Tuesday, December 7, 2021

ಸಿಪಿಐ(ಎಂ) ಸಭೆ : ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ನಾರಾಯಣ ಆಯ್ಕೆ

ಎಂ. ನಾರಾಯಣ
    ಭದ್ರಾವತಿ, ಡಿ. ೭: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಮಿಕ ಮುಖಂಡ ಎಂ. ನಾರಾಯಣ ಆಯ್ಕೆಯಾಗಿದ್ದಾರೆ.
    ಜಿಲ್ಲಾ ಸಮ್ಮೇಳನದ ಭಾಗವಾಗಿ ಇನ್ಶೂರೆನ್ಸ್ ಎಂಪ್ಲಾಯಿಸ್ ಯೂನಿಯನ್ ಕಛೇರಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕಾಂಮ್ರೇಡ್ ಬಾಲಕೃಷ್ಣ ಶೆಟ್ಟರ್ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೂತನ ಜಿಲ್ಲಾ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾಗಿ ಕೆ. ಮಂಜಣ್ಣ, ಎಂ. ಅನಂತರಾಮು, ಜನಾರ್ಧನನಾಯಕ್, ತುಳಸಿಪ್ರಭಾ, ನಾಗೇಶ್, ಪಿ. ಚಂದ್ರಪ್ಪ ಹಾಗು ಹಿರಿಯ ವಕೀಲರಾದ ಜಿ.ಎಸ್ ನಾಗರಾಜ ಮತ್ತು ಕೆ. ಪ್ರಭಾಕರನ್ ಆಯ್ಕೆಯಾದರು.
    ಮುಂದಿನ ದಿನಗಳಲ್ಲಿ ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗು ಮಹಿಳಾ ಸೇರಿದಂತೆ ಪಕ್ಷದ ವಿವಿಧ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬಲಿಷ್ಠಗೊಳಿಸುವ ಜೊತೆಗೆ ಹೆಚ್ಚಿನ ಹೋರಾಟಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
    ಮುಂದಿನ ವರ್ಷ ಜ.೨ ರಿಂದ ೪ರವರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ರಾಜ್ಯ ಸಮ್ಮೇಳನ ನಡೆಯಲಿದ್ದು, ಎಂ. ನಾರಾಯಣ ಮತ್ತು ಕೆ. ಪ್ರಭಾಕರನ್ ಅವರನ್ನು ಪ್ರತಿನಿಧಿಗಳಾಗಿ ಹಾಗು ಪಿ. ಚಂದ್ರಪ್ಪ ಅವರನ್ನು ವೀಕ್ಷಕರಾಗಿ ಆಯ್ಕೆ ಮಾಡಲಾಯಿತು.

ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ

ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಡಿ. ೭: ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ ಆಯ್ಕೆಯಾಗಿದ್ದಾರೆ.
    ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾಗಿ ಎಸ್.ಬಿ ಜಂಗಮಪ್ಪ, ಶಕುಂತಲಾ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ರಮೇಶ್, ಖಜಾಂಚಿಯಾಗಿ ನರೇಂದ್ರ ಬಾಬು ಮತ್ತು ಸಹ ಕಾರ್ಯದರ್ಶಿಯಾಗಿ ಟಿ. ರಮೇಶ್ ಹಾಗು ನಿರ್ದೇಶಕರಾಗಿ ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಚ್. ನಾರಾಯಣ, ಯು. ಪಂಪಣ್ಣ, ರಂಗನಾಥ್, ಕುಮಾರಸ್ವಾಮಿ, ಪದ್ಮಮ್ಮ, ದಶರಥ ಕುಮಾರ್, ವೆಂಕಟೇಶ್, ಪ್ರಹ್ಲಾದ್, ರಾಜೇಶ್, ಉದಯ್‌ಕುಮಾರ್ ಮತ್ತು ಪಿ. ಸತೀಶ್ ಆಯ್ಕೆಯಾಗಿದ್ದಾರೆ.

