಕ ಸಂಘಟನೆಗಳು ಸಂಜೆ ತುರ್ತು ಸಭೆ ನಡೆಸಿದ್ದು, ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ಆದೇಶ ಹಿಂಪಡೆಯುವವರೆಗೂ ಹಾಗು ಕಾರ್ಮಿಕರಿಗೆ ಉದ್ಯೋಗ ಭದ್ರತೆ ಲಭಿಸುವವರೆಗೂ ಜಂಟಿಯಾಗಿ ಹೋರಾಟ ನಡೆಸಲು ಮುಂದಾಗಿವೆ.
    ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದು, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಮಸ್ಟರ್ ರೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೨೧೪ ಕಾರ್ಮಿಕರ ವಿಶೇಷ ತುರ್ತು ಸಭೆ ನಡೆಸುವುದು, ಮಧ್ಯಾಹ್ನ ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸುವುದು ಸೇರಿದಂತೆ ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.  

ವಿವಿಧ ಬೇಡಿಕೆ ಈಡೇರಿಸಲು ಎಬಿವಿಪಿ ಆಗ್ರಹ : ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಭದ್ರಾವತಿ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಅ. ೨೩: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
    ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚಿನ ಶುಲ್ಕ ಪಡೆಯುತ್ತಿದ್ದು, ಅಲ್ಲದೆ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ವಸತಿ ನಿಲಯಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಲಾಯಿತು.
    ಗ್ರಾಮಾಂತರ ಭಾಗಗಳಲ್ಲಿ ಸರಿಯಾಗಿ ಬಸ್ ಸೌಲಭ್ಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವುದು ಹಾಗು ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದುವರೆಗೂ ವಿದ್ಯಾರ್ಥಿ ವೇತನ ಮಂಜೂರಾತಿಯಾಗಿರುವುದಿಲ್ಲ. ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
    ಅಕಾಶ್, ಮನು, ಪ್ರವೀಣ್, ಅಭಿ, ಗಣೇಶ್, ಸ್ಪೂರ್ತಿ, ಸುಚಿತ್ರ ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕರಾವೇ ಶಿವಮೊಗ್ಗ ನಗರ ಪದಾಧಿಕಾರಿಗಳ ನೇಮಕ

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೂತನವಾಗಿ ಶಿವಮೊಗ್ಗ ನಗರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
    ಭದ್ರಾವತಿ, ಅ. ೨೩:  ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೂತನವಾಗಿ ಶಿವಮೊಗ್ಗ ನಗರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
    ಉಪಾಧ್ಯಕ್ಷರಾಗಿ ಎನ್. ಶೋಭಾ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಜೆ ಅನಿತಾ, ಸಂಘಟನಾ ಕಾರ್ಯದರ್ಶಿಯಾಗಿ ಕಲಾವತಿ, ನಗರ ಕಾರ್ಯದರ್ಶಿಯಾಗಿ ಭವಾನಿ ಹಾಗು ಸಹ ಕಾರ್ಯದರ್ಶಿಯಾಗಿ ವೀಣಾ ಅವರನ್ನು ನೇಮಕ ಮಾಡಲಾಯಿತು.
ಶಿವಮೊಗ್ಗ ಗಾಂಧಿ ಬಜಾರ್ ಮಹಿಳಾ ಘಟಕದ ಅದ್ಯಕ್ಷರಾಗಿ ಪರಿಮಳ, ಉಪಾಧ್ಯಕ್ಷರಾಗಿ ಶಾಂತ, ಪ್ರಧಾನ ಕಾರ್ಯದರ್ಶಿಯಾಗಿ ಶಕುಂತಳಾ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ರೇಖಾ ಮತ್ತು ಸಹ ಕಾರ್ಯದರ್ಶಿಯಾಗಿ ರಾಧಿಕಾ ರವರನ್ನು ಆಯ್ಕೆ ಮಾಡಲಾಯಿತು.
    ವೇದಿಕೆಯಲ್ಲಿ ಶಿವಮೊಗ್ಗ ನಗರ ಅಧ್ಯಕ್ಷೆ ಜ್ಯೋತಿ ರಂಗನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರದಾ, ಭದ್ರಾವತಿ ತಾಲೂಕು ಮಹಿಳಾ ಅಧ್ಯಕ್ಷೆ ಮಹೇಶ್ವರಿ, ಕುಮಾರ್, ರೇಖಾ, ನಾಗರತ್ನ, ಶಾಂತಿ, ಅನಿತಾ, ಎನ್. ಭಾಗ್ಯ, ಸುಧಾ, ಸುಜಾತ, ಹರೀಶ್, ಅನಿತಾ, ಪ್ರಸಾದ್, ಕುಸುಮ, ವೀಣಾ, ಎಂ.ಟಿ ರೇಖಾ, ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.