Sunday, November 28, 2021

ಪರಿಸರ ಶಿವರಾಮ್ ಆತ್ಮಕಥೆ ‘ಮುಖ ಮುಖಗಳು ಮುಖವಾಡಗಳಂತಿವೆ’ ಪುಸ್ತಕ ಬಿಡುಗಡೆ


ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ. ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿದರು.  
    ಭದ್ರಾವತಿ, ನ. ೨೮: ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಸಾಹಿತಿ, ಪ್ರಕಾಶಕ ಭದ್ರಾವತಿ ರಾಮಾಚಾರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಪರಿಸರ ಶಿವರಾಮ್ ಅವರ ಆತ್ಮಕಥೆ 'ಮುಖ ಮುಖಗಳು ಮುಖವಾಡಗಳಂತಿವೆ' ಪುಸ್ತಕ ಹೊರತಂದಿದ್ದಾರೆ.
    ಪರಿಸರ ರಾಜ್ಯ ಪ್ರಶಸ್ತಿ ಮತ್ತು ಬಯಲಾಟ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪರಿಸರ ಶಿವರಾಮ್ ಉಕ್ಕಿನ ನಗರದ ಜನತೆಗೆ ಬಹುತೇಕ ಚಿರಪರಿಚಿತರಾಗಿದ್ದಾರೆ. ಇವರ ಆತ್ಮಕಥೆಯನ್ನು ಭದ್ರಾವತಿ ರಾಮಾಚಾರಿಯವರು ಅದ್ಭುತವಾಗಿ ಹೊರತಂದಿದ್ದು, ಪರಿಸರ ಶಿವರಾಮ್ ಅವರ ಜೀವನದ ನೈಜತೆಯನ್ನು ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
    ಚಲನಚಿತ್ರ ನಟ, ನಿರ್ದೇಶಕ, ಪರಿಸರವಾದಿ ಸುರೇಶ್ ಹೆಬ್ಳಿಕರ್ ಪುಸ್ತಕ ಬಿಡುಗಡೆಗೊಳಿಸಿ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. ಪುಸ್ತುಕ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿಗೆ ಮೊ: ೮೮೬೧೪೯೫೬೧೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.


ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿ.ಎಸ್ ನಾರಾಯಣಪ್ಪ

ಭದ್ರಾವತಿ ಭೂತನಗುಡಿ ಓ.ಎಸ್.ಎಂ ರಸ್ತೆಯಲ್ಲಿರುವ ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ಮತ್ತು ಉಪಾಧ್ಯಕ್ಷರಾಗಿ ಎನ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ನ. ೨೮: ನಗರದ ಭೂತನಗುಡಿ ಓ.ಎಸ್.ಎಂ ರಸ್ತೆಯಲ್ಲಿರುವ ದಿ ಎಕ್ಸ್‌ಟೆನ್‌ಷನ್ ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಬಿ.ಎಸ್ ನಾರಾಯಣಪ್ಪ ಆಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಎನ್. ಮಂಜುನಾಥ್ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಡಿ. ಮಂಜಪ್ಪ ಕರ್ತವ್ಯ ನಿರ್ವಹಿಸಿದರು. ನಿರ್ದೇಶಕರಾದ ಕೆ.ಎಸ್ ಕೃಷ್ಣಪ್ಪ, ಕೆ. ಮಂಜಪ್ಪ, ಯು. ಸಂದಿಲ್‌ಕುಮಾರ್, ಕೃಷ್ಣಾನಂದ ರಾಯ್ಕರ್, ಆರ್.ಪಿ ವೆಂಕಟೇಶ್, ಜೆ.ಎಂ ರಾಜ, ಬಿ. ಮಂಜುಳಾ, ಕೆ. ವಸಂತಮ್ಮ, ಹೇಮಾವತಿ, ಶಾರದಬಾಯಿ ಮತ್ತು ಬಿ.ಎಚ್ ಮಂಜುನಾಥ್ ಉಪಸ್ಥಿತರಿದ್ದರು.