Monday, December 6, 2021

ನಾಗತಿಬೆಳಗಲು ತಾಂಡ ಕಂದಾಯ ಗ್ರಾಮವಾಗಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ

    ಭದ್ರಾವತಿ, ಡಿ. ೬: ತಾಲೂಕಿನ ನಾಗತಿಬೆಳಗಲು ತಾಂಡವನ್ನು ಕಂದಾಯ ಗ್ರಾಮವೆಂದು ಪರಿಗಣಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೂಚಿಸಿದ್ದಾರೆ.
    ನಾಗತಿಬೆಳಗಲು ತಾಂಡದಲ್ಲಿ ಪರಿಶಿಷ್ಟ ಜಾತಿ ಲಂಬಾಣಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಕಂದಾಯ ಗ್ರಾಮವೆಂದು ಪರಿಗಣಿಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
    ಸರ್ಕಾರಿ ಆದೇಶದಲ್ಲಿನ ಮಾನದಂಡಗಳ ಅನುಸಾರ ನಾಗತಿಬೆಳಗಲು ತಾಂಡವನ್ನು ಹೊಸ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಸಾಧ್ಯವಿದ್ದಲಿ, ತಕ್ಷಣ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಉಪನಿರ್ದೇಶಕರು ಸೂಚಿಸಿದ್ದಾರೆ.

ಅಂಬೇಡ್ಕರ್‌ರವರ ೬೫ನೇ ಪರಿನಿರ್ವಾಣ : ವಿವಿಧ ಸಂಘಟನೆಗಳಿಂದ ಮಾಲಾರ್ಪಣೆ

ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ನೌಕರರ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು.
    ಭದ್ರಾವತಿ, ಡಿ. ೬: ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೫ನೇ ವರ್ಷದ ಪರಿನಿರ್ವಾಣ ಅಂಗವಾಗಿ ನಗರದ ವಿವಿಧ ಸಂಘಟನೆಗಳಿಂದ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ನೌಕರರ ಒಕ್ಕೂಟದ ವತಿಯಿಂದ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.


ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ತಾಲೂಕು ಘಟಕದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
    ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ, ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್. ಉಮಾ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ವಿದ್ಯಾರ್ಥಿ ಘಟಕದ ಪ್ರಸನ್ನಕುಮಾರ್,  ಪ್ರಮುಖರಾದ ಸಿ. ಜಯಪ್ಪ, ನರಸಿಂಹ, ದಾಸ್, ಮಂಜು, ಮಣಿ, ಪರಮೇಶ್ವರಪ್ಪ, ಈಶ್ವರಪ್ಪ, ಎನ್. ಗೋವಿಂದ, ಲೋಕೇಶ್, ಎ. ತಿಪ್ಪೇಸ್ವಾಮಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ತಾಲೂಕು ಘಟಕದ ವತಿಯಿಂದ ಅಧ್ಯಕ್ಷ ರಹಮತುಲ್ಲಾ ಖಾನ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಕೈಸರ್ ಷರೀಫ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.  
ಛಲವಾದಿ ಮಹಾಸಭಾ ವತಿಯಿಂದ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪ್ರಮುಖರಾದ ಎನ್. ಶ್ರೀನಿವಾಸ್,  ಕೃಷ್ಣಛಲವಾದಿ, ಮಂಜುನಾಥ್, ಮರಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪರಿನಿರ್ವಾಣ ದಿನದ ಅಂಗವಾಗಿ ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ, ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ


