ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಭದ್ರಾವತಿ, ನ. ೩: ಗ್ರಾಮಗಳಲ್ಲಿ ಕೊರೋನಾ ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರು ಕೋವಿಡ್-೧೯ ಲಸಿಕೆಯ ೨ನೇ ಡೋಸ್ ಕಡ್ಡಾಯವಾಗಿ ಪಡೆಯುವ ಜೊತೆಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಕರೆ ನೀಡಿದರು.
ಅವರು ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮೊದಲ ಡೋಸ್ ನೀಡುವಲ್ಲಿ ಗುರಿ ಸಾಧಿಸಲಾಗಿದೆ. ಆದರೆ ೨ನೇ ಡೋಸ್ ನೀಡುವಲ್ಲಿ ಹಲವಾರು ಕಾರಣಗಳಿಂದ ಹಿನ್ನಡೆಯಾಗುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ೨ನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ಹೊಂದಬೇಕು. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದರು.
ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಗ್ರಾಮ ಪಂಚಾಯಿತಿಗಳಿಗೆ ೨೫ ಲಕ್ಷ ರು. ಬಹುಮಾನ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ, ಸೌರ ಶಕ್ತಿ ಬಳಕೆ, ಡಿಜಿಟಲ್ ಗ್ರಂಥಾಲಯ ಸೌಲಭ್ಯ ಮಾರ್ಚ್ ಅಂತ್ಯದೊಳಗೆ ಸಮರ್ಪಕವಾಗಿ ಕೈಗೊಂಡಲ್ಲಿ ಬಹುಮಾನ ಮೊತ್ತ ಒಲಿದು ಬರಲಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಗಮನ ಹರಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಗ್ರಾಮಸ್ಥರು ಸ್ವಚ್ಛತೆ ಹಾಗು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದ ಸೌಲರ್ಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಮ ಪಂಚಾಯಿತಿ ಆಡಳಿತ ಸರ್ಕಾರದ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿದರು. ದೊಣಬಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಸ್ ಸಾಬ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಉಪಾಧ್ಯಕ್ಷೆ ಹಾಲಮ್ಮ, ಕಾರ್ಯದರ್ಶಿ ಗೌರಮ್ಮ, ಅಭಿವೃದ್ಧಿ ಅಧಿಕಾರಿ ಎನ್. ರಾಜಪ್ಪ, ಯುನಿಸೆಫ್ ಮುಖ್ಯಸ್ಥೆ ಸೌಮಿನಿ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಹಾಗು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಜಾಮೀಯಾ ಮಸೀದಿ ಸರ್ಕಲ್‌ನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ವರೆಗೂ ಜಾಗೃತಿ ಜಾಥಾ ನಡೆಸಲಾಯಿತು.
ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.