Saturday, November 27, 2021

ಲಾರಿಗೆ ಬೈಕ್ ಡಿಕ್ಕಿ : ೭ ವರ್ಷದ ಮಗು ಸಾವು



ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿರುವುದು.
 
ಭದ್ರಾವತಿ, ನ. ೨೭: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು ೭ ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿ ನಡೆದಿದೆ. 
ಬೈಕ್ ಸವಾರ ಶಿವಮೊಗ್ಗ ಮಿಳ್ಳಘಟ್ಟದ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ಪತ್ನಿ ಹಾಗು ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾರ್ಯ ನಿಮಿತ್ತ ಚಿಕ್ಕಮಗಳೂರಿಗೆ ತೆರಳಿದ್ದು, ಪುನಃ ಹಿಂದಿರುಗಿ ಶಿವಮೊಗ್ಗಕ್ಕೆ ಹೋಗುವಾಗ ಉಜ್ಜನಿಪುರ ಎಂಪಿಎಂ ಬಡಾವಣೆ ಬಳಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಈತನಿಗೆ ಗಂಬೀರ ಗಾಯಗಳಾಗಿದ್ದು, ಉಳಿದಂತೆ ಪತ್ನಿ ಮತ್ತು ಇನ್ನೊಂದು ೩ ವರ್ಷದ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕಾಗದನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಮುಂದಿನ ೬ ತಿಂಗಳಲ್ಲಿ ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ : ಆರ್. ಪ್ರಸನ್ನಕುಮಾರ್