ಭದ್ರಾವತಿ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಕಾಮ್ರೇಡ್ ಕಾಳೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಡಿ. ೬: ನಗರದ ನ್ಯೂಟೌನ್ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಯಶಸ್ವಿಯಾಗಿ ಜರುಗಿತು.
    ಸಭೆಯಲ್ಲಿ ಪಿಂಚಣಿ ಮತ್ತು ಭವಿಷ್ಯ ನಿಧಿ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ೨೦೦೪-೦೫ನೇ ಸಾಲಿನಲ್ಲಿ ಆರಂಭಗೊಂಡ ಸಂಘ ಭವಿಷ್ಯ ನಿಧಿ ಚಂದಾದಾರರ ಮತ್ತು ಪಿಂಚಣಿದಾರರ ಹಿತ ಕಾಪಾಡುವಲ್ಲಿ ನಿರಂತರವಾಗಿ  ಹೋರಾಟ ನಡೆಸಿಕೊಂಡು ಬರುತ್ತಿದೆ.
    ಕಾಮ್ರೇಡ್ ಕಾಳೇಗೌಡರವರು ಕಾರ್ಮಿಕರಿಗಾಗಿ ನಡೆಸಿರುವ ಹೋರಾಟಗಳು ಹಾಗು ಅವರು ನಡೆದು ಬಂದ ದಾರಿ ಹಾಗು ಚಿಂತನೆಗಳನ್ನು ಸಭೆಯಲ್ಲಿ ನೆನಪಿಕೊಳ್ಳುವ ಮೂಲಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ದುಗ್ಗೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನರಸಿಂಹಚಾರ್, ಚಂದ್ರಕಾಂತ್, ನಾಗರಾಜ್, ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಮಮೂರ್ತಿ ವಂದಿಸಿದರು.

Sunday, December 5, 2021

ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ : ಗಮನ ಹರಿಸಲಿ ನಗರಸಭೆ ಆಡಳಿತ

ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ದೇವಸ್ಥಾನ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು.
    ಭದ್ರಾವತಿ, ಡಿ. ೫: ನಗರಸಭೆ ವಾರ್ಡ್ ನಂ.೨೨ರ ವ್ಯಾಪ್ತಿಯ ಎಂಪಿಎಂ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಜೊತೆಗೆ ಸ್ವಚ್ಛತೆ ಇಲ್ಲದಂತಾಗಿದ್ದು, ಇಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
    ಬೈಪಾಸ್ ರಸ್ತೆಯ ಆನೇಕೊಪ್ಪದಲ್ಲಿ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿರ್ಮಾಣಗೊಂಡಿರುವ ಎಂಪಿಎಂ ಬಡಾವಣೆ ಕಳೆದ ಕೆಲವು ವರ್ಷಗಳಿಂದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸೂಕ್ತ ರಸ್ತೆ, ಚರಂಡಿಗಳಿಲ್ಲ, ಮಳೆಗಾಲದಲ್ಲಿ ನಿವಾಸಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
    ಬಡಾವಣೆಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು, ಆದರೂ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕೈಗೊಂಡಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳದ ಕಾರಣ ನೀರು ಮುಂದೆ ಹರಿಯದೆ ನಿಂತುಕೊಂಡು ದುರ್ವಾಸನೆ ಬೀರುತ್ತಿದ್ದು, ಜೊತೆಗೆ ಖಾಲಿ ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದುನಿಂತು ಹಾವು, ಮುಂಗುಸಿ, ಹೆಗ್ಗಣಗಳ ಆವಾಸ ತಾಣಗಳಾಗಿ ಮಾರ್ಪಟ್ಟಿವೆ.
    ಈ ನಡುವೆ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಸುಮಾರು ೬ ವರ್ಷಗಳು ಕಳೆದಿದ್ದು, ಬಹುತೇಕ ಕಾರ್ಮಿಕ ಕುಟುಂಬಗಳು ಊರು ತೊರೆದು ವಲಸೆ ಹೋಗಿವೆ.  ಉಳಿದುಕೊಂಡಿರುವ ಕೆಲವು ಕುಟುಂಬಗಳಿಗೆ ಬಡಾವಣೆಯೇ ಆಧಾರವಾಗಿದೆ. ಈ ಹಿನ್ನಲೆಯಲ್ಲಿ ಬಡಾವಣೆ ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ.
    ಪ್ರಸ್ತುತ ಗೃಹ ನಿರ್ಮಾಣ ಸಹಕಾರ ಸಂಘ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ತಟಸ್ಥವಾಗಿ ಉಳಿದುಕೊಂಡಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ನಿವಾಸಿಗಳು ಅನಿವಾರ್ಯವಾಗಿ ನಗರಸಭೆ ಬಾಗಿಲು ತಟ್ಟುವಂತಾಗಿದೆ. ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
    ಬಡಾವಣೆಯಲ್ಲಿ ಇನ್ನೂ ಉದ್ಯಾನವನ ನಿರ್ಮಾಣಗೊಂಡಿಲ್ಲ. ಪ್ರಸ್ತುತ ನಿವಾಸಿಗಳು ಚೌಡೇಶ್ವರಿ ದೇವಿ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ದೇವಸ್ಥಾನ ತಗ್ಗು ಪ್ರದೇಶದಲ್ಲಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ದೇವಸ್ಥಾನ ಬಳಿ ನೀರು ಮುಂದೆ ಹರಿಯದೆ ನಿಂತುಕೊಳ್ಳುತ್ತಿದೆ. ಈ ಸ್ಥಳದಲ್ಲಾದರೂ ತಕ್ಷಣ ನಗರಸಭೆ ವತಿಯಿಂದ ಸೂಕ್ತ ಚರಂಡಿ ವ್ಯವಸ್ಥೆ ಕೈಗೊಳ್ಳಬೇಕೆಂಬುದು ನಿವಾಸಿಗಳ ಒತ್ತಾಯವಾಗಿದೆ.


ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ಸ್ವಚ್ಛತೆ ಇಲ್ಲದಿರುವುದು.

ಸ್ವಾಗತ್ ಗ್ರೂಪ್ಸ್‌ನಿಂದ ಕನ್ನಡ ರಾಜ್ಯೋತ್ಸವ, ಪುನೀತ್‌ರಾಜ್‌ಕುಮಾರ್ ಪುಣ್ಯಸ್ಮರಣೆ


ಭದ್ರಾವತಿ ನಗರಸಭೆ ವಾರ್ಡ್ ನಂ.೩೨ರ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿ ಸ್ವಾಗತ್ ಗ್ರೂಪ್ಸ್ ವತಿಯಿಂದ ಭಾನುವಾರ ಪ್ರತಿವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಹಾಗು ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್‌ರವರ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೫:  ನಗರಸಭೆ ವಾರ್ಡ್ ನಂ.೩೨ರ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿ ಸ್ವಾಗತ್ ಗ್ರೂಪ್ಸ್ ವತಿಯಿಂದ ಭಾನುವಾರ ಪ್ರತಿವರ್ಷದಂತೆ ಈ ಬಾರಿ ಸಹ ಕನ್ನಡ ರಾಜ್ಯೋತ್ಸವ ಹಾಗು ಚಲನಚಿತ್ರ ನಟ, ಸಮಾಜ ಸೇವಕ ಪುನೀತ್ ರಾಜ್‌ಕುಮಾರ್‌ರವರ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಯುವ ಮುಖಂಡ ಬಿ.ಎಸ್ ಗಣೇಶ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಪ್ರಮುಖರು ಸಂಘಟನೆ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂ ಪ್ರೇರಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುವ ಮೂಲಕ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಮೂಲಕ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯುವಂತಾಗಲಿ. ಸಂಘಟನೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು.
    ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್‌ಕುಮಾರ್, ವೀರಶೈವ ಯುವ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೃಷ್ಣರಾಜ್, ಹರೀಶ್, ಚಂದ್ರಣ್ಣ, ಮಂಜಣ್ಣ ಹಾಗು ಸ್ವಾಗತ್ ಗ್ರೂಪ್ಸ್ ಪದಾಧಿಕಾರಿಗಳು ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.