Wednesday, December 8, 2021

ಡಿ.೧೨ರಂದು ವಿಶೇಷ ಬೀದಿ ನಾಟಕ

    ಭದ್ರಾವತಿ, ಡಿ. ೮: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಹಯೋಗದೊಂದಿಗೆ ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ  ಡಿ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದಲ್ಲಿ 'ಬಾರಿಸು ಕನ್ನಡ ಡಿಂಡಿಮವ' ವಿಶೇಷ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ.
    ರಂಗಕರ್ಮಿ, ಕಿರುತೆರೆ ನಟ ಅಪರಂಜಿ ಶಿವರಾಜ್ ರಚನೆ, ನಿರ್ದೇಶನದ ಬೀದಿ ನಾಟಕವನ್ನು ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಉದ್ಘಾಟಿಸಲಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮತ್ತು ಗ್ರಂಥಾಲಯ ಇಲಾಖೆಯ ರಾಜ್‌ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಡಿ.೧೬ರಂದು ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ


    ಭದ್ರಾವತಿ, ಡಿ. ೮: ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಡಿ.೧೬ರಂದು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ರಥೋತ್ಸವದ ಅಂಗವಾಗಿ ಡಿ.೧೫ರ ಬುಧವಾರ ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾಹ, ಬಿಂಬಶುದ್ಧಿ, ಪ್ರಾಕಾರ ಶುದ್ಧಿ, ಶ್ರೀ ಗಣಪತಿ ಹೋಮ, ಮಹಾಮಂಗಳಾರತಿ, ಸಂಜೆ ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ದಿಗ್ಬಲಿದಾನ ಮತ್ತು ಮಹಾಪೂಜೆ ಜರುಗಲಿವೆ.
    ಡಿ.೧೬ರಂದು ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ, ಸಂಜೆ ರಥೋತ್ಸವ, ಅಷ್ಟಾವಧಾನ ಸೇವಾ, ಮಹಾಪೂಜೆ ಮತ್ತು ಮಹಾಮಂಗಳಾರತಿ ಹಾಗು ಡಿ.೧೭ರಂದು ಬೆಳಿಗ್ಗೆ ಪುಣ್ಯಾಹ, ಕಲಾ ಹೋಮ, ತತ್ವ ಹೋಮ, ಶಾಂತಿ ಹೋಮ, ಕುಂಭಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಶುಭಾಶೀರ್ವಾದ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
    ರಥೋತ್ಸವದಂದು ಕಾಂಗ್ರೆಸ್ ಮುಖಂಡ, ದಾನಿ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.  

ಬಜರಂಗದಳ ಕಾರ್ಯಕರ್ತರಿಂದ ದತ್ತ ಮಾಲೆ ಅಭಿಯಾನಕ್ಕೆ ಚಾಲನೆ

ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಭದ್ರಾವತಿಯಲ್ಲಿ ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
    ಭದ್ರಾವತಿ, ಡಿ. ೮: ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗಳ ಕಾರ್ಯಕರ್ತರು ಬುಧವಾರದಿಂದ ದತ್ತ ಮಾಲೆ ಅಭಿಯಾನ ಆರಂಭಿಸಿದ್ದಾರೆ.
    ರಾಜ್ಯಾದ್ಯಂತ ದತ್ತ ಮಾಲೆ ಅಭಿಯಾನ ಅಭಿಯಾನ ಆರಂಭಗೊಂಡಿದ್ದು, ಹಳೇನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮಂದಿ ದತ್ತ ಮಾಲೆ ಧಾರಣೆ ಕೈಗೊಂಡರು. ಪ್ರಮುಖರಾದ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಶ್ರೀಕಾಂತ್, ಧನುಷ್ ಬೋಸ್ಲೆ, ನಗರ ಸಂಚಾಲಕ ಕೃಷ್ಣ, ಸುನಿಲ್‌ಕುಮಾರ್, ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಭಿಯಾನದ ಅಂಗವಾಗಿ ಡಿ.೧೭ರಂದು ಸಂಕೀರ್ತನೆ ಶೋಭಾ ಯಾತ್ರೆ ನಡೆಯಲಿದ್ದು, ದತ್ತ ಮಾಲೆ ಧಾರಣೆ ಕೈಗೊಂಡಿರುವ ಕಾರ್ಯಕರ್ತರು ಡಿ. ೧೯ರಂದು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಲಿದ್ದಾರೆ.
    ಬಜರಂಗದಳ ಕಾರ್ಯಕರ್ತರು ಕೊರೋನಾ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಗಮನ ಸೆಳೆದಿದ್ದರು.