ಭದ್ರಾವತಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಮಾತನಾಡಿದರು.
    ಭದ್ರಾವತಿ, ನ. ೨೭: ರಾಜ್ಯದಲ್ಲಿ ಮುಂದಿನ ೬ ತಿಂಗಳಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವರಾಗುವುದು ಬಹುತೇಕ ಖಚಿತ ಎಂದು ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಹೇಳಿದರು.
    ಅವರು ಶನಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರಿಂದ ಆಯ್ಕೆಯಾಗಿ ಸ್ವಾಯತ್ತ ಸಂಸ್ಥೆಗಳಾಗಿರುವ ಗ್ರಾಮ ಪಂಚಾಯಿತಿಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಸದಸ್ಯರು ಸ್ವತಂತ್ರವಾಗಿ ತಮ್ಮದೇ ಆದ ನಿರ್ಣಯಗಳನ್ನು ಕೈಗೊಳ್ಳಲಾಗದಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುವ ಜೊತೆಗೆ ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ವಿರುದ್ಧ ಇಂದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ಮುಂದಿನ ೬ ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.
    ಸಚಿವ ಕೆ.ಎಸ್ ಈಶ್ವರಪ್ಪ ಅವರು ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಪಂಚಾಯಿತಿ ಸದಸ್ಯರಿಗೆ ಸೇರಿದ ಹಣವನ್ನು ಕಸಿದುಕೊಂಡು ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಪಂಚಾಯಿತಿಗಳಿಗೆ ನೀಡಿ ಆ ಮೂಲಕ ಕಮೀಷನ್ ಹಣ ಪಡೆದುಕೊಳ್ಳುತ್ತಿದ್ದಾರೆ. ಪಂಚಾಯಿತಿ ಸದಸ್ಯರಿಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಅಧಿಕಾರ ಮೊಟಕುಗೊಳಿಸಿದ್ದಾರೆ. ೧೪ನೇ ಹಣಕಾಸಿನ ಬದಲು ೧೫ನೇ ಹಣಕಾಸಿನಡಿ ಅಲ್ಪ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿ ಆ ಹಣದಲ್ಲೂ  ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಇದುವರೆಗೂ ತನ್ನ ಹಣದಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
    ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾಹಿತಿ ಸಂಗ್ರಹಿಸಿಕೊಂಡು ಮೀಸಲಾತಿ ರಚಿಸುವ ನೆಪದಲ್ಲಿ ಚುನಾವಣೆ ನಡೆಯದಂತೆ ಕುತಂತ್ರ ನಡೆಸಲಾಗುತ್ತಿದೆ. ಇದನ್ನು ವಿಧಾನ ಸಭೆ ಹಾಗು ವಿಧಾನ ಪರಿಷತ್‌ನಲ್ಲಿ ಚರ್ಚಿಸಲು ಮುಂದಾದರೆ ಕಿವಿ ಕೇಳಿಸದಂತೆ, ಸದಸ್ಯರ ಮಾತುಗಳಿಗೆ ಬೆಲೆಕೊಡದಂತೆ ವರ್ತಿಸುವ ಜೊತೆಗೆ ಸರ್ವಾಧಿಕಾರಿ ಧೋರಣೆಯೊಂದಿಗೆ ಈ ಸಂಬಂಧ ನಿರ್ಣಯ ಕೈಗೊಂಡಿದೆ. ಇಂತಹ ಸರ್ಕಾರಕ್ಕೆ ಪಾಠ ಕಲಿಸಬೇಕಾದರೆ ಕೇವಲ ಚುನಾವಣೆಯಿಂದ ಮಾತ್ರ ಸಾಧ್ಯವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ನನ್ನನ್ನು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಬಿಜೆಪಿ ಸರ್ಕಾರ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ನನ್ನನ್ನು ೩ ಬಾರಿ ಆಯ್ಕೆ ಮಾಡಿರುವಂತೆ ಆರ್ ಪ್ರಸನ್ನಕುಮಾರ್ ಅವರನ್ನು ಸಹ ಆಯ್ಕೆ ಮಾಡಬೇಕು. ನಾವಿಬ್ಬರೂ ಜೊತೆಯಲ್ಲಿದ್ದಾಗ ಮಾತ್ರ ಇನ್ನೂ ಹೆಚ್ಚಿನ ಕೆಲಸ ಮಾಡಲು, ಹೆಚ್ಚಿನ ಅನುದಾನ ತರಲು ಸಾಧ್ಯ. ಈ ಹಿನ್ನಲೆಯಲ್ಲಿ ಮತ ನೀಡಿ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ತಾಲೂಕು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರ ಯುವ ಘಟಕದ ಜಿ. ವಿನೋದ್‌ಕುಮಾರ್, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಆಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ಮುಖಂಡರಾದ  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪ್ರಮುಖರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕೆ. ರಂಗನಾಥ್, ಶಾಂತವೀರನಾಯ್ಕ, ರವಿಕುಮಾರ್, ಇಸ್ಮಾಯಿಲ್ ಖಾನ್, ಟಿಪ್ಪುಸುಲ್ತಾನ್, ಮಣಿ ಎಎನ್‌ಎಸ್, ಗಂಗಾಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ನಗರಸಭೆ ಮತ್ತು ಪಂಚಾಯಿತಿಗಳ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Friday, November 26, 2021

ನಕಲಿ ನೋಟು ಚಲಾವಣೆಗೆ ಯತ್ನ : ಇಬ್ಬರ ಬಂಧನ


ನಕಲಿ ನೋಟುಗಳ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದು.
    ಭದ್ರಾವತಿ, ನ. ೨೬: ನಕಲಿ ನೋಟುಗಳ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಹಳೇನಗರ ಠಾಣೆ ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ತರೀಕೆರೆ ನಿವಾಸಿ ಅರುಣ್‌ಕುಮಾರ್(೨೩) ಮತ್ತು ಶಿವಮೊಗ್ಗ ನಿವಾಸಿ ಪ್ರೇಮ್‌ರಾಜ್(೨೩) ಬಂಧಿತರಾಗಿದ್ದು, ಈ ಇಬ್ಬರು ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಆಧಾರ ಮೇಲೆ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಇವರಿಂದ ರು.೫೦೦ ಮುಖ ಬೆಲೆಯ ೧೮೨ ನಕಲಿ ನೋಟುಗಳನ್ನು ಹಾಗು ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
    ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಶ್ಲೀಲ ನೃತ್ಯ ಪ್ರದರ್ಶನ : ಕಲಾವಿದರಿಗೆ ಅಗೌರವ