Tuesday, December 7, 2021

ಅಮಲೋದ್ಭವಿ ಮಾತೆ ದೇವಲಯದಲ್ಲಿ ಯಶಸ್ವಿಯಾಗಿ ನಡೆದ ಲಸಿಕಾ ಅಭಿಯಾನ


ಭದ್ರಾವತಿಯಲ್ಲಿ ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೭: ಅಮಲೋದ್ಭವಿ ಮಾತೆಯ ದೇವಾಲಯ ಹಾಗೂ ಉಜ್ಜನಿಪುರ ನಗರ ಆರೋಗ್ಯ ಕೇಂದ್ರ ವತಿಯಿಂದ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ನ್ಯೂಟೌನ್ ಅಮಲೋದ್ಭವಿ ಮಾತೆಯ ದೇವಾಲಯದ ಆವರಣದಲ್ಲಿ ನಡೆದ ಅಭಿಯಾನದಲ್ಲಿ ಇದುವರೆಗೂ ಲಸಿಕೆ ಪಡೆಯದವರಿಗೆ ಹಾಗೂ ಮೊದಲನೇ ಡೋಸ್ ಪಡೆದವರಿಗೆ ೨ನೇ ಡೋಸ್ ನೀಡಲಾಯಿತು.
    ಶಿಬಿರದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಬಗೆಯ ಲಸಿಕೆಗಳನ್ನು ಲಸಿಕೆ ಪಡೆಯುವವರ ಅಪೇಕ್ಷೆಯಂತೆ ನೀಡಲಾಯಿತು.
    ಫಾದರ್ ಲಾನ್ಸಿ  ಡಿಸೋಜಾ ಮತ್ತು ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸಿಪಿಐ(ಎಂ) ಸಭೆ : ಜಿಲ್ಲಾ ಕಾರ್ಯದರ್ಶಿಯಾಗಿ ಎಂ. ನಾರಾಯಣ ಆಯ್ಕೆ

ಎಂ. ನಾರಾಯಣ
    ಭದ್ರಾವತಿ, ಡಿ. ೭: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಮಿಕ ಮುಖಂಡ ಎಂ. ನಾರಾಯಣ ಆಯ್ಕೆಯಾಗಿದ್ದಾರೆ.
    ಜಿಲ್ಲಾ ಸಮ್ಮೇಳನದ ಭಾಗವಾಗಿ ಇನ್ಶೂರೆನ್ಸ್ ಎಂಪ್ಲಾಯಿಸ್ ಯೂನಿಯನ್ ಕಛೇರಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕಾಂಮ್ರೇಡ್ ಬಾಲಕೃಷ್ಣ ಶೆಟ್ಟರ್ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಯಲ್ಲಿ ನೂತನ ಜಿಲ್ಲಾ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾಗಿ ಕೆ. ಮಂಜಣ್ಣ, ಎಂ. ಅನಂತರಾಮು, ಜನಾರ್ಧನನಾಯಕ್, ತುಳಸಿಪ್ರಭಾ, ನಾಗೇಶ್, ಪಿ. ಚಂದ್ರಪ್ಪ ಹಾಗು ಹಿರಿಯ ವಕೀಲರಾದ ಜಿ.ಎಸ್ ನಾಗರಾಜ ಮತ್ತು ಕೆ. ಪ್ರಭಾಕರನ್ ಆಯ್ಕೆಯಾದರು.
    ಮುಂದಿನ ದಿನಗಳಲ್ಲಿ ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಹಾಗು ಮಹಿಳಾ ಸೇರಿದಂತೆ ಪಕ್ಷದ ವಿವಿಧ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬಲಿಷ್ಠಗೊಳಿಸುವ ಜೊತೆಗೆ ಹೆಚ್ಚಿನ ಹೋರಾಟಗಳನ್ನು ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
    ಮುಂದಿನ ವರ್ಷ ಜ.೨ ರಿಂದ ೪ರವರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ರಾಜ್ಯ ಸಮ್ಮೇಳನ ನಡೆಯಲಿದ್ದು, ಎಂ. ನಾರಾಯಣ ಮತ್ತು ಕೆ. ಪ್ರಭಾಕರನ್ ಅವರನ್ನು ಪ್ರತಿನಿಧಿಗಳಾಗಿ ಹಾಗು ಪಿ. ಚಂದ್ರಪ್ಪ ಅವರನ್ನು ವೀಕ್ಷಕರಾಗಿ ಆಯ್ಕೆ ಮಾಡಲಾಯಿತು.

ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ

ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಡಿ. ೭: ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ತಾಲೂಕು ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್ ಸಂಜೀವ ಮೂರ್ತಿ ಆಯ್ಕೆಯಾಗಿದ್ದಾರೆ.
    ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷರಾಗಿ ಎಸ್.ಬಿ ಜಂಗಮಪ್ಪ, ಶಕುಂತಲಾ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ರಮೇಶ್, ಖಜಾಂಚಿಯಾಗಿ ನರೇಂದ್ರ ಬಾಬು ಮತ್ತು ಸಹ ಕಾರ್ಯದರ್ಶಿಯಾಗಿ ಟಿ. ರಮೇಶ್ ಹಾಗು ನಿರ್ದೇಶಕರಾಗಿ ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಎಚ್. ನಾರಾಯಣ, ಯು. ಪಂಪಣ್ಣ, ರಂಗನಾಥ್, ಕುಮಾರಸ್ವಾಮಿ, ಪದ್ಮಮ್ಮ, ದಶರಥ ಕುಮಾರ್, ವೆಂಕಟೇಶ್, ಪ್ರಹ್ಲಾದ್, ರಾಜೇಶ್, ಉದಯ್‌ಕುಮಾರ್ ಮತ್ತು ಪಿ. ಸತೀಶ್ ಆಯ್ಕೆಯಾಗಿದ್ದಾರೆ.

Monday, December 6, 2021

ನಾಗತಿಬೆಳಗಲು ತಾಂಡ ಕಂದಾಯ ಗ್ರಾಮವಾಗಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ

    ಭದ್ರಾವತಿ, ಡಿ. ೬: ತಾಲೂಕಿನ ನಾಗತಿಬೆಳಗಲು ತಾಂಡವನ್ನು ಕಂದಾಯ ಗ್ರಾಮವೆಂದು ಪರಿಗಣಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್‌ಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಸೂಚಿಸಿದ್ದಾರೆ.
    ನಾಗತಿಬೆಳಗಲು ತಾಂಡದಲ್ಲಿ ಪರಿಶಿಷ್ಟ ಜಾತಿ ಲಂಬಾಣಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಕಂದಾಯ ಗ್ರಾಮವೆಂದು ಪರಿಗಣಿಸುವಂತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
    ಸರ್ಕಾರಿ ಆದೇಶದಲ್ಲಿನ ಮಾನದಂಡಗಳ ಅನುಸಾರ ನಾಗತಿಬೆಳಗಲು ತಾಂಡವನ್ನು ಹೊಸ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಸಾಧ್ಯವಿದ್ದಲಿ, ತಕ್ಷಣ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಉಪನಿರ್ದೇಶಕರು ಸೂಚಿಸಿದ್ದಾರೆ.