ಕಾನೂನು ಕ್ರಮಕ್ಕೆ ಆಗ್ರಹಿಸಿ ನ.೨೯ರಂದು ಪ್ರತಿಭಟನೆ


ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾದ್ಯ ಗೋಷ್ಠಿ ಕಲಾವಿದರು ಮತ್ತು ದಲಿತ ಮುಖಂಡರು ಮಾತನಾಡಿದರು.
    ಭದ್ರಾವತಿ, ನ. ೨೬: ಕಲೆಯ ನೈಜತೆ ಉಳಿಸುವ ಜೊತೆಗೆ ರಾಜ್ಯಾದ್ಯಂತ ಗುರುತಿಸಿಕೊಂಡಿರುವ, ಸಮಾಜದಲ್ಲಿ ಗೌರವಯುತವಾಗಿ ಕಾಣುತ್ತಿರುವ ವಾದ್ಯ ಗೋಷ್ಠಿ ಸಾಂಸ್ಕೃತಿಕ ಕಲಾವಿದರನ್ನು (ಆರ್ಕೆಸ್ಟ್ರಾ) ಅಗೌರವದಿಂದ ಕಾಣುವಂತಹ ಕೃತ್ಯಗಳು ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನ.೨೯ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಾದ್ಯಗೋಷ್ಠಿ ಕಲಾವಿದರು ತಿಳಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನಿವಾಸಿ ಹರೀಶ್ ಮಾಲೀಕತ್ವದ ಸೋನಿ ಮೆಲೋಡಿ ವಾದ್ಯ ಗೋಷ್ಠಿ ತಂಡ ಇತ್ತೀಚೆಗೆ ತುರುವೇಕೆರೆಯಲ್ಲಿ ಜರುಗಿದ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರನ್ನು ಬಳಸಿಕೊಂಡು ತುಂಡು ಉಡುಗೆಯ ಅಶ್ಲೀಲ ನೃತ್ಯ ಪ್ರದರ್ಶನ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಾಕವಾಗಿ ಪ್ರಸಾರಗೊಳ್ಳುವ ಮೂಲಕ ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರಿಗೆ ಮಸಿ ಬಳಿದಂತಾಗಿದೆ. ಕಲಾವಿದರನ್ನು ಅವಮಾನಿಸಿರುವ ಈ ಕೃತ್ಯವನ್ನು ಖಂಡಿಸುತ್ತೇವೆ ಎಂದರು.
    ಈ ರೀತಿಯ ಘಟನೆ ಈ ಹಿಂದೆ ಸಹ ನಡೆದಿದ್ದು, ಈ ಸಂದರ್ಭದಲ್ಲಿ ಪುನಃ ಮರುಕಳುಹಿಸದಂತೆ ಎಚ್ಚರ ವಹಿಸುವುದಾಗಿ ಕ್ಷಮೆಯಾಚಿಸಲಾಗಿತ್ತು. ಆದರೆ ಇದೀಗ ಪುನಃ ಘಟನೆ ನಡೆದಿರುವುದು ಕಲಾವಿದರಿಗೆ ಅದರಲ್ಲೂ ಮಹಿಳಾ ಕಲಾವಿದರಿಗೆ ಹೆಚ್ಚಿನ ನೋವುಂಟು ಮಾಡಿದೆ. ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕುತ್ತಿರುವ ಬಹಳಷ್ಟು ಕಲಾವಿದರಿಗೆ ಈ ಕೃತ್ಯ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಕಲಾವಿದರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕಲಾತಂಡಗಳಿಗೆ ಬೇಡಿಕೆ ಸಹ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕೃತ್ಯ ನಡೆಸಿರುವುದು ಗೌರವಯುತವಾಗಿ ಗುರುತಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೂ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಶಿವಮೊಗ್ಗ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ರಚಿಸಿಕೊಂಡಿರುವ ಹರೀಶ್ ಅದರ ಜಿಲ್ಲಾಧ್ಯಕ್ಷರಾಗಿದ್ದು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇವರ ಈ ವರ್ತನೆಯನ್ನು ಈ ಸಂಘದ ಪದಾಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ. ಹರೀಶ್ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಕೃತ್ಯವನ್ನು ಖಂಡಿಸಿ ನ.೨೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
        ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯ :
   ಕಲಾವಿದರ ನೋವುಗಳಿಗೆ ಸ್ಪಂದಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಮುಖಂಡರು, ಕೆಲವರು ದುರುದ್ದೇಶದ ಹಿನ್ನಲೆಯಲ್ಲಿ ಸಂಘಟನೆ ಕಟ್ಟಿಕೊಂಡು ಗೌರವಯುತವಾಗಿ ಬದುಕುತ್ತಿರುವ ಕಲಾವಿದರ ಮೇಲೆ ದೌರ್ಜನ್ಯವೆಸಗುತ್ತಿರುವುದು ಸರಿಯಲ್ಲ. ಕಲಾವಿದರಿಗೆ ಹಣ ಮುಖ್ಯವಲ್ಲ ಗೌರವ ಮುಖ್ಯವಾಗಿದೆ. ತಾಲೂಕಿನ ಕಲಾವಿದರಿಗೆ ರಾಜ್ಯಾದ್ಯಂತ ದೊಡ್ಡ ದೊಡ್ಡ ನಗರಗಳಲ್ಲೂ ಬೇಡಿಕೆ ಇದೆ. ಉತ್ತಮ ಕಲಾವಿದರು ಇಲ್ಲಿದ್ದು, ತಾಲೂಕಿನ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೃತ್ಯಕ್ಕೆ ಕಾರಣರಾಗಿರುವ ಹರೀಶ್ ತಕ್ಷಣ ಕ್ಷಮೆಯಾಗಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯ ನಡೆಸಬಾರದೆಂದು ಎಚ್ಚರಿಸುವ ಮೂಲಕ ಕಲಾವಿದರ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಪಳನಿರಾಜ್, ಅನಿತಾ, ಬಿ.ಆರ್ ಗೋಪಾಲ್, ವಿಜಯ್ ದಯಾಕರ್, ನೂರುಲ್ಲಾ, ಎ. ರಾಜು, ವೆಂಕಟೇಶ್, ಪುಟ್ಟಣ್ಣ ಹಾಗು ಡಿಎಸ್‌ಎಸ್ ಮುಖಂಡರಾದ ಚಿನ್ನಯ್ಯ, ರಂಗನಾಥ್, ಈಶ್ವರಪ್ಪ, ಎನ್. ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ ಆಶ್ಲೇಷ ಬಲಿ ಪೂಜೆ


ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಪೂಜೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ನ. ೨೬: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಶ್ಲೇಷ ಬಲಿ ಪೂಜೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಪ್ರಧಾನ ಅರ್ಚಕ ಪ್ರಮೋದ್‌ಕುಮಾರ್ ನೇತೃತ್ವದಲ್ಲಿ ಆಶ್ಲೇಷ ಬಲಿ ಪೂಜೆ ಆಚರಣೆಗಳೊಂದಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿದವು.
    ಶ್ರೀ ಗುರುರಾಜ ಸೇವಾ ಸಮಿತಿ ಅಧ್ಯಕ್ಷರಾದ ಮುರುಳಿಧರ, ನಿರಂಜನ ಆಚಾರ್, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಉಪಾಧ್ಯಕ್ಷೆ ಉಮಾ ರಾಘವೇಂದ್ರ ತಂತ್ರಿ, ಸುಜಾತ ರಮಾಕಾಂತ್, ಯುವ ಮುಖಂಡ ಬಿ.ಎಸ್ ಗಣೇಶ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.